ಉಡುಪಿ: ಮಕ್ಕಳನ್ನು ಓದಿತ್ತ ಸೆಳೆಯಲು ಆಕರ್ಷಕ ಪೇಂಟಿಂಗ್, ಸಾಹಿತಿ ಮತ್ತು ಸಾಧಕರ ಪರಿಚಯದ ಜತೆಗೆ ಆನ್ ಲೈನ್ ಕಲಿಕೆಗೆ ಪೂಕರವಾದ ಆಧುನಿಕ ಪರಿಕರ ಹೊಂದಿರುವ 80 ಬಡಗಬೆಟ್ಟು ಗ್ರಾ.ಪಂ.ನ ಡಿಜಿಟಲ್ ಗ್ರಂಥಾಲಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ತಾಣವಾಗಿದೆ. ವಿದ್ಯಾರ್ಥಿಗಳು ಸಾಮೂಹಿಕವಾಗಿ ಆನ್ ಲೈನ್ ವ್ಯವಸ್ಥೆಯಲ್ಲಿ ಅಭ್ಯಾಸ ಮಾಡಲು ಪೂರಕವಾಗುವಂತೆ ತಲಾ ಒಂದು ಟಿವಿ, ಕಂಪ್ಯೂಟರ್, ನಾಲ್ಕು ಟ್ಯಾಬ್ ಗಳು, ಕುಳಿತುಕೊಳ್ಳಲು ಸುಸಜ್ಜಿತವಾದ ಬೆಂಚ್ ಮತ್ತು ಡೆಸ್ಕ್ ಜತೆಗೆ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಯನ್ನು ಮಾಡಲಾಗಿದೆ.
ವಿದ್ಯಾರ್ಥಿಗಳ ನೋಂದಣಿ
ಗ್ರಾ.ಪಂ. ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಗ್ರಂಥಾಲಯಕ್ಕೆ ನೋಂದಣಿ ಮಾಡಿಸ ಲಾಗುತ್ತಿದೆ. ಗ್ರಂಥಾಲಯದ ಮೇಲ್ವಿಚಾರಕರು ಶಾಲೆಗೆ ಭೇಟಿ ನೀಡಿ, ಮುಖ್ಯಶಿಕ್ಷಕರು, ಶಿಕ್ಷಕರೊಂದಿಗೆ ಮಾತುಕತೆ ನಡೆಸಿ, ವಿದ್ಯಾರ್ಥಿಗಳನ್ನು ಗ್ರಂಥಾಲಯ ದಡೆಗೆ ಕರೆತರುತ್ತಿದ್ದಾರೆ. ಸದ್ಯ 330 ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ನೋಂದಣಿ ಮಾಡಿಕೊಂಡಿದ್ದು ಪ್ರತಿ ಯೊಬ್ಬರಿಗೂ ಓದಲು ತಲಾ ನಾಲ್ಕು ಪುಸ್ತಕವನ್ನು ಉಚಿತವಾಗಿ ನೀಡಲಾಗಿದೆ. ಆ ಪುಸ್ತಕ ಓದಿ ಮುಗಿದ ಅನಂತರ ಅದನ್ನು ವಾಪಸ್ ನೀಡಿ ಬೇರೆ ನಾಲ್ಕು ಪುಸ್ತಕ ಪಡೆಯಲು ಅವಕಾಶವಿದೆ.
