ಉರ್ವಸ್ಟೋರ್: ಸ್ವತ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ “ಸ್ವತ್ಛಮೇವ ಜಯತೆ’ ಎಂಬ ಘೋಷವಾಕ್ಯದಡಿ ದ.ಕ. ಜಿಲ್ಲೆಯಾದ್ಯಂತ ಜೂ. 5ರಿಂದ 30ರವರೆಗೆ ನಡೆಯಲಿರುವ ವೈಜ್ಞಾನಿಕ ಘನ ತ್ಯಾಜ್ಯ ವಿಲೇವಾರಿ- ನಿರ್ವಹಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಆರ್ ಸೆಲ್ವಮಣಿ ಮಾತನಾಡಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮಾರ್ಗದರ್ಶನದಂತೆ ತಾಲೂಕು ಮತ್ತು ಗ್ರಾಮ ಪಂಚಾಯತ್ ಹಂತದಲ್ಲಿ ವಿವಿಧ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಂದು ಗ್ರಾಮದಲ್ಲೂ ಸ್ವತ್ಛತೆಯ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿದರು.
ಮೇ 25ರೊಳಗೆ ಜಿ.ಪಂ., ತಾ.ಪಂ., ಗ್ರಾ.ಪಂ. ಹಂತದಲ್ಲಿ ಶೌಚಾಲಯ ಬಳಕೆ, ಮಕ್ಕಳ ಮಲ ಸೂಕ್ತ ವಿಲೇವಾರಿ ಮತ್ತು ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ ಪ್ರತಿ ಗ್ರಾಮದಲ್ಲಿ 5 ಗೋಡೆ ಬರಹಗಳನ್ನು ಬರೆಸಬೇಕು. ಸ್ವತ್ಛಮೇವ ಜಯತೆ ಆಂದೋಲನದ ಮಾಹಿತಿಯನ್ನು ಒಳಗೊಂಡ ಪೋಸ್ಟರ್‌ಗಳನ್ನು ಮುದ್ರಣ ಮಾಡಿ ಗ್ರಾಮ ಪಂಚಾಯತ್‌ಗಳಿಗೆ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.
ಜೂ. 5ರಿಂದ ಒಂದು ತಿಂಗಳ ಕಾಲ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 2ರಿಂದ 3 ಸ್ವತ್ಛತಾ ರಥಗಳನ್ನು ನಿಯೋಜಿಸಿ ಸ್ವತ್ಛಮೇವ ಜಯತೆ ಆಂದೋಲನದ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. 6ರಂದು ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಹಸಿ ಕಸ/ ಒಣ ಕಸ ವಿಂಗಡಣೆ ಮತ್ತು ನಿರ್ವಹಣೆ, ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ಜೂ. 9ರಿಂದ 10ರವರೆಗೆ ಶಾಲಾ ಕಾಲೇಜುಗಳಲ್ಲಿ ಸ್ವತ್ಛತೆ ಕುರಿತು ಚರ್ಚಾ ಸ್ವರ್ಧೆ, ಪ್ರಬಂಧ ಸ್ಪರ್ಧೆ, 11ರಿಂದ 14ರವರೆಗೆ ಗ್ರಾಮೀಣ ಸಮುದಾಯಕ್ಕೆ ಎರಡು ಗುಂಡಿಯ ಉಪಯೋಗ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳ ಆಯೋಜನೆ, 15ರಿಂದ 21ರವರೆಗೆ ವಿಶೇಷ ಕಾರ್ಯಾದೇಶ ವಿತರಣೆ ಅಭಿಯಾನ, 21ರಿಂದ 25ರವರೆಗೆ ಶೌಚಾಲಯ ಬಳಕೆ ಅಭಿಯಾನ ಮತ್ತು ವಿಶೇಷ ಕೈ ತೊಳೆಯುವ ಅಭಿಯಾನ ನಡೆಯಲಿದೆ. ಕೈ ತೊಳೆಯುವ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾದದ್ದು ಎಂದರು.
ಜೂ. 27ರಂದು ಗ್ರಾ.ಪಂ. ಹಂತದಲ್ಲಿ ಸ್ವತ್ಛಮೇವ ಜಯತೇ ಆಂದೋಲನದ ಪ್ರಯುಕ್ತ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಿ, ಕುಡಿಯುವ ನೀರು, ನೈರ್ಮಲ್ಯ, ಘನ ತ್ಯಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ ಕುರಿತು ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
30ರಂದು ಸಮಾರೋಪ ಕಾರ್ಯಕ್ರಮ ನಡೆಸಲಾಗುವುದು. ವಿಶೇಷ ಕಾರ್ಯಕ್ರಮ ಹಮ್ಮಿಕೊಂಡವರಿಗೆ ಪ್ರಶಸ್ತಿ ನೀಡುವ ಯೋಚನೆ ಇದೆ ಎಂದು ಡಾ| ಸೆಲ್ವಮಣಿ ತಿಳಿಸಿದರು.
ಉಪಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು.