Advertisement

ಡಿಜಿಟಲ್‌ ಪೇಮೆಂಟ್‌

05:23 PM Apr 08, 2019 | pallavi |
ನಗದು ವ್ಯವಹಾರವನ್ನು  ಸುಲಭಗೊಳಿಸುವ ಸಲುವಾಗಿ ಜಾರಿಗೆ ಬಂದ ಡಿಜಿಟಲ್‌ ಪೇಮೆಂಟ್‌ ಸೌಲಭ್ಯವನ್ನು ಇಂದು ದೇಶಾದ್ಯಂತ ಬಹುತೇಕ ಜನರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಈ ವ್ಯವಹಾರ ಎಷ್ಟು ಸುರಕ್ಷಿತವೋ ಅಷ್ಟೇ ಅಪಾಯಕಾರಿ ಎನ್ನುವ ಭಯ ಎಲ್ಲರೊಳಗೂ ಇದೆ. ಜತೆಗೆ ಒಂದಷ್ಟು ಲಾಭನಷ್ಟದ ಲೆಕ್ಕಾಚಾರಗಳೂ ನಡೆಯುತ್ತಿವೆ. ಆಫ‌ರ್‌ ನೆಪದಲ್ಲಿ  ಗ್ರಾಹಕರನ್ನು ದೋಚುವ ಜತೆಗೆ ಕೊಳ್ಳುಬಾಕ ಸಂಸ್ಕೃತಿಯನ್ನು ಹೆಚ್ಚಿಸುವ ಆನ್‌ಲೈನ್‌ ಮಾರುಕಟ್ಟೆಗಳು ಒಂದು ಕಡೆಯಾದರೆ, ಇದನ್ನೇ ವಂಚನೆಯ ಜಾಲವನ್ನಾಗಿ ಮಾಡುತ್ತಿರುವ ವಂಚಕರು ಇನ್ನೊಂದು ಕಡೆ ಇದ್ದಾರೆ ಎಂಬುದನ್ನು ಮರೆಯುವಂತಿಲ್ಲ.  ಹೀಗಾಗಿ ಡಿಜಿಟಲ್‌ ಪೇಮೆಂಟ್‌ ಮಾಡುವಾಗ ಎಷ್ಟು ಸಾಧ್ಯವೋ ಅಷ್ಟು ಸುರಕ್ಷ ಕ್ರಮಗಳನ್ನು ಅನುಸರಿಸುವುದು ಬಹುಮುಖ್ಯ.
2016ರ ನವೆಂಬರ್‌ನಲ್ಲಿ ನೋಟ್‌ ಬ್ಯಾನ್‌ ಆದ ಬಳಿಕ ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ ಯುಗ ಪ್ರವರ್ಧಮಾನಕ್ಕೆ ಬಂತು. ಅಲ್ಲಿಯವರೆಗೆ ಅಲ್ಲೊಂದು- ಇಲ್ಲೊಂದು ಎಂಬ ಮಾತ್ರಕ್ಕೆ ಬಳಕೆಯಾಗುತ್ತಿದ್ದ  ಡಿಜಿಟಲ್‌ ಪೇಮೆಂಟ್‌ ಯೋಜನೆಗೆ ಹಂತ ಹಂತವಾಗಿ ದೇಶವ್ಯಾಪಿ ವಿಸ್ತರಣೆ ಪಡೆದುಕೊಂಡಿತು. ವಿಶೇಷವೆಂದರೆ ಗ್ರಾಮೀಣ ಭಾಗಗಳೂ ಕೂಡ ಡಿಜಿಟಲ್‌ ಪೇಮೆಂಟ್‌ ಯುಗಕ್ಕೆ ತನ್ನನ್ನು ತಾನು ತೆರೆದುಕೊಳ್ಳುವಂತಾಯಿತು.
