Advertisement

ಡಿಜಿಟಲ್‌ ಸಾಲ; ಬೈ ನೌ, ಪೇ ಲೇಟರ್‌ ಸ್ಕೀಮ್‌

09:00 PM Feb 23, 2020 | Sriram |

ಮೊದಲೆಲ್ಲಾ ಸಾಲ ಬೇಕೆಂದರೆ ನೂರೆಂಟು ರೀತಿ ರಿವಾಜುಗಳಿರುತ್ತಿದ್ದವು. ಹಲವು ಕಾಗದ ಪತ್ರಗಳಿಗೆ ಸಹಿ ಹಾಕಬೇಕಾಗಿತ್ತು. ಕಟ್ಟಳೆಗಳನ್ನು ಪಾರಾಗಬೇಕಾಗಿತ್ತು. ಈಗ ಹಾಗಲ್ಲ, ಸಾಲ ನೀಡುವ ಸಂಸ್ಥೆಯ ಜಾಲತಾಣದಲ್ಲಿ ಅಕೌಂಟ್‌ ಕ್ರಿಯೇಟ್‌ ಮಾಡಿದರೆ ಸಾಕು…

Advertisement

“ಬೈ ನೌ ಪೇ ಲೇಟರ್‌’ ಎಂಬ ಆಹ್ವಾನ ಯಾರನ್ನಾದರೂ ಆಕರ್ಷಿಸೀತು. “ನಿಮ್ಮ ಜೇಬಿನಲ್ಲಿ ದುಡ್ಡು ಇರಲಿ, ಇಲ್ಲದಿರಲಿ. ಮೊದಲು ನಿಮಗೆನು ಬೇಕೋ ಅದನ್ನು ಖರೀದಿಸಿಬಿಡಿ, ಆಮೇಲೆ ಪಾವತಿ ಮಾಡಿದರಾಯಿತು’ ಎನ್ನುವುದು ಈ ಸ್ಕೀಮುಗಳ ಮೋಡಿಯ ಮಾತು. ಈ ಆಕರ್ಷಣೆಗೆ ಬಲಿಬಿದ್ದು ಪರಿತಪಿಸುವವರ ಸಂಖ್ಯೆ ಕಡಿಮೆಯೇನಲ್ಲ. ಯಾಕೆಂದರೆ, ಆಮೇಲೆ ಪಾವತಿ ಮಾಡುವಲ್ಲಿ ನಿರ್ಬಂಧಗಳು ಹಲವು. ಬಡ್ಡಿ ದರ ಅಧಿಕ ಮತ್ತು ಅದನ್ನೂ ನಿಭಾಯಿಸಿಕೊಂಡು ಹೋಗುವುದು ಕಠಿಣ. ಇಂಥ ಬೈ ನೌ ಪೇ ಲೇಟರ್‌ ಸ್ಕೀಮುಗಳಿಗೆ ಕೈ ಹಾಕುವ ಮೊದಲು ಆ ಬಗ್ಗೆ ಸೂಕ್ತ ಮಾಹಿತಿ ತಿಳಿದುಕೊಳ್ಳುವುದು ಅತ್ಯಗತ್ಯ.

