ಸಾರ್ವಜನಿಕ ಸ್ಥಳಗಳಲ್ಲಿ ನೀವೇನಾದರೂ ನಡೆದು ಹೋಗುತ್ತಿದ್ದರೆ ನಿಮಗೆ ಎದುರಾಗುವ ಹತ್ತು ಜನರಲ್ಲಿ ಕನಿಷ್ಠ ಒಂದಿಬ್ಬರಾದರೂ ತಾವು ಇದ್ದÇÉೇ ಉಗುಳುವ ದೃಶ್ಯಗಳನ್ನು ಖಂಡಿತಾ ನೋಡಿರುತ್ತೀರಿ. ಎಲೆ ಜಗಿದು ಉಗುಳುವವರು, ಜರ್ದಾ ಹಾಕಿ ಉಗುಳುವವರು, ಕ್ಯಾಕರಿಸಿ ಕಫ ಉಗುಳುವವರು, ಸುಮ್ಮ ಸುಮ್ಮನೇ ಎಂಜಲು ಉಗುಳುವವರು, ಬಾಯಲ್ಲಿರೋ ಕಶ್ಮಲ ಹೊರಹಾಕಲು ಉಗುಳುವವರು, ಬಸ್‌ಗಳ ಕಿಟಕಿಯ ಮೂಲಕ ಹೊರಗೆ ಪಿಚಕ್ಕನೆ ಉಗುಳುವವರು…ಹೀಗೆ ನಾನಾ ವಿಧದ ಉಗುಳಪ್ಪ/ ಉಗುಳಮ್ಮನವರು ನಿಮಗೆ ಸಿಕ್ಕೇ ಸಿಗುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳ್ಳೋ ಈ ರೋಗಕ್ಕೆ ಔಷಧ, ಪರಿಹಾರ ಬೇಕೇ ಬೇಕು. ಆದರೆ ಔಷಧ ಕೋಡೋದು ಯಾರು?
ಬಾಯಿಯ ಲಾಲಾರಸವು ನಮ್ಮ ದೇಹಕ್ಕೆ ಪ್ರಮುಖ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಲಾಲಾರಸವು ಪ್ರತಿಕಾಯಗಳು ಮತ್ತು ಕಿಣ್ವಗಳನ್ನು ಹೊಂದಿದ್ದು ಅದು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಲಾಲಾರಸವು ನಮ್ಮ ಹಲ್ಲುಗಳಿಗೆ ಹಾಗೂ ಇತರ ಅನೇಕ ಆರೋಗ್ಯದ ವಿಷಯಗಳಿಗೆ ಮುಖ್ಯವಾಗಿದೆ. ಆದರೆ ಇದು ರೋಗಗಳನ್ನು ಹರಡುವ ಮೂಲವೂ ಹೌದು. ಶೀತ, ಜ್ವರ, ಹೆಪಟೈಟಿಸ್, ಕೊರೊನಾದಂತಹ ರೋಗಗಳು ಎಂಜಲು ದ್ರವದ ಮೂಲಕ ರವಾನೆಯಾಗುತ್ತವೆ.
ನಮ್ಮ ಬಾಯಿ ನೂರಾರು ವಿಧದ ಸೂಕ್ಷ್ಮಾಣು ಜೀವಿಗಳಿಗೆ ನೆಲೆಯಾಗಿದೆ. ಬೇರೊಬ್ಬರ ಬಾಯಿಯ ಎಂಜಲು ಅಥವಾ ಮೂಗಿನ ಶೀತ, ನೆಗಡಿಯ ಸೋಂಕುಗಳು ನಮ್ಮನ್ನು ಸೋಂಕಿದಾಗ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಎಷ್ಟೋ ರೋಗಗಳ ಮೂಲ ನಮ್ಮ ಉಗುಳು. ಕೊರೊನಾ ರೋಗ ಇದನ್ನು ಸಾಬೀತು ಪಡಿಸಿದೆ. ಅದಕ್ಕೆಂದೇ ಬಾಯಿ, ಮೂಗುಗಳನ್ನು ಮುಚ್ಚಿಕೊಳ್ಳುವುದು ಕಡ್ಡಾಯವಾಯಿತು. ಕೊರೊನಾ ತೀವ್ರವಾಗಿದ್ದ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅಪರಾಧ ಎಂದು ಜಾಗೃತಿಯನ್ನು ಮೂಡಿಸಲಾಯಿತು. ಆದರೆ ನಮ್ಮಲ್ಲಿ ಯಾವುದೇ ಕಾನೂನುಗಳು ಕಠಿನವಾಗಿ ಜಾರಿಯಾಗದ ಹೊರತು ಅದು ಪರಿಣಾಮಕಾರಿಯಾಗದು.
