Advertisement

ಸಮಾಜವನ್ನು ಆಳುತ್ತಿದೆ‌ ಡಿಜಿಟಲ್‌ ತಂತ್ರಜ್ಞಾನ: ಡಾ| ವಿನಯಾ ಒಕ್ಕುಂದ

05:16 PM Aug 19, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಇಂದಿನ ಶಿಕ್ಷಣ ವ್ಯವಸ್ಥೆ ಭಯಾನಕ ಸ್ಥಿತಿಯಲ್ಲಿದೆ. ಡಿಜಿಟಲ್‌ ತಂತ್ರಜ್ಞಾನ ನಮ್ಮನ್ನು ಆಳುತ್ತಿದೆ. ಸ್ವಂತ ಬುದ್ಧಿಯನ್ನು ಉಪಯೋಗಿಸದೇ ಕೇವಲ ಕಟ್‌ ಮತ್ತು ಪೇಸ್ಟ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇಂದಿನ ದಿನಮಾನದ ದೊಡ್ಡ ದುರಂತ ಎಂದು ಸಾಹಿತಿ ಡಾ| ವಿನಯಾ ಒಕ್ಕುಂದ ಕಳವಳ ವ್ಯಕ್ತಪಡಿಸಿದರು.

Advertisement

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್‌, ರೆಡ್‌ ಕ್ರಾಸ್‌ ಕಾರ್ಯಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪದವಿಯನ್ನು ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳಿಗೆ ಅನೇಕ ಸವಾಲುಗಳು ಎದುರಾಗುತ್ತವೆ. ನಿಮ್ಮ ಜಾತಿ, ಮತ, ಪಂಥ,
ಕುಲ-ಗೋತ್ರಗಳನ್ನು ಬಿಟ್ಟು ಬದುಕಿನ ಔನ್ನತ್ಯವನ್ನು ಕಂಡುಕೊಳ್ಳಬೇಕು. ಇದೆಲ್ಲದರ ಮಧ್ಯೆ ಸಮಾಜವನ್ನು ಗಮನಿಸುತ್ತಿರುವ ಯುವಕರಲ್ಲಿ ನಿಜವಾದ ಸ್ವಾತಂತ್ರ್ಯ ನಮಗೆ ಸಿಕ್ಕಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ನಿಜವಾಗಿಯೂ ಅರ್ಥಪೂರ್ಣವಾಗಬೇಕಾದರೆ ತ್ಯಾಗ, ಬಲಿದಾನ ಮಾಡಿ ಇತಿಹಾಸದ ಪುಟಗಳಲ್ಲಿ ಕಾಣೆಯಾದವರನ್ನು ನೆನಪಿಸಿಕೊಳ್ಳುವ ಪ್ರಾಮಾಣಿಕ ಕೆಲಸ ಆಗಬೇಕು. ನಾವು ಓದುವ ಸ್ವಾತಂತ್ರ್ಯ ಹೋರಾಟದ ಚರಿತ್ರೆಗಿಂತ ಭಿನ್ನವಾದ ಚರಿತ್ರೆಯಿದೆ. ಅದು ಎರಡು, ಮೂರನೇ ಸಾಲಿನಲ್ಲಿ ನಿಂತು ಹೋರಾಡಿದ ಮಹನೀಯರ ಚರಿತ್ರೆಯಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮ ರಾಣಿಯರು ಸುದೀರ್ಘ‌ ಕಾಲ ರಾಜ್ಯವಾಳಿದರು.

ನಾಡು, ನುಡಿಯ ರಕ್ಷಣೆಗಾಗಿ ಬದುಕನ್ನು ಮುಡಿಪಾಗಿಟ್ಟರು. ಅವರ ಕುರಿತು ನಮ್ಮ ಇತಿಹಾಸಕಾರರು ಪಠ್ಯಗಳಲ್ಲಿ ಒಂದೆರಡು
ಟಿಪ್ಪಣಿಗಳಿಗೆ ಮೀಸಲಿಟ್ಟರು. ಇವುಗಳ ಕುರಿತು ಮೊದಲಿನಿಂದಲೂ ನಾವು ನಿರ್ಲಕ್ಷ್ಯ ವಹಿಸುತ್ತ ಬಂದಿದ್ದೇವೆ. ಇದು ಬದಲಾಗಬೇಕು.

