Advertisement
ನಡು ಕರ್ನಾಟಕದ ಜೀವನದಿ ತುಂಗಭದ್ರೆಯಲ್ಲಿ ಪ್ರವಾಹ ಬಂದಾಗ ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬಾಲರಾಜ್ ಘಾಟ್, ಹರಿಹರದ ಕಾಳಿದಾಸ ನಗರ, ಬೆಂಕಿನಗರ ಮತ್ತು ಗಂಗಾನಗರ ಮುಳುಗಡೆಯಾಗುತ್ತವೆ. ಮಳೆಗಾಲ ಬಂದಿಂತೆಂದರೆ ಈ ಪ್ರದೇಶದ ಜನರಿಗೆ ತೊಂದರೆ ಕಟ್ಟಿಟ್ಟಿ ಬುತ್ತಿ. ಇನ್ನು ಭಾರೀ ಮಳೆಯಾದರೆ ಯಾವುದೇ ಕ್ಷಣದಲ್ಲಾದರೂ ತುಂಗಭದ್ರೆ ಉಕ್ಕಿ ಹರಿಯುವ ಆತಂಕದಿಂದ ಹಗಲು-ರಾತ್ರಿ ಮನೆ, ಮಕ್ಕಳು, ದವಸ-ಧಾನ್ಯ ಕಾಯುತ್ತಾ ಇರಬೇಕು. ಪ್ರತಿ ಕ್ಷಣ ಅನುಭವಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಸ್ಥಳಾಂತರವಾಗಿದ್ದು, ಇನ್ನೂ ಕನ್ನಡಿಯೊಳಗಿನ ಗಂಟಾಗಿಯೇ ಉಳಿದುಬಿಟ್ಟಿದೆ.
Related Articles
Advertisement
ಮಹಜೇನಹಳ್ಳಿ ವ್ಯಾಪ್ತಿಯ ಕಾಳಿದಾಸನಗರ, ಬೆಂಕಿನಗರ, ಗಂಗಾನಗರ ನಿವಾಸಿಗಳಿಗೆ ಒಂದರೆಡು ದಶಕಗಳ ಹಿಂದೆ ಆಶ್ರಯ ಯೋಜನೆಯಡಿ ಮನೆಗಳ ವಿತರಣೆ ಮಾಡಲಾಗಿದೆ. ಕೆಲವರು ಅಲ್ಲಿ ವಾಸಿಸುತ್ತಿದ್ದಾರೆ. ಕುಟುಂಬಗಳಲ್ಲಿನ ಸದಸ್ಯರ ಸಂಖ್ಯೆ ಹೆಚ್ಚಳದಿಂದ ಅನೇಕ ಕುಟುಂಬಗಳು ಮುಳುಗಡೆಯ ಸಮಸ್ಯೆಯ ಬಗ್ಗೆ ಗೊತ್ತಿದ್ದರೂ ಜೀವನ ಸಾಗಿಸಬೇಕಾದ ಅನಿವಾರ್ಯತೆಯಿಂದ ಕಾಳಿದಾಸನಗರ, ಬೆಂಕಿನಗರ, ಗಂಗಾನಗರಗಳಲ್ಲಿ ವಾಸ ಮಾಡುತ್ತಿವೆ. ಆಶ್ರಯ ಯೋಜನೆ ಹೊರತುಪಡಿಸಿದರೆ ಈವರೆಗೆ ಕಾಳಿದಾಸನಗರ, ಬೆಂಕಿನಗರ, ಗಂಗಾನಗರಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಾಳಾಂತರಿಸುವ ಶಾಶ್ವತ ಯೋಜನೆ ರೂಪುಗೊಂಡಿಲ್ಲ. ಹಾಗಾಗಿ ಸಮಸ್ಯೆ ತಪ್ಪಿಲ್ಲ. ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳದೇ ಹೋದಲ್ಲಿ ಸಮಸ್ಯೆ ಬಗೆಹರಿಯುವುದೂ ಇಲ್ಲ.
ಕಾಳಿದಾಸನಗರ, ಬೆಂಕಿನಗರ, ಗಂಗಾನಗರಗಳಿಗೆ ನುಗ್ಗುವ ದೇವರಬೆಳಕರೆಗೆ ಪಿಕಪ್ ಡ್ಯಾಂ ನೀರು ತಡೆಯಲು 8 ಕೋಟಿ ರೂ. ಅನುದಾನದಲ್ಲಿ ತಡೆಗೋಡೆ ನಿರ್ಮಾಣದ ಯೋಜನೆ ಇದೆ. ಮಳೆಗಾಲದಲ್ಲಿ ಮುಳುಗಡೆಯಾಗಬಹುದಾದ ಮನೆಗಳನ್ನು ಗುರುತಿಸಿ ಶಾಶ್ವತ ಪರಿಹಾರ ಒದಗಿಸುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸುವ ಹಂತದಲ್ಲಿದೆ. ತಡೆಗೋಡೆಗೆ ಅಗತ್ಯ ಅನುದಾನ, ಪ್ರಸ್ತಾವನೆಗೆ ಸರ್ಕಾರ ಒಪ್ಪಿದರೆ ಕಾಳಿದಾಸನಗರ, ಬೆಂಕಿನಗರ, ಗಂಗಾನಗರದ ಜನರ ಸಮಸ್ಯೆ ಬಗೆಹರಿಯಲಿದೆ. ಅಲ್ಲಿಯವರೆಗೆ ಸಮಸ್ಯೆ ಎದುರಿಸಲೇಬೇಕಾಗುತ್ತದೆ.
ಒಟ್ಟಿನಲ್ಲಿ ಮಳೆಗಾಲದಲ್ಲಿ ಮುಳುಗಡೆಯಾಗುವ ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸುವುದು ತುರ್ತು ಅಗತ್ಯ.
ಪಾಳ್ಯ, ಗುತ್ತೂರು ಸೇಫ್
ಪ್ರತಿ ವರ್ಷ ಮಳೆಗಾಲದಲ್ಲಿನ ಪ್ರವಾಹ, ಮುಳುಗಡೆಯಿಂದ ತೊಂದರೆಗೊಳಗಾಗುತ್ತಿದ್ದ ಹರಿಹರ ಸಮೀಪದ ಗುತ್ತೂರಿನ ಕೆಲ ಭಾಗ, ತಾಲೂಕಿನ ಪಾಳ್ಯ ಗ್ರಾಮದ ಜನರು ಈಗ ಸುರಕ್ಷಿತ ಪ್ರದೇಶದಲ್ಲಿ ವಾಸ ಮಾಡುವಂತಾಗಿದೆ. ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ‘ಆಸರೆ’ ಯೋಜನೆಯಡಿ ಮಳೆಗಾಲದಲ್ಲಿನ ಪ್ರವಾಹ, ಮುಳುಗಡೆಯಾಗುವ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರಿಂದ ಪಾಳ್ಯ, ಗುತ್ತೂರು ಜನರು ಮಳೆಗಾಲದಲ್ಲಿ ಎದುರಿಸುತ್ತಿದ್ದ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ. ಹೊನ್ನಾಳಿಯ ಬಾಲರಾಜ್ ಘಾಟ್, ಹರಿಹರದ ಕಾಳಿದಾಸನಗರ, ಬೆಂಕಿನಗರ, ಗಂಗಾನಗರ ಪ್ರದೇಶದ ಜನರು ಅದೇ ರೀತಿಯ ಶಾಶ್ವತ ಪರಿಹಾರ ದೊರಕುವ ನಿರೀಕ್ಷೆಯಲ್ಲಿದ್ದಾರೆ.
-ರಾ. ರವಿಬಾಬು