Advertisement

ಚೀತಾ ಮತ್ತು ಚಿರತೆಯ ನಡುವಿನ ವ್ಯತ್ಯಾಸಗಳೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

01:26 PM Sep 17, 2022 | Team Udayavani |

ಮಣಿಪಾಲ: ಭಾರತದ ನೆಲದಿಂದ ಕಣ್ಮರೆಯಾಗಿದ್ದ ಚೀತಾಗಳು ಮತ್ತೆ ಬಂದಿದೆ. ಸುಮಾರು 70 ವರ್ಷಗಳ ಬಳಿಕ ಭಾರತದಲ್ಲಿ ಚೀತಾಗಳು ಹೆಜ್ಜೆಯಿಟ್ಟಿವೆ. ಮಧ್ಯ ಪ್ರದೇಶದ ಕುನೋ ಅರಣ್ಯ ಪ್ರದೇಶದಲ್ಲಿ ಈ ದೊಡ್ಡ ಬೆಕ್ಕುಗಳ ಸಾಮ್ರಾಜ್ಯ ಆರಂಭವಾಗಿದೆ. ಇಂದು ನೈಜೀರಿಯಾದಿಂದ ಎಂಟು ಚೀತಾಗಳನ್ನು ವಿಶೇಷ ವಿಮಾನ ಮೂಲಕ ತಂದು, ಕುನೋ ಅರಣ್ಯದಲ್ಲಿ ಬಿಡಲಾಗಿದೆ.

Advertisement

ಸಾಮಾನ್ಯವಾಗಿ ಬಹುತೇಕರು ಚಿರತೆ ಮತ್ತು ಚೀತಾಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ. ಇನ್ನು ಹಲವರಂತೂ ಚಿರತೆ ಮತ್ತು ಚೀತಾಗಳು ಒಂದೇ ಪ್ರಾಣಿ ಎಂದು ತಿಳಿದವರಿದ್ದಾರೆ. ಆದರೆ ಈ ಎರಡು ದೊಡ್ಡ ಬೆಕ್ಕುಗಳ ನಡುವೆ ಕೆಲವು ವ್ಯತ್ಯಾಸಗಳಿವೆ.

ಗಾತ್ರ ಮತ್ತು ದೇಹದ ಆಕಾರ

ಚೀತಾಗಳು ಚಿರತೆಗಳಿಗಿಂತ ಎತ್ತರವಾಗಿರುತ್ತವೆ, ಆದರೆ ಚೀತಾಗಳು ಹೆಚ್ಚು ತೆಳ್ಳಗಿನ ಪ್ರಾಣಿಗಳಾಗಿವೆ. 72 ಕೆಜಿಯಷ್ಟು ತೂಕವಿರುವ ಚೀತಾಗಳ ದೇಹದ ಆಕಾರವನ್ನು ವೇಗದ ಅನುಕೂಲಕ್ಕಾಗಿ ನಿರ್ಮಿಸಲಾಗಿದೆ. ಭೂಮಿಯ ಮೇಲಿನ ಅತ್ಯಂತ ವೇಗದ ಪ್ರಾಣಿಯಾಗಿರುವ ಚೀತಾಗಳು ಗಂಟೆಗೆ 120 ಕಿಮೀ ವೇಗದಿಂದ ಓಡಬಲ್ಲವು.

ದೊಡ್ಡ ಬೆಕ್ಕುಗಳಲ್ಲಿ ಸಣ್ಣ ಪ್ರಾಣಿಗಳಾಗಿರುವ ಚಿರತೆಗಳು ಸರಿಸುಮಾರು 100 ಕೆ.ಜಿ ವರೆಗೆ ತೂಗುತ್ತವೆ. ಚಿರತೆಗಳು ಚೀತಾಗಳಿಗಿಂತ ಹೆಚ್ಚು ಶಕ್ತಿಯುತವಾಗಿದ್ದು, ಬೇಟೆಯಾಡಲು ಮತ್ತು ದಾಳಿ ಮಾಡಲು ತಮ್ಮ ಶಕ್ತಿಯನ್ನು ಬಲವಾಗಿ ಬಳಸುತ್ತವೆ. ನಂತರ ತಮ್ಮ ಊಟವನ್ನು ರಕ್ಷಿಸಲು ಮರವನ್ನೂ ಹತ್ತುತ್ತವೆ.

Advertisement

ಇವುಗಳ ನಡುವೆ ಶಕ್ತಿ ಸಾಮರ್ಥ್ಯದ ಕುರಿತಾದ ಮತ್ತೊಂದು ವ್ಯತ್ಯಾಸವೆಂದರೆ ಚಿರತೆಗಳು ತನ್ನ ವ್ಯಾಪ್ತಿ ಪ್ರದೇಶಕ್ಕೆ ಯಾವುದೇ ಚೀತಾ ಬಂದರೆ ಅವುಗಳನ್ನು ಓಡಿಸುತ್ತವೆ.

ಚರ್ಮದ ವ್ಯತ್ಯಾಸ

ಚಿರತೆ ಮತ್ತು ಚೀತಾಗಳ ಚರ್ಮವು ದೂರದಿಂದ ಒಂದೇ ರೀತಿ ಕಂಡರೂ ಹಲವು ಭಿನ್ನತೆಯಿದೆ. ಆದರೆ ಚಿರತೆ ಗುಲಾಬಿ ದಳದಂತಹ ಗುರುತುಗಳನ್ನು ಚರ್ಮದಲ್ಲಿ ಹೊಂದಿದೆ. ಚೀತಾಗಳು ವೃತ್ತಾಕಾರದ ಅಥವಾ ಅಂಡಾಕಾರದ ಚುಕ್ಕೆಯನ್ನು ಚರ್ಮದಲ್ಲಿ ಹೊಂದಿರುತ್ತವೆ.

