ಮುಂಬಯಿ: ರಷ್ಯಾ, ಉಕ್ರೇನ್ ನಡುವಿನ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾದ ಪರಿಣಾಮ ಸಗಟು ಬಳಕೆದಾರರಿಗೆ ಪೂರೈಕೆ ಮಾಡುವ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ ಪೆಟ್ರೋಲ್, ಡೀಸೆಲ್ ಬಂಕ್ ಗಳಲ್ಲಿ ಡೀಸೆಲ್ ಖರೀದಿ ಮಾಡುವ ಸಾಮಾನ್ಯ ಖರೀದಿದಾರರಿಗೆ ದರ ಹೆಚ್ಚಳ ಮಾಡದೇ ಸಾಮಾನ್ಯ ದರ ಮುಂದುವರಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:20 ದಿನಗಳ ಬಳಿಕ ಉಕ್ರೇನ್ ನಿಂದ ಬೆಂಗಳೂರು ತಲುಪಿದ ನವೀನ್ ಪಾರ್ಥಿವ ಶರೀರ; ಸಿಎಂ ನಮನ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇ.40ರಷ್ಟು ಹೆಚ್ಚಳವಾಗಿದ್ದು, ಪ್ರತೀ ಬ್ಯಾರೆಲ್ ಗೆ 120 ಡಾಲರ್ ದಾಟಿದೆ. ನಷ್ಟ ಪ್ರಮಾಣವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸಗಟು ಡೀಸೆಲ್ ದರವನ್ನು ಲೀಟರ್ ಗೆ 25 ರೂಪಾಯಿಯಷ್ಟು ಸರ್ಕಾರ ಹೆಚ್ಚಳ ಮಾಡಿದೆ.
ಇದರಿಂದಾಗಿ ಮುಂಬಯಿಯಲ್ಲಿ ಸಾಮಾನ್ಯ ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 94.14 ರೂಪಾಯಿ ಇದ್ದರೆ, ಸಗಟು ಡೀಸೆಲ್ ಬೆಲೆ ಲೀಟರ್ ಗೆ 122.05 ರೂಪಾಯಿಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಪಂಪ್ ಗಳಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 86.67 ರೂಪಾಯಿ ಇದ್ದು, ಸಗಟು ಅಥವಾ ಕೈಗಾರಿಕೆ ಬಳಕೆದಾರರಿಗೆ ಪ್ರತಿ ಲೀಟರ್ ಬೆಲೆ 115 ರೂ.ಗೆ ಏರಿಕೆಯಾಗಿದೆ.