Advertisement

ಬದನೆ ಬಗೆಬಗೆ

11:09 PM Sep 19, 2019 | Team Udayavani |

ಬದನೆ ಹೆಚ್ಚಾಗಿ ಉಪಯೋಗದಲ್ಲಿರುವ ಸಾಮಾನ್ಯ ತರಕಾರಿ. ಬದನೆ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಬದನೆಕಾಯಿ ಎಂದರೆ ಮುಖ ಸಿಂಡರಿಸುವವರೂ ಕೆಲವರು ಇದ್ದಾರೆ. ಬದನೆಯನ್ನು ಕಾಯಿಸಿ, ಬೇಯಿಸಿ, ಹಬೆಯಲ್ಲಿರಿಸಿ, ಫ್ರೈ ಮಾಡಿಕೊಂಡು- ಹೀಗೆ ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸಬಹುದು.

Advertisement

ಸುಟ್ಟ ಬದನೆ ಚಟ್ನಿ
ಬೇಕಾಗುವ ಸಾಮಗ್ರಿ: ಬದನೆಕಾಯಿ- 1 ದೊಡ್ಡದು, ಈರುಳ್ಳಿ- 1, ಟೊಮೆಟೋ- 1, ಹಸಿಮೆಣಸು- 2, ಸಾಸಿವೆ- 1/2 ಚಮಚ, ಉದ್ದಿನಬೇಳೆ- 1 ಚಮಚ, ಬೆಳ್ಳುಳ್ಳಿ 2-3 ಎಸಳು, ಅರಸಿನ ಚಿಟಿಕೆ, ಇಂಗು, ಬೇಕಿದ್ದರೆ ಸ್ವಲ್ಪ ಬೆಲ್ಲದಹುಡಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಖಾರಪುಡಿ- 1/2 ಚಮಚ, ರುಚಿಗೆ ಬೇಕಷ್ಟು ಉಪ್ಪು, ಎಣ್ಣೆ.

ತಯಾರಿಸುವ ವಿಧಾನ: ಬದನೆಯನ್ನು ಚೆನ್ನಾಗಿ ತೊಳೆದು ಎಣ್ಣೆ ಹಚ್ಚಿ ಕೆಂಡ ಇಲ್ಲವೇ ಗ್ಯಾಸ್‌ ಸ್ವವ್‌ ಮೇಲಿಟ್ಟು ಸುಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ, ಕೆಂಪಗಾಗುವವರೆಗೆ ಹುರಿದು ಈರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ಹುರಿದುಕೊಂಡು ಟೊಮೆಟೋ ಚೂರುಗಳನ್ನು ಸೇರಿಸಿ ಮತ್ತೆ ಬೇಯಿಸಿ. ಇದಕ್ಕೆ ಉಪ್ಪು ಅರಸಿನ, ಖಾರಪುಡಿ, ಇಂಗು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಸುಟ್ಟ ಬದನೆಯ ಸಿಪ್ಪೆತೆಗೆದು ಹಿಚುಕಿ ಸೇರಿಸಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ ಮುಚ್ಚಿಟ್ಟರೆ ಪರಿಮಳಭರಿತ ಚಟ್ನಿ ತಯಾರು.

ಬದನೆ ತವಾ ಪ್ರೈ
ಬೇಕಾಗುವ ಸಾಮಗ್ರಿ: ಬದನೆ- 2, ಬಾಂಬೆ ರವೆ- 1 ಕಪ್‌, ಅಕ್ಕಿಹಿಟ್ಟು – 3 ಚಮಚ, ಅರಸಿನ- 1/4 ಚಮಚ, ಹಿಂಗು, ಮೆಣಸಿನ ಪುಡಿ- 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ.

ತಯಾರಿಸುವ ವಿಧಾನ: ಬದನೆಯನ್ನು ದುಂಡಗಾಗಿ ಕತ್ತರಿಸಿ ನೀರಿನಲ್ಲಿ ಹಾಕಿಡಿ. ನಂತರ ಬಾಂಬೆರವೆ, ಅಕ್ಕಿಹಿಟ್ಟು, ಖಾರಪುಡಿ, ಅರಸಿನ, ಉಪ್ಪು, ಸ್ವಲ್ಪ ನೀರು ಸೇರಿಸಿ ದಪ್ಪಗೆ ಮಿಶ್ರಣ ತಯಾರಿಸಿ. ಇದರಲ್ಲಿ ಬದನೆ ಹೋಳುಗಳನ್ನು ಮುಳುಗಿಸಿ ತೆಗೆದು ತವಾದ ಮೇಲೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಮುಚ್ಚಿ ಎರಡೂ ಬದಿ ಬೇಯಿಸಿದರೆ ರುಚಿಕರ ತವಾ ಫ್ರೈ ತಯಾರು. ಇದು ಊಟಕ್ಕೆ ಚೆನ್ನಾಗಿರುತ್ತದೆ.