ಜನರಿಗೆ ಜಾಗೃತಿ ಎನ್ನುವುದು ನಮ್ಮಲ್ಲಂತೂ ಕಡಿಮೆ. ಇನ್ನು ಕಾನೂನಿನ ಮೂಲಕ ದಂಡ ವಿಧಿಸಲು ಈ “ಉಗುಳ’ರನ್ನು ಕಾಯುವವರಾದರೂ ಯಾರು?, ಹಿಂಬಾಲಿಸುವವರು ಯಾರು? ನಾವು ಎಲ್ಲವನ್ನೂ ಆಡಳಿತವೇ ನಿರ್ವಹಿಸಬೇಕು ಎನ್ನುವ ಜಾಣರು. ಪ್ರತಿಯೊಂದಕ್ಕೂ ಸರಕಾರದ ಕಡೆ ಬೆರಳು ತೋರುವುದು ಜನರ ಜಾಯಮಾನವಾಗಿದೆ. ಸರಕಾರ ನೀಡೋ ಸೌಲಭ್ಯಗಳೆಲ್ಲ ಬೇಕು. ಆದರೆ ನಾವು ಮಾತ್ರ ಯಾವುದೇ ತ್ಯಾಗಕ್ಕೂ ಸಿದ್ಧರಿಲ್ಲ. ಕೊನೆಯ ಪಕ್ಷ ಕಾನೂನು ಶಿಸ್ತುಗಳನ್ನು ಪಾಲನೆ ಮಾಡಲೂ ತಯಾರಿಲ್ಲ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವತ್ಛವಾಗಿಡುವುದಕ್ಕೂ ಸರಕಾರವೇ ಹೇಳಬೇಕು. ಸಿಕ್ಕ ಸಿಕ್ಕಲ್ಲೆಲ್ಲ ಕಸ, ತ್ಯಾಜ್ಯಗಳನ್ನು ಎಸೆದು ಅಸಹ್ಯ ವಾತಾವರಣ ಸೃಷ್ಟಿಸಬೇಡಿ ಎಂದೂ ಸರಕಾರವೇ ಸಾರಿ ಸಾರಿ ಹೇಳಬೇಕು. ಆದರೂ ನಮ್ಮ ಹೆದ್ದಾರಿಯ ಇಕ್ಕೆಲಗಳು, ಧಾರ್ಮಿಕ ಕೇಂದ್ರಗಳ ಪರಿಸರ, ಹಾಲ್‌ಗಳು, ಸಾರ್ವಜನಿಕ ಸ್ಥಳಗಳು, ಬಸ್, ರೈಲು ನಿಲ್ದಾಣಗಳು ನಮ್ಮ ವರ್ತನೆಯನ್ನು ಪ್ರತಿನಿಧಿಸುತ್ತವೆ.
ಬಾಯಿಯ ಲಾಲಾರಸವು 24 ಗಂಟೆಗಳಿಗೂ ಹೆಚ್ಚು ಕಾಲ ಜೀವಂತ ಸೂಕ್ಷ್ಮಾಣುಗಳನ್ನು ಒಯ್ಯುತ್ತದೆ ಮತ್ತು ಕೋವಿಡ್-19 ಸಹಿತ ಪ್ರತಿಯೊಂದು ಉಸಿರಾಟದ ಕಾಯಿಲೆಗೆ ಕಾರಣವಾಗಬಹುದು. ವಿಶೇಷವಾಗಿ ಇದು ಉಸಿರಾಟದ ಹನಿಗಳಿಂದ ಉಂಟಾಗುತ್ತದೆ ಮತ್ತು ಈ ಹನಿಗಳು ಹತ್ತಿರದಲ್ಲಿರುವ ಜನರ ಬಾಯಿ, ಮೂಗು ಅಥವಾ ಕಣ್ಣುಗಳಿಗೆ ಪ್ರವೇಶಿ ಸಿದಾಗ ಹರಡಬಹುದು. ಅಲ್ಲದೆ ಉಗುಳು ವುದು ಕೇವಲ ಲಾಲಾರಸವನ್ನು ಹೊಂದಿರುವುದಿಲ್ಲ. ಕೆಲವೊಮ್ಮೆ ಇದು ಲೋಳೆಯನ್ನು ಹೊಂದಿದ್ದು ಇದು ಅನೇಕ ರೀತಿಯ ಸೂಕ್ಷ್ಮಜೀವಿಗಳ ಆವಾಸಸ್ಥಾನವಾಗಿದೆ.
