Advertisement

ಶಹರದ ಶ್ವಾಸಕೋಶ

09:49 AM Sep 23, 2019 | mahesh |

ದಿಲ್ಲಿ ಉದ್ಯಾನಗಳ ನಗರಿ. ತೊಂಬತ್ತು ಎಕರೆಯಷ್ಟಿನ ವಿಶಾಲ ಭೂಮಿ. ಕಣ್ಣು ಹಾಯಿಸಿದಷ್ಟೂ ಹಚ್ಚಹಸಿರು. ಏನಿಲ್ಲವೆಂದರೂ ಸುಮಾರು ಇನ್ನೂರು ಬಗೆಯ ಸಸ್ಯ ವೈವಿಧ್ಯಗಳ, ಅದೆಷ್ಟೋ ಬಗೆಯ ಪಕ್ಷಿಗಳ, ಹೂವುಗಳ ಮತ್ತು ಚಿಟ್ಟೆಗಳ ಲೋಕ. ಉದ್ಯಾನವೆಂಬ ಹೆಸರನ್ನು ಹೊತ್ತ ಮಾತ್ರಕ್ಕೆ ಕೇವಲ ವಾಕಿಂಗ್‌, ಜಾಗಿಂಗ್‌ ಮತ್ತು ಯೋಗ ಉತ್ಸಾಹಿಗಳಿಗಷ್ಟೇ ಸೀಮಿತವಾಗದೆ ರಂಗುರಂಗಿನ ದಿಲ್ಲಿಯನ್ನು ತಮ್ಮ ಪುಟ್ಟ ಫ್ರೆàಮುಗಳಲ್ಲಿ ಬಂಧಿಸಿಡಲು ಬಯಸುವ ಫೋಟೋಗ್ರಾಫ‌ರುಗಳ, ಚಿತ್ರನಿರ್ದೇಶಕರ, ಸೃಜನಶೀಲರ ನೆಚ್ಚಿನ ತಾಣ. ಯುವಪ್ರೇಮಿಗಳಿಗಂತೂ ಗಂಧರ್ವಲೋಕ. ಒಟ್ಟಿನಲ್ಲಿ ಲೋಧಿ ಗಾರ್ಡನ್‌ ಎಂಬುದು ದಿಲ್ಲಿಗೆ ಯಕಃಶ್ಚಿತ್‌ ಉದ್ಯಾನವಷ್ಟೇ ಅಲ್ಲ. ಅದು ಈ ಶಹರದ ಶ್ವಾಸಕೋಶವೂ ಹೌದು.

