Advertisement

ಏರಿದ ಡೀಸೆಲ್‌ ದರ, ಮೀನು ಲಭ್ಯತೆ ಕುಸಿತ

06:00 AM Apr 13, 2018 | Team Udayavani |

ಮಲ್ಪೆ: ಒಂದೆಡೆ ಡೀಸೆಲ್‌ ದರ ಏರಿಕೆ, ಮತ್ತೂಂದೆಡೆ ಸಮುದ್ರಕ್ಕೆ ಹೋದರೂ ಖಾಲಿ ಕೈಯಲ್ಲಿ ಬರಬೇಕಾದ ಪರಿಸ್ಥಿತಿ. ಕಾರಣ ಮೀನು ಸಿಗುತ್ತಿಲ್ಲ. ಇದರಿಂದ ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದ್ದು, ಮೀನುಗಾರರು ದಿಕ್ಕೇ ತೋಚದಂತಾಗಿದ್ದಾರೆ. ಉತ್ತಮ ಆದಾಯ ಗಳಿಸಬೇಕಾದ ಮಾರ್ಚ್‌ನಿಂದ ಮೇ ವರೆಗಿನ ಅವಧಿ ಯಲ್ಲಿ ರಾಜ್ಯದ ಕರಾವಳಿ ಯಾದ್ಯಂತ ಮತ್ಸ್ಯ ಬೇಟೆಗೆ ತೆರಳಿದವರು ಬರಿಗೈಯಲ್ಲಿ  ವಾಪಸಾಗುತ್ತಿದ್ದಾರೆ. 

Advertisement

ಯಾಕೆ ಹೀಗೆ ?
ಹವಾಮಾನ ವೈಪರೀತ್ಯ, ಸಮುದ್ರ ದಲ್ಲಿ ಗಾಳಿ-ನೀರಿನಲ್ಲಾದ ವ್ಯತ್ಯಾಸದಿಂದ ಮೀನಿನ ಕ್ಷಾಮ ತಲೆದೋರಿದೆ ಎನ್ನಲಾಗಿದೆ. ಮಿತಿ ಮೀರಿದ ಮೀನುಗಾರಿಕೆ, ಅವೈಜ್ಞಾನಿಕ ಪದ್ಧತಿಯ ಮೀನುಗಾರಿಕೆ ಕೂಡ ಕಾರಣಗಳಲ್ಲೊಂದು. ತಜ್ಞರ ಪ್ರಕಾರ ಬಿಸಿಲ ತಾಪಕ್ಕೆ ಸಮುದ್ರದ ನೀರು ಬಿಸಿಯಾಗಿ ಮೀನುಗಳು ಆಳಕ್ಕೆ ಇಳಿಯುವುದೂ ಮೀನು ಸಿಗದೇ ಇರು ವುದಕ್ಕೆ ಕಾರಣವಿರಬಹುದು ಎನ್ನುತ್ತಾರೆ.
  
ಡಿಸೇಲ್‌ ದರ ಹೆಚ್ಚಳದ ಬರೆ 
ಡೀಸೆಲ್‌ ದರವೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಲೀಟರ್‌ಗೆ 66 ರೂ. ತಲುಪಿದೆ. ಇದರಿಂದ ಆಳ ಸಮುದ್ರ ಮೀನುಗಾರಿಕೆಗೆ 10 ದಿನಕ್ಕೆ 6,000 ಲೀಟರ್‌ನಂತೆ ಕನಿಷ್ಠ 4 ಲಕ್ಷ ರೂ.ಯಷ್ಟು ಹೆಚ್ಚುವರಿ ವ್ಯಯಿಸಬೇಕಾಗುತ್ತದೆ. ಜತೆಗೆ ಬಲೆ, ಮಂಜುಗಡ್ಡೆ ಹಾಗೂ ಇನ್ನಿತರ ಖರ್ಚು ಹೊರೆಯಾಗಿದೆ. ಒಟ್ಟು  5.5 ಲಕ್ಷ ರೂಪಾಯಿ ಮೌಲ್ಯದ ಮೀನು ಹಿಡಿದರೂ ಬೋಟ್‌ ಮಾಲಕರಿಗೆ ಮಾತ್ರ ಲಾಭವಿಲ್ಲದಂತಾಗಿದೆ. 

ಶೇ. 50ರಷ್ಟು ಬೋಟ್‌ ದಡದಲ್ಲಿ
ಮಲ್ಪೆ ಬಂದರಿನಲ್ಲೇ  ಸುಮಾರು 1,200 ಆಳಸಮುದ್ರ, 130 ಪರ್ಸಿನ್‌, 500 ತ್ರಿಸೆವೆಂಟಿ, 100 ಸಣ್ಣ ಟ್ರಾಲ್‌ಬೋಟ್‌ಗಳಿವೆ. ಬೋಟ್‌ಗಳ ನಿರ್ವಹಣೆಯೇ ಕಷ್ಟವಾಗಿರುವ ಪರಿಸ್ಥಿತಿಯಿಂದ ಮಾಲಕರು ಬೋಟ್‌ಗಳನ್ನು ದಡದಲ್ಲಿ ನಿಲ್ಲಿಸಿದ್ದಾರೆ. ಪರ್ಸಿನ್‌ ಸೇರಿದಂತೆ ಶೇ. 60 ಆಳಸಮುದ್ರ ಬೋಟ್‌ಗಳು ಈಗಾಗಲೇ ಬಂದರಿನಲ್ಲಿ ಲಂಗರು ಹಾಕಿರುವುದು ಮೀನುಗಾರರ ಪರಿಸ್ಥಿತಿಯನ್ನು ತೋರಿಸುತ್ತದೆ. 

