Advertisement

24/7 ಚಾನಲ್‌ಗ‌ಳ ಕುರಿತು ದಿಗಂತ್‌ ಬಹಿರಂಗ ಪತ್ರ!

01:00 PM Oct 06, 2017 | |

ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವುಲು ಅವರ ಮೊಮ್ಮಗ ಗೀತಾ ವಿಷ್ಣು ಕಾರು ಅಪಘಾತ ಪ್ರಕರಣದಲ್ಲಿ ದಿಗಂತ್‌, ಪ್ರಜ್ವಲ್‌ ಮತ್ತು ಅಂಬರೀಶ್‌ ಅವರ ಮಗ ಅಭಿಷೇಕ್‌ ಹೆಸರುಗಳನ್ನು ನ್ಯೂಸ್‌ ಚಾನಲ್‌ಗ‌ಳು ಸೇರಿಸಿದ್ದಿಕ್ಕೆ ಚಿತ್ರರಂಗದ ವಲಯದಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಖುದ್ದು ನಟ ದಿಗಂತ್‌ ಮತ್ತು ಪ್ರಜ್ವಲ್‌ ಈ ಪ್ರಕರಣದಲ್ಲಿ ತಮ್ಮ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Advertisement

ಈ ಪ್ರಕರಣದಲ್ಲಿ ಪ್ರಜ್ವಲ್‌ ಮತ್ತು ದಿಗಂತ್‌ ಅವರ ಕೈವಾಡವಿಲ್ಲ ಮತ್ತು ಅವರು ಅಪಘಾತದ ಸಂದರ್ಭದಲ್ಲಿ ಅಲ್ಲಿರಲೇ ಇಲ್ಲ ಎಂದು ಹೇಳುವ ಮೂಲಕ ಇಡೀ ಪ್ರಕರಣ ಬಿದ್ದು ಹೋಗಿದೆ. ಆದರೆ, ದಿಗಂತ್‌ಗೆ ಮಾತ್ರ ಸುದ್ದಿ ವಾಹಿನಿಗಳ ಬಗ್ಗೆ ಅಪಾರವಾದ ಬೇಸರವಿದ್ದಂತಿದೆ. ಸುಖಾಸುಮ್ಮನೆ ತಮ್ಮ ಹೆಸರನ್ನು ಪ್ರಕರಣದಲ್ಲಿ ಎಳೆದು ತಂದಿದ್ದರ ಬಗ್ಗೆ ನೋವಿದೆ. ಈ ಕುರಿತು ಅವರೊಂದು ಪತ್ರ ಬರೆದಿದ್ದಾರೆ. ಆ ಪತ್ರದ ಸಾರಾಂಶ ಹೀಗಿದೆ …

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು …

ಹಳೆಯ ಜನಪ್ರಿಯ “ಪುಣ್ಯಕೋಟಿ’ ಹಾಡೊಂದರ ಸಾಲುಗಳಿವು. ಈ ಸಾಲುಗಳನ್ನು ಸ್ವಲ್ಪ ಬದಲಾಯಿಸಿ ಪ್ರಚಲಿತ 24/7 ಟಿವಿ ಚಾನಲ್‌ಗ‌ಳಿಗೆ ಹೊಂದಿಸುವುದಾದರೆ …

ಮಿಥ್ಯವೇ ನಮ್ಮ ತಾಯಿ ತಂದೆ
ಟಿ.ಆರ್‌.ಪಿಯೇ ನಮ್ಮ ಬಂಧು ಬಳಗ
ಅಪ್ಪಿ ತಪ್ಪಿ ಸತ್ಯ ತೋರಿಸಿದರೆ ಮೆಚ್ಚಲಾರರು ನಗಳು …

Advertisement

ಬಹಳ ವರ್ಷಗಳ ಕಾಲ ಮುದ್ರಣ ಮಾಧ್ಯಮಗಳೊಂದಿಗೆ ನಾವೆಲ್ಲಾ ಬೆಸೆದು ಹೋಗಿದ್ದೆವು. ಅದಕ್ಕೆ ಕಾರಣ ಅವರು ಬಸಿದು ನೀಡುತ್ತಿದ್ದ ಸತ್ಯಕ್ಕೆ ಹತ್ತಿರವಾದ ಸುದ್ದಿಗಳು. ದಿನ ಪತ್ರಿಕೆಗಳು ಓದಿ ದಿನ ಆರಂಭಿಸುತ್ತಿದ್ದ ಸುವರ್ಣ ದಿನಗಳವು. ಸುದ್ದಿ ಮಾಧ್ಯಮವು “ಬರಹಗಾರನ ಮಾಧ್ಯಮ’ವಾಗಿದ್ದ ಕಾಲಘಟ್ಟವದು. ಲೇಖನಿಯು ಖಡ್ಗಕ್ಕಿಂತ ಹರಿತವಾದುದು ಎಂಬ ಗಾದೆ ಸರಿಯಾಗಿ ಅರ್ಥವಾಗಿದ್ದೇ ಆ ಕಾಲದಲ್ಲಿ.

