Advertisement
ದಿಲ್ಲಿಯ ಚಾವಡೀ ಬಜಾರ್ ಮೆಟ್ರೋದಿಂದ ಇಳಿದು, ಸೈಕಲ್ ರಿಕ್ಷಾವೊಂದರಲ್ಲಿ ಕುಳಿತು, ಹಳೇದಿಲ್ಲಿಯ ಇಕ್ಕಟ್ಟಾದ ಗಲ್ಲಿಗಳನ್ನು ದಾಟುತ್ತ, ಅಕ್ಕಪಕ್ಕದಲ್ಲೇ ಮೈಸವರಿಕೊಂಡು ಹೋಗುತ್ತಿರುವ ಮಂದಗತಿಯ ವಾಹನಗಳ ಸ್ಪರ್ಶಕ್ಕೆ ಇಷ್ಟಿಷ್ಟೇ ಬೆಚ್ಚಿಬೀಳುತ್ತ ಹವೇಲಿಯನ್ನು ತಲುಪುವ ಅನುಭವವು ಹಳೇದಿಲ್ಲಿಯ ಅಪ್ಪಟ ದೇಸಿತನಕ್ಕೊಂದು ಅತ್ಯುತ್ತಮ ನಿದರ್ಶನ. ಆದರೂ ಜನನಿಬಿಡ ಕಾಸಿಂಬಜಾರ್ ಗಲ್ಲಿಯ ಬಲ್ಲಿಮರನ್ ಪ್ರದೇಶದಲ್ಲಿರುವ ಈ ಹವೇಲಿಯು ಹತ್ತರಲ್ಲಿ ಹನ್ನೊಂದರಂತಿದ್ದು ಬಹಳಷ್ಟು ಬಾರಿ ಗುಂಪಿನಲ್ಲಿ ಗೋವಿಂದವಾಗುವುದೇ ಹೆಚ್ಚು. ಹೀಗಾಗಿ, ತನ್ನದೇ ಆದ ಇತಿಹಾಸ ಮತ್ತು ವೈಶಿಷ್ಟ್ಯಗಳಿದ್ದರೂ ಈ ಹವೇಲಿಯು ಒಂದು ರೀತಿಯಲ್ಲಿ ಸದಾ ಗಲಗಲ ಎನ್ನುವ ಹಳೇದಿಲ್ಲಿಯ ಗಡಿಬಿಡಿಯ ಒಂದು ಭಾಗವಾಗಿ ಕಳೆದುಹೋಗಿದೆ.
ಜಿಸ್ಕಿ ಝುಬಾಂ ಉರ್ದು ಕೀ ತರ್ಹಾ, ಎಂದು ಉರ್ದು ಭಾಷೆಯ ಮೋಹಕತೆಯ ಬಗ್ಗೆ ಹಾಡೊಂದರಲ್ಲಿ ಬರೆಯುತ್ತಾರೆ ಕವಿ ಗುಲಾರ್ ಸಾಬ್. ಅಂಥಾ ಉರ್ದುವಿನಲ್ಲೂ, ಪರ್ಷಿಯನ್ ಭಾಷೆಯ ಕಾವ್ಯದಲ್ಲೂ ಮುಂಚೂಣಿಯಲ್ಲಿ ನಿಲ್ಲುವ ಹೆಸರೇ ಮಿರ್ಜಾ ಗಾಲಿಬ್. ದಿಲ್ಲಿಯನ್ನು ಈ ಜಗತ್ತೆಂಬ ದೇಹದ ಆತ್ಮಕ್ಕೆ ಹೋಲಿಸಿದ ಗಾಲಿಬ್ ಈ ಶಹರಕ್ಕೊಂದು ಸಾಂಸ್ಕೃತಿಕ ನೆಲೆಯಲ್ಲಿ ಐಡೆಂಟಿಟಿಯೊಂದನ್ನು