Advertisement

ಪಕ್ಷಿ-ಸಸ್ಯ ಸಂಕುಲ ಉಳಿವಿಗೆ ವಿಭಿನ್ನ ಪ್ರಯತ್ನ

06:31 AM Mar 16, 2019 | Team Udayavani |

ಬೆಳ್ತಂಗಡಿ: ಪಕ್ಷಿ ಸಂಕುಲ-ಸಸ್ಯ ಸಂಕುಲ ಉಳಿಸುವ ನಿಟ್ಟಿನಲ್ಲಿ 4 ವರ್ಷಗಳಿಂದ ಗುಬ್ಬಚ್ಚಿ ಗೂಡು ಎಂಬ ಕಲ್ಪನೆ ಮೂಲಕ ದ.ಕ. ಜಿಲ್ಲೆಯ ವಿವಿಧ ಶಾಲೆ- ಅಂಗನವಾಡಿ ಕೇಂದ್ರಗಳಿಗೆ ತೆರಳಿ ವಿಭಿನ್ನ ಪ್ರಯತ್ನ ಮಾಡುತ್ತಿರುವ ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಗ್ರಾಮ ನಿವಾಸಿ ದಂಪತಿ ಇದೇ ಮೊದಲ ಬಾರಿಗೆ ಉತ್ತರ ಭಾರತಕ್ಕೆ ತೆರಳಿ ಕರಪತ್ರದ ಮೂಲಕ ಗುಬ್ಬಚ್ಚಿ ಗೂಡು ಅಭಿಯಾನ ನಡೆಸಿದ್ದಾರೆ.

Advertisement

ಉತ್ತರದಲ್ಲಿ ಗುಬ್ಬಚ್ಚಿ ಗೂಡು
ನಿತ್ಯಾನಂದ ಅವರು ಉತ್ತರ ಭಾರತದ ಕೆಲವೊಂದು ಹಳ್ಳಿಗಳಿಗೆ ಭೇಟಿ ನೀಡಿ ಕರಪತ್ರದ ಮೂಲಕ ಪಕ್ಷಿ-ಸಸ್ಯ ಸಂಕುಲದ ಸಂರಕ್ಷಣೆ ಪಾಠ ಮಾಡಿದ್ದಾರೆ. ಹಲವು ವರ್ಷಗಳಿಂದ ಏಕಾಂಗಿಯಾಗಿ ಅಭಿಯಾನ ನಡೆಸುತ್ತಿದ್ದ ನಿತ್ಯಾನಂದ ಶೆಟ್ಟಿ ಅವರಿಗೆ ಪತ್ನಿ ರಮ್ಯಾ ನಿತ್ಯಾನಂದ ಅವರೂ ಸಾಥ್‌ ನೀಡಿದ್ದಾರೆ. ಆಗ್ರಾ, ಹಿಮಾಚಲ ಪ್ರದೇಶದ ಮನಾಲಿ, ಜಮ್ಮು ಕಾಶ್ಮೀರದ ಹಳ್ಳಿಗಳು, ಹರಿದ್ವಾರ, ಪಂಜಾಬ್‌ ನ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ. ಇವರ ಈ ವಿಭಿನ್ನ ಪ್ರಯತ್ನ ವನ್ನು ಕಂಡು ಅಲ್ಲಿನ ಜನತೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕನ್ನಡದಲ್ಲಿ ಗುಬ್ಬಚ್ಚಿ ಗೂಡು ಕರಪತ್ರ ಹಂಚುತ್ತಿದ್ದ ನಿತ್ಯಾನಂದ ಅವರು ಉತ್ತರ ಭಾರತಕ್ಕೆ ತೆರಳುವ ಉದ್ದೇಶದಿಂದಲೇ ಇಂಗ್ಲಿಷ್‌ನಲ್ಲಿ ಕರಪತ್ರ ಮುದ್ರಿಸಿದ್ದಾರೆ. ಜತೆಗೆ ಹಿಂದಿಯಲ್ಲಿ ತಮ್ಮ ಉದ್ದೇಶವನ್ನು ಅಲ್ಲಿನ ಜನರಿಗೆ ವಿವರಿಸಿದ್ದಾರೆ. ಅಲ್ಲಿನ ಜನರೂ ಉತ್ತಮ ಸಹಕಾರ ನೀಡಿದ್ದು, ಅದನ್ನು ವೀಡಿಯೋ ಮೂಲಕ ದಾಖಲಿಸಿಕೊಂಡಿದ್ದಾರೆ.

