Advertisement

Dandeli ಸುಗಮ ಸಂಚಾರಕ್ಕೆ ಸಂಕಷ್ಟ; ನಡುರಸ್ತೆಯಲ್ಲಿ ಮಲಗಿದ ಬಿಡಾಡಿ‌‌ ದನಕರುಗಳು

09:24 PM Jan 05, 2024 | Team Udayavani |

ದಾಂಡೇಲಿ: ನಗರದಲ್ಲಿ ದಿನದಿಂದ ದಿನಕ್ಕೆ ಬಿಡಾಡಿ ದನಕರುಗಳ ಸಂಖ್ಯೆಗಳು ಏರಿಕೆಯಾಗಿ ಬಹುದೊಡ್ಡ ಸಮಸ್ಯೆಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲೆ ಬಿಡಾಡಿ‌ ದನಕರುಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವುದು ಮಾತ್ರವಲ್ಲದೇ ನಡುರಸ್ತೆಯಲ್ಲೆ ಮಲಗುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗತೊಡಗಿದೆ.

Advertisement

ಪ್ರತಿದಿನವೂ ಬಿಡಾಡಿ ದನ ಕರುಗಳ ಹಾವಳಿಯಿಂದಾಗಿ ಅಪಘಾತಗಳು ನಡೆಯುವಂತಾಗಿದೆ. ಸಾಕಷ್ಟು ಬಾರಿ ದ್ವಿಚಕ್ರ ವಾಹನ ಸವಾರರು ಬಿದ್ದು ಕೈ, ಕಾಲು ಗಾಯ ಮಾಡಿಕೊಂಡಿರುವ ಘಟನೆಗಳಿಗೆ ಲೆಕ್ಕವೆ ಇಲ್ಲ. ಶುಕ್ರವಾರ ರಾತ್ರಿಯೂ ಬಿಡಾಡಿ ದನವನ್ನು ರಕ್ಷಿಸಲು ಹೋಗಿ ಟ್ರಕ್ಕೊಂದು ಸಿ ಸಿ ಕ್ಯಾಮೆರಾವಿರುವ ಕಂಬಕ್ಕೆ ಡಿಕ್ಕಿ ಹೊಡೆದು ದಂಡ ಕಟ್ಟಿಸಿಕೊಂಡ ಘಟನೆ ಮಾಸುವ ಮುನ್ನವೆ ಶನಿವಾರ ಅದೇ ಕೆ.ಸಿ ವೃತದ ಹತ್ತಿರ ನಡು ರಸ್ತೆಯಲ್ಲಿ ಸರತಿಯ ಸಾಲಿನಲ್ಲಿ ಬಿಡಾಡಿ ದನಕರುಗಳು ವಾಹನ ಸವಾರರನ್ನು ಚಿರ ನಿದ್ರೆಗೆ ಕಳುಹಿಸುವ ನಿರ್ಧಾರ ಮಾಡಿದಂತೆ ಮಲಗಿತ್ತು.

ನಗರದಲ್ಲಿ ಏರುತ್ತಿರುವ ಬಿಡಾಡಿ ದನಕರುಗಳನ್ನ ಹಿಡಿದು ಹಳಿಯಾಳ ತಾಲೂಕಿನ ದುಸಗಿಯಲ್ಲಿರುವ ಗೋಶಾಲೆಗೆ ಕಳುಹಿಸುವ ಬಗ್ಗೆ ನಗರಸಭೆ ಚಿಂತನೆಯನ್ನು‌ ನಡೆಸಿತ್ತು. ನಗರ ಸಭೆಯ ಚಿಂತನೆಯನ್ನು ಮತ್ತೆ ಮುನ್ನಲೆಗೆ ತರುವ ನಿಟ್ಟಿನಲ್ಲಿ ಬಿಡಾಡಿ ದನಕರುಗಳು ನಡು ರಸ್ತೆಯಲ್ಲಿ ಮಲಗಿರಬಹುದೇ ಎಂಬ ಚರ್ಚೆಗೆ ಕಾರಣವಾದಂತಿದೆ ಬಿಡಾಡಿ‌ ದನಕರುಗಳು ಮಲಗಿರುವ ದೃಶ್ಯ.

ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ಇನ್ನಾದರೂ ನಗರಸಭೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯವರು ತ್ವರಿತ ಕ್ರಮವನ್ನು ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next