ಡಿಜಿಟಲ್‌ ಪೇಮೆಂಟ್‌ ಸುಲಭವಾಗಿಸಲು ಹಾಗೂ ಗ್ರಾಹಕರಿಗೆ ಅದರ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡಲು ವಿಧ ವಿಧದ ಆ್ಯಪ್‌ಗ್ಳು ಹಾಗೂ ಸೇವೆಗಳು ಸದ್ಯ ದೊರೆಯುತ್ತಿವೆೆ. ಮೂಲಗಳ ಪ್ರಕಾರ ಹೆಚ್ಚು ಕಡಿಮೆ 30ಕ್ಕೂ ಅಧಿಕ ಕಂಪೆನಿಗಳು ಡಿಜಿಟಲ್‌ ಪೇಮೆಂಟ್‌ ಯೋಜನೆಯಲ್ಲಿ ಕೈಜೋಡಿಸಿವೆೆ. ಈ ಕಂಪೆನಿಗಳು ಆಕರ್ಷಕ ಸೌಲಭ್ಯಗಳನ್ನು ನೀಡುವ ಮೂಲಕ ಡಿಜಿಟಲ್‌ ಪೇಮೆಂಟ್‌ಗೆ ಹೆಚ್ಚು ಆಕರ್ಷಿತರನ್ನಾಗಿಸುತ್ತಿವೆ.
ಬ್ಯಾಂಕ್‌ ಕಾರ್ಡ್ಸ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಬ್ಯಾಂಕ್‌ ಪ್ರೀಪೈಡ್‌ ಕಾರ್ಡ್‌, ಮೊಬೈಲ್‌ ಬ್ಯಾಂಕಿಂಗ್‌, ಭೀಮ್‌ ಆ್ಯಪ್‌ ಸಹಿತ  ಬೇರೆ ಬೇರೆ ವಿಧಾನಗಳ ಮೂಲಕ ಡಿಜಿಟಲ್‌ ಪೇಮೆಂಟ್‌ಗೆ ಅವಕಾಶವಿದೆ. ಗೂಗಲ್‌ ಪೇ, ತೇಜ್‌, ಪೇಟಿಎಂ ಸೇರಿದಂತೆ ಹಲವು ರೀತಿಯ ಡಿಜಿಟಲ್‌ ಪೇಮೆಂಟ್‌ ಕಂಪೆನಿಗಳು ಮೊಬೈಲ್‌ ಸೇವಾ ಕ್ರಮದ ಮೂಲಕ ಕಾರ್ಯ ನಡೆಸುತ್ತಿವೆೆ. ವಿಶೇಷವೆಂದರೆ ಕ್ಯಾಶ್‌ಬ್ಯಾಕ್‌ ಸೌಲಭ್ಯವನ್ನು ಈ ಆ್ಯಪ್‌ಗ್ಳು ಜಾರಿಗೊಳಿಸುತ್ತಿವೆೆ. 100 ರೂ. ಮೊಬೈಲ್‌ ಆ್ಯಪ್‌ನ ಸೌಲಭ್ಯದಿಂದ ಟ್ರಾನ್ಸ್‌ಫರ್‌ ಮಾಡಿದರೆ ಗಿಫ್ಟ್ ಕೂಡ ಸಿಗುತ್ತದೆ!
ಪರ್ಸ್‌ ಬಿಟ್ಟು ಯಾವುದೋ ಜಾಗಕ್ಕೆ ಹೋದಾಗ ಅಲ್ಲಿ ಅಗತ್ಯ ವಸ್ತುವೊಂದನ್ನು ಖರೀದಿಸಬೇಕಿದ್ದರೆ ಹಣ ಇಲ್ಲದಿದ್ದರೆ ಏನು ಮಾಡುವುದು? ಹಲವು ವರ್ಷಗಳ‌ ಹಿಂದಿನವರೆಗೆ ಏನೂ ಮಾಡುವಂತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಕೈಯಲ್ಲಿರುವ ಮೊಬೈಲ್‌ನಲ್ಲಿ ಸೇವ್‌ ಮಾಡಿರುವ ಡಿಜಿಟಲ್‌ ಪೇಮೆಂಟ್‌ನ ಆ್ಯಪ್‌ ಮೂಲಕ ಹಣ ವರ್ಗಾಯಿಸಿ ವಸ್ತು ಖರೀದಿಸಬಹುದು. ನಿಜಕ್ಕೂ ಈ ವ್ಯವಸ್ಥೆ ಅತ್ಯಂತ ಪೂರಕ ಹಾಗೂ ಮುಂಬರುವ ದಿನಗಳ ಕ್ಯಾಶ್‌ಲೆಸ್‌ ಯುಗವಾಗಿ ಭಾರತ ಪರಿವರ್ತನೆ ಆಗುವ ಕಾಲದಲ್ಲಿ ಇದು ಅನಿವಾರ್ಯವೂ ಹೌದು.