Advertisement

ಬದನೆ ವಾಂಗಿಬಾತ್‌
ಬೇಕಾಗುವ ಸಾಮಗ್ರಿ: ಬದನೆ- 2, ಅನ್ನ- 2 ಕಪ್‌, ಹಸಿ ಬಟಾಣಿ- 1/4 ಕಪ್‌, ನೀರುಳ್ಳಿ- 1 ದೊಡ್ಡದು, ಕಡಲೆಬೇಳೆ- 1 ಚಮಚ, ಕರಿಬೇವು-ಪಲಾವು ಎಲೆ, ಹುಣಸೆಹಣ್ಣು- 1/2 ನಿಂಬೆಗಾತ್ರ, ವಾಂಗಿಬಾತ್‌ ಪುಡಿ, ರುಚಿಗೆ ಬೇಕಷ್ಟು ಉಪ್ಪು.

ವಾಂಗಿಬಾತ್‌ ಪುಡಿಗೆ: ಎಣ್ಣೆಯಲ್ಲಿ ಹುರಿದ ಕೊತ್ತಂಬರಿ ಬೀಜ- 4 ಚಮಚ, ಉದ್ದಿನಬೇಳೆ-ಕಡಲೆಬೇಳೆ 2 ಚಮಚ, ಮೆಂತೆ- 1/4 ಚಮಚ, ಚಕ್ಕೆ-ಲವಂಗ-ಏಲಕ್ಕಿ, ಒಣಮೆಣಸು- 5, ಸ್ವಲ್ಪ ಹಿಂಗು. (ಎಲ್ಲವನ್ನೂ ಹುರಿದು ಪುಡಿಮಾಡಬೇಕು)

ತಯಾರಿಸುವ ವಿಧಾನ: ಬದನೆಯನ್ನು ಉದ್ದಕ್ಕೆ ಹೆಚ್ಚಿ ಕೊಂಡು ನೀರಿಗೆ ಹಾಕಿಡಿ. ಬಾಣಲೆಯಲ್ಲಿ ಎಣ್ಣೆಹಾಕಿ ಕಡಲೆಬೇಳೆ, ಪಲಾವು ಎಲೆ, ಕರಿಬೇವು ಹಾಕಿ ಕೆಂಪಗೆ ಹುರಿಯಿರಿ. ನಂತರ ಈರುಳ್ಳಿ ಹಾಗೂ ಬಟಾಣಿ ಸೇರಿಸಿ ಹುರಿಯಿರಿ. ನಂತರ ಬದನೆ ಹೋಳುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಉಪ್ಪು ಸೇರಿಸಿ. ಬದನೆ ಬೆಂದಾಗ ಹುಳಿನೀರು ಮತ್ತು ವಾಂಗಿಬಾತ್‌ ಪುಡಿ ಹಾಕಿ ಎಣ್ಣೆ ಬಿಡುವವರೆಗೆ ಪ್ರೈ ಮಾಡಿ. ನಂತರ ಅನ್ನ ಸೇರಿಸಿ ಚೆನ್ನಾಗಿ ಕಲಸಿಕೊಂಡರೆ ರುಚಿಕರ ವಾಂಗಿಬಾತ್‌ ರೆಡಿ.

ಬದನೆ ಹುಳಿ
ಬೇಕಾಗುವ ಸಾಮಗ್ರಿ: ಬದನೆ- 2 ದೊಡ್ಡದು, ತೊಗರಿಬೇಳೆ- 1 ಕಪ್‌, ಹಸಿಮೆಣಸು- 3, ಹುಳಿ- ನಿಂಬೆಹಣ್ಣು ಗಾತ್ರ, ಅರಸಿನ- 1/2 ಚಮಚ, ಇಂಗು, ಸಾಸಿವೆ, ಕೊತ್ತಂಬರಿಸೊಪ್ಪು , ಕರಿಬೇವು, ರುಚಿಗೆ ತಕ್ಕ ಉಪ್ಪು.

ತಯಾರಿಸುವ ವಿಧಾನ: ಬದನೆಯನ್ನು ಹೆಚ್ಚಿ ನೀರಿನಲ್ಲಿ ಹಾಕಿಡಿ. ತೊಗರಿಬೇಳೆಗೆ ಅರಸಿನ, ಇಂಗು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ ಸಿಡಿಸಿ ಚಿಟಿಕೆ ಅರಸಿನ, ಹಸಿಮೆಣಸು ಹಾಕಿ ಕೈಯಾಡಿಸಿ. ನಂತರ ಬದನೆ ಹೋಳುಗಳನ್ನು ಹಾಕಿ ಹುಳಿರಸ, ಉಪ್ಪು , ಬೆಲ್ಲ ಸೇರಿಸಿ ಒಗ್ಗರಣೆಯಲ್ಲಿ ಚೆನ್ನಾಗಿ ಬೇಯಿಸಿ. ಬೆಂದ ಬಳಿಕ ಬೇಯಿಸಿಟ್ಟ ಬೇಳೆ, ಹಸಿಮೆಣಸು, ಕರಿಬೇವು, ಖಾರಪುಡಿ ಸೇರಿಸಿ. ಕೊನೆಗೆ ಸಾಸಿವೆ, ಇಂಗು ಸೇರಿಸಿ ಒಗ್ಗರಿಸಿದರೆ ರುಚಿರುಚಿಯಾದ ಹುಳಿ ಊಟಕ್ಕೆ ತಯಾರು.

ಎಸ್‌.ಎನ್‌.

Advertisement

Udayavani is now on Telegram. Click here to join our channel and stay updated with the latest news.

Next