ಮೀನು ದರ ಗಗನಕ್ಕೆ
ಮೀನಿನ ಕ್ಷಾಮದಿಂದಾಗಿ ಮೀನಿನ ಬೆಲೆಯೂ  ಗಗನಕ್ಕೇರಿದೆ. ಪಾಪ್ಲೆಟ್‌ ಕೆ.ಜಿ.ಗೆ ರೂ. 1,000ದಿಂದ 1,200, ಅಂಜಲ್‌ ಮೀನು 750ರಿಂದ 800 ರೂ., ಸಿಗಡಿ ಮೀನುಗಳಲ್ಲಿ ದೊಡ್ಡದು 360 ರೂ., ಮಂಡೆ 280 ರೂ., ಕರ್ಕಡಿ, ತೇಂಬೆಲ್‌ 130 ರೂ.ಗೆ ಮಾರಾಟ ವಾಗುತ್ತಿದೆ. ಅಡೆಮೀನು ಕೆಜಿಗೆ 200, ಕೊಡ್ಡಯಿ 250 ರೂ. ಇದೆ.

ನಿರ್ವಹಣೆ ಕಷ್ಟ
ವರ್ಷದಿಂದ ವರ್ಷಕ್ಕೆ ಮತ್ಸ್ಯಕ್ಷಾಮ ಹೆಚ್ಚುತ್ತಿರುವುದರಿಂದ ಮಲ್ಪೆ ಬಂದರಿನಲ್ಲಿ  ಹೆಚ್ಚಿನ ಬೋಟ್‌ಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಪ್ರತಿವರ್ಷ ಈ ಸಮಯದಲ್ಲಿ ನಿರೀಕ್ಷಿತ ಮೀನುಗಾರಿಕೆ ನಡೆಯುತ್ತಿದ್ದು , ಈ ಬಾರಿ ಮೀನಿಲ್ಲದೆ ಹಿನ್ನಡೆಯಾಗಿದೆ.  
– ಸತೀಶ್‌ ಕುಂದರ್‌,   
ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement

ಹೊಸ ಯೋಜನೆ ಗಳು ಬರಲಿ
ಕೇಂದ್ರ ಸರಕಾರ ಮೀನುಗಾರಿಕೆಯನ್ನೂ ಕೃಷಿಯೆಂದು ಪರಿಗಣಿಸಿ, ಕೃಷಿಗೆ ನೀಡುವ ಸೌಲಭ್ಯವನ್ನು, ಹೊಸ ಯೋಜನೆಗಳನ್ನು ಮೀನುಗಾರಿಕೆಗೂ ನೀಡಬೇಕು. ಕೆಲವು ಮಾನದಂಡಗಳ ಆಧಾರದ ಮೇಲೆ ರಾಜ್ಯ ಸರಕಾರ ತೆರಿಗೆ ವಿನಾಯಿತಿ ನೀಡುತ್ತಿದ್ದು, ಕೇಂದ್ರ ಸರಕಾರ ಕೂಡ ಅದೇ ರೀತಿ ಪ್ರೋತ್ಸಾಹಿಸಬೇಕು ಇಲ್ಲವಾದಲ್ಲಿ ಮುಂದೆ ದೇಶದಲ್ಲಿ ಮೀನುಗಾರಿಕೆಗೆ ಭವಿಷ್ಯವಿಲ್ಲ.
– ಗೋಪಾಲ ಕುಂದರ್‌, ಹಿರಿಯ ಮೀನುಗಾರ ಮುಖಂಡರು

ನಿರ್ವಹಣೆ ಕಷ್ಟ
ಮೀನುಗಾರಿಕೆ ದೋಣಿಯ ಸಲಕರಣೆ ದರ, ಡಿಸೇಲ್‌ ದರ ಏರಿಕೆ ಯಿಂದಾಗಿ ಬೋಟ್‌ ನಿರ್ವಹಣೆ ಕಷ್ಟವಾಗಿದೆ. ಸಾಲ ಮಾಡಿ ಬೋಟ್‌ ಹಾಕಿದರೂ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತಿದೆ.  
-ಶೇಖರ್‌ ಜಿ. ಕೋಟ್ಯಾನ್‌,   
ಮತ್ಸ್ಯಉದ್ಯಮಿ ಮಲ್ಪೆ

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next