Advertisement

ದಿಲ್ಲಿಯ ವಾಯುಮಾಲಿನ್ಯದ ಸಮಸ್ಯೆಯು ದಿಲ್ಲಿಯ ನಿವಾಸಿಗಳನ್ನು ಮತ್ತು ಪ್ರವಾಸಿಗರನ್ನು ಇನ್ನಿಲ್ಲದಂತೆ ಕಂಗೆಡಿಸಿದ್ದರೂ ಭರವಸೆಯೆಂಬುದು ಹಿಡಿಮುಷ್ಟಿಯಷ್ಟು ಉಳಿದಿದ್ದರೆ ಅದು ಇಲ್ಲಿಯ ಉದ್ಯಾನಗಳಿಂದ ಮಾತ್ರ. ಹಾಗೆ ನೋಡಿದರೆ, ದಿಲ್ಲಿಯಲ್ಲಿ ರುವ ಉದ್ಯಾನಗಳು ಕೇವಲ ಕಾಟಾಚಾರದ ಪಾರ್ಕುಗಳಲ್ಲವೇ ಅಲ್ಲ. ಎಕರೆಗಟ್ಟಲೆ ವಿಸ್ತೀರ್ಣಗಳಲ್ಲಿ ಮೈಚೆಲ್ಲಿಕೊಂಡಿರುವ ಇಲ್ಲಿಯ ಕೆಲವು ಉದ್ಯಾನಗಳಿಗೆ ತಮ್ಮದೇ ಆದ ಹಿನ್ನೆಲೆಗಳಿದ್ದರೆ ಇನ್ನು ಕೆಲವು ಹೊರಗಿನವರಿಗೆ ಅಚ್ಚರಿಯಾಗುವಷ್ಟರ ಮಟ್ಟಿನ ಪ್ರವಾಸೋದ್ಯಮ ಕೇಂದ್ರಗಳು. ಕೆಲವು ಉದ್ಯಾನಗಳು ನಗರದ ಹಲವು ಪೀಳಿಗೆಗಳ ಬದುಕಿನ ಅವಿಭಾಜ್ಯ ಅಂಗವಾಗಿದ್ದರೆ ಮತ್ತೆ ಕೆಲವು ತಮ್ಮ ಇರುವಿಕೆಯ ಮಾತ್ರದಿಂದಲೇ ಸ್ವತಃ ಲ್ಯಾಂಡ್‌-ಮಾರ್ಕ್‌ ಆಗಿರುವಂಥವು. ಉದಾಹರಣೆಗೆ, ದಿಲ್ಲಿಯಲ್ಲಿರುವ ಅಷ್ಟೂ ಉದ್ಯಾನಗಳಿಗೆ ಮುಕುಟಪ್ರಾಯದಂತಿರುವ ಲೋಧಿ ಗಾರ್ಡನ್‌ ಅನ್ನು “ನಗರವೆಂಬ ಮರಳುಗಾಡಿನಲ್ಲಿರುವ ಓಯಸಿಸ್‌’ ಎಂದು ಕರೆದಿರುವಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಏಕೆಂದರೆ, ದಿಲ್ಲಿಯಲ್ಲಿ “ಲೋಧಿ’ ಎಂಬ ಹೆಸರು ಇಂದು ಸೌಂದರ್ಯಕ್ಕೂ, ಸಮೃದ್ಧಿಗೂ ಸಂಕೇತ.

ಲೋಧಿ ಎಂಬ ಸ್ವರ್ಗ
ದಿಲ್ಲಿಯ ಖ್ಯಾತ ಲೋಧಿ ಉದ್ಯಾನಕ್ಕಿರುವುದು ಒಂದಲ್ಲ, ಎರಡಲ್ಲ… ಬರೋಬ್ಬರಿ ಎಂಬತ್ತಮೂರು ವರ್ಷಗಳ ಇತಿಹಾಸ. ಲೋಧಿ ಮತ್ತು ಸಯೀದ್‌ ಸಾಮ್ರಾಜ್ಯಗಳ ಐತಿಹಾಸಿಕ ಸ್ಮಾರಕಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡು ಬೀಗುತ್ತಿರುವ ಈ ಉದ್ಯಾನವು 1936 ರಲ್ಲಿ ಲೋಕಾರ್ಪಣೆಗೊಂಡಿದ್ದು ಲೇಡಿ ವಿಲ್ಲಿಂಗ್ಡನ್‌ ಪಾರ್ಕ್‌ ಎಂಬ ಹೆಸರಿನಲ್ಲಿ. ಬ್ರಿಟಿಷ್‌ ಅಧಿಪತ್ಯದ ಆ ದಿನಗಳಲ್ಲಿ ಭಾರತದ ಗವರ್ನರ್‌-ಜನರಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಾರ್ಕೆಸ್‌ ಆಫ್ ವಿಲ್ಲಿಂಗ್ಡನ್‌ ರವರ ಪತ್ನಿಯ ಹೆಸರನ್ನೇ ಉದ್ಯಾನಕ್ಕೆ ಇಡಲಾಗಿತ್ತು. ಮುಂದೆ ಈ ಉದ್ಯಾನವು ಆಂಗ್ಲ ಹೆಸರನ್ನು ಮೈಕೊಡವಿಕೊಂಡು “ಲೋಧಿ’ ನಾಮಧೇಯವನ್ನು ಪಡೆದುಕೊಂಡಿದ್ದು ಸ್ವಾತಂತ್ರ್ಯಾನಂತರದ ದಿನಗಳಲ್ಲಿ.

