Advertisement

ಸಂಚಾರ ವಾಹನ ಗಣತಿಗೂ ಡಿಜಿಟಲ್‌ ಸ್ಪರ್ಶ

11:15 PM Feb 23, 2021 | Team Udayavani |

ಕಾರ್ಕಳ: ಪಾರದರ್ಶಕ ಮತ್ತು ಆಧಾರ ಸಹಿತ ಮಾಹಿತಿಗಳು ಲಭ್ಯವಾಗಬೇಕೆಂಬ ಕಾರಣದಿಂದ ವಾಹನ ಗಣತಿಗೂ ಡಿಜಿಟಲ್‌ ಸ್ಪರ್ಶ ನೀಡಲಾಗಿದೆ. ವಾಹನ ಗಣತಿಗೆ ಸ್ವಯಂಚಾಲಿತ ತಂತ್ರಾಂಶ ವ್ಯವಸ್ಥೆ ಜಾರಿಗೆ ಬಂದಿದೆ.

Advertisement

ರಾಜ್ಯಾದ್ಯಂತ ವಾಹನ ಗಣತಿ ಫೆ. 23ರಿಂದ ಆರಂಭಗೊಂಡಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಇದೇ ಮೊದಲ ಬಾರಿಗೆ ಮಾನವ ನಿರ್ಮಿತ ಗಣತಿ ವ್ಯವಸ್ಥೆಯನ್ನು ಕೈಬಿಟ್ಟ ಸರಕಾರ ಸಿಸಿ ಕೆಮರಾ ಅಳವಡಿಕೆ ಮೂಲಕ ವಾಹನ ಗಣತಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದೆ.

ರಾಜ್ಯದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯಿಂದ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.

2021ನೇ ಸಾಲಿನಲ್ಲಿ ರಸ್ತೆ ಸಂಚಾರ ಸಮೀಕ್ಷೆ ಫೆ. 23ರಿಂದ 25ರ ವರೆಗೆ ಸತತ 2 ದಿನಗಳ ಕಾಲ ನಡೆಯುತ್ತಿದೆ. ಇದಕ್ಕಾಗಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ವಿವಿಧೆಡೆ ಅಳವಡಿಕೆ
ಗಣತಿ ಕೇಂದ್ರಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಈ ಮೊದಲೇ ಟೆಂಡರ್‌ ಕರೆದು ಸಿಸಿ ಕೆಮರಾ ಅಳವಡಿಸುವ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಪಡೆದುಕೊಂಡ ಕಂಪೆನಿಗಳು ರಾ.ಹೆ. ಜಿ.ಮು. ರಸ್ತೆ, ರೈಲ್ವೇ ಗೇಟ್‌ ಬಳಿಯ ಕೇಂದ್ರಗಳಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಿದ್ದು ಸಂಚಾರದಲ್ಲಿರುವ ವಾಹನಗಳ ಕುರಿತು ಸಂಪೂರ್ಣ ಮಾಹಿತಿ ಅದರಲ್ಲಿ ಸಂಗ್ರಹವಾಗುತ್ತಿದೆ. ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ಗಳ ಉಸ್ತುವಾರಿಯಲ್ಲಿ ಗಣತಿ ನಡೆಯುತ್ತಿದೆ.

Advertisement

ಹಗಲು/ರಾತ್ರಿ ಪಾಳಿಯಲ್ಲಿ ಕರ್ತವ್ಯ
ಈ ಹಿಂದೆ ಮಾನವ ನಿರ್ಮಿತ ಕೇಂದ್ರಗಳನ್ನು ತೆರೆದು ವಾಹನ ಗಣತಿ ನಡೆಸಲಾಗುತ್ತಿತ್ತು. ರಸ್ತೆ ಬದಿ ಕೇಂದ್ರಗಳನ್ನು ತೆರೆದು ಅಲ್ಲಿ ಸಿಬಂದಿಯನ್ನು ನೇಮಕಗೊಳಿಸಲಾಗುತ್ತಿತ್ತು. ಏಳು ದಿನಗಳ ವರೆಗೆ ಗಣತಿ ಲೆಕ್ಕ ಹಾಕಲಾಗುತ್ತಿತ್ತು. ಕೇಂದ್ರದ ಸಿಬಂದಿ ನಮೂನೆಯಲ್ಲಿ ಸೂಚಿಸಿದಂತೆ ಮಾಹಿತಿಗಳನ್ನು ದಾಖಲಿಸುತ್ತಿದ್ದರು. ವಾಹನಗಳ ಸಂಖ್ಯೆ ಇತ್ಯಾದಿ ಮಾಹಿತಿ ಸಂಗ್ರಹಿಸಲಾಗುತ್ತಿತ್ತು. ಹಗಲು/ರಾತ್ರಿ ಪಾಳಿಯಲ್ಲಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಿಸಿ ಕೆಮರಾ ಅಳವಡಿಕೆಯಿಂದ ವೀಡಿಯೋ ದಾಖಲಾಗುವುದರಿಂದ ಆಧಾರ ಸಹಿತ ಮಾಹಿತಿ ಸಿಗುತ್ತದೆ. ಕಾಗದ ರಹಿತವಾಗಿಯೂ ಇರುತ್ತದೆ. ವಾರಗಳ ಕಾಲ ರಸ್ತೆ ಬದಿ ಸಿಬಂದಿ ಟೆಂಟ್‌ ಹೂಡುವುದು ತಪ್ಪುತ್ತದೆ. ಎಲ್ಲ ದೃಷ್ಟಿಯಿಂದಲೂ ಈ ವ್ಯವಸ್ಥೆ ಅನುಕೂಲ ಎನ್ನುತ್ತಾರೆ ಅಧಿಕಾರಿಗಳು.

