ಮನುಷ್ಯನ ಬೆಳವಣಿಗೆಗೆ ಆಹಾರ ಪದ್ಧತಿ ಹಾಗೂ ಯೋಗಾಭ್ಯಾಸ ಅತೀ ಮುಖ್ಯವಾದುದು. ಆಹಾರಕ್ಕೂ ಆರೋಗ್ಯಕ್ಕೂ ನಂಟಿದೆ. ಇತ್ತೀಚೆಗಿನ ನಮ್ಮ ಜೀವನ ಕ್ರಮ ನಾವು ಸೇವಿಸುವ ಆಹಾರದ ಮೇಲೆ ಪ್ರಭಾವ ಬೀರಿದೆ. ಗಡಿಬಿಡಿಯ ಜೀವನದಿಂದ ಥಟ್ಟೆಂದು ತಯಾರಿಸುವ ಆಹಾರದ ಕಡೆಗೆ, ಜಂಕ್‌ಪುಡ್ ಕಡೆಗೆ, ಟೆಲಿವಿಷನ್ ನೋಡುತ್ತ ಉಣ್ಣುವುದರ ಕಡೆಗೆ ವಾಲಿದ್ದೇವೆ. ಬಾಯಿ ಇರುವುದೇ ತಿನ್ನುವುದಕ್ಕಾಗಿ ಎನ್ನುವ ಜನರಿದ್ದಾರೆ. ಆದರೆ ನಾಲಿಗೆ ಚಪಲ ಬರೀ ಚಪಲವಾಗದೆ ಅನಾರೋಗ್ಯಕ್ಕೆ ಮೂಲವಾಗಿ ಅವರನ್ನು ರೋಗಿಯನ್ನಾಗಿ ಮಾಡಿ ಬಿಡುತ್ತದೆ. ಅಲ್ಲದೆ ಅಜೀರ್ಣತೆಯಿಂದ ಹಿಡಿದು ಆ್ಯಸಿಡಿಟಿ, ಬೊಜ್ಜು, ಸಕ್ಕರೆಕಾಯಿಲೆ, ಬಿ.ಪಿ., ಕ್ಯಾನ್ಸರ್‌ನಂತಹ ಮಹಾರೋಗಗಳ ತವರೂರಾಗಿ ಬಿಡುತ್ತದೆ ಈ ದೇಹ. ಅದಕ್ಕೆ ಹಿರಿಯರು ಹೇಳುವ ಗಾದೆ ಮಾತುಗಳು ಅರ್ಥಪೂರ್ಣವಾಗಿವೆ; “ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ’.
ಆಹಾರದಲ್ಲಿ ಮೂರು ವಿಧ
ಆಹಾರವನ್ನು ಸಾತ್ವಿಕ, ರಾಜಸಿಕ, ತಾಮಸಿಕ ಗುಂಪುಗಳನ್ನಾಗಿ ವಿಂಗಡಿಸಬಹುದು
ಸಾತ್ವಿಕ ಆಹಾರ ಇದರಲ್ಲಿ ಸಸ್ಯಹಾರಿ ಪ್ರಧಾನವಾಗಿರುತ್ತದೆ. ಆಹಾರದ ಪೌಷ್ಠಿಕಾಂಶ ಘಟಕಗಳಾದ ಕೊಬ್ಬು, ಷಿಷ್ಟಕರ ಪದಾರ್ಥಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ಸೊಪ್ಪು, ತರಕಾರಿ ಮತ್ತು ಹಣ್ಣುಗಳಿಂದ ಕೂಡಿದ್ದು, ಸರಳವಾದ ಪೌಷ್ಠಿಕವಾದ, ಪ್ರಕೃತಿಯಲ್ಲೇ ದೊರೆಯುವಂತಹ ಈ ಆರೋಗ್ಯಕರ ಆಹಾರ ಪದ್ಧತಿಯಿಂದ ಮನುಷ್ಯನ ಜೀವಿತಾವಧಿಯು ಹೆಚ್ಚಾಗುತ್ತದೆ.