ಆಗ ಪತ್ರಿಕೆಗಳಿಗೆ ಕೊಂಚ ಪೈಪೋಟಿ ನೀಡುತ್ತಿದ್ದ ಸಾಧನವೆಂದರೆ ಮರದ ಸ್ಟಾಂಡಿನಲ್ಲಿ ಮಿರಮಿರ ಮಿನುಗುತ್ತಿದ್ದ ಕೆಲವೇ ಕೆಲವು ನಿಮಿಷಗಳ ಕಾಲ ಗುನುಗುತ್ತಿದ್ದ ಪುಟ್ಟ ರೇಡಿಯೋ ಮಾತ್ರ. ಆ ಪುಟ್ಟ ಸಾಧನದಲ್ಲಿ ನೆಟ್ಟ ಕಿವಿಗೆ ಕೇಳುತ್ತಿದ್ದ ಮುಂಜಾನೆಯ “ಪ್ರದೇಶ ಸಮಾಚಾರ’, ನಂತರದ “ವಾರ್ತಾ ಪ್ರಸಾರ’ ಎಲ್ಲರಲ್ಲೂ ಸೋಜಿಗ ಹುಟ್ಟಿಸಿದ್ದು ಮಾತ್ರ ಸುಳ್ಳಲ್ಲ. ಏಕೆಂದರೆ, ಬಾನುಲಿಯಲ್ಲಿ ಬರುತ್ತಿದ್ದ ಸಮಾಚಾರ ಇವತ್ತಿನ ಹಾಗೆ ಸತ್ಯವಲ್ಲದ ಸುಳ್ಳಲ್ಲ.

ಆದರೆ, ಇತ್ತೀಚಿನ ಕಾಲದಲ್ಲಿ ಧುತ್ತೆಂದು ದಾಂಗುಡಿ ಇಟ್ಟಿದ್ದೇ ಈ 24/7 ಚಾನಲ್‌ಗ‌ಳು. ಅಬ್ಬರಿಸಿ ಬೊಬ್ಬಿರಿಯುತ್ತಾ ಬಂದ ಇವುಗಳು ಮಾಧ್ಯಮ ಲೋಕದಲ್ಲಿ ಕ್ರಾಂತಿ ಎಬ್ಬಿಸುತ್ತವೆ ಎಂದು ಭಾವಿಸಲಾಗಿತ್ತು. ಆದರೆ, ಸೆನ್ಸೇಷನ್‌ಗೊಸ್ಕರ ಸುಳ್ಳನ್ನು ಸತ್ಯವೆಂದು ಬಿಂಬಿಸಿ ವಾಂತಿ ಬರಿಸುತ್ತವೆ ಎಂಬ ಕಿಂಚಿತ್‌ ಕಲ್ಪನೆ ಕೂಡಾ ಇರಲಿಲ್ಲ. ಇದನ್ನೆಲ್ಲಾ ಹೇಳುತ್ತಿರುವುದಕ್ಕೆ ಬಲವಾದ ಕಾರಣವೂಂದಿದೆ. ಕಾಲವೂ ಒದಗಿ ಬಂದಿದೆ.

ಇತ್ತೀಚೆಗೆ ನಡೆದ ಅಪಘಾತದ ಪ್ರಕರಣವೊಂದರಲ್ಲಿ ನನ್ನ ಹೆಸರನ್ನು ಸೋ ಕಾಲ್ಡ್‌ ಉತ್ತಮ ಸಮಾಜಕ್ಕಾಗೇ ಹುಟ್ಟಿರುವ ಜನರ ಆಸ್ತಿ ಎನಿಸಿರುವ 24/7ಗಳು ಎಳೆದು ತೇಜೋವಧೆ ಮಾಡುವುದರ ಜೊತೆಗೆ ಬಲಿಪಶುವನ್ನಾಗಿ ಕೂಡಾ ಮಾಡಿದವು. ಕನಕಪುರ ಬಳಿ ಚಲನಚಿತ್ರವೊಂದರ ಶೂಟಿಂಗ್‌ ಮುಗಿಸಿ ತಡರಾತ್ರಿ ನಿದ್ರೆಗೆ ಜಾರಿದ ನನ್ನನ್ನು ಈ 24/7ಗಳು ಬೆಳ್ಳಂಬೆಳಿಗ್ಗೆ ಬಿಟ್ಟು ಬಿಡದೆ ಬಡಿದೆಬ್ಬಿಸಿದ್ದವು.