ಶಾಲೆ-ಅಂಗನವಾಡಿ ಅಭಿಯಾನ
ಮುಂದಿನ ಜನಾಂಗಕ್ಕೆ ಪಕ್ಷಿ-ಸಸ್ಯ ಸಂಕುಲ ಉಳಿಸುವ ಜಾಗೃತಿ ಮೂಡಿಸಬೇಕು ಎಂದು ನಿತ್ಯಾನಂದ ಶೆಟ್ಟಿ ಅವರು ಶಾಲೆ, ಅಂಗನವಾಡಿ ಕೇಂದ್ರಗಳಿಗೆ ತೆರಳಿ ಅಭಿಯಾನ ಆರಂಭಿಸಿದರು. ಈಗಾಗಲೇ ಸುಮಾರು 100ಕ್ಕೂ ಅಧಿಕ ಕಡೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಯಾವುದೇ ಫಲಾಪೇಕ್ಷೆ ಬಯಸದೆ ಪರಿಸರ ಪಾಠ ಮಾಡುತ್ತಿದ್ದಾರೆ. ಅಲ್ಲಿ ಪಕ್ಷಿಗಳಿಗೆ ನೀರು, ಆಹಾರ ಇಡುವುದಕ್ಕೆ ಉಚಿತವಾಗಿ ಮಡಕೆ ನೀಡುತ್ತಾರೆ. ಕೆಲವೊಂದು ಕಡೆಗಳಲ್ಲಿ ಧಾನ್ಯವನ್ನೂ ನೀಡಿ ಬಂದಿದ್ದಾರೆ.

ಕರಪತ್ರ ಹಂಚಿ ಅಭಿಯಾನ
ನಾನು ಕಳೆದ ಹಲವು ವರ್ಷಗಳಿಂದ ಪಕ್ಷಿ-ಸಸ್ಯ ಸಂಕುಲದ ರಕ್ಷಣೆ ನಮ್ಮ ಹೊಣೆ ಎಂಬ ನಿಟ್ಟಿನಲ್ಲಿ ಒಂದು ವಿಭಿನ್ನ ಪ್ರಯತ್ನ ಮಾಡುತ್ತಿದ್ದು, ಪ್ರಸ್ತುತ ಪಯಣದ ಜತೆಗೆ ಗುಬ್ಬಚ್ಚಿ ಗೂಡು ಎಂಬ ಕಲ್ಪನೆಯಲ್ಲಿ ಉತ್ತರ ಭಾರತದಲ್ಲಿ ಅಭಿಯಾನ ನಡೆಸಿದ್ದೇವೆ. ಇಲ್ಲಿ ಕರಪತ್ರ ಮಾತ್ರ ಹಂಚಿದ್ದು, ಸಾಗಾಟಕ್ಕೆ ಕಷ್ಟವಾಗುವುದರಿಂದ ಮಡಕೆ ಕೊಂಡುಹೋಗಿಲ್ಲ. ಜನತೆ ಉತ್ತಮವಾಗಿ ಬೆಂಬಲಿಸಿದ್ದಾರೆ.
-ನಿತ್ಯಾನಂದ ಶೆಟ್ಟಿ,
 ಗುಬ್ಬಚ್ಚಿ ಗೂಡು ರೂವಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next