ರಾಜಸಿಕ ಆಹಾರ ಹೆಚ್ಚು ಜಿಡ್ಡಾದ ಕರಿದ ಪದಾರ್ಥಗಳಿಂದ ಕೂಡಿದ ಆಹಾರ, ಅತೀ ಹೆಚ್ಚು ಮಸಾಲೆ ಪದಾರ್ಥಗಳು, ಮಾಂಸಾಹಾರ ಈ ತರಹದ ಆಹಾರವು ಮಾನವನ ದೇಹಕ್ಕೆ ಹಾಗೂ ಮನಸ್ಸಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೋಮಾರಿಯಾಗುವ ಗುಣಗಳನ್ನು ಹುಟ್ಟಿಸುತ್ತದೆ ಹಾಗೂ ಜೀರ್ಣಕ್ರಿಯೆಗೂ ಕಷ್ಟಕರವಾಗುತ್ತದೆ.
ತಾಮಸಿಕ ಆಹಾರ ಮಾಂಸಾಹಾರ, ಮಾದಕ ಪದಾರ್ಥಗಳು, ಫ್ರಿಡ್ಜ್ ನಲ್ಲಿಟ್ಟ ಆಹಾರ ಪದಾರ್ಥಗಳಲ್ಲಿ ವಿಷಕಾರಿ ವಸ್ತುಗಳು ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ.
ಕಸ ತಿನ್ನುವುದಕ್ಕಿಂತ ಉತ್ತಮವಾದುದನ್ನು ತುಸು ತಿನ್ನು ಎನ್ನುವ ಗಾದೆ ಎಷ್ಟೊಂದು ಅರ್ಥಪೂರ್ಣ. ಸಂತುಲಿತ ಆಹಾರ ಸೇವಿಸೋಣ. ದೋಷಪೂರಿತ ಆಹಾರದ ಸೇವನೆಯ ದೆಸೆಯಿಂದ ಉಂಟಾಗುವ ಆರೋಗ್ಯ ತೊಂದರೆಗಳು ಉಲ್ಬಣವಾಗುವ ಮೊದಲೇ ಎಚ್ಚರಗೊಳ್ಳೋಣ. ಆರೋಗ್ಯಪೂರ್ಣ ಜೀವನ ನಡೆಸಲು ಯೋಗಶಾಸ್ತ್ರವಾದ ಹಠಯೋಗ ಪ್ರದೀಪಿಕೆಯಲ್ಲಿ ಆಹಾರ ಸೇವನೆ ಬಗ್ಗೆ ಈ ರೀತಿ ಹೇಳಲ್ಪಟ್ಟಿದೆ.
ಅನ್ನೇನ ಪುರಾಯೇತ್ ಅರ್ಧಂ ತೋಯೇನ ತು ತೃತೀಯಕಮ್| ಉದಾರಸ್ಯ ತುರೀಯಂಶಂ ಸಂರಕ್ಷೇತ್ ವಾಯುಚಾರಣೇ ||5-22|| ಘೇರಂಡಸಂಹಿತಾ ಪಂಚಮೋಧ್ಯಾಯಃ ಊಟ ಮಾಡುವಾಗ ಉದರದಲ್ಲಿ ಅರ್ಧಭಾಗ ಆಹಾರ, ಕಾಲು ಭಾಗ ನೀರು ಮತ್ತು ಉಳಿದ ಕಾಲು ಭಾಗ ಗಾಳಿಗೆ ಅವಕಾಶ ಕಲ್ಪಿಸಿದರೆ ಆರೋಗ್ಯದಲ್ಲಿ ಏರುಪೇರಾಗಲಾರದು ಎಂಬುದು ಇದರ ತಾತ್ಪರ್ಯ.
ಆರೋಗ್ಯಕರ ಜೀವನ ಎಂದರೆ ನಮ್ಮ ಜೀವನ ಶೈಲಿಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದು. ನಗರ ಜೀವನದಲ್ಲಿ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ದೈಹಿಕ ಚಟುವಟಿಕೆಯ ಕೊರತೆ. ವ್ಯಾಯಾಮ ಎಂದರೆ ಮೈಮುರಿದು ದುಡಿಯುವುದು ಮಾತ್ರವಲ್ಲ, ನಮ್ಮ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆ ತಂದುಕೊಳ್ಳುವುದು, ಕೈತೋಟದಲ್ಲಿ ಕೆಲಸ ಮಾಡುವುದು, ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್ ಮಾಡುವುದು, ದಿನನಿತ್ಯ ಯೋಗ ಮಾಡುವುದು ನಮ್ಮ ಉನ್ನತಿಗೆ ಕಾರಣವಾಗುತ್ತದೆ.
