Advertisement
ಇದುವರೆಗೆ ಗ್ರಾಮಾಂತರದಲ್ಲಿ ನೀರಿನ ಬಿಲ್ ಕೈಯಲ್ಲಿ ಬರೆದು ನೀಡಲಾಗುತ್ತಿತ್ತು. ಪಂಚಾಯತ್ ಮಟ್ಟದಲ್ಲಿ ನೀರಿನ ಬಳಕೆ ಮಾಪನವನ್ನು ಸುಲಭ ಮತ್ತು ನಿಖರವಾಗಿ ನಡೆಸಲು ಇದುವರೆಗೆ ತಂತ್ರಾಂಶವಿರಲಿಲ್ಲ. ಈಗ ಗ್ರಾ.ಪಂ. ಮಟ್ಟದಲ್ಲಿಯೂ ಒಂದೊಂದೇ ಸೇವೆಗಳನ್ನು ಡಿಜಿಟಲೀಕೃತಗೊಳಿಸಲು ಸರಕಾರ ಮುಂದಾಗಿದೆ. ಇದರ ಅಂಗವಾಗಿ ನೀರಿನ ಬಿಲ್ ಹಾಗೂ ಘನತ್ಯಾಜ್ಯ ಸುಂಕ ವಸೂಲಾತಿ ಬದಲಾಗಲಿದೆ.
ನೀರಿನ ಬಿಲ್ ನೀಡುವ ಪಂಚಾಯತ್‌ನ ಮಾಪನ ಉದ್ಯೋಗಿಯು ತಂತ್ರಾಂಶದ ಮೂಲಕ ತನ್ನ ವ್ಯಾಪ್ತಿಯ ಬಳಕೆದಾರರ ವಿವರಗಳನ್ನು ದಾಖಲಿಸಬೇಕು. ಗ್ರಾಮದ ಒಟ್ಟು ನೀರಿನ ಮೀಟರ್ ಸಂಖ್ಯೆ, ಬಳಕೆದಾರರ ಸಂಖ್ಯೆ, ಮನೆ ಹೆಸರು, ಬಳಕೆದಾರರ ಸಂಖ್ಯೆ ಸಹಿತ ಎಲ್ಲ ಮಾಹಿತಿಗಳನ್ನು ಸೇರಿಸಬೇಕು. ಆ ಬಳಿಕ ಆ್ಯಂಡ್ರಾಯ್ಡ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಅನುಸಾರ ಮಾಪನ ದಾಖಲಿಸಲು ವ್ಯವಸ್ಥೆ ಮಾಡಲಾಗುತ್ತದೆ. ಸಿಂಪ್ಯೂಟರ್ ಹಿಡಿದು ಮನೆ ಮನೆಗೆ ತೆರಳುವ ಸಿಬಂದಿ ಮೀಟರ್ ಪರಿಶೀಲಿಸಿ ಬಿಲ್ ನೀಡುತ್ತಾರೆ. ಇದು ವಿದ್ಯುತ್ ಬಿಲ್ ಮಾದರಿಯಲ್ಲಿರುತ್ತದೆ. ಈ ವಿವರಗಳು ಪಂಚಾಯತ್ ಕಂಪ್ಯೂಟರ್‌ನಲ್ಲಿ ದಾಖಲಾಗುವ ಕಾರಣ ಬಿಲ್ ಬಾಕಿ ಇತ್ಯಾದಿ ವಿವರ ಲಭ್ಯವಾಗುತ್ತದೆ. ಬಳಕೆದಾರ ಪ್ರತೀ ತಿಂಗಳು ಉಪಯೋಗಿಸಿದ ನೀರು, ಘನತ್ಯಾಜ್ಯದ ಲೆಕ್ಕಾಚಾರ, ಅದರ ಶುಲ್ಕ ಹಾಗೂ ಹೆಚ್ಚುವರಿ ಶುಲ್ಕ ಸಂಬಂಧಿತ ಎಲ್ಲ ವಿವರಗಳನ್ನು ಪಡೆಯಬಹುದು.