ಅದಾಗಲೇ ಗೆಳೆಯರ ಕರೆಗಳಿಂದ ನನ್ನ ಮೊಬೈಲ್‌ ಹಿತೈಶಿಗಳ ಕರೆಯಿಂದ ನನ್ನಪ್ಪನ ಮೊಬೈಲ್‌ ರಿಂಗಣಿಸುತ್ತಿದ್ದವು. ಅಪ್ಪ ಟಿವಿ ಕಡೆಗೊಮ್ಮೆ ಹಾಗೂ ನನ್ನ ಕಡೆಗೊಮ್ಮೆ ನೋಡಿದರು. ಎಲ್ಲಾ ಚಾನಲ್‌ಗ‌ಳಲ್ಲಿ ನನ್ನ ಬಗ್ಗೆ ಪ್ರಕಟಿಸುತ್ತಿದ್ದ ಸುದ್ದಿಯನ್ನು ನೋಡಿದ ಕೂಡಲೆ ನನಗೆ ವಸ್ತುಸ್ಥಿತಿ ಮನವರಿಕೆಯಾಯಿತು. ಅಪಘಾತದಲ್ಲಿ ಕೇಳಿಬಂದಿರುವ ಹೆಸರಿನ ವ್ಯಕ್ತಿ ನನ್ನ ಗೆಳೆಯನಾಗಿದ್ದ.

ಪ್ರತ್ಯಕ್ಷದರ್ಶಿಗಳು ಕೊಟ್ಟಿರುವ ಕಣ್ತಪ್ಪಿನ ಮಾಹಿತಿಯಿಂದಲೋ ಚಾನಲ್‌ರವರ ತಪ್ಪು ಗ್ರಹಿಕೆಯಿಂದಲೋ ನನ್ನ ಹಾಗೂ ಸ್ನೇಹಿತ ಪ್ರಜ್ವಲ್‌ರವರ ಹೆಸರು ಕೇಳಿ ಬಂದಿದೆ ಎಂದು ಭಾವಿಸಿ ಚಾನಲ್‌ಗ‌ಳಿಗೆ ಖುದ್ದಾಗಿ ಸ್ಪಷ್ಟೀಕರಣ ನೀಡಿದೆ. ದೂರದ ಗೋವಾದಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಿ ಬಳಲಿದ್ದರೂ ಪ್ರಜ್ವಲ್‌ ಅದಾಗಲೇ “ಫೇಸ್‌ಬುಕ್‌ ಲೈವ್‌’ಗೆ ಬಂದು ಪ್ರಕರಣದಲ್ಲಿ ನಾವಿಲ್ಲ ಎಂಬುದನ್ನು ಅರ್ಥವಾಗುವ ಸರಳ ಪದಗಳಲ್ಲಿ ಸೃಷ್ಟೀಕರಿಸಿದ್ದರು.

ಇದು ಇಲ್ಲಿಗೆ ಮುಗಿದ ವಿಷಯ ಎಂದು ಭಾವಿಸಿ ಧೃತಿಗೆಡದಂತೆ ಅಪ್ಪ-ಅಮ್ಮನಿಗೆ ಧೈರ್ಯ ಹೇಳಿ ಶೂಟಿಂಗ್‌ಗೆ ತೆರಳಿದ್ದೆ. ಘಟನೆಯನ್ನು ಮರೆತು ನಾನು ಶೂಟಿಂಗ್‌ನಲ್ಲಿ ತೊಡಗಿಸಿಕೊಂಡರೂ ಈ 24/7 ಚಾನಲ್‌ಗ‌ಳು ಮಾತ್ರ ಮರೆಯಲಿಲ್ಲ. ಒಂದೇ ಸಮನೆ ನನ್ನ ಹೆಸರು ಬಳಸಿಕೊಂಡು ಶಾಕಿಂಗ್‌ ನ್ಯೂಸ್‌, ಬ್ರೇಕಿಂಗ್‌ ನ್ಯೂಸ್‌ ಕೊಡತಡೊಗಿದವು. ಅದುವರೆಗೂ ಅಸಹನೆ ಅಷ್ಟೇ ಹುಟ್ಟಿಸಿದ್ದ 24/7ಗಳ ನಡೆ ಅನಂತರ ಅಸಹ್ಯ ಹುಟ್ಟಿಸತೊಡಗಿತ್ತು.