ಕೊಟ್ಟವನೂ ಹೌದು. ಹಿಂದೊಮ್ಮೆ ಆಗಂತುಕನೊಬ್ಬ ಗಾಲಿಬ್ ಬಳಿ ಅವರ ವಿಳಾಸವನ್ನು ಕೇಳಿದಾಗ “ಅಸಾದುಲ್ಲಾ ಗಾಲಿಬ್, ದಿಲ್ಲಿ. ಇಷ್ಟು ಬರೆದರೆ ಸಾಕು’, ಎಂದಿದ್ದರಂತೆ ಗಾಲಿಬ್. “ಪೂಛೆ¤à ಹೇಂ ವೋ ಕೆ ಗಾಲಿಬ್ ಕೌನ್ ಹೈ / ಕೋಯಿ ಬತ್ಲಾವೋ ಕೇ ಹಮ್ ಬತ್ಲಾಯೇ ಕ್ಯಾ? (ಗಾಲಿಬ್ ಯಾರೆಂದು ಕೇಳುವವರಿಗೆ ನಾನೇನು ಹೇಳಲಿ ಹೇಳು?)’, ಎಂದಿದ್ದೂ ಗಾಲಿಬ್. ದಿಲ್ಲಿಗೂ ಈ ಪ್ರತಿಭಾವಂತ ಕವಿಗೂ ಇರುವ ಗಾಢನಂಟು ಅಂಥದ್ದು. ತಮ್ಮ ಪತ್ನಿಯಾದ ಉಮ್ರಾವೋ ಬೇಗಂರೊಂದಿಗೆ ದಿಲ್ಲಿಗೆ ಬಂದಿದ್ದ ಗಾಲಿಬ್ ದಿಲ್ಲಿಯ ಹಲವು ಭಾಗಗಳಲ್ಲಿ ನೆಲೆಸಿ ಕೊನೆಗೂ ದೀರ್ಘಕಾಲದವರೆಗೆ ಠಿಕಾಣಿ ಹೂಡಿದ್ದು ಈ ಹವೇಲಿಯಲ್ಲೇ. ಕಾಸಿಂಜಾನ್ ಗಲ್ಲಿಯ ಈ ಹವೇಲಿಯಲ್ಲೇ ಗಾಲಿಬ್ ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ದಿವಾನ್‌ಗಳನ್ನು ಬರೆದಿದ್ದರೆಂದು ಹೇಳಲಾಗುತ್ತದೆ. ಇವುಗಳು ದಿವಾನ್-ಎ-ಗಾಲಿಬ್ ಎಂಬ ಹೆಸರಿನಲ್ಲಿ ಪ್ರಸಿದ್ಧ. ಹಾಗೆ ನೋಡಿದರೆ ಝಹೂರಿ, ಶೌಕತ್ ಬುಖಾರಿ, ಆಸಿರ್, ಫೈಝಿ, ಬೇದಿಲ್, ನಾಝಿರಿ, ಉರ್ಫಿಯಂಥ ಕವಿಗಳು ಗಾಲಿಬ್‌ಗಿಂತ ಮೊದಲೇ ದಿಲ್ಲಿಯಲ್ಲಿ ಹೆಸರು ಮಾಡಿದವರು. ಆದರೆ, ಇಂದಿಗೂ ದಿಲ್ಲಿಯೆಂದರೆ ಥಟ್ಟನೆ ನೆನಪಿಗೆ ಬರುವ ಏಕೈಕ ಹೆಸರೆಂದರೆ ಗಾಲಿಬ್ ಮಾತ್ರ !
