Advertisement

ಜಾನುವಾರು ಗಣತಿಗೂ ಬಂತು ಡಿಜಿಟಲ್‌ ಸ್ಪರ್ಶ 

09:54 AM Dec 07, 2018 | |

ಬಜಪೆ: ಪಾರದರ್ಶಕ ಮತ್ತು ಅತಿ ಶೀಘ್ರ ಎಲ್ಲ ಮಾಹಿತಿಗಳು ಲಭ್ಯವಾಗಬೇಕೆಂಬ ಕಾರಣದಿಂದ ಎಲ್ಲೆಡೆ ಈಗ ಡಿಜಿಟಲ್‌ ಸ್ಪರ್ಶ ನೀಡಲಾಗುತ್ತದೆ. ಇದು 2019-20ನೇ ಸಾಲಿನಿಂದ ಜಾನುವಾರು ಗಣತಿಗೂ ಅಳವಡಿಸಲಾಗಿದೆ. 2012ರಲ್ಲಿ 19ನೇ ಜಾನುವಾರು ಗಣತಿ ನಡೆದಿದ್ದು, ಈ ಬಾರಿ 20ನೇ ಜಾನುವಾರು ಗಣತಿ ಡಿಜಿಟಲ್‌ (ಟ್ಯಾಬ್‌) ಮೂಲಕ ನಡೆಯುತ್ತಿದೆ. ಈ ಗಣತಿಯಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ದಾಖಲಿಸಲಾಗುತ್ತದೆ.

Advertisement

ಜಾನುವಾರು ಗಣತಿಯು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಭಾರತ ಸರಕಾರದ ಮಾರ್ಗಸೂಚಿಯಂತೆ ದೇಶಾದ್ಯಂತ ಅ. 1ರಿಂದ ಡಿ. 31ರ ವರೆಗೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಿಯೋಜಿಸಲ್ಪಟ್ಟ ಗಣತಿದಾರರು ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿನ ಮನೆಗಳಿಗೆ, ಕೌಟುಂಬಿಕ ಉದ್ಯಮಗಳು, ವಿವಿಧ ಕ್ಷೇತ್ರಗಳು, ಟ್ರಸ್ಟ್‌ ಗಳು, ಸಂಸ್ಥೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಸಂಗ್ರಹಿಸಲಿದ್ದಾರೆ. ಇದರಿಂದ ಮಾಹಿತಿ ಸಂಗ್ರಹ ಹೆಚ್ಚು ಪಾರದರ್ಶಕ, ಸಮರ್ಪಕ ಹಾಗೂ ಕಾಗದ ರಹಿತವಾಗಿ ಇರುತ್ತದೆ.

ಜಿಲ್ಲೆಯಲ್ಲಿ 170 ಮಂದಿ ಗಣತಿದಾರರು
ದ.ಕ. ಜಿಲ್ಲೆಯಲ್ಲಿ ಈಗಾಗಲೇ 170 ಮಂದಿ ಗಣತಿದಾರು ಮನೆಗೆ ಮನೆ ತೆರಳಿ ಜಾನುವಾರು ಗಣತಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಂಗಳೂರು ತಾಲೂಕಿನಲ್ಲಿ ಮಹಾನಗರ ಸೇರಿ ಒಟ್ಟು 74 ಮಂದಿ, ಬಂಟ್ವಾಳ -33 ಮಂದಿ, ಬೆಳ್ತಂಗಡಿ-24, ಪುತ್ತೂರು-25, ಸುಳ್ಯ-14 ಗಣತಿದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ನೋಡಲು 33 ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ ಹಾಗೂ ಇತರ ಇಲಾಖೆಯ ಅಧಿಕಾರಿಗಳು, ಇಲಾಖೇತರ ಸಿಬಂದಿ, ಹಾಲು ಸಹಕಾರ ಸಂಘದ ಕಾರ್ಯದರ್ಶಿಗಳು, ಯುವಕರು ಗಣತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗಣತಿ, ಸಾಫ್ಟ್ವೇರ್‌: ತರಬೇತಿ
ಈಗಾಗಲೇ ಈ ಎಲ್ಲ ಗಣತಿದಾರರಿಗೆ ಸಾಫ್ಟ್ವೇರ್‌ ಬಗ್ಗೆ ತರಬೇತಿ ನೀಡಲಾಗಿದೆ. ಜಿಲ್ಲೆಯ 170 ಮಂದಿಗೂ ಗಣತಿಗಾಗಿ ಟ್ಯಾಬ್‌ಗಳನ್ನು ನೀಡಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಟ್ಯಾಬ್‌ನಲ್ಲಿ ಜಾನುವಾರು ಮಾಹಿತಿ ಅಳವಡಿಸುತ್ತಿದ್ದಾರೆ. ಗಣತಿದಾರರಿಗೆ ಗುರುತು ಚೀಟಿ ನೀಡಲಾಗಿದೆ. ಪ್ರತಿ ಮನೆಗೆ ಗಣತಿ ಚೀಟಿಯನ್ನು ಲಗತ್ತಿಸಲಾಗುತ್ತದೆ.

