Advertisement

ಕ್ಯಾಶ್‌ಲೆಸ್‌ ನೇಮದ ಪಿಲಿಗುಂಡದಲ್ಲಿ ಡಿಜಿಟಲ್‌ ಆರೋಗ್ಯ ಶಿಬಿರ 

11:20 AM Mar 28, 2018 | |

ಪುತ್ತೂರು: ಪ್ರಧಾನ ಮಂತ್ರಿಯವರ ಕನಸಿನ ‘ಡಿಜಿಟಲ್‌ ಇಂಡಿಯಾ’ ಯೋಜನೆಗೆ ಪೂರಕವಾಗಿ ದೈವಗಳ ತಂಬಿಲವನ್ನು ನಗದುರಹಿತವಾಗಿ (ಕ್ಯಾಶ್‌ಲೆಸ್‌) ನಡೆಸಿದ ಕೊಡಿಂಬಾಡಿಯ ಪಿಲಿಗುಂಡ ಕುಟುಂಬ, ಎಲ್ಲ ಸದಸ್ಯರಿಗೆ ಉಚಿತವಾಗಿ ಬ್ಯಾಂಕ್‌ ಖಾತೆ ಸೌಲಭ್ಯ ಒದಗಿಸಿತ್ತು. ಈ ವರ್ಷ ತಂಬಿಲ ಸೇವೆ ಸಂದರ್ಭದಲ್ಲಿ ಉಚಿತ ವೈದ್ಯಕೀಯ ಶಿಬಿರ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪ್ರಗತಿ ಆರೋಗ್ಯ ಕುಟುಂಬ ಕಾರ್ಡ್‌ ಮತ್ತು ರೈತ ಕುಟುಂಬಗಳಿಗೆ ಪಾನ್‌ಕಾರ್ಡ್‌ ವಿತರಿಸಿದೆ.

Advertisement

ಕಳೆದ ವರ್ಷ ಮಾ. 25 ಹಾಗೂ 26 ರಂದು ದೈವಗಳ ನೇಮ ನಡೆದಿತ್ತು. ಎಲ್ಲ ವ್ಯವಹಾರವೂ ಕ್ಯಾಶ್‌ಲೆಸ್‌ ಆಗಿತ್ತು. ಕುಟುಂಬದ ಸದಸ್ಯರಿಗೆ ಉಚಿತವಾಗಿ ಬ್ಯಾಂಕ್‌ ಖಾತೆ ಸೌಲಭ್ಯ, ವಿಧವೆಯರಿಗೆ ವಿಧವಾ ವೇತನ, ವೃದ್ಧಾಪ್ಯ ವೇತನ ಸೌಲಭ್ಯ ಒದಗಿಸಲಾಗಿತ್ತು. ಈ ಸಲ ಮಾ. 25ರಂದು ದೈವಗಳಿಗೆ ನಡೆಯುವ ತಂಬಿಲ ಸೇವೆಯಲ್ಲಿ ಸಾರ್ವಜನಿಕರಿಗೆ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳಲಾಯಿತು.

ವೈದ್ಯಕೀಯ ಶಿಬಿರ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ನಡೆಯಲಿದ್ದು, ಜನೌಷಧ ಮಳಿಗೆಯಿಂದ ಸಿಗುವ ಔಷಧಗಳ ಕುರಿತು ಮಾಹಿತಿ ನೀಡಲು ಜನರಿಕ್‌ ಔಷಧ ಮಳಿಗೆ ತೆರೆಯಲಾಗಿತ್ತು. ಶಿಬಿರದಲ್ಲಿ ಎಲ್ಲ ಕಾಯಿಲೆಗಳನ್ನು ಡಿಜಿಟಲ್‌ ಯಂತ್ರದ ಮೂಲಕ ಪರೀಕ್ಷೆಗೆ ಒಳಪಡಿಸಿ, ಚಿಕಿತ್ಸೆ ನೀಡಲಾಯಿತು. ಪಾನ್‌ ಕಾರ್ಡ್‌ ಇಲ್ಲದ ರೈತ ಕುಟುಂಬಗಳಿಗೆ ಅದನ್ನು ಮಾಡಿಸಿ ಕೊಡುವ ಸೌಲಭ್ಯವಿತ್ತು. ಕುಟುಂಬ ಸ್ಥರಲ್ಲದೆ, ಸಾರ್ವಜನಿಕರೂ ಇದರ ಪ್ರಯೋಜನ ಪಡೆದರೆಂದು ಪಿಲಿಗುಂಡ ಕುಟುಂಬದ ಅಧ್ಯಕ್ಷ ಪಿ.ಕೆ.ಎಸ್‌. ಗೌಡ ತಿಳಿಸಿದ್ದಾರೆ.

ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶ್ರೀಪತಿ ರಾವ್‌ ಶಿಬಿರ ಉದ್ಘಾಟಿಸಿದರು. ಡಯಾಬಿಟಿಸ್‌, ರಕ್ತದೊತ್ತಡಕ್ಕೆ ನಿರಂತರ ಔಷಧಿ ಬೇಕು. ಜನೌಷಧ ಮಳಿಗೆಗಳಲ್ಲಿ ಕಡಿಮೆ ಬೆಲೆಗೆ ಔಷಧಗಳು ಸಿಗುತ್ತವೆ ಎಂದರು. ಡಾ| ಸುಧಾ ಎಸ್‌. ರಾವ್‌, ಬೆಳಿಯಪ್ಪ ಗೌಡ, ದೇವದಾಸ್‌, ಸಂತೋಷ್‌, ವೆಂಕಮ್ಮ, ಜಾನಕಿ, ಚೆನ್ನಪ್ಪ ಗೌಡ ಉಪಸ್ಥಿತರಿದ್ದರು. ವ್ಯವಹಾರಗಳನ್ನು ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಬಳಸಿ ನಿರ್ವಹಿಸುವ ಪ್ರಾತ್ಯಕ್ಷಿಕೆ ನೀಡಲಾಯಿತು. ಬಳಿಕ ಡಿಜಿಟಲ್‌ ತಂತ್ರಜ್ಞಾನದ ಕುರಿತಾಗಿ ಮಾಹಿತಿ ನೀಡಲಾಯಿತು.

ಏನೆಲ್ಲ ಸೌಲಭ್ಯ?
ವೈದ್ಯಕೀಯ ತಪಾಸಣ ಶಿಬಿರದಲ್ಲಿ ಪಾಲ್ಗೊಂಡವರ ಹೆಸರು ನೋಂದಾಯಿಸಿ ಪ್ರಗತಿ ಆರೋಗ್ಯ ಕಾರ್ಡ್‌ ನೀಡಲಾಯಿತು. ಈ ಕಾರ್ಡ್‌ ಹೊಂದಿದ್ದಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಜನರಲ್‌ ವಾರ್ಡ್‌ನ ಬಿಲ್‌ನಲ್ಲಿ ಶೇ. 25 ರಿಯಾಯಿತಿ ಲಭಿಸುತ್ತದೆ. ವರ್ಷದ ಅವಧಿಯಲ್ಲಿ ಕಾರ್ಡ್‌ ನವೀಕರಿಸಬಹುದು. ಕಾರ್ಡ್‌ನ ಶುಲ್ಕ ಒಂದು ಕುಟುಂಬಕ್ಕೆ
250 ರೂ. ಪತಿ, ಪತ್ನಿ, ಇಬ್ಬರು ಮಕ್ಕಳು ಸದಸ್ಯರಾಗಲು ಅವಕಾಶವಿತ್ತು. 100 ರೂ. ಪಾವತಿಸಿ, ಹೆಚ್ಚುವರಿ ಸದಸ್ಯರನ್ನೂ ಸೇರ್ಪಡೆ ಮಾಡಿಸುವ ಅವಕಾಶವಿತ್ತು. ಶಿಬಿರದಲ್ಲಿ ಪಾಲ್ಗೊಂಡವರಿಗೆ ಪಿಲಿಗುಂಡ ಕುಟುಂಬದ ವತಿಯಿಂದಲೇ ಕಾರ್ಡ್‌ ಮಾಡಿಸಿಕೊಡಲಾಯಿತು. ಎಂದು ಪಿ.ಕೆ. ಎಸ್‌. ಗೌಡ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next