ಇನ್ನೆರಡು ದಿನಗಳಲ್ಲಿ ಮತದಾನಕ್ಕೆ ಸಾಕ್ಷಿಯಾಗಲಿರುವ ಮಧ್ಯಪ್ರದೇಶದಲ್ಲಿ ಎಲ್ಲರ ಗಮನ ರಾಘೋಗಢ ಕ್ಷೇತ್ರದತ್ತ ನೆಟ್ಟಿದೆ. “ವಿಐಪಿ’ ಸೀಟ್ ಎಂದೇ ಪರಿಗಣಿಸಲ್ಪಟ್ಟಿರುವ ರಾಘೋಗಢ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯಿದೆ. ಅದಕ್ಕಿಂತಲೂ ಮಿಗಿಲಾಗಿ, ಇದು “ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಪುತ್ರ ವರ್ಸಸ್ ಸಿಂಧಿಯಾ ಆಪ್ತನ ನಡುವಿನ ಕದನ’.
ಈ ಹಿಂದೆ ಕಾಂಗ್ರೆಸ್ ಧುರೀಣ ದಿಗ್ವಿಜಯ್ ಸಿಂಗ್ ಪ್ರತಿನಿಧಿಸಿದ್ದ ಈ ಕ್ಷೇತ್ರದಲ್ಲಿ ಅವರ ಪುತ್ರ ಜೈವರ್ಧನ್ ಸಿಂಗ್ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಜೈವರ್ಧನ್ ವಿರುದ್ಧ ಬಿಜೆಪಿ ಹೀರೇಂದ್ರ ಸಿಂಗ್‌ರನ್ನು ಕಣಕ್ಕಿಳಿಸಿವೆ. ವಿಶೇಷವೆಂದರೆ, ಹೀರೇಂದ್ರ ಅವರು ಕೇಂದ್ರ ಸಚಿವ, ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪರಮಾಪ್ತ. ರಾಘೋಗಢವು ಗ್ರಾಮೀಣ, ಆರ್ಥಿಕವಾಗಿ ಹಿಂದುಳಿದಿರುವ, ಕೃಷಿಯಾಧಾರಿತ ಪ್ರದೇಶ.
ಉತ್ತಮ ಆಸ್ಪತ್ರೆಗಳು, ಶಾಲೆಗಳು, ರಸ್ತೆಗಳು, ನಿರಂತರ ನೀರು ಪೂರೈಕೆ ಕಾಣದಿದ್ದರೂ 1977ರಿಂದಲೂ ಇಲ್ಲಿನ ಮತದಾರರು ದಿಗ್ವಿಜಯ್ ಸಿಂಗ್, ಸೋದರ ಲಕ್ಷ್ಮಣ ಸಿಂಗ್, ಸೋದರ ಸಂಬಂಧಿ ಮೂಲ್ ಸಿಂಗ್, ಅನಂತರದಲ್ಲಿ ಜೈವರ್ಧನ್ ಸಿಂಗ್‌ರನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಕೆಲವು ಮತದಾರರು ಹಾಲಿ ಶಾಸಕನ ಮೇಲೆ ಸಿಟ್ಟಾಗಿದ್ದು, “ಜೈವರ್ಧನ್ ಅಪ್ಪನ ಥರ ಅಲ್ಲ. ಈ ಚುನಾವಣೆಯು ಅವರಿಗೆ ಎಚ್ಚರಿಕೆಯ ಕರೆಗಂಟೆಯಾಗಲಿದೆ’ ಎಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದ್ದಾರೆಂಬ ಆರೋಪವೂ ಜೈವರ್ಧನ್ ಮೇಲಿದೆ.
ಇನ್ನೊಂದೆಡೆ, ಕಾಂಗ್ರೆಸ್‌ನ ಮಾಜಿ ನಾಯಕರಾಗಿದ್ದ ಹೀರೇಂದ್ರ 2021ರ ಅಂತ್ಯದಲ್ಲಿ ಬಿಜೆಪಿ ಸೇರಿದ್ದರು. ಸಿಂಧಿಯಾ ಆಪ್ತ ಮಾತ್ರವಲ್ಲದೇ, ರಾಘೋಗಢದ ರಾಜಮನೆತನದೊಂದಿಗಿನ ನೇರ ನಂಟು ಹೊಂದಿರುವವರು. “ಸನಾತನ ಧರ್ಮ’ದ ಸಂರಕ್ಷಣೆ, ಹಿಂದುತ್ವದ ಹೆಸರಿನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಜತೆಗೆ ರಾಘೋಗಢದ ಅಭಿವೃದ್ಧಿಯಲ್ಲಿ ದಿಗ್ವಿಜಯ್ ಕುಟುಂಬದ ವೈಫಲ್ಯವನ್ನೂ ಪ್ರಚಾರದ ಪ್ರಮುಖ ವಿಚಾರವಾಗಿಟ್ಟುಕೊಂಡಿದ್ದಾರೆ. ಇದರ ನಡುವೆಯೂ, ದಿಗ್ವಿಜಯ್ ಮೇಲಿನ ಕ್ಷೇತ್ರದ ಮತದಾರರ ಒಲವು ಕಡಿಮೆಯಾಗಿಲ್ಲ. ಹೀಗಾಗಿ ಈ ಕ್ಷೇತ್ರದ ಫಲಿತಾಂಶವು ಭಾರೀ ಕುತೂಹಲ ಕೆರಳಿಸಿದೆ.