ಭೋಪಾಲ್/ರಾಯ್ಪುರ : ಈ ತಿಂಗಳ 28 ರಂದು ವಿಧಾನಸಭೆ ಚುನಾವಣೆ ನಡೆಯಲಿರುವಂತೆಯೇ ಮಧ್ಯ ಪ್ರದೇಶದ ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರಾಗಿರುವ ಮಾಜಿ ಮುಖ್ಯ ಮಂತ್ರಿ ದಿಗ್ವಿಜಯ ಸಿಂಗ್ ಮತ್ತು ಜ್ಯೋತಿ ರಾದಿತ್ಯ ಸಿಂಧಿಯಾಗೆ ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿ ಕಾರ್ಯ ಚಟುವಟಿಕೆಗಳಿಂದ ದೂರ ಇರುವಂತೆ ಸೂಚಿಸಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ನಿರ್ಧಾರ ಕೈಗೊಂಡಿದ್ದಾರೆ. ಸೋಮವಾರ ಮತ್ತು ಮಂಗಳವಾರ ರಾಹುಲ್ ಮಧ್ಯಪ್ರದೇಶ ಪ್ರವಾಸ ಕೈಗೊಂಡಿದ್ದಾಗ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಿಂಧಿಯಾ ಮತ್ತು ದಿಗ್ವಿಜಯ್ ಬಹಿರಂಗವಾಗಿಯೇ ವಾಗ್ವಾದ ನಡೆಸಿದ್ದರು. ಅದು ರಾಹುಲ್ ಕೋಪಕ್ಕೆ ಕಾರಣವಾಗಿತ್ತು. ಬಿಕ್ಕಟ್ಟು ಬಗೆಹರಿಸಲು ಹಿರಿಯ ನಾಯಕರಾಗಿರುವ ಎಂ.ವೀರಪ್ಪ ಮೊಲಿ, ಅಶೋಕ್ ಗೆಹಲೋಟ್, ಅಹ್ಮದ್ ಪಟೇಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅದು ಬುಧವಾರ ತಡ ರಾತ್ರಿಯವರೆಗೂ ಸಭೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿತ್ತು. ಇದೀಗ ಗುರುವಾರ ಇಬ್ಬರು ನಾಯಕ ರನ್ನೇ ಚುನಾವಣಾ ಸಮಿತಿಯಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗಿದೆ.
ಚೌಹಾಣ್ ಟೀಕೆ: ಪನಾಮಾ ದಾಖಲೆಗಳಲ್ಲಿ ತಮ್ಮ ಹಾಗೂ ಪುತ್ರನ ಹೆಸರು ಪ್ರಸ್ತಾವಿಸಿದ್ದು ಗೊಂದಲದಿಂದ ಎಂದು ರಾಹುಲ್ ಗಾಂಧಿ ಹೇಳಿದ್ದಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಲೇವಡಿ ಮಾಡಿದ್ದಾರೆ. ಯಾವ ರಾಜ್ಯದ ವಿಚಾರ ಏನು, ಹೇಗೆ ಎನ್ನುವುದು ಗೊತ್ತಾಗದಿದ್ದರೆ, ಪ್ರಧಾನಿಯಾದರೆ ಆಡಳಿತ ಹೇಗೆ ನಿರ್ವಹಿಸುತ್ತೀರಿ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ರಾಹುಲ್ ಮತ್ತು ಕಾಂಗ್ರೆಸ್ ಪಕ್ಷವೇ ಗೊಂದಲದಿಂದ ಕೂಡಿದೆ ಎಂದಿದ್ದಾರೆ.
95 ಸ್ಥಾನಗಳಲ್ಲಿ ಸ್ಪರ್ಧೆ: ಡಿ.7ರಂದು ನಡೆಯಲಿರುವ ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ 95 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉಳಿದ 24 ಸ್ಥಾನಗಳನ್ನು ಟಿಡಿಪಿ, ತೆಲಂಗಾಣ ಜನ ಸೇನಾ ಸಮಿತಿ, ಸಿಪಿಐಗೆ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನ. 8 ಅಥವಾ 9ರಂದು ಬಿಡುಗಡೆಯಾಗಲಿದೆ. ಇದೇ ವೇಳೆ ಛತ್ತೀಸ್‌ಗಡದಲ್ಲಿ ಐದನೇ ಮತ್ತು ಅಂತಿಮ ಪಟ್ಟಿಯನ್ನೂ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಡಿ.7 ರಂದು ನಡೆಯುವ ರಾಜಸ್ಥಾನ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ 90 ಮಂದಿ ಅಭ್ಯರ್ಥಿಗಳ ಪಟ್ಟಿ ಮಾಡಿ, ವರಿಷ್ಠ ಮಂಡಳಿಗೆ ಸಲ್ಲಿಸಿದೆ.
ರಾಜೆ ಆಡಳಿತಕ್ಕೆ ಅತೃಪ್ತಿ: ರಾಜಸ್ಥಾನ ಸಿಎಂ ವಸುಂಧರಾ ರಾಜೇ ಸಾಧನೆ ತೃಪ್ತಿ ತಂದಿಲ್ಲ ಎಂದು ಶೇ.48 ಮಂದಿ ಅಭಿ ಪ್ರಾಯಪಟ್ಟಿದ್ದಾರೆ ಎಂದು “ಟೈಮ್ಸ್ ನೌ’ ಚಾನೆಲ್ ಮತ್ತು ಸಿಎನ್‌ಎಕ್ಸ್ ಸಂಸ್ಥೆ ನಡೆ ಸಿದ ಸಮೀಕ್ಷೆ ಹೇಳಿದೆ. ಉಳಿದ ಶೇ.40.7 ಮಂದಿ ತೃಪ್ತಿ ಹೊಂದಿದ್ದಾರೆ. ಶೇ.35ರಷ್ಟು ಮಂದಿ ಉದ್ಯೋಗವೇ ತಮ್ಮ ಆದ್ಯತೆ ಎಂದಿದ್ದಾರೆ.