Related Articles
ಲಖೋರಿ ಕಲ್ಲುಗಳನ್ನು ಹೊಂದಿರುವ ಗೋಡೆಗಳು ಮತ್ತು ಕಮಾನುಗಳನ್ನು ಹೊಂದಿರುವ ಈ ಹವೇಲಿಯಲ್ಲಿ ಗಾಲಿಬನ ಕಾಲವನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಲಾಗಿದೆ. ಇಲ್ಲಿಯ ಗೋಡೆಗಳ ಮೇಲೆ ಗಾಲಿಬನ ಸಾಲುಗಳು ರಾರಾಜಿಸುತ್ತಿವೆ. ಗಾಲಿಬ್ ಸೇರಿದಂತೆ ಕೆಲ ಸಮಕಾಲೀನ ಕವಿಗಳ ಚಿತ್ರಗಳನ್ನೂ ಇಲ್ಲಿ ಕಾಣಬಹುದು. ಇನ್ನು ಉರ್ದುಭಾಷೆಯಲ್ಲಿರುವ ಗಾಲಿಬ್ ಕೈಬರಹದ ಹಳೆಯ ಪುಸ್ತಕಗಳು ಇಲ್ಲಿಯ ಪ್ರಮುಖ ಆಕರ್ಷಣೆಗಳಲ್ಲೊಂದು. ಗಾಳಿಪಟ ಹಾರಿಸುವುದು, ಪಗಡೆಯಂತಿರುವ ಚೌಸರ್, ಗಂಜೀಫಾ ಇತ್ಯಾದಿ ಆಟಗಳು ಆತನಿಗೆ ಬಹುಪ್ರಿಯವಾಗಿತ್ತಂತೆ. ಭೋಜನಪ್ರಿಯನೂ ಆಗಿದ್ದ ಗಾಲಿಬ್ ಹುರಿದ ಕಬಾಬ್, ದಾಲ್ ಮುರಬ್ಟಾ, ಶಾಮೀ ಕಬಾಬ್, ಸೋಹನ್ ಹಲ್ವಾಗಳನ್ನು ಇಷ್ಟಪಡುತ್ತಿದ್ದ. ಈ ಎಲ್ಲಾ ಖಾದ್ಯಗಳ ಮಾದರಿಗಳನ್ನಿಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇನ್ನು ಗಾಲಿಬನ ಹಾಸ್ಯಪ್ರಜ್ಞೆೆ ಮತ್ತು ಮಾವಿನೆಡೆಗೆ ಆತನಿಗಿದ್ದ ಪ್ರೀತಿಯ ಬಗ್ಗೆ ಹಲವು ಸ್ವಾರಸ್ಯಕರ ಕಥೆಗಳೇ ಇವೆಯೆನ್ನಿ.
Advertisement
ಮೇಲೆ ಹೇಳಿರುವುದನ್ನು ಹೊರತುಪಡಿಸಿ ಗಾಲಿಬ್ ಮತ್ತು ಆತನ ಪತ್ನಿಯು ಧರಿಸುತ್ತಿದ್ದ ಉಡುಪುಗಳ ಮತ್ತು ಬಳಸುತ್ತಿದ್ದ ಪಾತ್ರೆಗಳ ಪ್ರತಿಕೃತಿಗಳನ್ನೂ ಕೂಡ ಇಲ್ಲಿ ನೋಡಬಹುದು. ಆರಾಮಾಗಿ ಕುಳಿತು ಹುಕ್ಕಾ ಸೇದುತ್ತಿರುವ ಟೋಪಿಧಾರಿ ಗಾಲಿಬನ ಪ್ರತಿಕೃತಿಯು ನೋಡಲು ಚೆನ್ನ. ಇನ್ನು ಶಿಲ್ಪಿ ಶ್ರೀಭಗವಾನ್ ರಾಂಪುರೆಯವರಿಂದ ನಿರ್ಮಿತ ಮತ್ತು ಕವಿ ಗುಲಾlರ್‌ರಿಂದ ಕೊಡುಗೆಯಾಗಿ ನೀಡಲ್ಪಟ್ಟ ಗಾಲಿಬನ ಸುಂದರ ಮೂರ್ತಿಯು ನಿಜಕ್ಕೂ ಪ್ರವಾಸಿಗರನ್ನು ಸೆಳೆಯುವಂಥದ್ದು. ಒಟ್ಟಿನಲ್ಲಿ ದಿಲ್ಲಿಯಲ್ಲೇ ಇರುವ ಗಾಲಿಬ್ ಅಕಾಡೆಮಿಗೆ ಹೋಲಿಸಿದರೆ ಗಾಲಿಬ್ ಕೀ ಹವೇಲಿಯಲ್ಲಿರುವ ಅಪರೂಪದ ವಸ್ತುಗಳು ಕೊಂಚ ಉತ್ತಮ ಸ್ಥಿತಿಯಲ್ಲಿವೆ.