Advertisement

ನಮ್ಮ ಹೊಟ್ಟೆಯಲ್ಲಿ ಹುಟ್ಟಿ, ನಮ್ಮ ಎದೆಹಾಲು ಕುಡಿದು, ನಮ್ಮಿಂದಲೇ ಶಿಕ್ಷಣ ಪಡೆದು ಮುಂದೆ ಅತ್ಯಾಚಾರಿ ಆಗುವುದು ನಮ್ಮ ದುರಂತ ಎಂದು ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಅತ್ಯಾಚಾರದ ಕುರಿತು ನೋವನ್ನು ವ್ಯಕ್ತಪಡಿಸಿದರು. ಯುವಜನರು ಹೆಚ್ಚಿರುವ ಭಾರತ ಜಡಭಾರತದತ್ತ ವಾಲುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ, ಅನ್ನಕ್ಕಿಂತ ಸ್ವಾತಂತ್ರ್ಯ ದೊಡ್ಡದು. ಭೌತಿಕ ಮತ್ತು ಬೌದ್ಧಿಕ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕಿದೆ. ವಿದ್ಯಾರ್ಥಿಗಳು ಜ್ಞಾನವನ್ನು ಉಪಾಸನೆ ಮಾಡಬೇಕು. ಅಕ್ಷರದ ಶಕ್ತಿಯನ್ನು ಅರಿತಿರುವರು ಮಾತ್ರ ತಮ್ಮ ಬದುಕನ್ನು ತಾವೇ ನಿರ್ಮಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯು ಶಿಕ್ಷಣ, ಕೌಶಲ್ಯ, ಉದ್ಯೋಗ ಮತ್ತು ಜ್ಞಾನವನ್ನುಳ್ಳ ಸಮಗ್ರ ಮಾಹಿತಿಯ ಆ್ಯಪ್‌ ಶೀಘ್ರದಲ್ಲಿಯೇ ತರುತ್ತಿದೆ ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎಂ.ಜಿ. ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಎದುರಾಗುವ ಕ್ಷುಲ್ಲಕ ಕಾರಣಗಳು, ಸಣ್ಣಪುಟ್ಟ ಸಮಸ್ಯೆಗಳಿಗೆ ಸೋತು ಜೀವನಕ್ಕೆ ವಿಮುಖರಾಗುತ್ತಿದ್ದಾರೆ. ಅದೆಲ್ಲವನ್ನು ದಾಟಿದರೆ ಭವ್ಯ ಬದುಕಿದೆ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರ್ಥ ಮಾಡಿಕೊಳ್ಳಬೇಕು.

ಸಂಗೀತ, ಸಾಹಿತ್ಯ, ಕಲೆಗಳಿಗೆ ನಮ್ಮ ಮಹಾವಿದ್ಯಾಲಯ ಇನ್ನು ಮುಂದೆ ಹೆಚ್ಚು ಗಮನ ಕೊಡುತ್ತದೆ. ಅದರಿಂದಲೇ ವಿದ್ಯಾರ್ಥಿಗಳ ಬದುಕು ಬದಲಾಯಿಸುತ್ತೇವೆ ಎಂದರು. ಕುಲಸಚಿವರಾದ ಎಂ.ಎ. ಸಪ್ನಾ ಹಾಗೂ ವಿದ್ಯಾರ್ಥಿಗಳ ಪ್ರತಿನಿ ಧಿಗಳು ಇದ್ದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಗಜಾನನ ಗೋವಿಂದಪ್ಪಗೋಳ ವಾರ್ಷಿಕ ವರದಿ ವಾಚಿಸಿದರು. ಪ್ರಿಯಾಂಕಾ ತೆಲಗಾರ ಪ್ರಾರ್ಥಿಸಿದರು. ಶಿವಕುಮಾರ ಹಿರೇಮಠ ಸ್ವಾಗತಿಸಿದರು. ಸಮರ್ಥ ಹಿರೇಕೊಡಿ ಪರಿಚಯಿಸಿದರು. ಅಭಿಲಾಷಾ ಬಡ್ತಿ ವಂದಿಸಿದರು.

ಮೀರಾ ನದಾಫ್‌ ಹಾಗೂ ಶಾಂಭವಿ ಥೊರಲಿ ನಿರೂಪಿಸಿದರು. ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಮಹಾವಿದ್ಯಾಲಯದ
ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next