ಇಂದು ಲೋಧಿ ಪ್ರದೇಶದ ಬಗ್ಗೆ ಮಾತಾಡಿದಾಗಲೆಲ್ಲಾ ಥಟ್ಟನೆ ಲೋಧಿ ಗಾರ್ಡನ್‌ ನೆನಪಿಗೆ ಬಂದರೂ ಈ ಭಾಗವು ಉದ್ಯಾನಕ್ಕಷ್ಟೇ ಸೀಮಿತವಾಗಿಲ್ಲ. ಮೊದಲೇ ಹೇಳಿದಂತೆ ಇದು ದಿಲ್ಲಿ ಕಂಡ ಸುಲ್ತಾನರ ಇತಿಹಾಸವನ್ನು ಚೊಕ್ಕದಾದ ಪ್ಯಾಕೇಜೊಂದರ ರೂಪದಲ್ಲಿ ನೆನಪಿಸುವ ಬೀಡು. ಮೊಹಮ್ಮದ್‌ ಶಾನ ಮಗನಾಗಿದ್ದ ಅಲ್ಲಾವುದ್ದೀನ್‌ ಆಲಂ ಶಾ ತನ್ನ ತಂದೆಯ ನೆನಪಿಗಾಗಿ ಸಮಾಧಿಯೊಂದನ್ನು ಇಲ್ಲಿ ಕಟ್ಟಿದ್ದರೆ, ತಂದೆಯಾಗಿದ್ದ ಸಿಕಂದರ್‌ ಲೋಧಿಯ ನೆನಪಿನಲ್ಲಿ ಮಗ ಇಬ್ರಾಹಿಂ ಲೋಧಿ ನಿರ್ಮಿಸಿದ ಸಮಾಧಿಯೂ ಇಲ್ಲಿದೆ. ಶೀಶಾ ಗುಂಬಜ್‌ ಮತ್ತು ಬಡಾ ಗುಂಬಜ್‌ಗಳು ಆ ಕಾಲದ ವಾಸ್ತುಶಿಲ್ಪ ಮತ್ತು ಕಲಾಶ್ರೀಮಂತಿಕೆಯನ್ನು ಇಂದಿಗೂ ಜೀವಂತವಾಗಿಟ್ಟಿರುವ ಸ್ಮಾರಕಗಳು. ಇನ್ನು ಎಂಟು ಕಂಬಗಳು ಮತ್ತು ಏಳು ಕಮಾನುಗಳೊಂದಿಗೆ ನಿರ್ಮಿಸಲ್ಪಟ್ಟಿರುವ, ಅಕºರನ ಕಾಲದ “ಆಠು³ಲಾ’ ಸೇತುವೆಯು ಒಂದು ಕಾಲದಲ್ಲಿ ಯಮುನೆಯನ್ನು ಸೇರುತ್ತಿದ್ದ ಕಾಲುವೆಯೊಂದಕ್ಕೆ ಅಡ್ಡಲಾಗಿ ಕಟ್ಟಿರುವ ಅಪರೂಪದ ಸೇತುವೆ. ಅಸಲಿಗೆ ಹಿಂದಿಯಲ್ಲಿ “ಆs…’ ಎನ್ನಲಾಗುವ “ಎಂಟು’ ಮತ್ತು “ಪುಲ್‌’ ಎಂದು ಕರೆಯಲಾಗುವ “ಸೇತುವೆ’ಗಳು ಜೊತೆಯಾಗಿ “ಆಠು³ಲಾ’ ಎಂಬ ಪದದ ಸೃಷ್ಟಿಯಾಗಿದೆ. ಇವೆಲ್ಲಾ ಏನಿಲ್ಲವೆಂದರೂ ನಾಲ್ಕು ನೂರ ಐವತ್ತರಿಂದ ಐನೂರು ಚಿಲ್ಲರೆ ವರ್ಷಗಳಷ್ಟು ಹಳೆಯದಾದ ಕಟ್ಟಡಗಳೆಂದರೆ ನಂಬಲೇಬೇಕು. ಇನ್ನು ಕಾಕತಾಳೀಯವೆಂಬಂತೆ ಇವೆಲ್ಲವೂ ವಿಶಾಲವಾದ ಲೋಧಿ ಉದ್ಯಾನದ ಒಂದೇ ಆವರಣದಲ್ಲಿ ಒಳಗೊಂಡಿರುವುದು ಇಲ್ಲಿಯ ಸ್ಥಳವಿಶೇಷ.

