ರತ್ಲಾಮ್ : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ದಿಗ್ವಿಜಯ್ ಸಿಂಗ್ ಮತ ಚಲಾಯಿಸದೇ ಭಾರೀ ದೊಡ್ಡ ಪಾಪ ಎಸಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಮಧ್ಯ ಪ್ರದೇಶದ ರಾಘೋಗಢದ ನಿವಾಸಿಯಾಗಿದ್ದು ಅಲ್ಲಿ ಅವರು ನೋಂದಾಯಿತ ಮತದಾರರಾಗಿದ್ದಾರೆ; ಆದರೆ ಅವರು ನಿನ್ನೆ ಭಾನುವಾರ ಇಲ್ಲಿ ತಮ್ಮ ಮತ ಚಲಾಯಿಸಿಲ್ಲ.
“ಡಿಗ್ಗಿ ರಾಜಾ, ಈ ಪ್ರಜಾಸತ್ತೆಯ ಹಬ್ಬದಲ್ಲಿ ನೀವು ಮತ ಚಲಾಯಿಸದೆ ಭಾರೀ ದೊಡ್ಡ ಪಾಪ ಮಾಡಿದ್ದೀರಿ. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮುಂತಾದ ಗಣ್ಯರೆಲ್ಲ ಕ್ಯೂ ನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಆದರೆ ಡಿಗ್ಗಿ ರಾಜಾ ಅದನ್ನು ಮಾಡಿಲ್ಲ’ ಎಂದು ಪ್ರಧಾನಿ ಮೋದಿ ಅವರು ರತ್ಲಾಂ ಜಿಲ್ಲೆಯಲ್ಲಿ ರಾಲಿಯಲ್ಲಿ ಮಾತನಾಡುತ್ತಾ ಹೇಳಿದರು.
ದಿಗ್ವಿಜಯ್ ಸಿಂಗ್ ತಮ್ಮ ಹುಟ್ಟೂರಿಗೆ ಹೋಗಿ ಖುದ್ದು ಮತ ಚಲಾಯಿಸದೆ, ತಾನು ಅಭ್ಯರ್ಥಿಯಾಗಿರುವ ಭೋಪಾಲ್ ಕ್ಷೇತ್ರದಲ್ಲೇ ಉಳಿದುಕೊಂಡು ಅತ್ಯಧಿಕ ಸಂಖ್ಯೆಯ ಮತದಾರರು ಮುಂದೆ ಬಂದು ಮತಹಾಕಬೇಕೆಂದು ಕೋರವಲ್ಲಿ ನಿರತರಾಗಿದ್ದರು.
ಭೋಪಾಲ್ ಕ್ಷೇತ್ರದಲ್ಲಿ ದಿಗ್ವಿಜಯ್ ಅವರೆದುರು 2008 ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಠಾಕೂರ್‌ಅವರು ಸ್ಪರ್ಧಿಸುತ್ತಿದ್ದಾರೆ.