Advertisement

ಡಿಕೆಶಿ ಮನೆಗೆ ಐಟಿ ದಾಳಿ ರಾಜಕೀಯ ಪ್ರೇರಿತ

12:56 PM Aug 03, 2017 | Team Udayavani |

ಧಾರವಾಡ: ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರ ಮನೆ, ಕಚೇರಿ ಮೇಲೆ ಬಿಜೆಪಿಯವರ ರಾಜಕೀಯ ಪ್ರೇರಣೆಯಿಂದಲೇ ಐಟಿ ದಾಳಿ ಆಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ರೆಸಾರ್ಟ್‌ನಲ್ಲಿ ತಂಗಿರುವ ಗುಜರಾತ್‌ ಶಾಸಕರನ್ನು ಡಿಕೆಶಿ ನೋಡಿಕೊಳ್ಳುತ್ತಿರುವುದನ್ನು ತಿಳಿದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ. ಕೇಂದ್ರದ ಮಹತ್ವದ ಸಾಂವಿಧಾನಿಕ ಸಂಸ್ಥೆಗಳನ್ನು ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿ ಕೈಗೊಂಬೆಯಾಗಿ ಮಾಡಿಕೊಂಡಿರುವುದು ಖಂಡನೀಯ.

ಮೋದಿ-ಶಾ ಕೆಟ್ಟ ನಡವಳಿಕೆ ತೋರುತ್ತಿದ್ದು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಂಚಿನಲ್ಲಿದೆ. ಐಟಿ ದಾಳಿಯಿಂದ ಡಿಕೆಶಿ ಧೃತಿಗೆಡಬಾರದು. ಕಾಂಗ್ರೆಸ್‌ ಅವರ ಬೆನ್ನಿಗಿದೆ. ಕಾಂಗ್ರೆಸ್‌ನ ಕೆಲವರೇ ಈ ದಾಳಿ ಮಾಡಿಸಿದ್ದಾರೆಂಬ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ಸನ್ನು ದುರ್ಬಲಗೊಳಿಸುವ ಉದ್ದೇಶದಿಂದ ದಾಳಿ ನಡೆಸುವ ಮೂಲಕ ಸಂದೇಶ ರವಾನಿಸಲಾಗುತ್ತಿದೆ. ಇದ್ಯಾವುದಕ್ಕೂ ಪಕ್ಷ ಹಿಂಜರಿಯುವುದಿಲ್ಲ. ಅಕ್ರಮ ಆಸ್ತಿ ಸಂಪಾದನೆ ಮಾಡಿದ ಎಲ್ಲರ ಮೇಲೂ ದಾಳಿ ನಡೆಸಲಿ. ಕೇಂದ್ರ ಸರಕಾರದ ಬಳಿ ಕಾಳಧನಿಕರ ಪಟ್ಟಿ ಇದೆ. ಅದನ್ನೇಕೆ ಹೊರ ಹಾಕುತ್ತಿಲ್ಲ ಎಂದು ಪ್ರಶ್ನಿಸಿದರು. 

ಪ್ರತ್ಯೇಕ ಧರ್ಮ ಆಗಲೇಬೇಕು: ಸದ್ಯ ಎದ್ದಿರುವ ವೀರಶೈವ ಅಥವಾ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್‌ ಸರಕಾರವಾಗಲಿ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ ತಲೆ ಹಾಕಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎನ್ನುವುದು ಬಹಳ ಹಿಂದಿನಿಂದ ಇದ್ದ ಕೂಗು.

Advertisement

ಈಗ ಅದು ಪ್ರಬಲವಾಗಿದೆ ಅಷ್ಟೇ ಎಂದರು. ದೇಶದಲ್ಲಿಯೇ ಹುಟ್ಟಿರುವ ಜೈನ, ಸಿಖ್‌, ಬೌದ್ಧ ಧರ್ಮಗಳು ಪ್ರತ್ಯೇಕವಾಗಿ ಸರಕಾರದ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ  ಎಲ್ಲ ಅರ್ಹತೆಯಿರುವ ಲಿಂಗಾಯತವೂ ಸ್ವತಂತ್ರ ಧರ್ಮವಾಗಬೇಕು. ಅದು ವೀರಶೈವ ಲಿಂಗಾಯತ ಧರ್ಮ ಎಂದಾದರೂ ಆಗಲಿ ಅಥವಾ ಲಿಂಗಾಯತ ಧರ್ಮ ಎಂದಾದರೂ ಆಗಲಿ ಎಂದು ಹೇಳಿದರು. 

ವೀರಶೈವ ಹಾಗೂ ಲಿಂಗಾಯತ ಹೆಸರಿನಲ್ಲಿ ಕೆಲವರು ಆರೋಪ-ಪ್ರತ್ಯಾರೋಪ ಮಾಡುತ್ತಿರುವುದು ನೋವು ತರಿಸುತ್ತಿದೆ. ಈ ವಿಷಯದಲ್ಲಿ ಪ್ರತಿಷ್ಠೆ ಬಿಟ್ಟು ಪರಸ್ಪರ ಚರ್ಚಿಸಿ, ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು. ವೀರಶೈವ ಮಹಾಸಭೆ ಈ ನಿಟ್ಟಿನಲ್ಲಿ ಸಭೆ ಆಯೋಜಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next