Advertisement

ಯಕ್ಷಗಾನಕ್ಕೊಂದು ಘನತೆ ಪಾರ್ತಿಸುಬ್ಬ ಪ್ರಶಸ್ತಿ

06:12 PM Jul 04, 2019 | mahesh |

ಪಾರ್ತಿಸುಬ್ಬ ಎಂಬ ಹೆಸರು ಯಕ್ಷಗಾನ ಅಭಿಮಾನಿಗಳಿಗೆ ಪ್ರಾತಃ ಸ್ಮರಣೀಯವಾದುದು. ಯಕ್ಷಗಾನ ಕಲೆಯನ್ನು ಪ್ರಥಮವಾಗಿ ರಂಗಕ್ಕೆ ತಂದು , ಆಮೂಲಾಗ್ರ ಸುಧಾರಣೆ ಮಾಡಿ , ಇಂದು ಯಕ್ಷಗಾನ ವಿಶ್ವವ್ಯಾಪಿಯಾಗಲು ಮೂಲ ಕಾರಣರಾದುದು ಪಾರ್ತಿಸುಬ್ಬ. ಯಕ್ಷಗಾನದ ಮೂಲಪುರುಷ ,ಯಕ್ಷರಂಗದ ವಾಲ್ಮೀಕಿ ಎನಿಸಿದ ಪಾರ್ತಿಸುಬ್ಬರನ್ನು ನಾವು ಮರೆತಿದ್ದೇವೆಯೇ ? ವಿದ್ವಾಂಸರಾದ ಮುಳಿಯ ತಿಮ್ಮಪ್ಪಯ್ಯರಿಂದ ಯಕ್ಷಗಾನದ ನಾಡೋಜ ಎಂದು ಹೊಗಳಲ್ಪಟ್ಟ ಪಾರ್ತಿಸುಬ್ಬ ಕಾಸರಗೋಡು ತಾಲ್ಲೂಕಿನ ಕುಂಬಳೆಯವರು . ಸುಬ್ಬ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪಾಟಾಳಿಯಾಗಿದ್ದರು. ಇವರ ಜೀವಿತದ ಕಾಲಮಾನ ಸುಮಾರು 1600 ರಿಂದ 1700 ಇರಬಹುದು ಎಂಬುದು ಒಂದು ಅಭಿಪ್ರಾಯವಾದರೆ , 1760 ರಿಂದ 1830 ಎಂಬುದಾಗಿ ಮಂಜೇಶ್ವರ ಗೋವಿಂದ ಪೈ ,ಮುಳಿಯ ತಿಮ್ಮಪ್ಪಯ್ಯ , ವೆಂಕಪ್ಪ ಶೆಟ್ಟಿ , ಕುಕ್ಕಿಲ ಕೃಷ್ಣ ಭಟ್‌ ಮುಂತಾದ ಸಂಶೋಧಕರ ಅಭಿಪ್ರಾಯವೂ ಇದೆ . ಸುಬ್ಬನ ತಾಯಿಯ ಹೆಸರು ಪಾರ್ವತಿ (ಪಾರ್ತಿ). ಆಕೆಯಿಂದಲೇ ಈತನಿಗೆ ಪಾರ್ತಿಸುಬ್ಬ ಎಂಬ ಹೆಸರು ಬಂತು ಎಂಬುದು ಹಿರಿಯ ವಿದ್ವಾಂಸರ ಹಾಗೂ ಸಂಶೋಧಕರ ಅಭಿಪ್ರಾಯ .

Advertisement

ಕುಂಬಳೆ ಪೇಟೆಯ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದ ಪಕ್ಕದಲ್ಲೇ ಪಾರ್ತಿಸುಬ್ಬರ ತಂದೆಯ ಮನೆ ಇದ್ದು, ಸುಬ್ಬನ ಎಲ್ಲಾ ಕೃತಿಗಳಲ್ಲೂ ಕಣಿಪುರ ಕೃಷ್ಣ ಅಥವಾ ಕಣ್ವಪುರೇಶನ ಅಂಕಿತವಿದೆ . ಕಣಿಪುರಕ್ಕೆ ಸಮೀಪ ಪುರಾಣ ಪ್ರಸಿದ್ಧವಾದ ಮದವೂರು ಮಹಾ ಗಣಪತಿಯ ದೇವಸ್ಥಾನವಿದೆ . ಪಾರ್ತಿಸುಬ್ಬನು ಮದವೂರು ಗಣಪತಿಯ ಪರಮ ಭಕ್ತನಾಗಿದ್ದನು . ಈತನು ಮದವೂರು ದೇವಸ್ಥಾನಕ್ಕೆ ಬಂದು ಮುದದಿಂದ ನಿನ್ನಾ ಕೊಂಡಾಡುವೆನು ಅನವರತ | ಮದವೂರ ವಿಘ್ನೇಶ ದೇವ ಜಗದೀಶ ಎಂಬ ಪದ್ಯ ಬರೆದು ಅದನ್ನು ನಾಟಿ ರಾಗ , ಝಂಪೆ ತಾಳದಲ್ಲಿ ಹಾಡಿ ಪ್ರಸಂಗ ರಚನೆಗೆ ತೊಡಗಿದ್ದ . ಈ ಪದ್ಯವೇ ಯಕ್ಷಗಾನದ ಮೂಲ ಪದ್ಯವೆಂದು ಗುರುತಿಸಿಕೊಂಡಿದೆ . ಇಂದಿಗೂ ಯಕ್ಷಗಾನದ ಪ್ರಾರಂಭದಲ್ಲಿ ಗಣಪತಿಯನ್ನು ಸ್ತುತಿಸುವ ಪದ್ಯ ಇದೇ ಆಗಿದೆ . ಪಾರ್ತಿಸುಬ್ಬನು ರಚಿಸಿದ ಯಕ್ಷಗಾನ ಪ್ರಸಂಗಗಳಲ್ಲಿ ಹಾಗೂ ಯಕ್ಷಗಾನದ ಪೂರ್ವರಂಗ ಪ್ರಯೋಗದಲ್ಲಿ ಮದವೂರ ಗಣಪತಿ ದೇವರ ಸ್ತುತಿ ಧಾರಾಳವಾಗಿ ಇರುವುದನ್ನು ಗಮನಿಸಬಹುದು .