ಹಾಗೆಯೇ ನಾವು ಮಾನಸಿಕವಾಗಿ ಚುರುಕು, ಭಾವನಾತ್ಮಕವಾಗಿ ಸಮತೋಲನ ಮತ್ತು ದಿನಪೂರ್ತಿ ಉತ್ಸಾಹದಿಂದಿರಬೇಕಾದರೆ ಒಳ್ಳೆಯ ನಿದ್ದೆ ಅಗತ್ಯ. ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯಕ್ಕೆ ಏಳುವ ಅಭ್ಯಾಸ ಮಾಡಿಕೊಂಡರೆ ಅದಕ್ಕಿಂತ ಅತ್ಯುತ್ತಮವಾಗಿ ದೇಹವನ್ನು ಕ್ರೀಯಾಶೀಲಗೊಳಿಸುವ ಉಪಾಯ ಮತ್ತೂಂದಿಲ್ಲ.
ಯೋಗ
ಇದು ಸಾಮಾನ್ಯವಾಗಿ ಮನುಷ್ಯನ ಆರೋಗ್ಯ ಕಾಪಾಡಲು ಇರುವ ಒಂದು ಕ್ರಮ. ಯೋಗ ಮಾಡಲು ಯೋಗ ಬೇಕು ಎನ್ನುವುದು ಅನುಭವಸ್ಥರ ಮಾತು. ಆಧುನಿಕ ಜೀವನ ತೀವ್ರ ಸ್ಪರ್ಧೆಯಿಂದ ತುಂಬಿ ಹೋಗಿದೆ. ಎಷ್ಟೇ ದುಡಿದರೂ ದುಡ್ಡು ನೀರಿನಂತೆ ಖರ್ಚಾಗಿ ಹೋಗುತ್ತದೆ. ದುಡಿಯುವಲ್ಲಿನ ನಿರಂತರ ಒತ್ತಡ, ಯುವಕರಿಗೆ ಸರಿಯಾದ ಉದ್ಯೋಗ ಸಿಗದ ಒತ್ತಡ, ಸಾಂಸಾರಿಕ ಜೀವನದ ಒತ್ತಡ ಹೀಗೆ ಅನೇಕ ಒತ್ತಡಗಳು ಸದಾ ಈ ಜಗತ್ತಿನಲ್ಲಿ ತುಂಬಿ ಹೋಗಿವೆ. ಬದಲಾದ ಜೀವನ ಶೈಲಿ, ಯೋಚನೆ, ಯೋಜನೆಗಳು ಒತ್ತಡವನ್ನು ನೀಡುತ್ತಲೇ ಇರುತ್ತವೆ. ಪ್ರತಿಯೊಬ್ಬರೂ ತೊಂದರೆ ರಹಿತ ಆರೋಗ್ಯ ಪೂರ್ಣ ಜೀವನ ನಡೆಸಲು ಇಷ್ಟ ಪಡುತ್ತಾರೆ. ಆದರೆ ಪ್ರಯತ್ನ ಪಡುವುದಿಲ್ಲ. ಆದುದರಿಂದ ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಯೋಗ, ಪ್ರಾಣಾಯಾಮ, ಧ್ಯಾನದ ಅಭ್ಯಾಸವು ಅತ್ಯುತ್ತಮ. ಚಿತ್ತ ವೃತ್ತಿ ನಿರೋಧಕವಾದ ಯೋಗ ಜಗತ್ತಿಗೆ ಭಾರತೀಯರ ಕೊಡುಗೆ.
