ಹರಪನಹಳ್ಳಿ: ಡೀಸೆಲ್ ತುಂಬಿದ ಟ್ಯಾಂಕರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಟ್ಯಾಂಕರ್ ಲಾರಿ ಪಲ್ಟಿಯಾದ ಪರಿಣಾಮ, ಅದರ ರಭಸಕ್ಕೆ ಹೊತ್ತಿಕೊಂಡ ಬೆಂಕಿಯಲ್ಲಿ ಬೈಕ್ ಸವಾರ ಸುಟ್ಟು ಮೃತಪಟ್ಟರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಬೆಳಿಗ್ಗೆ ಪಟ್ಟಣದ ಹೊರವಲಯದ ಕಂಚಿಕೇರಿ-ಬೆಂಡಿಗೇರಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರಿ ಗ್ರಾಮದ ಹರಪನಹಳ್ಳಿ ಪಟ್ಟಣದಲ್ಲಿ ವಾಸವಾಗಿದ್ದ ನಾಗರಾಜ್(32 ) ಸುಟ್ಟು ಕರಕಲಾಗಿರುವ ದುರ್ದೈವಿ ಬೈಕ್ ಸವಾರ, ಮತ್ತೊಬ್ಬ ಹಿಂಬದಿಯ ಸವಾರ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಚಂದ್ರು(38) ಬೆಂಕಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ದಾವಣಗೆರೆ ಕಡೆಯಿಂದ ಹರಪನಹಳ್ಳಿಗೆ ಬರುತ್ತಿದ್ದ ಡೀಸೆಲ್ ತುಂಬಿದ ಲಾರಿ ಟ್ಯಾಂಕರ್ ಬರುತ್ತಿತ್ತು. ಬೈಕ್ ಸವಾರರು ಹರಪನಹಳ್ಳಿಯಿಂದ ಜಮೀನಿಗೆ ಹೋಗಿ ಬರುತ್ತಿದ್ದರು. ಪಟ್ಟಣದ ಹೊರವಲಯದ ಕಣಿವೆ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮುಗುಚಿಬಿದ್ದಿದೆ. ಲಾರಿ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಕ್ಷಣಾರ್ಧದಲ್ಲಿಯೇ ಬೆಂಕಿ ಧಗಧಗಿಸಿದೆ. ಬೆಂಕಿಯಲ್ಲಿ ಸಿಲುಕಿದ ನಾಗರಾಜ್ ಸುಟ್ಟು ಕರಕಲಾಗಿದ್ದರೆ, ಹಿಂಬದಿ ಸವಾರ ಚಂದ್ರು ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತಯೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ ಹಾಗೂ ತುರ್ತುಸೇವಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಬೆಂಕಿಯನ್ನು ನಿಯಂತ್ರಿಸಿದ್ದಾರೆ.
ಅವಘಡದಲ್ಲಿ ಟ್ಯಾಂಕರ್ ಲಾರಿ, ಬೈಕ್ ಹಾಗೂ ಬೈಕ್ ಸವಾರ ಸಂಪೂರ್ಣವಾಗಿ ಸುಟ್ಟು ಕರುಕಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ನಾಗರಾಜ್ ಕಮ್ಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹರಪನಹಳ್ಳಿ ಪಟ್ಟಣದಲ್ಲಿ ಪ್ರಕರಣ ದಾಖಲಾಗಿದೆ.