ದಿಲ್ಲಿಯ ಬಹುತೇಕರಿಗೆ ಇಂದಿಗೂ ಲೋಧಿಯೆಂದರೆ ಒಂದು ಹಿತವಾದ ಅಚ್ಚರಿ. ಲ್ಯೂಟೆನ್ಸ್‌ ದಿಲ್ಲಿಯ ವೈಭವದ್ದೇ ಒಂದು ತೂಕವಾದರೆ ಲೋಧಿಯ ಸಹಜ ಸೌಂದರ್ಯದ್ದೇ ಮತ್ತೂಂದು ತೂಕ. ಲೋಧಿ ಗಾರ್ಡನ್‌ ಪ್ರದೇಶದ ಆಸುಪಾಸಿನಲ್ಲಿರುವ ಇಂಡಿಯನ್‌ ಹ್ಯಾಬಿಟಾಟ್‌ ಸೆಂಟರ್‌, ಇಂಡಿಯಾ ಇಂಟನ್ಯಾಷನಲ್‌ ಸೆಂಟರ್‌ ಗಳಂಥಾ ಸ್ವರ್ಗಸದೃಶ ಸಾಂಸ್ಕೃತಿಕ ಕೇಂದ್ರಗಳು, ಇಲ್ಲಿಯ ಹಸಿರ ಸೊಬಗಿನ ಚಾದರವನ್ನೇ ಹೊದ್ದುಕೊಂಡು ಜನರನ್ನು ಆಕರ್ಷಿಸುತ್ತಿರುವ ರೆಸ್ಟೋರೆಂಟ್‌-ಕೆಫೆಗಳು, ನೆರಳಿನಿಂದಾವೃತವಾದ ಅಗಲ ರಸ್ತೆಗಳು, ಸುಸಜ್ಜಿತ ಕಾಲೋನಿಗಳು, ವಿಲಾಸಿ ಎಸ್ಟೇಟುಗಳು ಮತ್ತು ದುಬಾರಿ ಖರೀದಿಗೆ ಹೆಸರಾದ ಖಾನ್‌ ಮಾರ್ಕೆಟ್‌ ಏರಿಯಾಗಳು ಲೋಧಿ ಪ್ರದೇಶವನ್ನು ಬಹುತೇಕ ಸ್ಥಳೀಯರ ನೆಚ್ಚಿನ ತಾಣಗಳಲ್ಲೊಂದಾಗುವಂತೆ ಮಾಡಿವೆ.