ಬಸ್ ನಿಲ್ದಾಣಗಳಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ, ಬೀದಿಗಳಲ್ಲಿ ಹೀಗೆ ಅಲ್ಲಲ್ಲಿ ಸಿಕ್ಕಿದಲ್ಲೆಲ್ಲ ಉಗುಳುವ, ತ್ಯಾಜ್ಯವನ್ನು ಎಸೆಯುವ ರೋಗವನ್ನು ಜನರು ತಾವಾಗಿಯೇ ನಿಲ್ಲಿಸದಿದ್ದರೆ ನಮ್ಮ ಸುತ್ತಲು ಅಸಹನೀಯ ವಾತಾವರಣ ನಿರ್ಮಾಣವಾಗುತ್ತದೆ. ಬುದ್ಧಿವಂತ ಮಾನವ ಜೀವಿಗಳು ನಾವು. ಆದರೆ ಅನಾಗರಿಕ ವರ್ತನೆಗಳನ್ನು ಮಾತ್ರ ಬಿಟ್ಟಿಲ್ಲ.
ಏನು ಮಾಡಬಹುದು?
ಪರಿಸರ ಸ್ವತ್ಛವಾಗಿರಲು ಪ್ರತಿಯೊಬ್ಬ ನಾಗರಿಕರ ಸಹಕಾರದ ಆವಶ್ಯಕತೆಯಿದೆ. ಸ್ಟಾಪ್-ಸ್ಪಿಟಿಂಗ್ (ಉಗುಳುವುದನ್ನು ನಿಲ್ಲಿಸಿ) ಚಳವಳಿ ಈ ಸಮಯದ ಅಗತ್ಯವಾಗಿದೆ. ಈ ಅನಾರೋಗ್ಯಕರ ಅಭ್ಯಾಸವು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ಜನರ ಜೀವನವನ್ನು ಅಸಹ್ಯವಾಗಿಸುತ್ತದೆ. ಅನೇಕ ಜನರು ಮುಕ್ತ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಉಗುಳುವ ಅಭ್ಯಾಸವನ್ನು ಹೊಂದಿದ್ದಾರೆ – ನಡೆಯುವಾಗ, ವಾಹನಗಳಲ್ಲಿ ಸಾಗುವಾಗ ತಮ್ಮ ವಾಹನಗಳನ್ನು ಚಾಲನೆ ಮಾಡುವಾಗ ಅಲ್ಲಲ್ಲೇ ಉಗುಳುವ ಕೆಟ್ಟ ಪ್ರವೃತ್ತಿ ಸಾರ್ವಜನಿಕ ಸ್ಥಳಗಳನ್ನು ಕಲುಷಿತಗೊಳಿಸುತ್ತದೆ. ಇದರ ಪರಿಣಾಮವಾಗಿ ಸಾರ್ವಜನಿಕ ಪ್ರದೇಶಗಳನ್ನು ಸ್ವತ್ಛವಾಗಿರಿಸಲು ಸಾಧ್ಯವಾಗುವುದಿಲ್ಲ. ದೇಶದ ಘನತೆ, ಗೌರವಗಳಿಗೆ ಇದೊಂದು ಕಪ್ಪು ಚುಕ್ಕೆ. ಇನ್ನೊಬ್ಬರ ಎದುರಲ್ಲಿ ಅಲ್ಲಿ ಇಲ್ಲಿ ಉಗುಳುವುದು ಶಿಷ್ಟಾಚಾರವೂ ಅಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅನಿವಾರ್ಯವೆಂದು ತೋರುತ್ತಿದ್ದರೆ ಅದನ್ನು ವಿವೇಚನೆಯಿಂದ ಮತ್ತು ಎಚ್ಚರಿಕೆಯಿಂದ ಮಾಡಿ. ಸ್ರವಿಸುವ ಮೂಗು, ನೋಯುತ್ತಿರುವ ಗಂಟಲು, ಕಫ ಅಥವಾ ಸೀನುವಿಕೆಯಂತಹ ಶೀತ ರೋಗ ಲಕ್ಷಣಗಳನ್ನು ನೀವು ಹೊಂದಿದ್ದರೆ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಹೋದರೂ ಅಲ್ಲಲ್ಲಿ ಉಗುಳುವುದನ್ನು ನಿಲ್ಲಿಸಿ. ಉಗುಳುವ ಚಟವನ್ನು ನಿಯಂತ್ರಿಸಿ ಸಾರ್ವಜನಿಕ ಆರೋಗ್ಯದ ಅಪಾಯಗಳ ಬಗ್ಗೆ ಗಮನಹರಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
– ವಿದ್ಯಾ ಅಮ್ಮಣ್ಣಾಯ, ಕಾಪು