ಸುರಕ್ಷಿತವಾಗಿರಲಿ  ಡಿಜಿಟಲ್‌ ಪೇಮೆಂಟ್‌
ಡಿಜಿಟಲ್‌ ಪೇಮೆಂಟ್‌ ಮಾಡುವ ಮುನ್ನ  ಡೌನ್‌ಲೋಡ್‌ ಮಾಡಿಕೊಂಡ ಆ್ಯಪ್‌ ಸುರಕ್ಷಿತವಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ನೀವು ಮಾಡುವ ಪ್ರತಿಯೊಂದು ವಹಿವಾಟಿಗೂ ಆ್ಯಪ್‌ನಿಂದ ಮತ್ತು ನಿಮ್ಮ ಬ್ಯಾಂಕ್‌ನಿಂದ ಮೇಸೆಜ್‌ ಬರುವ ಹಾಗೆ ಸೆಟ್‌ ಮಾಡಿಕೊಳ್ಳಿ. ಯಾವುದೇ ಮೇಸೆಜ್‌ ಬಾರದೇ ಇದ್ದರೆ ಕೂಡಲೇ ಸಂಬಂಧಪಟ್ಟವರನ್ನು ಸಂಪರ್ಕಿಸಿ. ಎಲ್ಲಿಯಾದರೂ ಮೋಸವಾಗುತ್ತಿದೆ ಎಂದೆನಿಸಿದರೆ ಕೂಡಲೇ ವಹಿವಾಟನ್ನು ಸ್ಥಗಿತಗೊಳಿಸಿ. ಪ್ರತಿ ವ್ಯವಹಾರಕ್ಕೂ ಒನ್‌ ಟೈಮ್‌ ಪಾಸ್‌ವರ್ಡ್‌ ಬಳಸಿಕೊಳ್ಳಿ. ಹೆಚ್ಚು ನಗದು ಹೊಂದಿರುವ ಬ್ಯಾಂಕ್‌ ಅಕೌಂಟ್‌ ಅನ್ನು ಇದಕ್ಕೆ ಲಿಂಕ್‌ ಮಾಡದಿರಿ. ವಾರ, ತಿಂಗಳ ವಹಿವಾಟಿಗಷ್ಟೇ ಇದು ಮೀಸಲಾಗಿರಲಿ. ದೊಡ್ಡ ಮೊತ್ತದ ನಗದನ್ನು ಇದರಲ್ಲಿ  ಸಂಗ್ರಹಿಸದಿರಿ.