ರಾಜ್ಯದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರದ ಸಮೀಕ್ಷೆ ನಡೆಸಲಾಗುತ್ತದೆ.

ಇನ್ನು ಮಾಹಿತಿ ನಿಖರ; ಪಾರದರ್ಶಕ
ಮಾನವ ನಿರ್ಮಿತ ಗಣತಿ ವೇಳೆ ಮಾಹಿತಿಗಳು ವ್ಯತ್ಯಾಸವಾಗುವ ಸಂಭವ ಹೆಚ್ಚಾಗುತ್ತಿತ್ತು. ವಾಹನಗಳು ನಿಧಾನಗತಿಯಲ್ಲಿ ಸಾಗುವಂತೆ ಸೂಚನ ಫ‌ಲಕ ಹಾಕಿ ನಿರ್ದೇಶನ ನೀಡುತ್ತಿದ್ದರೂ ವಾಹನಗಳು ವೇಗವಾಗಿ, ಗುಂಪಾಗಿ ಚಲಿಸುವ ವೇಳೆ ಸರಿಯಾಗಿ ಮಾಹಿತಿಗಳು ದಾಖಲಾಗುತ್ತಿರಲಿಲ್ಲ. ಇದರಿಂದ ಗಣತಿ ವೇಳೆ ಪಾರದರ್ಶಕತೆ ಕಾಪಾಡಲು ಕಷ್ಟವಾಗುತ್ತಿತ್ತು. ಕೇಂದ್ರದ ಸಿಬಂದಿ ದೃಷ್ಟಿ ಸ್ವಲ್ಪ ಅತ್ತಿತ್ತಾದರೂ ವಾಹನಗಳು ಗಣತಿಗೆ ಸಿಗದೆ ಕೈ ಬಿಟ್ಟು ಹೋಗುವ ಸಾಧ್ಯತೆಗಳೇ ಹೆಚ್ಚಿದ್ದವು. ಇದರಿಂದ ಸರಕಾರಕ್ಕೆ ತಪ್ಪು ಮಾಹಿತಿ ಹೋಗುತ್ತಿತ್ತು. ಇದನ್ನು ತಪ್ಪಿಸಲು ವಾಹನ ಗಣತಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ.

ಸ್ಪಷ್ಟ ಮಾಹಿತಿ ಲಭ್ಯ
ಸ್ವಯಂ ಚಾಲಿತವಾಗಿ ಹಗಲು ರಾತ್ರಿ ಕಾರ್ಯನಿರ್ವಹಿಸುವುದರಿಂದ ಸ್ಪಷ್ಟ ಮಾಹಿತಿ ಸಿಗುತ್ತಿರಲಿಲ್ಲ. ಈ ಕಾರಣಕ್ಕೆ ಸಿಸಿ ಕೆಮರಾ ಬಳಸಿಕೊಳ್ಳಲಾಗಿದೆ. ಇದರಲ್ಲಿ ವೀಡಿಯೋ ದಾಖಲು ಆಗುವುದರಿಂದ ಯಾರೂ ಬೇಕಾದರೂ ಪರಿಶೀಲಿಸಬಹುದು. ಪಾರದರ್ಶಕತೆಗೆ ಈ ವ್ಯವಸ್ಥೆ ಅಳವಡಿಕೆಯಾಗಿದೆ.
– ಎಸ್‌.ಕೆ. ಅಶೋಕ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಪಿಡಬ್ಲ್ಯುಡಿ ಇಲಾಖೆ

ಸಮೀಕ್ಷೆಯ ಉದ್ದೇಶ ಹಲವು
ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ಸರಕು ಸಾಗಾಟ, ವಾಹನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆೆ. ವಾಹನ ಪ್ರಮಾಣ ಏರಿಕೆಗೆ ತಕ್ಕಂತೆ ಹಾಲಿ ರಸ್ತೆಯ ಮೇಲ್ಮೆ„ ಅನ್ನು ಅಭಿವೃದ್ಧಿ, ವಿಸ್ತರಣೆ, ಮೇಲ್ದರ್ಜೆಗೇರಿಸುವುದು, ಸುಗಮ ಸಂಚಾರ, ಸುರಕ್ಷತೆ, ಅಪಘಾತ ನಿವಾರಣೆ, ಅಭಿವೃದ್ಧಿ ಕಾಮಗಾರಿಗಳ ಅಂಕಿಅಂಶ ಮಾಹಿತಿ ಕಲೆ ಹಾಕುವುದು.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next