Advertisement

ಆಧುನಿಕ ದಿಲ್ಲಿಯ ದರ್ಬಾರ್‌
ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳೆಂಬ ಭೇದವಿಲ್ಲದೆ ತನ್ನ ಎಂಬತ್ತು ವರ್ಷಗಳ ಸುದೀರ್ಘ‌ ಇತಿಹಾಸದಲ್ಲಿ ಬಂದುಹೋದ ಅಷ್ಟೂ ಪೀಳಿಗೆಯ ಬಹುತೇಕರಿಗೆ ಲೋಧಿಯು ಮುಗಿಯದ ಅಚ್ಚರಿಯಾಗಿತ್ತು. ಖ್ಯಾತ ಲೇಖಕರೂ, ಅಂಕಣಕಾರರೂ ಆಗಿದ್ದ ಖುಷ್ವಂತ್‌ ಸಿಂಗ್‌ ತಮ್ಮ ಮೊಮ್ಮಗಳನ್ನು ಲೋಧಿ ಉದ್ಯಾನದಲ್ಲಿ ಸುತ್ತಾಡಿಸುತ್ತಿದ್ದರಂತೆ. ಉದ್ಯಾನದಲ್ಲಿದ್ದ ಸಸ್ಯಗಳ, ಪಕ್ಷಿಗಳ ಮತ್ತು ಸ್ಮಾರಕಗಳ ಬಗ್ಗೆ ತಾತ ತನಗೆ ವಿಸ್ತಾರವಾಗಿ ಹೇಳುತ್ತಿದ್ದರೆಂದು ಖುಷ್ವಂತರ ಮೊಮ್ಮಗಳಾದ ನೈನಾ ದಯಾಲ್‌ ನೆನಪಿಸಿಕೊಳ್ಳುತ್ತಾರೆ. ಲೋಧಿ ಉದ್ಯಾನದಲ್ಲಿರುವ ನೂರಾರು ಬಗೆಯ ಸಸ್ಯ ಮತ್ತು ಜೀವವೈವಿಧ್ಯಗಳ ಬಗ್ಗೆ ಅವರಿಗೆ ಅದೆಷ್ಟರ ಮಟ್ಟಿನ ಆಳವಾದ ಜ್ಞಾನ ಮತ್ತು ಅದಮ್ಯ ಆಸಕ್ತಿಯಿತ್ತೆಂದರೆ ತಮ್ಮ ಹಲವಾರು ಲೇಖನಗಳಲ್ಲಿ ಈ ಬಗ್ಗೆ ಖುಷ್ವಂತ್‌ ಸಿಂಗ್‌ ಸವಿಸ್ತಾರವಾಗಿ ಬರೆದಿದ್ದಾರೆ. ಖುಷ್ವಂತರ ಖ್ಯಾತ ಕಾದಂಬರಿಗಳಲ್ಲೊಂದಾದ ದ ಸನ್ಸೆಟ್‌ ಕ್ಲಬ್‌ನ ಮುಖ್ಯ ಕಥಾಪಾತ್ರಗಳಿಗೆ ದಿಲ್ಲಿಯ ಲೋಧಿ ಉದ್ಯಾನವೇ ರಂಗಸ್ಥಳ.