ಇ-ಪೇಮೆಂಟ್‌ನಲ್ಲಿ  ಏರಿಕೆ
ಸರಕಾರದ ಮೂಲಗಳ ಪ್ರಕಾರ ಪ್ರಸ್ತುತ ಡಿಜಿಟಲ್‌ ಇಂಡಿಯಾ ಯೋಜನೆಗೆ ಬೃಹತ್‌ ಉತ್ತೇಜನ ನೀಡುತ್ತಿರುವ ಇ-ಪೇಮೆಂಟ್‌ ವ್ಯವಹಾರಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿವೆ. 2017-18ರ ಸಾಲಿನಲ್ಲಿ ಇ-ಪೇಮೆಂಟ್‌ ಸುಮಾರು 2,070.98 ಕೋ.ರೂ. ಏರಿಕೆ ದಾಖಲಿಸಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. 2013-14ರಲ್ಲಿ 220 ಕೋ.ರೂ. ಇ-ವಹಿವಾಟು ನಡೆದಿತ್ತು. 2017-18ರಲ್ಲಿ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು 3,013 ಕೋಟಿ ರೂ. ಗಳ ಡಿಜಿಟಲ್‌ ಪೇಮೆಂಟ್‌ ವ್ಯವಹಾರಗಳ ಗುರಿ ಹೊಂದಿತ್ತು. ಇದಿಷ್ಟು ಪಾಸಿಟಿವ್‌ ಸಂಗತಿಯಾದರೆ, ನೆಗೆಟಿವ್‌ ಸಂಗತಿಗಳು ಕೂಡ ಇಲ್ಲಿವೆ. ಆರ್‌ಬಿಐ ಮಾಹಿತಿ ಪ್ರಕಾರ 2015-16ರಲ್ಲಿ ಇ-ಪೇಮೆಂಟ್‌ನಿಂದ 1,191 ವಂಚನೆ ಪ್ರಕರಣ ನಡೆದಿದ್ದರೆ, 2017-18ರಲ್ಲಿ ಇದು 2,488ಕ್ಕೆ ಏರಿಕೆಯಾಗಿದೆ. 2015-16ರ ಹಣಕಾಸಿನ ವರ್ಷದಲ್ಲಿ ವಂಚನೆಯಾದ ಒಟ್ಟು ಮೊತ್ತ 40.20 ಕೋ.ರೂ. ಇದು 2016-17ರಲ್ಲಿ 43.18 ಕೋ.ರೂ.ಗೆ ಏರಿ, 2017-18ರಲ್ಲಿ ಮೂರು ಪಟ್ಟು ಹೆಚ್ಚಾಗಿತ್ತು. ಅಂದರೆ 19.62 ಕೋ.ರೂ.!
ಚೀನಕ್ಕಿಂತಲೂ ಹಿಂದಿದೆ ಭಾರತ
ಡಿಜಿಟಲ್‌ ಪೇಮೆಂಟ್‌ ಬಗ್ಗೆ ಭಾರತ ಚೀನಕ್ಕಿಂತಲೂ ಹಿಂದೆ ಉಳಿದಿದೆ. 2018ರಲ್ಲಿ ಚೀನದಲ್ಲಿ 58.3 ಕೋಟಿ ಜನ ಮೊಬೈಲ್‌ ಪೇಮೆಂಟ್‌ ಸೌಲಭ್ಯ ಬಳಸುತ್ತಿದ್ದಾರೆ. ಆದರೆ, ಭಾರತದಲ್ಲಿ ಆನ್‌ಲೈನ್‌ ಪೇಮೆಂಟ್‌ ಬಳಕೆದಾರರ ಸಂಖ್ಯೆ ಕಡಿಮೆ ಇದೆ ಎನ್ನುವುದು ಚರ್ಚಿಸಬೇಕಾದ ಸಂಗತಿ. ಒಂದು ಮಾಹಿತಿ ಪ್ರಕಾರ ಕೇವಲ 7.39 ಕೋಟಿ ಜನರು ಮಾತ್ರ ಈಗ ಆನ್‌ಲೈನ್‌ನಲ್ಲಿ  ಪೇಮೆಂಟ್‌ ಮಾಡುತ್ತಿದ್ದಾರೆ.