ಸಾಕು ಪ್ರಾಣಿಗಳ ಮಾಹಿತಿ ಸಂಗ್ರಹ
ಜಾನುವಾರು ಗಣತಿಯಲ್ಲಿ ಪ್ರಮುಖವಾಗಿ ವಿವಿಧ ತಳಿಯ ಸಾಕು ಪ್ರಾಣಿಗಳಾದ ದನ, ಎಮ್ಮೆ, ಕರು, ಮೇಕೆ, ಹಂದಿ, ಕುದುರೆ, ಕತ್ತೆ, ಒಂಟೆ, ನಾಯಿ, ಮೊಲ, ಆನೆ, ಕುಕ್ಕುಟಗಳಾದ ಕೋಳಿ, ಬಾತು ಕೋಳಿ, ಎಮು, ಟಿರ್ಕಿಕೋಳಿ, ಕೃಷಿಗಾಗಿ ಉಪ ಯೋಗಿಸಲ್ಪಡುವ ಉಪಕರಣಗಳ ಬಗ್ಗೆ, ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

Advertisement

ಸರಕಾರ ಜಾನುವಾರು ವಲಯವನ್ನು ಉದ್ಯಮವಾಗಲು ಪ್ರಯತ್ನಿಸುತ್ತಿದೆ. ಸುಧಾರಿತ ತಳಿಯ ಜಾನುವಾರು, ಪೌಷ್ಟಿಕ ಆಹಾರ, ಉಪ ಆದಾಯದ ಬಗ್ಗೆಯೂ ಸಂಗ್ರಹಿಸಲಾಗುತ್ತದೆ. ಈ ಜಾನುವಾರು ಗಣತಿಯಲ್ಲಿ ದೇಶಾದ್ಯಂತ ವಿವಿಧ ಪ್ರಭೇದವಾರು ತಳಿವಾರು, ಕುಕ್ಕುಟಗಳು ಲಿಂಗ, ವಯೋಮಾನ ಎಣಿಕೆ ಮಾಡಲಾಗುತ್ತದೆ.

19ನೇ ಜಾನುವಾರು ಗಣತಿಯ ವಿವರ
2012ರಲ್ಲಿ ನಡೆದ 19ನೇ ಜಾನುವಾರು ಗಣತಿಯಲ್ಲಿ ಜಿಲ್ಲೆಯ 5 ತಾಲೂಕುಗಳಲ್ಲಿ ಒಟ್ಟು 4,36,467 ಜಾನುವಾರುಗಳಿದ್ದವು. ಅದರಲ್ಲಿ ಸ್ಥಳೀಯ ದನ 1,13,747, ಮಿಶ್ರತಳಿ 1,39,968 ಒಟ್ಟು 2,53,715 ದನಗಳಿವೆ. 3,700 ಎಮ್ಮೆ, 265 ಕುರಿ, 24,628 ಮೇಕೆ, 6,463 ಹಂದಿ, 1,166 ಮೊಲ, 1,46,510 ನಾಯಿಗಳು ಇತರ 18 ಸೇರಿವೆ. 17,21,908 ಕುಕ್ಕುಟಗಳಿದ್ದವು.

ಸ್ಪಷ್ಟ ಮಾಹಿತಿ ಲಭ್ಯ
ಡಿಜಿಟಲ್‌ ಮೂಲಕ ಈ ಬಾರಿ ಜಾನುವಾರು ಗಣತಿ ನಡೆಯುತ್ತಿದೆ. ಕಾಗದ ರಹಿತವಾಗಿ, ಶ್ರಮ ಕಡಿಮೆ ಬಳಸಿ, ಸ್ಪಷ್ಟ ಮಾಹಿತಿಯೊಂದಿಗೆ ಲಭ್ಯವಾಗಲಿದೆ. ಹಳ್ಳಿಯಲ್ಲಿನ ಜಾನುವಾರು ಹಾಗೂ ಎಲ್ಲ ಮಾಹಿತಿಯನ್ನು ಎಲ್ಲಿ ಬೇಕಾದರೂ ಪಡೆಯಬಹುದು. ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಾದ ಬಲೆ, ದೋಣಿ ಹೊಂದಿರುವಂತಹ ಮಾಹಿತಿ ಒಳಗೊಂಡಿದೆ. ಸರಕಾರದ ಯೋಜನೆ, ಅನುದಾನ ಹಂಚಿಕೆ, ಬಡತನ, ಹಿಂದುಳಿದ ವರ್ಗ, ಹೈನುಗಾರಿಕೆ, ಮೀನುಗಾರಿಕೆಯನ್ನು ಅಶ್ರಯಿಸಿ ಜೀವನ ನಡೆಸುವವರ ಬಗ್ಗೆ ಹಾಗೂ ಇತರ ಮಾಹಿತಿಗಳು ಲಭ್ಯವಾಗಲಿವೆ.
– ಡಾ| ಎಸ್‌.ಮೋಹನ,
 ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ

‡ ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next