ಆನ್‌ಲೈನ್ ಸೇವೆ
ವಿದ್ಯಾರ್ಥಿಗಳು ಸಹಿತವಾಗಿ ಗ್ರಂಥಾಲಯ ದಲ್ಲಿ ನೋಂದಣಿ ಮಾಡಿಕೊಂಡವರಿಗೆ ಗ್ರಂಥಾಲಯ ಕಾರ್ಡ್ ನೀಡಲಾಗುತ್ತದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಹೊಂದಿ ಮನೆಯಲ್ಲೇ ತಮಗೆ ಬೇಕಾದ ಪುಸ್ತಕವನ್ನು ಓದಬಹುದು. ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದೂರದರ್ಶನದ ಮೂಲಕ ಪ್ರಸಾರವಾಗುತ್ತಿದ್ದ ವಿಡಿಯೋ ಪಾಠದಲ್ಲಿ ಹಲವು ವಿದ್ಯಾರ್ಥಿಗಳು ನಮ್ಮ ಗ್ರಂಥಾಲಯದಿಂದಲೇ ಭಾಗವಹಿದ್ದಾರೆ. ಟ್ಯಾಬ್‌ಗಳಲ್ಲಿಯೂ ಆನ್‌ಲೈನ್ ಪಾಠ ಕೇಳಲು ವ್ಯವಸ್ಥೆ ಮಾಡಲಾಗಿತ್ತು. ಕಂಪ್ಯೂಟರ್ ಸೌಲಭ್ಯವನ್ನು ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ.
ಆನ್‌ಲೈನ್ ನೋಂದಣಿ ಹೇಗೆ?
www. Karnatakadigitalpubliclibrery.org ವೆಬ್‌ಸೈಟ್‌ನಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ನಮೂದಿಸಿ ನೋಂದಣಿ ಮಾಡಿಕೊಂಡು, ನಿಮ್ಮ ಖಾತೆ ತೆರೆದು ಮೆಚ್ಚಿನ ಪುಸ್ತಕಗಳನ್ನು ಓದಬಹುದಾಗಿದೆ. ಮೊಬೈಲ್ ಆ್ಯಪ್ ಕೂಡ ಲಭ್ಯವಿದೆ. ಸಾರ್ವಜನಿಕ ಗ್ರಂಥಾಲಯ ಎಂದು ಪ್ಲೇಸ್ಟೋರ್‌ನಲ್ಲಿ ನಮೂದಿಸಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್ ವ್ಯವಸ್ಥೆಯಲ್ಲಿ ಪುಸ್ತಕ ಓದಬಹುದಾಗಿದೆ.
ನಿರಂತರ ಪ್ರಕ್ರಿಯೆ
ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಓದಲು ಬೇಕಾದ ಪರಿಕರಗಳು ಇವೆ. ಶಾಲಾ ಮಕ್ಕಳನ್ನು ಗ್ರಂಥಾಲಯಕ್ಕೆ ನೋಂದಣಿ ಮಾಡಿಸಿಕೊಂಡು, ಅವರಲ್ಲಿ ಪುಸ್ತಕ ಓದುವ ಪ್ರವೃತ್ತಿ ಬೆಳೆಸುವ ಪ್ರಕ್ರಿಯೆ ನಿರಂತರವಾಗಿ ನಡೆಸುತ್ತಿದ್ದೇವೆ. –
ಅಶ್ವಿನಿ ಪ್ರಭು, ಮೇಲ್ವಿಚಾರಕಿ, 80 ಬಡಗಬೆಟ್ಟು ಗ್ರಾ.ಪಂ. ಡಿಜಿಟಲ್ ಗ್ರಂಥಾಲಯ
ಅನುಕೂಲ
ಜಿ.ಪಂ., ತಾ.ಪಂ. ಸಹಕಾರದೊಂದಿಗೆ ಡಿಜಿಟಲ್ ಗ್ರಂಥಾಲಯ ರಚನೆ ಮಾಡಿದ್ದೇವೆ. ಗ್ರಾಮದ ವಿದ್ಯಾರ್ಥಿಗಳು ಸಹಿತವಾಗಿ ಎಲ್ಲರೂ ಪ್ರಯೋಜನ ಪಡೆಯುತ್ತಿದ್ದಾರೆ. ಪರೀಕ್ಷಾ ಸಂದರ್ಭದಲ್ಲೂ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯದಿಂದ ಅನುಕೂಲ ಆಗುತ್ತಿದೆ. –
ಅಶೋಕ್ ಕುಮಾರ್, ಪಿಡಿಒ, 80 ಬಡಗಬೆಟ್ಟು ಗ್ರಾ.ಪಂ.