ಈಚೆಗಷ್ಟೇ ನಿಧನರಾದ, ಈ ದೇಶ ಕಂಡ ಪ್ರಭಾವಿ ರಾಜಕಾರಣಿಗಳಲ್ಲೊಬ್ಬರಾದ ಅರುಣ್‌ ಜೇಟ್ಲಿಯವರೂ ಕೂಡ ತಮ್ಮ ಮುಂಜಾನೆಯ ಕಾಲ್ನಡಿಗೆಯ ವಿಹಾರವನ್ನು ಲೋಧಿ ಉದ್ಯಾನದಲ್ಲಿ ಮಾಡುತ್ತಿದ್ದರಂತೆ. ಸ್ವತಃ ರಾಜಕಾರಣಿಯೂ, ಜೇಟ್ಲಿಯವರ ಆಪ್ತರೂ ಆಗಿರುವ ರಾಜೀವ್‌ ಶುಕ್ಲಾರವರು ಈ ಬಗ್ಗೆ ನೆನಪಿಸಿಕೊಳ್ಳುತ್ತ¤ ಜೇಟ್ಲಿಯವರು ಯಾವಾಗಲೂ ಕುಳಿತುಕೊಳ್ಳುತ್ತಿದ್ದ ಉದ್ಯಾನದ ಒಂದು ಮೂಲೆಯನ್ನು “ಜೇಟ್ಲಿ ಪಾಯಿಂಟ್‌’ ಎಂದೂ ಕರೆಯುವಂತಾಗಲಿ ಎಂದಿದ್ದರು. ಜೇಟ್ಲಿಯವರು ವಿಹಾರಕ್ಕೆಂದು ಅತ್ತ ಬಂದಾಗಲೆಲ್ಲಾ ಅವರ ಆಪ್ತವಲಯದ ಗೆಳೆಯರು, ಹಿತೈಷಿಗಳು ಮತ್ತು ಪರಿಚಿತರು ಈ ಜಾಗದಲ್ಲಿ ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿದ್ದರಂತೆ. ಹೀಗೆ ಜನಸಾಮಾನ್ಯರನ್ನೂ ಸೇರಿದಂತೆ ಉದ್ಯಾನವು ಹಲವು ಪ್ರತಿಭಾವಂತ ಖ್ಯಾತನಾಮರಿಗೆ ವಿಹಾರದ ಮತ್ತು ಏಕಾಂತದ ಸ್ಥಳವೂ ಆಗಿತ್ತು. ಈ ಕಾರಣಗಳಿಂದಾಗಿಯೇ ಲೋಧಿ ಉದ್ಯಾನವನ್ನು “ಆಧುನಿಕ ದಿಲ್ಲಿಯ ದರ್ಬಾರ್‌’ ಎಂದು ಕರೆದಿದ್ದರು ಲೇಖಕಿ ರಂಜನಾ ಸೇನ್‌ ಗುಪ್ತಾ.

ಮಹಾನಗರಗಳಲ್ಲಿರುವ ಬದುಕಿನ ನಿತ್ಯಜಂಜಾಟ ಗಳು ಮುಗಿಯದಷ್ಟಿರಬಹುದು. ಆಧುನಿಕ ಸೌಲಭ್ಯ, ತಂತ್ರಜ್ಞಾನಗಳು ಮನುಷ್ಯನ ಖಾಲಿತನಗಳನ್ನು ತಕ್ಕಮಟ್ಟಿಗೆ ನಿವಾರಿಸಿರಲೂಬಹುದು. ಆದರೆ, ಮನಃಶಾಂತಿಗಾಗಿ ನಿಸರ್ಗದ ಮಡಿಲಿಗೆ ಮರಳುವುದಕ್ಕಿಂತ ಪರಿಣಾಮಕಾರಿ ಮಾರ್ಗವು ಬೇರೊಂದಿಲ್ಲವೆಂಬುದನ್ನು ದಿಲ್ಲಿಯ ಸುಂದರ ಉದ್ಯಾನಗಳು ಸಾಬೀತುಪಡಿಸಿವೆ. ದಿಲ್ಲಿಯ ಐತಿಹಾಸಿಕ ಸ್ಥಳಗಳನ್ನು ಮತ್ತು ಉದ್ಯಾನಗಳನ್ನು ನೋಡುವ ನಿಟ್ಟಿನಲ್ಲಿ ಈಚೆಗೆ ಜನಪ್ರಿಯವಾಗುತ್ತಿರುವ “ಹೆರಿಟೇಜ್‌ ವಾಕ್‌’ಗಳೇ ಇದಕ್ಕೆ ಸಾಕ್ಷಿ.

ಸ್ಮಾರ್ಟ್‌ಸಿಟಿಗಳ ಕನಸಿನಾಚೆಗೂ ಹಚ್ಚಹಸಿರಿನ ವರ್ತಮಾನ-ಭವಿಷ್ಯಗಳು ಈ ಹೃದಯ ಶ್ರೀಮಂತಿಕೆಯ ಶಹರಕ್ಕಿರಲಿ!

ಪ್ರಸಾದ್‌ ನಾೖಕ್‌

Advertisement

Udayavani is now on Telegram. Click here to join our channel and stay updated with the latest news.

Next