ಕೃತಕ ಬುದ್ಧಿಮತ್ತೆ (ಎಐ)ಯಿಂದ ಹಿಡಿದು, ರಾಷ್ಟ್ರೀಯ ದತ್ತಾಂಶ ನೀತಿ ಆಡಳಿತದವರೆಗೆ ವಿವಿಧ ಪ್ರಸ್ತಾವಿತ ಕ್ರಮಗಳ ಮೂಲಕ ಸರ್ಕಾರ ಡಿಜಿಟಲ್ ಇಂಡಿಯಾ ಸಾಧನೆಗೆ ಒತ್ತು ನೀಡಿದೆ.”ಕೃತಕ ಬುದ್ಧಿಮತ್ತೆ (ಎಐ)ಭಾರತದಲ್ಲೇ ಅಭಿವೃದ್ಧಿಯಾಗಲಿ, ಭಾರತಕ್ಕಾಗಿಯೇ ಕಾರ್ಯನಿರ್ವಹಿಸಲಿ’ ಎನ್ನುವ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ 3 ಕೃತಕ ಬುದ್ಧಿಮತ್ತ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ.
ಕೃಷಿ, ಆರೋಗ್ಯ ಕ್ಷೇತ್ರ ಹಾಗೂ ನಗರದ ಪ್ರದೇಶಗಳಲ್ಲಿನ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಅನ್ವೇಷಿಸಲು ಕೃತಕ ಬುದ್ಧಿಮತ್ತೆಯನ್ನು ಬಳಕೆಮಾಡಲು ಉದ್ದೇಶಿಸಲಾಗಿದೆ.ಜತೆಗೆ ಕೇಂದ್ರದ ಸ್ಥಾಪನೆಯಿಂದ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಎಐ ಅಭಿವೃದ್ಧಿಗೆ ಉತ್ತೇಜನ ನೀಡುವುದಲ್ಲದೇ, ಸಂಶೋಧನಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಉದ್ಯಮ ಸಂಸ್ಥೆಗಳು ಕೈ ಜೋಡಿಸಲಿವೆ. ಈ ಮೂಲಕ ಉದ್ಯೋಗ ಸೃಷ್ಟಿಗೂ ಈ ಕ್ರಮ ಸಹಕಾರಿಯಾಗಲಿದೆ.
ಇದಲ್ಲದೇ, ನವೋದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿನ ಸಂಶೋಧನೆಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ದತ್ತಾಂಶ ಆಡಳಿತ ನೀತಿಯನ್ನು ಜಾರಿಗೊಳಿಸುವುದಾಗಿ ತಿಳಿಸಲಾಗಿದೆ.
ಈ ಕ್ರಮದಿಂದ ಸಂಶೋಧನೆಗೆ ಪೂರಕವಾಗಲಿರುವ ಅನಾಮದೇಶ ದತ್ತಾಂಶಗಳು ಕೂಡ ಲಭ್ಯವಾಗಲಿವೆ. ಇದರ ಜತೆಗೆ ಕೆವೈಸಿ ಪ್ರಕ್ರಿಯೆ ಸರಳೀಕರಣವನ್ನೂ ಪ್ರಸ್ತಾಪಿಸಲಾಗಿದೆ.