ಸೋ ಕಾಲ್ಡ್‌ ನಂಬರ್‌ 1 ಚಾನಲ್‌ವೊಂದು “ನಟ ಮತ್ತು ನಶೆ’ ಎಂಬ ರೈತಪರ, ಜನಪರ, ದೇಶಪರ ಕಾರ್ಯಕ್ರಮ ಮಾಡಿ ನನ್ನನ್ನ “ನಟೋರಿಯಸ್‌’ ಎಂದು ಹೇಳಿತು. ಗಾಂಧಿವಾದಿಯೊಬ್ಬರು ನಡೆಸುತ್ತಿರುವ ಚಾನಲ್‌ವೊಂದು “ಗಾಂಧಿ ಜಯಂತಿ’ ದಿನ ಹಿಂಬದಲಿಯಲ್ಲಿ ಗಾಂಧಿ ಫೋಟೋ ಹಾಕಿಕೊಂಡು “ಗಾಂಧಿ ತತ್ವ’ದ ಬಗ್ಗೆ ಕಾರ್ಯಕ್ರಮ ಮಾಡುವ ಬದಲು ಹಿಂಬದಿ ಸ್ಕ್ರೀನ್‌ನಲ್ಲಿ ನನ್ನ ಫೋಟೋ ಹಾಕಿಕೊಂಡು ಪ್ಯಾನಲ್‌ ಡಿಸ್ಕಶನ್‌ ಏರ್ಪಡಿಸಿ ಪಬ್ಲಿಕ್‌ ಮುಂದೆ ತನ್ನ ಟಿ.ಆರ.³ ಒರಿಯೆಂಟೆಡ್‌ ಕಮರ್ಷಿಯಲ್‌ ಬುದ್ಧಿ ತೋರಿಸಿತು.

ನನ್ನದು ಶಿವಮೊಗ್ಗ ಎಂಬ ಸಭ್ಯರ ಊರು. ಸಾವಿರಾರು ಮಕ್ಕಳಿಗೆ ಪಾಠ ಮಾಡುವ ವೃತ್ತಿ ನನ್ನ ತಂದೆಯದು. ಅಂತಹ ಸುಸಂಸ್ಕೃತ ಕುಟುಂಬದಲ್ಲಿ ಬೆಳೆದ ನನಗೆ “ನಟೋರಿಯಸ್‌’ ಎಂದಾಗ ಬಹಳ ನೋವಾಗುತ್ತದೆ. ನನ್ನ ಕುಟುಂಬಕ್ಕೆ ನನಗಿಂಥ ಹೆಚ್ಚು ದುಃಖವಾಗುತ್ತದೆ. ಸಿನಿಮಾ ರಂಗ ನನಗೆ ಹೂವಿನ ಹಾಸಿಗೆ ಏನೂ ಆಗಿರಲಿಲ್ಲ. ಮೊಸರನ್ನ ತಿನ್ನಲು ದುಡ್ಡಿಲ್ಲದೆ ಹಸಿವಿನಿಂದ ಮಲಗಿರುವ ದಿನಗಳೂ ಕೂಡಾ ಇವೆ.

ನಿದ್ದೆಯಿಲ್ಲದೆ ಕಳೆದ ರಾತ್ರಿಗಳು ಇವೆ. ಪರಿಶ್ರಮ ಪಡೆದೆ ನಾನು ನಟನಾಗಿಲ್ಲ. ನನ್ನನ್ನು 24/7ಗಳು “ಟೇಕನ್‌ ಫಾರ ಗ್ರಾಂಟೆಡ್‌’ ಆಗಿ ತೆಗೆದುಕೊಂಡರೂ, ನನಗೆ ಗೊತ್ತಿಲ್ಲದೆ ನನ್ನ ಎಂಗೇಜ್‌ಮೆಂಟ್‌ ಡೇಟ್‌ ಫಿಕ್ಸ್‌ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಅದಕ್ಕೆ ಕಾರಣ ಮೂಲತಃ ನಾನು ಕ್ರೀಡಾಪಟು. ಎಲ್ಲವನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ಮನಸ್ಸು ನನ್ನದು. ಇದನ್ನೇ ನನ್ನ ದೌರ್ಬಲ್ಯ ಎಂದು ಇವರು ಭಾವಿಸಿದರೇನೋ ಅನ್ನಿಸುತ್ತಿದೆ.