ಸಾಲ ಕೊಡುವವರು ಯಾರು?
ಫ್ಲಿಪ್‌ಕಾರ್ಟ್‌, ಝೊಮಾಟೋ, ಸ್ವಿಗ್ಗಿ ಮುಂತಾದ ಇ- ಕಾಮರ್ಸ್‌ ಜಾಲತಾಣದಲ್ಲಿ ಖರೀದಿಸುವಾಗ ಪಾವತಿಗಾಗಿ ಬರುವ ವಿವಿಧ ಆಯ್ಕೆಗಳಲ್ಲಿ ಇ-ಪೇ ಲೇಟರ್‌, ಲೇಝಿ ಪೇನಂಥ ಫಿನ್‌ ಟೆಕ್‌ ಮಾದರಿಯ ಸಂಸ್ಥೆಗಳು ಕೂಡಾ ಇವೆ. ಇಂಥ ಫಿನ್‌ಟೆಕ್‌ ಅಥವಾ ಫೈನಾನ್ಷಿಯಲ್‌ ಟೆಕ್ನಾಲಜಿ ಸಂಸ್ಥೆಗಳು ಅಸಲಿನಲ್ಲಿ ಸಾಲ ನೀಡುವ ವ್ಯವಸ್ಥೆಯೇ buy now pay later ಸ್ಕೀಮು. ಯಾವುದೇ ಬಿಲ್‌ ಪಾವತಿಗಾಗಿ ನೀವು ಈ ಸಂಸ್ಥೆಗಳ ಮೊರೆ ಹೋದರೆ, ಆ ಸಂಸ್ಥೆಗಳು ವರ್ತಕರಿಗೆ ನಿಮ್ಮ ಪರವಾಗಿ ಹಣ ಪಾವತಿಸಿಬಿಡುತ್ತಾರೆ. ಮತ್ತು ಆ ಮೊತ್ತವನ್ನು ನಿಮ್ಮ ಹೆಸರಿನಲ್ಲಿ ಸಾಲವೆಂದು ಬರೆದಿಟ್ಟುಕೊಳ್ಳುತ್ತಾರೆ. ಹಾಗಾಗಿ ನಿಮಗೆ ಅದು ನಂತರ ಹಣ ಪಾವತಿಸುವ ವ್ಯವಸ್ಥೆಯಂತೆ ತೋರಿದರೂ, ಅವು ಕ್ರೆಡಿಟ್‌ ಕಾರ್ಡ್‌ ಮಾಡುವ ಕೆಲಸವನ್ನೇ ಮಾಡುತ್ತಿರುತ್ತವೆ. ಆದರೆ ಭೌತಿಕವಾಗಿ ಕ್ರೆಡಿಟ್‌ ಕಾರ್ಡು ಇಲ್ಲದಿದ್ದರೂ ವರ್ಚುವಲ್‌ ಆಗಿ ಒಂದು ಕ್ರೆಡಿಟ್‌ ಕಾರ್ಡಿನ ರೀತಿಯಲ್ಲಿಯೇ ಈ ಸ್ಕೀಮು ಕೆಲಸ ಮಾಡುತ್ತದೆ. ಅದಕ್ಕಾಗಿ ಆಯಾ ಸಂಸ್ಥೆಯ ಆನ್‌ಲೈನ್‌ ಪೇಜಿಗೆ ಭೇಟಿ ಕೊಟ್ಟು ರಿಜಿಸ್ಟರ್‌ ಆದರಷ್ಟೇ ಸಾಕು.

ಹೆಚ್ಚು ಹೆಚ್ಚು ಬಡ್ಡಿ
ಕ್ರೆಡಿಟ್‌ ಕಾರ್ಡಿನಲ್ಲಿ ಇರುವ ಸಮಸ್ಯೆಗಳೇ, ಈ ವರ್ಚುವಲ್‌ ಕಾರ್ಡಿನಲ್ಲಿಯೂ ಇವೆ. ಮುಖ್ಯ ಸಮಸ್ಯೆ ಏನೆಂದರೆ, ಈ ಸಾಲಕ್ಕೆ ಬಡ್ಡಿ ಸಿಕ್ಕಾಪಟ್ಟೆ ಇರುತ್ತದೆ. ಇದೊಂದು ರೀತಿಯ ಪರ್ಸನಲ್‌ ಲೋನ್‌ ಅಥವಾ ವೈಯಕ್ತಿಕ ಸಾಲ. ಇದಕ್ಕೆ ಯಾವುದೇ ರೀತಿಯ ಭದ್ರತೆ ಇರುವುದಿಲ್ಲ. ಸಾಲ ನೀಡುವ ಸಂಸ್ಥೆಯು, ಭದ್ರತೆ ಇಲ್ಲ ಎಂದಾಕ್ಷಣ ತನ್ನ ರಿÓR… ಅನ್ನು ಸರಿದೂಗಿಸಲು ಬಡ್ಡಿದರವನ್ನು ಹೆಚ್ಚು ಮಾಡಿಯೇ ಮಾಡುತ್ತದೆ. ಅದಕ್ಕಾಗಿಯೇ ಈ ರೀತಿಯ ಸಾಲದ ವ್ಯವಸ್ಥೆ ಅತ್ಯಂತ ದುಬಾರಿ. ಇಲ್ಲಿ, ನೀವು ಒಂದು ವಸ್ತುವನ್ನು ಖರೀದಿಸಿದ ಬಳಿಕ, ಆ ದುಡ್ಡು ಪಾವತಿಗಾಗಿ ಕೆಲವೇ ದಿನಗಳ ಸಮಯವನ್ನು ಮಾತ್ರ ಕೊಡಲಾಗುತ್ತದೆ. ಆ ಅವಧಿಯೊಳಗೆ ನಿಮ್ಮ ಬಿಲ್‌ ನಿಮ್ಮ ಕೈಸೇರಿ ನೀವು ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಆ ಅವಧಿಯೊಳಗೆ ಪಾವತಿ ಮಾಡಿದರೆ ಸೈ! ಇಲ್ಲದಿದ್ದರೆ, ವಾರ್ಷಿಕ ಲೆಕ್ಕದಲ್ಲಿ ಸುಮಾರು 36% ಬಡ್ಡಿ ತೆರಬೇಕಾಗಿ ಬರಬಹುದು. ಯಾವುದೋ ಜೋಶ್‌ನಿಂದ ಕೊಂಡ ಸರಕಿನ ಬಿಲ್‌ ಪಾವತಿಯನ್ನು, ಬೇಗನೆ ಮಾಡಲಾರದೆ ಅಸಾಧ್ಯ ಬಡ್ಡಿಯನ್ನು ಮೈಮೇಲೆ ಏರಿಸಿಕೊಳ್ಳುವವರೇ ಜಾಸ್ತಿ. ಈ ರೀತಿ ಆರಂಭದಲ್ಲಿ ಅನುಕೂಲಕರ ಅನ್ನಿಸಿದ ಒಂದು ವ್ಯವಸ್ಥೆ, ಹಣ ಪಾವತಿಸ,ಲು ಆಗದ ಕ್ಷಣದಿಂದಲೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಉರುಳು ಮಾಡಿಕೊಳ್ಳಬಾರದು
ಬರೇ ಬಡ್ಡಿಯಾದರೂ ಆದೀತೇ? ಪಾವತಿಯ ದಿನಾಂಕ ತಪ್ಪಿದರೆ ಬಡ್ಡಿಯಲ್ಲದೆ ಲೇಟ್‌ ಫೀಸ್‌ ಕೂಡಾ ಹೇರಲಾಗುತ್ತದೆ. ಅದು ಕೂಡಾ ಮಿತಿ ಮೀರಿದ ಪ್ರಮಾಣದಲ್ಲಿ! ಉದಾಹರಣೆಗೆ, ಸಿಂಪಲ್‌ ಸ್ಟಾರ್ಟ್‌ ಎಂಬ “ಪೇ ಲೇಟರ್‌ ಸ್ಕೀಮಿನ’ ಒಂದು ಕಂಪೆನಿ 500 ರೂ. ಪಾವತಿಸಲು ವಿಳಂಬ ಮಾಡಿದರೆ, ಅದಕ್ಕೆ ರೂ. 250 ದಂಡ ವಿಧಿಸುತ್ತದಂತೆ. ಹೇಗಿದೆ ನೋಡಿ! ಇನ್ನೊಂದು ಕಂಪೆನಿ ದಿನಕ್ಕೆ 10 ರೂ.ನಂತೆ 30% ವರೆಗೆ ಚಾರ್ಜ್‌ ಮಾಡುತ್ತದೆ. ಇವನ್ನು ಒಟ್ಟಾಗಿ ಗಮನಿಸಿದರೆ ಈ ಬಯ್‌ ನೌ ಪೇ ಲೇಟರ್‌ ಸ್ಕೀಮು ಕ್ರೆಡಿಟ್‌ ಕಾರ್ಡಿಗಿಂತಲೂ ಹೆಚ್ಚಿನ ಹೊರೆ ನೀಡುವಂಥದ್ದು ಎಂದೆನಿಸದೇ ಇರದು. ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಿದ್ದರೆ ಏನೂ ಸಮಸ್ಯೆ ಇಲ್ಲ. ಆದರೆ, ಸಮಯ ಮೀರಿದರೆ ಈ ಸಾಲ, ಸಮಸ್ಯೆಯ ಉರುಳಾಗುವುದರಲ್ಲಿ ಸಂಶಯವಿಲ್ಲ.