ಮುಖದ ಗುರುತು

ಚೀತಾ ಮತ್ತು ಚಿರತೆಗಳನ್ನು ಅವುಗಳ ಮುಖದ ಗುರುತುಗಳ ಭಿನ್ನತೆಯಿಂದಲೇ ಪತ್ತೆ ಮಾಡಬಹುದು. ಚೀತಾಗಳ ಮುಖದಲ್ಲಿ ಕಣ್ಣಿನಿಂದ ಬಾಯಿಯವರೆಗೆ ಇಳಿದ ಕಪ್ಪು ಪಟ್ಟಿಯನ್ನು ಕಾಣಬಹುದು. ಇದು ಚಿರತೆಗಳ ಮುಖದಲ್ಲಿ ಇರುವುದಿಲ್ಲ. ಚಿರತೆಗಳ ಮುಖವು ಅವುಗಳ ಉಳಿದ ದೇಹದ ಚರ್ಮದಂತೆ ಪಟ್ಟೆಗಳನ್ನು ಹೊಂದಿರುತ್ತದೆ. ಚೀತಾಗಳು ಅಂಬರ್ ಕಣ್ಣುಗಳನ್ನು ಹೊಂದಿದ್ದರೆ, ಚಿರತೆಗಳು ನೀಲಿ ಅಥವಾ ಹಸಿರು ಬಣ್ಣದ ಕಣ್ಣುಗಳನ್ನು ಹೊಂದಿರುತ್ತವೆ.

ಬಾಲದ ಆಕಾರ

ಚೀತಾ ಮತ್ತು ಚಿರತೆಗಳ ಬಾಲದ ಆಕಾರದಲ್ಲೂ ವ್ಯತ್ಯಾಸವಿದೆ. ತಮ್ಮ ಗುರಿಯನ್ನು ಬೆನ್ನತ್ತುವಾಗ ಚೀತಾಗಳು ತಮ್ಮ ಬಾಲವನ್ನು ಕೌಂಟರ್ ಬ್ಯಾಲನ್ಸ್ ಆಗಿ ಬಳಸುತ್ತವೆ. ಚಿರತೆಗಳು ಕೊಳವೆಯಾಕಾರದ ಬಾಲವನ್ನು ಹೊಂದಿದೆ. ಇವುಗಳು ಮರಗಳಲ್ಲಿ ನಡೆಯುವಾಗ ಸಾಧಾರಣವಾಗಿ ಬಾಲವನ್ನು ಸಮತೋಲನ ಮಾಡಿಕೊಳ್ಳಲು ಬಳಸುತ್ತವೆ.

ಕಾಲುಗಳು

ಚಿರತೆಗಳ ಮುಂಗಾಲುಗಳು ಹಿಂದಿನ ಕಾಲುಗಳಿಂದ ದೊಡ್ಡದಾಗಿರುತ್ತದೆ. ಬೆಕ್ಕುಗಳಂತೆ ಒಳಗೆ ಬಾಗಿದ ಉಗುರುಗಳನ್ನು ಇವು ಹೊಂದಿದ್ದು, ಮರಗಳನ್ನು ಹತ್ತುವಾಗ, ಹೊಡೆದಾಟದ ಸಮಯದಲ್ಲಿ ಅಥವಾ ಬೇಟೆಯ ಮೇಲೆ ಆಕ್ರಮಣ ಮಾಡುವಾಗ ಇವುಗಳನ್ನು ಬಳಸುತ್ತವೆ.

ಚೀತಾಗಳು ವೇಗವಾಗಿ ಓಡಲು ಅನುಕೂಲವಾಗಲೆಂದು ಹಿಂದಿನ ಕಾಲುಗಳು ದೊಡ್ಡದಾಗಿರುತ್ತದೆ. ಚೀತಾಗಳ ಉಗುರುಗಳು ಚಿರತೆಯಷ್ಟು ಒಳಗೆ ಬಾಗಿರುವುದಿಲ್ಲ. ಮಣ್ಣಿನಲ್ಲಿ ಹೆಜ್ಜೆ ಗುರುತು ಬಿದ್ದರೆ ಚೀತಾಗಳ ಉಗುರುಗಳ ಗುರುತನ್ನೂ ನಾವು ಕಾಣಬಹುದು.

ಬೇಟೆಯ ಶೈಲಿ

ಸಾಧಾರಣವಾಗಿ ಬೇಟೆಯಾಡಲು ಚೀತಾಗಳಿಗೆ ದೊಡ್ಡ ಜಾಗದ ಅಗತ್ಯವಿರುತ್ತದೆ. ಹುಲ್ಲುಗಾವಲಿನಂತಹ ಪ್ರದೇಶದಲ್ಲಿ ಚೀತಾಗಳು ಬೇಟೆಯನ್ನು ಬೆನ್ನತ್ತಿ ಹಿಡಿಯುತ್ತದೆ. ಆದರೆ ಚಿರತೆಗಳಿಗೆ ದೊಡ್ಡ ಜಾಗದ ಅವಶ್ಯಕತೆಯಿಲ್ಲ. ಅವುಗಳು ಹೊಂಚುಹಾಕಿ ಬೇಟೆಯಾಡುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next