Advertisement

ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಕಠಿಣ ಕ್ರಮ

06:44 AM Jan 29, 2019 | Team Udayavani |

ಬೆಂಗಳೂರು: ನಗರದಲ್ಲಿ ಕೈಗೆತ್ತಿಕೊಳ್ಳುವ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ವಿನಾಕಾರಣ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಶಂಕರಮಠ ವಾರ್ಡ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಬ್ಯಾಡ್ಮಿಂಟನ್‌ ಕೋರ್ಟ್‌, ಟೆನ್ನಿಸ್‌ ರೂಫ್, ಬಿಬಿಎಂಪಿ ಕಚೇರಿ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಹೆಬ್ಟಾಳ ರಸ್ತೆಯಲ್ಲಿ ನಿತ್ಯ ಗಂಟೆಗಟ್ಟಲೇ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಜನರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. 

ನಗರದಲ್ಲಿ 25 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎರಡು ಎಲಿವೇಟೆಡ್‌ ಕಾರಿಡಾರ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಉಕ್ಕಿನ ಸೇತುವೆ ನಿರ್ಮಾಣಕ್ಕೆ ಕೆಲವರು ಮಾತ್ರವೇ ವಿರೋಧಿಸುತ್ತಿದ್ದಾರೆ. ಇದು ಸಹ ಒಂದು ರೀತಿಯ ಸೇತುವೆಯೇ ಆಗಿದೆ. ಯಾರೋ ಕೆಲವರು ವಿರೋಧಿಸಿದರು ಎಂದು ಯೋಜನೆ ಕೈಬಿಡಲು ಸಾಧ್ಯವಿಲ್ಲ. ಸುಖಾಸುಮ್ಮನೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸಲು ಮುಂದಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. 

ಯೋಜನೆಯನ್ನು ಪಾರದರ್ಶಕವಾಗಿ ಜನರ ಮುಂದಿಡುತ್ತೇವೆ. ಇದರಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಜನರೇ ಹೇಳಲಿ. ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆಗೆ ಸಿದ್ಧವಾಗಿದ್ದು, ಯೋಜನೆಯಲ್ಲಿ ಏನೇ ವ್ಯಾತ್ಯಾಸವಿದ್ದರೂ ಜನರು ಸರ್ಕಾರದ ಗಮನಕ್ಕೆ ತರಲಿ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅದು ಬಿಟ್ಟು ಸುಮ್ಮನೇ ಎಲ್ಲ ಯೋಜನೆಗಳಿಗೆ ವಿರೋಧಿಸುವುದು ಸರಿಯಲ್ಲ ಎಂದರು.

ಅಭಿವೃದ್ಧಿಗೆ ನೀಲನಕ್ಷೆ: ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದು, ಮುಂದಿನ ಐದು ವರ್ಷದೊಳಗಾಗಿ ಜಾರಿಗೊಳಿಸಬೇಕಾದ ಯೋಜನೆಗಳ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವುದರಿಂದ 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮುಂದಿನ ಐದು ವರ್ಷದೊಳಗೆ ಕುಡಿಯುವ ನೀರಿನ ವ್ಯವಸ್ಥೆ, ಉದ್ಯಾನಗಳು, ಎಲಿವೇಟೆಡ್‌ ಕಾರಿಡಾರ್‌ ರಸ್ತೆ, ಸುಸಜ್ಜಿತ ಮೇಲ್ಸೇತುವೆಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಲನಕ್ಷೆ ರೂಪಿಸಲಾಗುವುದು ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಮೇಯರ್‌ ಗಂಗಾಂಬಿಕೆ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಉಪಮೇಯರ್‌ ಭದ್ರೇಗೌಡ, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

ತೆರಿಗೆ ಪಾವತಿಸದಿದ್ದರೆ ಹೇಗೆ?: “ಬಿಬಿಎಂಪಿಗೆ ಕೆಲವು ವರ್ಷಗಳಿಂದ 2,500 ಕೋಟಿ ರೂ. ಆಸ್ತಿ ತೆರಿಗೆಯನ್ನು ನಾಗರಿಕರು ಬಾಕಿ ಉಳಿಸಿಕೊಂಡಿದ್ದಾರೆ. ನಾಗರಿಕರು ಆಸ್ತಿ ತೆರಿಗೆ ಪಾವತಿಸದಿದ್ದರೆ ಪಾಲಿಕೆ ಆಡಳಿತ ನಡೆಸುವುದು ಹೇಗೆ? ಹೀಗಾಗಿ ತೆರಿಗೆ ಬಾಕಿ ಉಳಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದ್ದೇವೆ.

ಪಾಲಿಕೆಗೆ ತೆರಿಗೆ ಬಾಕಿ ಉಳಿಸಿಕೊಂಡವರ ಪೈಕಿ ಹೆಚ್ಚಿನವರು ಉದ್ಯಮಿಗಳಿದ್ದು, ಒಂದು ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತದ ತೆರಿಗೆಯನ್ನು ಹಲವು ವರ್ಷಗಳಿಂದ ಪಾವತಿಸಿಲ್ಲ. ಹೀಗಾಗಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮೊದಲ ನೂರು ಜನರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು,’ ಎಂದು ಡಾ.ಜಿ.ಪರಮೇಶ್ವರ್‌ ಇದೇ ವೇಳೆ ಎಚ್ಚರಿಕೆ ನೀಡಿದರು.

ನಗರದಲ್ಲಿ ಮೊದಲ ಬಾರಿಗೆ ಸಿಸಿ ಕ್ಯಾಮೆರಾ ನಿರ್ವಹಣೆ ಕೇಂದ್ರ ಸ್ಥಾಪಿಸಲಾಗಿದೆ. ಜತೆಗೆ ಮೈದಾನ, ಉದ್ಯಾನ ಸೇರಿ ಪ್ರಮುಖ ಭಾಗಗಳಲ್ಲಿ ಉಚಿತ ವೈ-ಫೈ ಸೇವೆ ಕಲ್ಪಿಸಲಾಗುವುದು. ಎಂ.ಜಿ.ನಗರದ 236 ಕೊಳೆಗೇರಿ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು.
-ಎಂ.ಶಿವರಾಜು, ಶಂಕರಮಠ ಪಾಲಿಕೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next