ಹೆಚ್ಚಿನ ವ್ಯವಹಾರ ಡಿಜಿಟಲ್‌ ಪೇಮೆಂಟ್‌ನಲ್ಲೇ
ಇತ್ತೀಚಿನ ದಿನಗಳಲ್ಲಿ  ಹೆಚ್ಚಿನ ಪೇಮೆಂಟ್‌ಗಳು ಡಿಜಿಟಲ್‌ ವ್ಯವಹಾರದಲ್ಲೇ ನಡೆಯುತ್ತಿವೆೆ. ಅನಿವಾರ್ಯ ಸಂದರ್ಭದಲ್ಲಷ್ಟೇ ಕ್ಯಾಶ್‌ ಬಳಕೆ ಸಾಕು ಎನ್ನುವ  ಮನೋಸ್ಥಿತಿ ಎಲ್ಲರಲ್ಲೂ ಬೆಳೆಯುತ್ತಿದೆ. ಇದು ನಮ್ಮ ನಗದು ವ್ಯವಹಾರವನ್ನು ಸುಲಭಗೊಳಿಸಿರುವುದು ಮಾತ್ರವಲ್ಲ ಸಾಕಷ್ಟು ಸಮಯವನ್ನೂ ಉಳಿತಾಯ ಮಾಡುತ್ತದೆ. ಪ್ರತಿಯೊಂದು ವಹಿವಾಟಿಗೂ ಬ್ಯಾಂಕ್‌, ಎಟಿಎಂಗೆ ತೆರಳಿ ಗಂಟೆಗಟ್ಟಲೆ ಕಾಯಬೇಕಾದ ಟೆನ್ಶನ್‌ ಇಲ್ಲ. ಬ್ಯಾಂಕ್‌, ಎಟಿಎಂನಲ್ಲಿ  ನಗದು ಇಲ್ಲವಾದಾಗ ಪರಿತಪಿಸಬೇಕಾಗಿಯೂ ಇಲ್ಲ. ಅಗತ್ಯ ವಸ್ತುಗಳನ್ನು ಎಲ್ಲಿಬೇಕೋ ಅಲ್ಲಿ ಖರೀದಿಸಬಹುದು. ಕೈಯಲ್ಲಿ  ನಗದು ಇಲ್ಲವೆಂಬ ಚಿಂತೆಯೂ ಇರುವುದಿಲ್ಲ. ಈಗ ಮೊಬೈಲೇ ನಗದು ಇರುವ ಪರ್ಸ್‌ ಎಂಬಂತಾಗಿದೆ.
– ದೀಕ್ಷಿತ್‌ ಜಪ್ಪಿನಮೊಗರು
ಎಚ್ಚರಿಕೆ ಇರಲಿ 
ಆನ್‌ಲೈನ್‌ನಲ್ಲಿ  ಸಾಕಷ್ಟು ಆಫ‌ರ್‌ಗಳು ಇರುತ್ತವೆ. ಮಾತ್ರವಲ್ಲ ಮಾರುಕಟ್ಟೆಗಿಂತ ಅಗ್ಗದ ದರದಲ್ಲಿ  ಹೆಚ್ಚಿನ ವಸ್ತುಗಳು ದೊರೆಯುತ್ತವೆ. ಇದರೊಂದಿಗೆ ಕ್ಯಾಶ್‌ಬ್ಯಾಕ್‌ ಆಫ‌ರ್‌ ಹೆಚ್ಚಿನ ಲಾಭ ತಂದುಕೊಡುತ್ತದೆ. ಇದನ್ನು ಸರಿಯಾಗಿ ಬಳಸಿಕೊಂಡರೆ  ಡಿಜಿಟಲ್‌ ಪೇಮೆಂಟ್‌ನಿಂದ ಲಾಭವನ್ನೂ ಗಳಿಸಬಹದು. ಆದರೆ ನಮ್ಮ ಬ್ಯಾಂಕ್‌ ಅಕೌಂಟ್‌ನಲ್ಲಿರುವ ಹಣದ ಸುರಕ್ಷೆಯ ದೃಷ್ಟಿಯಿಂದ ಒಂದಷ್ಟು ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಕ್ಯಾಶ್‌ ಬ್ಯಾಕ್‌ ಆಫ‌ರ್‌ಗಳ ನಿಯಮಾವಳಿಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಇಲ್ಲವಾದರೆ ಕೈಸುಟ್ಟುಕೊಳ್ಳಬೇಕಾದಿತು. ಖರೀದಿಯಲ್ಲೂ ಮಿತಿ ಇರಲಿ, ವ್ಯವಹಾರದಲ್ಲಿ  ಎಚ್ಚರಿಕೆ ಇರಲಿ.
– ನಿತ್ಯಾ ರವೀಶ್‌ ಕೊಡಿಯಾಲಬೈಲ್‌
  ದಿನೇಶ್‌ ಇರಾ
Advertisement

Udayavani is now on Telegram. Click here to join our channel and stay updated with the latest news.

Next