ಯೋಗದಲ್ಲಿ ಇದೆ ಔಷಧ
ಮುಂಜಾನೆ ಬೇಗ ಎದ್ದು ಯೋಗ ಮಾಡಿದರೆ ಅದರಿಂದ ದೊರೆಯುವ ಮಾನಸಿಕ, ದೈಹಿಕ ನೆಮ್ಮದಿ ಮತ್ತು ಆರೋಗ್ಯ ಅದೆಷ್ಟು ಹಣ ವ್ಯಯಿಸಿದರೂ ದೊರೆಯದು. ಯೋಗ ಮಾಡುವುದರಿಂದ ನರ ನಾಡಿಗಳಲ್ಲಿ ರಕ್ತ ಸಂಚಲನ ಸರಿಯಾಗುತ್ತದೆ. ಮೂಳೆಯ ಸಾಮರ್ಥ್ಯ ವೃದ್ಧಿಯಾಗುತ್ತದೆ. ರೋಗ ರುಜಿನಗಳು ಕಡಿಮೆಯಾಗುತ್ತವೆ. ಯೋಗ, ಪ್ರಾಣಾಯಾಮ ಮಾಡಲು ಸೂಕ್ತ ಮಾರ್ಗದರ್ಶನ ಅಗತ್ಯ. ಯೋಗ, ಪ್ರಾಣಯಾಮವನ್ನು ತಪ್ಪಾಗಿ ಮಾಡಿದರೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು.
ಸರಿಯಾಗಿ ಉಸಿರಾಡುವುದೇ ದೀರ್ಘಾಯುಷ್ಯದ ಗುಟ್ಟು ಎಂದು ಯೋಗ ಪರಂಪರೆ ಹೇಳುತ್ತದೆ. ಸಾಮಾನ್ಯವಾಗಿ ನಾವು ಉಸಿರಾಟದ ಬಗ್ಗೆ ಗಮನ ಕೊಡುವುದಿಲ್ಲ. ಆದರೆ ಸರಿಯಾಗಿ ಉಸಿರಾಡುವುದಕ್ಕೂ ಒಂದು ಪದ್ಧತಿಯಿದೆ. ಪ್ರಾಣಾಯಾಮದಲ್ಲಿ ಇದಕ್ಕೆ ಉತ್ತರವಿದೆ. ಪ್ರಾಣಾಯಾಮವೆಂದರೆ ಉಸಿರಾಟವನ್ನು ನಿಯಂತ್ರಿಸುವುದು ಮತ್ತು ಸರಿಯಾಗಿ ಉಸಿರಾಡುವುದು. ಸರಳವಾದ ಪ್ರಾಣಾಯಾಮ ಮಾಡುವುದರಿಂದ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಸಮತೋಲನವಾಗಿ ಆರೋಗ್ಯದಿಂದಿರುತ್ತೇವೆ. ಪ್ರಣವ ಪ್ರಾಣಾಯಾಮ, ಅನುಲೋಮ ವಿಲೋಮ ಪ್ರಾಣಾಯಾಮ, ಭಾÅಮರಿ ಪ್ರಾಣಾಯಾಮ ಬಹಳ ಉತ್ತಮ. ಈ ಅಭ್ಯಾಸವನ್ನು ಯಾರು ಬೇಕಾದರೂ ಮಾಡಬಹುದು.
ಪ್ರಣವ ಪ್ರಾಣಾಯಾಮ
ವಿಧಾನ ಆರಾಮದಾಯಕವಾದ/ ಸುಖಕರವಾದ ಭಂಗಿಯಲ್ಲಿ ಕುಳಿತುಕೊಂಡು ನಮ್ಮ ಉಸಿರಾಟವನ್ನು ಗಮನಿಸುವ ಕ್ರಿಯೆಯಿದು. ಎಲ್ಲಿಂದ ಗಾಳಿ ಬಂದು ಎಲ್ಲಿಯ ವರೆಗೆ ಹೋಗುತ್ತದೆ ಎಂಬುದರ ಚಲನವಲನವನ್ನು ಗಮನಿಸುತ್ತ ಹೋಗಬೇಕು. ಇದನ್ನು 5 ನಿಮಿಷ ಮಾಡಬಹುದು. ಒತ್ತಡ ನಿವಾರಣೆಗೆ ಹಾಗೂ ನರ ಮತ್ತು ಮೆದುಳಿನ ಆರೋಗ್ಯಕ್ಕೆ ಉಪಯುಕ್ತ. ಆಮ್ಲಜನಕದ ಹೆಚ್ಚಳ, ಜೀವಕೋಶಗಳಲ್ಲಿರುವ ವಿಷಗಾಳಿ ಹೊರಕ್ಕೆ, ಋಣಾತ್ಮಕ ಭಾವನೆ ನಿವಾರಣೆ, ರೋಗನಿರೋಧಕ ಶಕ್ತಿ ಹೆಚ್ಚಳ, ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವುದು ಇದರ ಪ್ರಯೋಜನಗಳು.