Related Articles
ಬಳಕೆದಾರರ ಮಾಪನ ಹಾಗೂ ವಸೂಲಾತಿ ವಿವರ ಸ್ಥಳದಲ್ಲಿಯೇ ಸಿಗುವ ಕಾರಣ ಬಿಲ್ ಮೊತ್ತವನ್ನು ಮಾಪನದಾರನೇ ಸಂಗ್ರಹಿಸಬಹುದು. ಬಾಕಿ ವಸೂಲಾತಿಯೂ ಸಮಯಕ್ಕೆ ಸರಿಯಾಗಿ ಆಗುತ್ತದೆ. ಜಿಲ್ಲಾ ಮಟ್ಟದಲ್ಲಿ ಈ ಎಲ್ಲ ವಿವರ ಪಡೆಯಬಹುದಾಗಿದೆ. ಆಫ್‌ಲೈನ್ ಆಗಿ ಈ ಮೊಬೈಲ್ ಆ್ಯಪ್ ಕಾರ್ಯ ನಿರ್ವಹಿಸಬಲ್ಲುದು. ಇಂಟರ್ನೆಟ್ ಸಂಪರ್ಕ ಲಭಿಸಿದ ಮಾಪನದ ಮಾಹಿತಿ ಕಚೇರಿಗೆ ರವಾನೆಯಾಗುತ್ತದೆ.
ಸಾವಿರಾರು ರೂ. ವೆಚ್ಚದ ಇಂತಹ ತಂತ್ರಾಂಶವನ್ನು ಪ್ರಸ್ತುತ ಪಂಚಾಯತ್‌ನವರೇ ಮಾಡಿಸಬೇಕಾಗಿರುವುದು ಪಂಚಾಯತ್‌ಗೆ ಹೊರೆಯಾಗಬಹುದು. ಸರಕಾರ ಸಹಕಾರ ನೀಡಿದರೆ ಉತ್ತಮ ಎಂಬುದು ಪಂಚಾಯತ್ ಸಿಬಂದಿಯೊಬ್ಬರ ಅಭಿಪ್ರಾಯ.
Advertisement
ಬಿಲ್ ಕೊಟ್ಟ ತತ್‌ಕ್ಷಣ ಪಾವತಿ!ನೂತನ ವ್ಯವಸ್ಥೆಯಲ್ಲಿ ಪಂಚಾಯತ್ ಸಿಬಂದಿ ವಿದ್ಯುತ್ ಬಿಲ್ ಮಾದರಿಯ ನೀರಿನ ಬಿಲ್ ನೀಡುತ್ತಾರೆ. ಮನೆಯವರು ಕೂಡಲೇ ಹಣ ಪಾವತಿಸಬಹುದು. ಸ್ಥಳದಲ್ಲಿಯೇ ಪಾವತಿಸಿದರೆ “ಬ್ಲೂಟೂಥ್ ಪ್ರಿಂಟರ್’ ಮೂಲಕ ರಸೀದಿ ನೀಡುವ ವ್ಯವಸ್ಥೆ ಇದೆ. ದಾಖಲಿಸಿದ ಎಲ್ಲ ಮಾಪನಗಳನ್ನು ಪಂಚಾಯತ್ ಕಚೇರಿಯಲ್ಲಿ ತತ್‌ಕ್ಷಣವೇ ಪರೀಕ್ಷಿಸಲು ಸಾಧ್ಯ. ಅನುಷ್ಠಾನಕ್ಕೆ ಸಿದ್ಧತೆ
ಗ್ರಾ.ಪಂ.ಗಳಿಗೆ ಡಿಜಿಟಲ್ ತಂತ್ರಜ್ಞಾನವನ್ನು ವಿಸ್ತರಿಸುವ ಗ್ರಾ.ಪಂ.ಗಳಲ್ಲಿ ಗಣಕೀಕೃತ ನೀರಿನ ಮಾಪನ ಹಾಗೂ ಬಿಲ್ ವಿತರಣೆ ಪ್ರಾರಂಭಿಸುವಂತೆ ಸರಕಾರ ನಿರ್ದೇಶನ ನೀಡಿದೆ. ಇದರಂತೆ ಎಲ್ಲ ಜಿ.ಪಂ.ಗಳಲ್ಲಿ ಇದು ಜಾರಿಯಾಗಲಿದೆ. ದಕ್ಷಿಣ ಕನ್ನಡದಲ್ಲಿಯೂ ಸಿದ್ಧತೆ ನಡೆಸಲಾಗುತ್ತಿದೆ.
ಡಾ| ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ
ದಿನೇಶ್ ಇರಾ