Advertisement

BBMP: ಡಿಜಿಟಲ್‌ ನಾಮಫ‌ಲಕಗಳ ಹಾವಳಿ; ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌

11:33 AM Feb 13, 2024 | Team Udayavani |

ಬೆಂಗಳೂರು:  ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿನ ಆಭರಣ ಮಳಿಗೆಗಳು ಹೆಚ್ಚು ಬೆಳಗುವ ಎಲ್ಇಡಿ ದೀಪಗಳ ಡಿಜಿಟಲ್‌ ನಾಮಫ‌ಲಕ ಹಾಗೂ ಜಾಹೀರಾತು ಫ‌ಲಕಗಳನ್ನು ಅಳವಡಿಸಿ ಸಾರ್ವ­ಜನಿಕರು ಮತ್ತು ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿವೆ ಎಂದು ಆಕ್ಷೇಪಿಸಿ ಸಲ್ಲಿಸ­ಲಾದ ಅರ್ಜಿ ಸಂಬಂಧ ಸರ್ಕಾರ ಹಾಗೂ ಬಿಬಿ­ಎಂಪಿಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ವಿಚಾರವಾಗಿ ವಕೀಲೆ ದೀಕ್ಷಾ ಅಮೃತೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಹಾಗೂ ನ್ಯಾ. ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠವು, ರಾಜ್ಯ ಸರ್ಕಾರ, ಬಿಬಿಎಂಪಿ, ನಗರ ಪೊಲೀಸ್‌ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ, ಮಲ್ಲೇಶ್ವರ ಸಂಚಾರ ಉತ್ತರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅಮೃತೇಶ್‌ ವಾದ ಮಂಡಿಸಿ, ಮಲ್ಲೇಶ್ವರದ ಸಂಪಿಗೆ ರಸ್ತೆಯ ವೆಂಡಿ, ಎವಿಆರ್‌ ಸ್ವರ್ಣ ಮಹಲ್, ಓರಾ ಮತ್ತಿತರ ಚಿನ್ನಾಭರಣ ಮಳಿಗೆಗಳು ಹೆಚ್ಚಿನ ಬೆಳಕು ಹೊರಹಾಕುವ ಎಲ್ಇಡಿ ನಾಮಫ‌ಕ ಹಾಗೂ ಜಾಹೀರಾತು ಫ‌ಲಕ ಅಳವಡಿಸಿವೆ. ನೆಲದ ಮಟ್ಟದಿಂದ ಬಹು ಎತ್ತರಕ್ಕೆ ಮುಖ್ಯರಸ್ತೆಗೆ ಮುಖ ಮಾಡಿ ಜಾಹೀರಾತುಗಳನ್ನು ಅಳವಡಿಸಲಾಗಿದೆ. ಅವು ಸುರಕ್ಷತಾ ಮಿತಿಗಿಂತ ಹೆಚ್ಚಿನ ಬೆಳಕು ಮತ್ತು ಹೊಳಪು ಹೊರಸೂಸುತ್ತಿವೆ. ಇದರಿಂದ ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ಅಪಾಯಕಾರಿ ಪರಿಣಮಿಸಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ‌

ಅಧ್ಯಯನಗಳ ಪ್ರಕಾರ ಎಲ್‌ ಇಡಿ ಜಾಹೀರಾತು ಫ‌ಲಕಗಳಿಂದ ಹೊರಹೊಮ್ಮುವ ಪ್ರಕಾಶಮಾನವಾದ ಬೆಳಕು, ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಬಿಬಿಎಂಪಿ ಜಾಹೀರಾತು ಅಧಿನಿಯಮ-2021ರ ಅಡಿಯಲ್ಲಿ ಎಲ್ಇಡಿ ಜಾಹೀರಾತು ಫ‌ಲಕಗಳ ಪ್ರದರ್ಶನಕ್ಕೆ ನಿರ್ದಿಷ್ಟ ಮಾರ್ಗಸೂಚಿ ರೂಪಿಸಲಾಗಿದೆ. ಅವುಗಳಿಗೆ ತದ್ವಿರುದ್ಧವಾಗಿ ಈ ಮಳಿಗೆಗಳು ಜಾಹೀರಾತು ಫ‌ಲಕ ಅಳವಡಿಸಿವೆ ಎಂದು ವಿವರಿಸಿದರು.

Advertisement

ಸುರಕ್ಷತಾ ಮಾನದಂಡ ಜಾರಿಗೆ ಮನವಿ:

ಎಲ್ಇಡಿ ದೀಪಗಳ ಡಿಜಿಟಲ್‌ ಹೊರಾಂಗಣ ಜಾಹೀರಾತಿಗಾಗಿ ಸುರಕ್ಷತಾ ಮಾನದಂಡ  ಜಾರಿಗೊಳಿಸಬೇಕಿದೆ. ಅದರಿಂದ ಉಂಟಾಗುವ ಸಂಭಾವ್ಯ ವಾಹನ ಅಪಘಾತಗಳನ್ನು ತಗ್ಗಿಸಬಹುದಾಗಿದೆ. ಈ ಕುರಿತು ಕ್ರಮ ಜರುಗಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅರ್ಜಿದಾರರ ಮನವಿ ಪರಿಗಣಿಸಿ ಸರ್ಕಾರ, ಪಾಲಿಕೆ ಹಾಗೂ ಇತರ ಇಲಾಖೆ, ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು.

 

Advertisement

Udayavani is now on Telegram. Click here to join our channel and stay updated with the latest news.

Next