ಅನುಲೋಮ- ವಿಲೋಮ ಪ್ರಾಣಾಯಾಮ
ಇದನ್ನು ಮೂಗಿನ ಹೊಳ್ಳೆಗಳ ಪರ್ಯಾಯ ಉಸಿರಾಟ ನಿಯಂತ್ರಣವೆಂದು ಕರೆಯುತ್ತಾರೆ. ಎಡಕೈ ಚಿನ್‌ಮುದ್ರೆ- ಹೆಬ್ಬೆರಳು ಹಾಗೂ ತೋರ್‌ಬೆರಳನ್ನು ಮೃದುವಾಗಿ ಜೋಡಿಸಿ ಉಳಿದ ಮೂರು ಬೆರಳುಗಳು ನೇರವಾಗಿರಬೇಕು. ಬಲಕೈಯಲ್ಲಿ ನಾಸಿಕಾಗ್ರ ಮುದ್ರೆ ಅಂದರೆ ಬಲ ಹಸ್ತದ ಹೆಬ್ಬೆರಳನ್ನು ಬಲ ಮೂಗಿನ ಹೊಳ್ಳೆಯ ಮೇಲೆ ಇರಿಸಿ ಮತ್ತೆ ಎಡ ಮೂಗಿನ ಹೊಳ್ಳೆಯಿಂದ ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತ ಮತ್ತೆ ಎಡ ಮೂಗಿನ ಹೊಳ್ಳೆಯನ್ನು ಉಂಗುರಬೆರಳಿನಿಂದ ಮುಚ್ಚಿ ಬಲ ಮೂಗಿನ ಹೊಳ್ಳೆಯನ್ನು ತೆರೆದು ಉಸಿರನ್ನು ಹೊರ ಬಿಡಿ, ಈಗ ನಿಮ್ಮ ಬಲ ಮೂಗಿನ ಹೊಳ್ಳೆಯ ಮೂಲಕ ಉಸಿರನ್ನು ಎಳೆದುಕೊಳ್ಳಿ, ನಿಮ್ಮ ಹೆಬ್ಬೆರಳಿನಿಂದ ಮುಚ್ಚಿ ಎಡ ಮೂಗಿನ ಹೊಳ್ಳೆಯಿಂದ ಉಸಿರನ್ನು ಹೊರ ಹಾಕಬೇಕು. ಇದು ಒಂದು ಬಾರಿಯ ಅಭ್ಯಾಸ. ಇದನ್ನು 5-8 ಬಾರಿ ಪುನರಾವರ್ತಿಸಿ. ಇದು ಒತ್ತಡ ಮತ್ತು ಆತಂಕವನ್ನು ತಗ್ಗಿಸಿ ಮಾನಸಿಕ ಶಾಂತಿಯನ್ನು ತರುತ್ತದೆ. ಅಸ್ತಮ, ಅಲರ್ಜಿ, ಬ್ರಾಂಕೈಟಿಸ್, ಅಧಿಕ ರಕ್ತದೊತ್ತಡ, ಮಧುಮೇಹ ಹತೋಟಿಗೆ ತರುತ್ತದೆ. ಹಾಗೆ ನರನಾಡಿಗಳು ಶುದ್ಧಿಯಾಗುತ್ತವೆ. ಹೃದಯ ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ.
ಭ್ರಾಮರಿ ಪ್ರಾಣಾಯಾಮ
ಹಸ್ತವನ್ನು ಮುಷ್ಠಿಮಾಡಿ, ಸೂಜಿಮುದ್ರೆಯಲ್ಲಿ ಅಂದರೆ ತೋರುಬೆರಳಿನಿಂದ ಕಿವಿಗಳನ್ನು ಮುಚ್ಚಿ, ದೀರ್ಘವಾಗಿ ಮೂಗಿನಿಂದ ಉಸಿರನ್ನು ತೆಗೆದುಕೊಳ್ಳುತ್ತ ಬಾಯಿಮುಚ್ಚಿ “ಮ’ಕಾರವನ್ನು ಪಠಿಸುತ್ತ ಉಸಿರನ್ನು ಬಿಡಬೇಕು. ಶಬ್ಧವು ದುಂಬಿಯ ಝೇಂಕಾರದಂತೆ ಇರುತ್ತದೆ. ಈ ಪ್ರಾಣಾಯಾಮದಿಂದ ನಿದ್ರಾಹೀನತೆ ನಿವಾರಣೆ ಹಾಗೂ ಮನಸ್ಸಿಗೆ ಮತ್ತು ಮೆದುಳಿಗೆ ಶಾಂತಿ ದೊರೆಯುತ್ತದೆ. ಕಳವಳ, ಆತಂಕ, ಸಿಟ್ಟು ನಿಯಂತ್ರಣಕ್ಕೆ ಅತ್ಯುತ್ತಮ, ಷಣ್ಮುಖ ಮುದ್ರೆಯಲ್ಲಿಯೂ ಭ್ರಾಮರಿ ಪ್ರಾಣಾಯಾಮ ಮಾಡಬಹುದು.
