ದಾವಣಗೆರೆ: ಕೋವಿಡ್ 19 ಸೋಂಕಿನಂತಹ ಯಾವುದೇ ಅನಿರೀಕ್ಷಿತ ಸಂಕಷ್ಟ ಎದುರಾದರೂ ಶೈಕ್ಷಣಿಕವಾಗಿ ತೊಂದರೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ರಾಜ್ಯದ 5 ಲಕ್ಷ ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಪಾಠ ಮಾಡುವ ಡಿಜಿಟಲ್ ವೇದಿಕೆ ಯೋಜನೆಯನ್ನು ಎರಡು ತಿಂಗಳಲ್ಲಿ ಜಾರಿಗೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಹಾಗೂ ವಿಜ್ಞಾನ ತಂತ್ರಜ್ಞಾನ, ಐಟಿ ಬಿಟಿ ಸಚಿವ ಡಾ| ಸಿ. ಎನ್. ಅಶ್ವತ್ಥನಾರಾಯಣ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಭಾಗಗಳ ಕಟ್ಟಡದ ಮೊದಲನೇ ಮಹಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿಜಿಟಲ್ ತಂತ್ರಜ್ಞಾನದ ಮೂಲಕ ಸಾಮೂಹಿಕವಾಗಿ ಶಿಕ್ಷಣ ನೀಡುವ ದೇಶದ ಏಕೈಕ ಹಾಗೂ ಮೊದಲ ವೇದಿಕೆ ಇದಾಗಲಿದೆ.
ತಂತ್ರಜ್ಞಾನ, ವಿಜ್ಞಾನ ಹಾಗೂ ಸ್ಥಳೀಯ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ಯುವ ಸಮೂಹ ಸಶಕ್ತೀಕರಣಕ್ಕೂ ಮಹತ್ವದ ಯೋಜನೆಯನ್ನು ಸರಕಾರ ರೂಪಿಸಿದೆ. ಅದಕ್ಕಾಗಿ ಪೂರ್ವ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದರು.
ಅಂಕ ಆಧಾರಿತ ಶಿಕ್ಷಣ ಶೀಘ್ರ ಅಂತ್ಯ
ಅಂಕ ಆಧಾರಿತ ಶಿಕ್ಷಣ ವ್ಯವಸ್ಥೆಯು ಮುಂದಿನ 30 ತಿಂಗಳಲ್ಲಿ ಅಂತ್ಯಗೊಳ್ಳಲಿದೆ. 2023ರಿಂದ ಸಂಪೂರ್ಣವಾಗಿ ಕೌಶಲ ಆಧಾರಿತ, ವೃತ್ತಿಪರ, ಸಾಮಾಜಿಕ ಚಿಂತನೆ ಒಳಗೊಂಡ, ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡುವ ಹೊಸ ಶಿಕ್ಷಣ ನೀತಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಸಂಪೂರ್ಣ ಅನುಷ್ಠಾನಕ್ಕೆ ಬರಲಿದೆ.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವ ಅವಕಾಶ ಒದಗಲಿದೆ. ವ್ಯಕ್ತಿಗಿಂತ ವ್ಯಕ್ತಿತ್ವ, ಜೀವನದಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳನ್ನು ಆಧರಿಸಿ ಶಾಲೆ, ಕಾಲೇಜು, ಉನ್ನತ ಶಿಕ್ಷಣಕ್ಕೆ ಪ್ರವೇಶ ನೀಡುವ ಪದ್ಧತಿಯನ್ನು ಜಾರಿಗೆ ತರಲಾಗುವುದು ಎಂದರು.