ಹವೇಲಿಯು ನಡೆದು ಬಂದ ಹಾದಿ1860 ರಿಂದ 1869 ರವರೆಗೆ ಗಾಲಿಬ್ ಉಳಿದುಕೊಂಡಿದ್ದ ಈ ಹವೇಲಿಯು ಅಸಲಿಗೆ ಓರ್ವ ಹಕೀಮನಿಂದ ಗಾಲಿಬನಿಗೆ ಅಭಿಮಾನಪೂರ್ವಕ ಕೊಡುಗೆಯಾಗಿ ನೀಡಲ್ಪಟ್ಟಿತ್ತು. ಗಾಲಿಬ್ ಮರಣಾನಂತರ ಈ ಹವೇಲಿಯು ಹಸ್ತಾಂತರಗೊಂಡ ಕೈಗಳು ಒಂದೆರಡಲ್ಲ. ಕಾಲಾನುಕ್ರಮದಲ್ಲಿ ಬಾಡಿಗೆ ಮನೆಯಾಗಿದ್ದೂ ಸೇರಿದಂತೆ ಇದು ಪುಟ್ಟ ಕಾರ್ಖಾನೆಯೂ, ಕಲ್ಯಾಣಮಂಟಪವೂ ಆಗಿಹೋಗಿದೆ. ಕೊನೆಗೂ 1999ರಲ್ಲಿ ದಿಲ್ಲಿ ಸರಕಾರವು ಹವೇಲಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಅದನ್ನೊಂದು ಸ್ಮಾರಕವಾಗಿ ರೂಪಿಸಿತ್ತು. ಪ್ರಸ್ತುತ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯು ಹವೇಲಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಲಂಡನ್ನಿನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಉರ್ದು ಬೋಧಿಸಿದ್ದ, ಭಾರತ-ಪಾಕಿಸ್ತಾನಗಳೆರಡರಲ್ಲೂ ಮನೆಮಾತಾಗಿರುವ ಪ್ರೊ. ರಾಲ್ಫ್ ರಸೆಲ್ ಹೇಳುವ ಪ್ರಕಾರ ಗಾಲಿಬ್ ಆಂಗ್ಲಭಾಷೆಯಲ್ಲೇನಾದರೂ ಬರೆದಿದ್ದರೆ ಆತ ಎಲ್ಲಾ ಭಾಷೆಗಳಿಗೂ, ಎಲ್ಲಾ ಕಾಲಕ್ಕೂ ಮೀರುವ ಅದ್ಭುತ ಕವಿ ಎಂದೆನಿಸಿಕೊಳ್ಳುತ್ತಿದ್ದ. ಆದರೆ, ಇನ್ನೊಂದು ಮಾತೂ ಸತ್ಯ. ಗಾಲಿಬ್ ಇಂಗ್ಲಿಷ್ ಭಾಷೆಯ ಪಾಲಾದರೆ ಉರ್ದು ತನ್ನ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತಾಗುತ್ತಿತ್ತು. ಜೊತೆಗೇ ಉರ್ದುವೇ ಆಭರಣದಂತಿರುವ ಹಿಂದಿಯಂಥ ಭಾಷೆಯು ಗಾಲಿಬನಂಥಾ ಮಹಾಪ್ರತಿಭೆಯಿಲ್ಲದೆ ಮಸುಕಾಗುತ್ತಿತ್ತು. ಪ್ರಸಾದ್ ನಾೖಕ್