ಸ್ವಾಭಾವಿಕ ಉಸಿರಾಟದಲ್ಲಿ 500 ಕ್ಯೂಬಿಕ್ ಸೆಂಟಿಮೀಟರ್ ಗಾಳಿಯನ್ನು ಮನುಷ್ಯನು ಸೇವಿಸುತ್ತಾನೆ. ದೀರ್ಘ ಉಚ್ಛಾ$Ìಸ ಕ್ರಿಯೆಯಲ್ಲಿ ಅದರ ಆರರಷ್ಟು ಎಂದರೆ ಸರಿಸುಮಾರು 3 ಸಾವಿರ ಕ್ಯೂಬಿಕ್ ಸೆಂಟಿಮೀಟರ್ ಗಾಳಿ ಒಳ ಹೋಗುತ್ತದೆ. ದೇಹ ರಚನೆಗೆ ಅನುಗುಣವಾಗಿ ಒಬ್ಬೊಬ್ಬನ ಸಾಮರ್ಥ್ಯವೂ ಹೆಚ್ಚು -ಕಡಿಮೆ ಆಗುವುದು ಸ್ವಾಭಾವಿಕ. ಪ್ರಾಣಾಯಾಮದಿಂದ ಸಾಧಕನ ಶ್ವಾಸಕೋಶದಲ್ಲಿ ಹೆಚ್ಚಿನ ಗಾಳಿಯ ಓಡಾಟ ನಡೆಯುತ್ತದೆ.
ಯೋಗಾಸನದ ಅಭ್ಯಾಸದಿಂದ ದೈಹಿಕ ಸಮಸ್ಯೆಗಳು ದೂರವಾಗುತ್ತವೆ. ಪ್ರಾಣಾಯಾಮದಿಂದ ಮಾನಸಿಕ ಆರೋಗ್ಯ ವೃದ್ಧಿಯಾಗುವುದು. ಯೋಗ ಕ್ರಿಯೆಗಳಿಂದ ಶರೀರದ ಶುದ್ಧೀಕರಣವಾಗುವುದು. ಸುಪ್ತ ವಿಶ್ರಾಂತಿ ಆಸನ ಅಥವಾ ಅಮೃತಾಸನ ತಂತ್ರದಿಂದ ಒತ್ತಡ ನಿವಾರಣೆಯಾಗಿ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ದೊರೆತು ಮಾನಸಿಕ ನೆಮ್ಮದಿ ದೊರೆಯುವುದು. ಸರಿಯಾದ ಆಹಾರ ಕ್ರಮ, ಕ್ರಮಬದ್ಧವಾಗಿ ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮಾಡುವುದರಿಂದ ನಿರೋಗಿಗಳಾಗಿ ತಮ್ಮ ಆರೋಗ್ಯ, ಆಯುಷ್ಯ, ಸಂತೋಷ ವೃದ್ಧಿಸಿಕೊಳ್ಳಬಹುದು.
-ಡಾ| ಆತ್ಮಿಕಾ ಶೆಟ್ಟಿ,
ಅಸಿಸ್ಟೆಂಟ್ ಪ್ರೊಫೆಸರ್,
ಯೋಗ ವಿಭಾಗ,ಸಿಐಎಂಆರ್, ಮಾಹೆ, ಮಣಿಪಾಲ.
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಯೋಗ ವಿಭಾಗ, ಕೆಎಂಸಿ, ಮಂಗಳೂರು)