ದಿಲ್ ಖುಷ್’ ಎಂಬ ಸ್ವೀಟ್ ಬಗ್ಗೆ ಬಹುತೇಕರಿಗೆ ಗೊತ್ತಿರುತ್ತದೆ. ಈಗ ಇದೇ “ದಿಲ್ ಖುಷ್’ ಎಂಬ ಹೆಸರಿನಲ್ಲಿ ಹೊಸಬರ ಸಿನಿಮಾವೊಂದು ಕನ್ನಡದಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಪ್ರಮೋದ್ ಜಯ “ದಿಲ್ ಖುಷ್’ಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ, ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಿರ್ದೇಶಕರಾದ ಸಿಂಪಲ್ ಸುನಿ, ಪವನ್ ಒಡೆಯರ್ ಮತ್ತು ಬಹದ್ದೂರ್ ಚೇತನ್ ಮುಖ್ಯ ಅತಿಥಿಗಳಾಗಿ ಹಾಜರಿದ್ದು, “ದಿಲ್ ಖುಷ್’ ಸಿನಿಮಾದ ಮೊದಲ ಪ್ರೇಮಗೀತೆಯನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಪ್ರಮೋದ್ ಜಯ, “ಸಿನಿಮಾದ ಹೆಸರೇ ಹೇಳುವಂತೆ ಇದೊಂದು ಯೂಥ್‌ಫುಲ್ ಸಬೆjಕ್ಟ್ ಸಿನಿಮಾ. ಸ್ನೇಹ, ಪ್ರೀತಿ, ಸಂಬಂಧ ಎಲ್ಲದರ ಎಳೆಯನ್ನು ಇಟ್ಟುಕೊಂಡು ಸಿನಿಮಾವನ್ನು ಹೊಸಥರದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದ್ದೇವೆ. ಪ್ರಚಾರದ ಭಾಗವಾಗಿ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಲಿದ್ದೇವೆ’ ಎಂದರು.
ಇನ್ನು ಬಿಡುಗಡೆಯಾಗಿರುವ “ದಿಲ್ ಖುಷ್’ ಸಿನಿಮಾದ ಪ್ರೇಮಗೀತೆಗೆ ಪ್ರಸಾದ್ ಕೆ. ಶೆಟ್ಟಿ ಸಂಗೀತ ಸಂಯೋಜಿಸಿದ್ದು, ಗೌಸ್‌ಪೀರ್ ಸಾಹಿತ್ಯ ರಚಿಸಿದ್ದಾರೆ. ಜಯಲಕ್ಷ್ಮೀ ಪ್ರವೀಣ್ ಮತ್ತು ಪ್ರಭ ಶೇಖರ್ ನಿರ್ಮಿಸಿರುವ “ದಿಲ್ ಖುಷ್’ ಸಿನಿಮಾದಲ್ಲಿ ನವ ಪ್ರತಿಭೆಗಳಾದ ರಂಜಿತ್, ಸ್ಪಂದನಾ ಸೋಮಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಧರ್ಮಣ್ಣ, ರಘು ರಾಮನಕೊಪ್ಪ, ಅರುಣಾ ಬಾಲರಾಜ್ ಅಭಿನಯಿಸಿದ್ದಾರೆ.
ಜಿ.ಎಸ್. ಕಾರ್ತಿಕ ಸುಧನ್