Advertisement

ಲಿಂಗಾಯತ-ವೀರಶೈವ ಗೊಂದಲ ನಿವಾರಿಸಲಿ

11:30 AM Aug 11, 2017 | Sharanya Alva |

ಬೈಲಹೊಂಗಲ: ವೀರಶೈವ ಹಾಗೂ ಲಿಂಗಾಯತ ಆಚಾರ, ವಿಚಾರಗಳಲ್ಲಿ ಭೇದವಿಲ್ಲದಿರುವುದರಿಂದ ಎರಡೂ ಒಂದೇ
ಆಗಿವೆ. ಆದ್ದರಿಂದ ಸಮಾಜದಲ್ಲಿ ಉದ್ಭವಿಸಿರುವ ಗೊಂದಲ ನಿವಾರಣೆಗೆ ಎಲ್ಲ ಗುರು ವಿರಕ್ತ ಪರಂಪರೆಯ ಮಠಾ ಧೀಶರು
ಸಂಘಟಿತರಾಗಿ ಪ್ರಯತ್ನ ನಡೆಸಬೇಕೆಂದು ಸವದತ್ತಿ ತಾಲೂಕು ಮುರಗೋಡದಲ್ಲಿ ಗುರುವಾರ ನಡೆದ ಮಠಾಧೀಶರ ಸಭೆಯಲ್ಲಿ ಅಭಿಪ್ರಾಯಪಡಲಾಯಿತು. ಈ ಕುರಿತು ಐದು ಪ್ರಮುಖ ನಿರ್ಣಯಗಳನ್ನು ಕೂಡ ಸ್ವೀಕರಿಸಲಾಯಿತು.

Advertisement

ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಯತ್ನಿಸುತ್ತಿರುವ ಸರ್ಕಾರ ಮತ್ತು ಕೆಲವರ ಹೇಳಿಕೆ ಮಹಾಪರಾಧವಾಗಿದ್ದು, ಇದರಿಂದ ಮಠಾ ಧೀಶರಿಗೆ ಬೇಸರವಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಗುರು ವಿರಕ್ತರ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಜಾತಿ, ಭೇದ ಹಾಗೂ ರಾಜಕೀಯ ಹಿತಾಸಕ್ತಿ ಮರೆತು ಸಮಾಜದ ಹಿತ ಪರಿಗಣಿಸಿ ಚಿಂತನೆ ನಡೆಸಬೇಕು.

ಅಖೀಲಭಾರತ ವೀರಶೈವ ಮಠಾ ಧೀಶರು ಒಂದೆಡೆ ಸೇರಿ ವಿವಾದಾತ್ಮಕ ಹೇಳಿಕೆ ಬಿಟ್ಟು ಪ್ರಕರಣಕ್ಕೆ ತೆರೆ ಎಳೆಯಬೇಕು ಎಂದರು. ಮುರಗೋಡದ ಮಹಾಂತ ದುರದುಂಡಿಶ್ವರ ಮಠದ ನೀಲಕಂಠ ಸ್ವಾಮೀಜಿ, ನಿವೃತ್ತ ಹಿರಿಯ ಪೋಲಿಸ್‌ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ
ಮಾತನಾಡಿ, ಲಿಂಗಾಯತ ವೀರಶೈವ ಒಂದೇ ನಾಣ್ಯದ ಎರಡು ಮುಖಗಳಂತೆ. ರಾಜಕೀಯ ಲಾಭಕ್ಕಾಗಿ ಗ್ರಾಮೀಣ ಮಠಗಳನ್ನು ಗೊಂದಲಕ್ಕೆ ಸಿಲುಕಿಸಲಾಗುತ್ತಿದೆ. ಆದ್ದರಿಂದ ಎಲ್ಲ ಮಠಾಧೀಶರೂ ಸಂಘಟಿತ ಚಿಂತನೆ ನಡೆಸಬೇಕೆಂದು ಹೇಳಿದರು. ಸವದತ್ತಿಯ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಲಿಂಗಾಯತ ವೀರಶೈವ ಧರ್ಮವು ಹರಪ್ಪ ಮತ್ತು ಮೊಹೆಂಜೋದಾರ ಕಾಲದಿಂದಲೂ ಬಂದಿದೆ.
ಬಸವಣ್ಣವರ ವಚನದಲ್ಲಿ ಇವನ್ಯಾರವ ಇವನ್ಯಾರ ಇವ ನಮ್ಮವ ಎಂದೆನಿಸಯ್ನಾ ಎಂಬ ವಚನದಂತೆ ವೀರಶೈವ ಲಿಂಗಾಯತ ಬೇರೆಯಾಗಲು ಸಾಧ್ಯವಿಲ್ಲವೆಂದರು.

5 ಪ್ರಮುಖ ನಿರ್ಣಯಗಳು 
1 ವೀರಶೈವ ಲಿಂಗಾಯತ ಆಚಾರ ವಿಚಾರಗಳಲ್ಲಿ ಭೇದವಿಲ್ಲದಿರುವುದರಿಂದ ಎರಡೂ ಒಂದೇ.

Advertisement

2 ಸಮಾಜದಲ್ಲಿ ಉಂಟಾಗಿರುವ ಗೊಂದಲ ನಿವಾರಣೆ ಮಾಡಲು ಎಲ್ಲ ಗುರು ವಿರಕ್ತ ಪರಂಪರೆಯ ಮಠಾ ಧೀಶರು ಸಮಾಜ ಬಾಂಧವರಿಗೆ ವೀರಶೈವ ಹಾಗೂ ಲಿಂಗಾಯತರಲ್ಲಿ ಏಕತೆ ಮೂಡಿಸಿ ಸಂಘಟಿಸುವುದು.

3 ಸಮಾಜ ದೇವೋಭವ ಎಂಬ ಮಂತ್ರ ಪಠಿಸುತ್ತಾ ಸಮಾಜ ಸಂಘಟನೆಗಾಗಿ 1904ರಲ್ಲಿ ಹಾನಗಲ್ಲ ಕುಮಾರಸ್ವಾಮಿಗಳು ಸ್ಥಾಪಿಸಿರುವ ಅಖೀಲ ಭಾರತ ವೀರಶೈವ ಮಹಾಸಭೆಯ ಮೂಲ ಆಶಯಗಳನ್ನು ಕಾರ್ಯಗತಗೊಳàಸಲು ಮಠಾಧಿಧೀಶರು ಸಂಘಟಿತ ಪ್ರಯತ್ನ ಮಾಡಬೇಕು.

4 ಪ್ರತಿವರ್ಷ ಸಮಾಜದ ಸಂಘಟನೆ ಮತ್ತು  ಮಾರ್ಗದರ್ಶನ ಮಾಡಲು ಗುರು ವಿರಕ್ತ ಮಠಾಧೀಶರ ಸಮಾವೇಶ ಹಮ್ಮಿಕೊಳ್ಳಬೇಕು.

5 ರಾಜ್ಯ ಸರ್ಕಾರ ವೀರಶೈವ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕೆಂದು ಸರ್ಕಾರಕ್ಕೆ ಆಗ್ರಹ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next