Advertisement

ಡಿಜಿಟಲ್‌ ಸಾಲ ಮನೆವರೆಗೂ ಮುಟ್ಟದಿರಲಿ
ಈ ಕತೆ ಇಷ್ಟಕ್ಕೆ ನಿಲ್ಲುವುದಿಲ್ಲ. ಪಾವತಿ ಮಾಡಲು ಇನ್ನಷ್ಟು ವಿಳಂಬವಾದರೆ, ಈ ಸಂಸ್ಥೆಗಳು ನಿಮ್ಮ ಸಾಲದ ಖಾತೆಯನ್ನು ಬಂದ್‌ ಮಾಡಿ ಬಾಕಿ ವಸೂಲಿಗೆ ರಿಕವರಿ ಏಜೆನ್ಸಿಯನ್ನು ನಿಮ್ಮ ಮನೆ ಬಾಗಿಲಿಗೆ ಕಳುಹಿಸಬಹುದು. ಬ್ಯಾಂಕಿಂಗ್‌ ಭಾಷೆಯಲ್ಲಿ “ರಿಕವರಿ ಏಜೆನ್ಸಿ’ ಎಂದರೆ, ಗುತ್ತಿಗೆಯ ಆಧಾರದಲ್ಲಿ ಸಾಲವನ್ನು ವಸೂಲಿ ಮಾಡಿಕೊಡುವ ಸಂಸ್ಥೆ. ಸರಳ ಭಾಷೆಯಲ್ಲಿ ಅದೊಂದು ಬಲಿಷ್ಠ ಪಡೆ. ಕೇವಲ ನಾಲಗೆ ಬಲ ಮತ್ತು ಸ್ನಾಯು ಬಲಗಳನ್ನು ಉಪಯೋಗಿಸಿ ಸಾಲವನ್ನು ಬಡ್ಡಿ ಸಮೇತ ವಸೂಲಿ ಮಾಡುವ ಪ್ರವೀಣರು. ರಿಕವರಿ ಏಜೆನ್ಸಿಯ ಕೈಗೆ ಸಿಕ್ಕಿ ಹಾಕಿಕೊಂಡರೆ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ!

ಯಾವುದೇ ವ್ಯವಹಾರವನ್ನು ಕುತ್ತಿಗೆಯ ಮಟ್ಟಕ್ಕೆ ತಂದುಕೊಳ್ಳಬಾರದು. ನೇರಾ ನೇರ ದುಡ್ಡು ಪಾವತಿ ಮಾಡಿ ಸರಕು ಕೊಳ್ಳಿರಿ. ಸಾಲದಲ್ಲಿ ಕೊಂಡರೂ ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಿ. ಆದರೆ, ಇಲ್ಲಿ ಸಮಸ್ಯೆ ಏನೆಂದರೆ, ಹಲವರಿಗೆ ಸಾಲ ಎಂಬುದು ಒಂದು ಚಟ ಮತ್ತು ಅದನ್ನು ಸಮಯಕ್ಕೆ ಸರಿಯಾಗಿ ಸಂದಾಯ ಮಾಡುವ ಶಿಸ್ತು ಅವರಿಗಿರುವುದಿಲ್ಲ. ಅತಿಯಾಗಿ ಪ್ರಲೋಭನೆಗೆ ಬಲಿಯಾಗುವವರ ವ್ಯಥೆ ಇದು.

-ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next