Advertisement

ಕಣ್ಣೂರಿನ ಹೊಟೇಲ್‌ ಈಗ ಡೀಗೊ ಮರಡೋನಾ ಮ್ಯೂಸಿಯಂ

11:15 PM Nov 27, 2020 | sudhir |

ಕಣ್ಣೂರು: ಕೇರಳ, ಗೋವಾ, ಕೋಲ್ಕತಾ… ಇವೆಲ್ಲ ಭಾರತದಲ್ಲಿ ಫ‌ುಟ್‌ಬಾಲ್‌ ಹುಚ್ಚು ಹತ್ತಿಸಿಕೊಂಡಿರುವ ಸ್ಥಳಗಳು. ಇಲ್ಲಿ ಕ್ರಿಕೆಟಿಗೆ ಅನಂತರದ ಸ್ಥಾನ. ಇಂತಹ ನಗರಗಳು ಫ‌ುಟ್‌ಬಾಲ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಡೀಗೊ ಮರಡೋನಾ ಅವರನ್ನು ದೇವರಂತೆಯೇ ಕಾಣುತ್ತವೆ. ಇಲ್ಲಿ ಕ್ರಿಕೆಟಿಗ ಸಚಿನ್‌ ಕೂಡ ಎರಡನೇ ದೇವರು!

Advertisement

2012, ಅ. 23ರಂದು ಕೇರಳದ ಕಣ್ಣೂರು ಜಿಲ್ಲೆಯ ಬ್ಲೂನೀಲ್‌ ಹೊಟೇಲ್‌ಗೆ ಮರಡೋನಾ ಆಗಮಿಸಿದ್ದರು. ಮೂರು ತಿಂಗಳ ಮುನ್ನವೇ ಹೊಟೇಲ್‌ನಲ್ಲಿ ಮರಡೋನಾ ಕಾರ್ಯದರ್ಶಿಗಳು ಎಲ್ಲ ವ್ಯವಸ್ಥೆ ಮಾಡಿಸಿದ್ದರೂ ಅತಿಥಿ ಯಾರೆಂದು ಹೇಳಿರಲಿಲ್ಲ. ಕೆಲವೇ ದಿನಗಳಿರುವಾಗ ಇಲ್ಲಿಗೆ ಆಗಮಿಸುತ್ತಿರುವವರು ಮರಡೋನಾ ಎಂದು ಗೊತ್ತಾದಾಗ ಮಾಲಕ ವಿ. ರವೀಂದ್ರನ್‌ ಅವರಿಗೆ ಸ್ವತಃ ದೇವರನ್ನೇ ಕಾಣುತ್ತಿರುವಷ್ಟು ಆನಂದ! ಕಾರಣ, ಅವರು ಮರಡೋನಾರ ಪರಮಭಕ್ತ.

ಎರಡು ದಿನಗಳ ಕಾಲ ಆ ಹೊಟೇಲ್‌ನಲ್ಲಿ ಮರಡೋನಾ ಇದ್ದರು. ಆ ವೇಳೆ ಮರಡೋನಾ ಬಳಸಿದ ತಟ್ಟೆ, ಲೋಟ, ಹಾಸಿಗೆ, ಹೊದಿಕೆಗಳು, ಊಟ ಮಾಡಿದ ವೇಳೆ ತಿಂದ ಪ್ರಾನ್‌ ಎಂಬ ಕಡಲಜೀವಿಯ ಚಿಪ್ಪನ್ನು ಅದೇ ಕೊಠಡಿಯಲ್ಲಿ ಈಗಲೂ ಸಂಗ್ರಹಿಸಿಡಲಾಗಿದೆ. ಮರಡೋನಾ ಭಕ್ತರಿಗೆ ಮಾತ್ರ ಈಗ ಕೊಠಡಿ ನೀಡಲಾಗುತ್ತದೆ. ಸದ್ಯ ಇದೊಂದು ಮ್ಯೂಸಿಯಂ ಆಗಿ ಬದಲಾಗಿದೆ.

ಅಂದು ಮರಡೋನಾ ಹೊಟೇಲ್‌ನ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ಕಾಣಿಸಿಕೊಂಡಾಗ, ಕೇಳಿಬಂದ ಚಪ್ಪಾಳೆ ಶಬ್ದ ಇನ್ನೂ ರವೀಂದ್ರನ್‌ ಕಿವಿಯಲ್ಲಿ ಗುಂಯ್ ಗುಡುತ್ತಿದೆಯಂತೆ. ಅಂದು ಅಲ್ಲಿ ಅಷ್ಟು ಜನ ಸೇರಿದ್ದರು!

Advertisement

Udayavani is now on Telegram. Click here to join our channel and stay updated with the latest news.

Next