ಆಶ್ಚರ್ಯದ ಸಂಗತಿಯೆಂದರೆ ನಾನು ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಿದಾಗ ಅದು ದೊಡ್ಡ ಸುದ್ದಿಯಾಗಲೇ ಇಲ್ಲ. ಕುಗ್ರಾಮವೊಂದರಲ್ಲಿ ಇರುವ ಆ ಶಾಲೆಯ ಕಾರ್ಯಕ್ರಮಗಳಿಗೆ ಹೋಗಿ ಮಾತನಾಡಿದ ಒಂದು ತುಣುಕು ಕೂಡಾ ಭಿತ್ತರವಾಗಲೇ ಇಲ್ಲ. ಆದರೆ, ನಾನು ಭಾಗಿಯೇ ಆಗದ ವಿಷಯವೊಂದು ಬಹುವಾಗಿ ಸುದ್ದಿಯಾಗುತ್ತಿದೆ, ಅಲ್ಲ ಸುದ್ದಿ ಮಾಡುತ್ತಿದ್ದಾರೆ. ನನಗೆ ಕೊಡದೆ ಇರುವ ಪೊಲೀಸ್‌ ನೋಟೀಸ್‌ ನನ್ನ ಪರವಾಗಿ 24/7ಗಳ ಅಡ್ರೆಸ್‌ಗೆ ಹೋಗುತ್ತದೆ.

ಟಿ.ಆರ್‌.ಪಿಗೋಸ್ಕರ ಶೂನ್ಯ ಸತ್ಯವನ್ನು ಮಾನ್ಯ ಮಾಡುವ ಹಳದಿಗಣ್ಣಿನ ಹಳದಿ ಪತ್ರಿಕೋದ್ಯಮ ಪ್ರಚಲಿತದಲ್ಲಿ ಸುದ್ದಿ ಮಾಡುತ್ತಿದೆ. ಒಟ್ಟಾರೆ “ಇಲ್ಲದ್ದನ್ನು ಇದೆ’ ಎಂದು, “ಇರುವುದನ್ನು ಇಲ್ಲ ಎಂದು’ ಸೊಗಸಾಗಿ ನಂಬಿಕೆ ಬರುವ ರೀತಿ ಹೇಳುವ ಖ್ಯಾತಿ ಇವರುಗಳದು. ಇದು ಹೀಗೇ ಮುಂದುವರೆದರೆ ಇದರ ಬಿಸಿ ಪ್ರತಿಯೊಬ್ಬ ಸೆಲೆಬ್ರಿಟಿಗೂ ತಟ್ಟದೇ ಇರುವುದಿಲ್ಲ. ಏಕೆಂದರೆ, 24/7 ಚಾನಲ್‌ಗ‌ಳು ಕಮಿಟ್‌ಮೆಂಟ್‌ಗಿಂತ ಹೆಚ್ಚಾಗಿ ಪೆಪ್ಪರ್‌ವೆುಂಟ್‌ ರೀತಿಯ ಸುದ್ದಿಗಳು ಮೊರೆ ಹೋಗುತ್ತಿವೆ.

ಕೊನೆ ಮಾತು: ಕೋಟಿ ಕೋಟಿ ಟಿ.ಆರ್‌.ಪಿ ಗಳಿಸುವ ಭರದಲ್ಲಿ 24/7ಗಳು ಪುಣ್ಯಕೋಟಿ ಹಾಡು ಮರೆತರೆಂದು ಭಾಸವಾಗುತ್ತಿದೆ. ವೈಯಕ್ತಿಕವಾಗಿ ಕಡೆಗಣಿಸುವುದಕ್ಕಿಂತ ಒಟ್ಟಾಗಿ ಕೊನೆಗಾಣಿಸುವುದೇ ಸೂಕ್ತ. ನೀವೇನಂತೀರಿ …

ಇಂತಿ… ದಿಗಂತ್‌

Advertisement

Udayavani is now on Telegram. Click here to join our channel and stay updated with the latest news.

Next