ಈತ ಕೇರಳದಲ್ಲಿ ವಿದ್ಯಾಭ್ಯಾಸ ಮಾಡಿದನೆಂದೂ ಕೆಲ ಸಮಯ ಅಲ್ಲಿಯ ಕಥಕಳಿಯಲ್ಲಿ ಭಾಗವತನಾಗಿದ್ದನೆಂದೂ ಅನಂತರ ಕನ್ನಡ ಯಕ್ಷಗಾನಗಳನ್ನು ರಚಿಸಿ ಕುಂಬಳೆಯ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದ ಕುಂಬಳೆ ದಶಾವತಾರ ಮೇಳವನ್ನು ಸ್ಥಾಪಿಸಿ ಭಾಗವತನಾಗಿದ್ದನು ಎಂಬ ಐತಿಹ್ಯವಿದೆ . ಯಕ್ಷಗಾನ ಪ್ರಯೋಗವನ್ನು ಶಾಸ್ತ್ರೀಯವಾಗಿ ಸಂಸ್ಕರಿಸಿ ತೆಂಕಮಟ್ಟು ಎಂಬ ಯಕ್ಷಗಾನ ಪದ್ಧತಿಯನ್ನು ರೂಢಿಸಿ , ಸಮಗ್ರ ರಾಮಾಯಣದ ಕಥೆಯನ್ನು ಯಕ್ಷಗಾನ ಪ್ರಸಂಗಗಳ ರೂಪದಲ್ಲಿ ರಚಿಸಿದವರಲ್ಲಿ ಈತ ಮೊದಲಿಗ. ಪುತ್ರಕಾಮೇಷ್ಟಿ , ಸೀತಾಸ್ವಯಂವರ, ಶ್ರೀರಾಮ ಪಟ್ಟಾಭಿಷೇಕ, ಪಂಚವಟಿ , ವಾಲಿ ಸಂಹಾರ, ಉಂಗುರ ಸಂಧಿ, ಸೇತು ಬಂಧನ, ಅಂಗದ ಸಂಧಾನ, ಕುಂಭಕರ್ಣ ಕಾಳಗ, ಕುಶ ಲವರ ಕಾಳಗ , ಐರಾವತ ಇವಲ್ಲದೆ ಶ್ರೀಕೃಷ್ಣ ಬಾಲಲೀಲೆ , ಕೃಷ್ಣಜನನ , ಗೋಪಿ ವಸ್ತ್ರಾಪಹರಣದವರೆಗಿನ ಕಥಾಭಾಗವನ್ನು ಕೃಷ್ಣಚರಿತೆ ಎಂಬ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು ಪಾರ್ತಿಸುಬ್ಬನೇ . ಈ ಪ್ರಸಂಗಗಳು ಇವತ್ತಿಗೂ ಯಕ್ಷರಂಗದಲ್ಲಿ ಪ್ರಯೋಗ ಆಗುತ್ತಿವೆ .

ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗಗಳು ಜೈಮಿನಿ ಭಾರತ , ತೊರವೆ ರಾಮಾಯಣ , ಕೃಷ್ಣ ಚರಿತೆಗಳಿಂದ ಪ್ರಭಾವಿತಗೊಂಡಿವೆ . ಯಕ್ಷಗಾನದ ಪೂರ್ವರಂಗಕ್ಕೆ ಸಂಬಂಧಿಸಿದಂತೆ ಈತ ರಚಿಸಿದ ಸಭಾಲಕ್ಷಣ ಯಕ್ಷಗಾನದ ಅಮೂಲ್ಯ ಗ್ರಂಥಪಾಠ ಎನಿಸಿಕೊಂಡಿದೆ .ಇದು ಯಕ್ಷಗಾನದ ಮೂಲಪಾಠವೂ ಆಗಿದೆ . ಈತನ ರಾಮಾಯಣದ ಕೃತಿಗಳು ಯಕ್ಷಗಾನ ಸಾರಸ್ವತ ಪ್ರಪಂಚದಲ್ಲಿ ಅತ್ಯುತ್ತಮ ಕೃತಿಗಳೆಂದು ಪ್ರಸಿದ್ಧವಾಗಿವೆ. ಅವುಗಳಲ್ಲಿ ಕೆಲವನ್ನು ವೆಂಕಯ್ಯ ಭಾಗವತ ಎಂಬುವವರು ತುಳು ಭಾಷೆಗೆ ಭಾಷಾಂತರಿಸಿದ್ದಾರೆ . ಈತನೇ ತುಳು ಭಾಷೆಯಲ್ಲಿ ರಚಿಸಿದ್ದ ಕೆಲವು ಬಿಡಿಪದ್ಯಗಳು ದೊರೆಯುತ್ತವೆ. ತನ್ನ ಐರಾವತ ಪ್ರಬಂಧದಲ್ಲಿ ತುಳು, ಮಲಯಾಳ, ಕೊಂಕಣಿ, ಮರಾಠಿ, ತೆಲುಗು ಭಾಷೆಗಳಲ್ಲಿ ಸಹ ಈತ ಕೆಲವು ಪದ್ಯಗಳನ್ನು ರಚಿಸಿದ್ದಾನೆ. ಯಕ್ಷಗಾನ ಎಂಬ ದೈವಿಕ ಕಲೆಯನ್ನು ಪುನರುಜ್ಜೀವನಗೊಳಿಸಿದ ಪಾರ್ತಿಸುಬ್ಬನು ಯಕ್ಷಗಾನ ತರಬೇತಿ ಶಾಲೆಯನ್ನು ಆರಂಭಿಸಿ ಭರತ ನಾಟ್ಯ , ಯಕ್ಷಗಾನದ ಹೆಜ್ಜೆಗಳನ್ನೂ ಆಸಕ್ತರಿಗೆ ಕಲಿಸುವ ವ್ಯವಸ್ಥೆ ಮಾಡಿದರು . ನಂತರ ಕುಂಬ್ಳೆ ಮೇಳವನ್ನೂ ಹೊರಡಿಸಿ ಯಕ್ಷಗಾನದ ಪ್ರಚಾರಕ್ಕಾಗಿ ಶ್ರಮಿಸಿದ್ದರು . ಅವರೇ ಸ್ವತಃ ಭಾಗವತರಾಗಿ , ನಿರ್ದೇಶನವನ್ನೂ ನೀಡುತ್ತಿದ್ದರು . ಆ ಕಾರಣಕ್ಕಾಗಿಯೇ ಇಂದೂ ಭಾಗವತರೇ ಯಕ್ಷಗಾನದ ನಿರ್ದೇಶಕರು ಎಂಬ ಮಾತು ಚಾಲ್ತಿಯಲ್ಲಿರಬಹುದೇನೋ ?

ಪಾರ್ತಿಸುಬ್ಬನ ವಂಶಸ್ಥರಾದ ವೆಂಕಟೇಶಯ್ಯ ಎಂಬವರ ಕುಟುಂಬದವರು ಈಗಲೂ ಬದಿಯಡ್ಕ ಸಮೀಪದ ನಾರಂಪಾಡಿ ಎಂಬಲ್ಲಿ ನೆಲೆಸಿದ್ದಾರೆ . ಕರ್ನಾಟಕ ಸರಕಾರವು ಪಾರ್ತಿಸುಬ್ಬನ ಹೆಸರಿನಲ್ಲಿ ಪ್ರಶಸ್ತಿ ನೀಡುವ ಪರಂಪರೆ ಉಳಿಸಿಕೊಂಡಿದೆ . ಅಮೃತ ಸೋಮೇಶ್ವರ , ಹೊಸ್ತೋಟ ಮಂಜುನಾಥ ಭಾಗವತರು , ಕಡತೋಕ ಮಂಜುನಾಥ ಭಾಗವತರು , ಡಾ|ಶಿಮಂತೂರು ನಾರಾಯಣ ಶೆಟ್ಟಿ , ಡಾ| ಪ್ರಭಾಕರ ಜೋಷಿ , ಎಂ.ಆರ್‌.ರಂಗನಾಥ ರಾವ್‌ , ಜಿ.ಎಸ್‌.ಭಟ್‌ , ಬಲಿಪ ನಾರಾಯಣ ಭಾಗವತರು ( ಈ ವರ್ಷ ) ಮುಂತಾದವರು ಈ ಪ್ರಶಸ್ತಿ ಸ್ವೀಕರಿಸಿದ ಕಲಾವಿದರಾಗಿದ್ದಾರೆ.

Advertisement

ಎಂ.ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next