Advertisement

ಡೀಸೆಲ್‌ ಜತೆ ಬೇಳೆ ಬೆಲೆಯೂ ಏರುಮುಖ

12:19 PM Oct 09, 2018 | |

ಬೆಂಗಳೂರು: ಕಳೆದ ಎರಡು ತಿಂಗಳಿಂದ ಆಗುತ್ತಿರುವ ಡೀಸೆಲ್‌ ಬೆಲೆ ಏರಿಳಿತದ ಪರಿಣಾಮ ದವಸ ಧಾನ್ಯಗಳ ಬೆಲೆ ಏರಿಕೆಯಾಗಿದೆ. ಆದರೆ ಡೀಸೆಲ್‌ ಬೆಲೆಯಲ್ಲಿ ಕೊಂಚ ಇಳಿಕೆಯಾದರೂ ಆಹಾರ ಧಾನ್ಯ, ಬೇಳೆ ಕಾಳುಗಳ ಬೆಲೆ ಇಳಿಕೆಯಾಗದ ಕಾರಣ ಜನಸಾಮಾನ್ಯರಿಗೆ ಹೊರೆ ತಪ್ಪಿಲ್ಲ.

Advertisement

ಡೀಸೆಲ್‌ ಬೆಲೆ ಎರಡು ತಿಂಗಳಲ್ಲಿ ಗರಿಷ್ಠ 5.50 ರೂ. ಏರಿಕೆಯಾಗಿದ್ದರೆ, ಕನಿಷ್ಠ 2.50 ರೂ. ಇಳಿಕೆ ಕಂಡಿದೆ. ಹಾಗಿದ್ದರೂ ಡೀಸೆಲ್‌ ದರ 75.64 ರೂ. ತಲುಪಿ ದಾಖಲೆ ನಿರ್ಮಿಸಿತ್ತು. ಹೀಗಾಗಿ, ಸರಕು ಸಾಗಣೆ ವೆಚ್ಚ ಕೂಡ ಸಾಕಷ್ಟು ಏರಿಕೆಯಾಗಿದ್ದು, ಕೃಷಿ ಹಾಗೂ ವ್ಯಾಪಾರ ವಲಯಕ್ಕೆ ಬಿಸಿ ತಟ್ಟಿದೆ.

ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಹಾಗೂ ಮಾರುಕಟ್ಟೆಯಿಂದ ಸಗಟು ವ್ಯಾಪಾರಿಗಳಿಗೆ, ಬಳಿಕ ಚಿಲ್ಲರೆ ವ್ಯಾಪಾರಿಗಳಿಗೆ ಸಾಗಿಸಲು ಲಾರಿ, ಟಿಪ್ಪರ್‌, ಆಟೋಗಳನ್ನೇ ಅವಲಂಬಿಸಿದ್ದು, ಡೀಸೆಲ್‌ ದರ ಏರಿಕೆಯಿಂದ ಸಾಗಣೆ ವೆಚ್ಚ ಹೆಚ್ಚಾಗಿದೆ. ಇದರಿಂದಾಗಿ ದಿನನಿತ್ಯ ಬಳಸುವ ಬೇಳೆ, ಆಹಾರ ಧಾನ್ಯ, ತರಕಾರಿಗಳ ದರ 5ರಿಂದ 10 ರೂ. ಹೆಚ್ಚಳವಾಗಿದ್ದು, ಖರೀದಿದಾರರಿಗೆ ಹೊರೆಯಾಗಿ ಪರಿಣಮಿಸಿದೆ. 

ಸೆಪ್ಟೆಂಬರ್‌ ಆರಂಭದಲ್ಲಿ 70 ರೂ. ಇದ್ದ ಒಂದು ಕೆ.ಜಿ. ತೊಗರಿಬೇಳೆ 75 ರೂ.ಗೆ ಏರಿಕೆಯಾಗಿದೆ. ಕಡಲೆ ಬೀಜದ ಬೆಲೆ (ಶೇಂಗಾ) ನೂರರ ಗಡಿದಾಟಿದೆ. ಇನ್ನು ಉದ್ದಿನಬೇಳೆ, ಹೆಸರು ಬೇಳೆ, ಸಕ್ಕರೆ, ಬೆಲ್ಲ, ತೆಂಗಿನಕಾಯಿ ಸೇರಿದಂತೆ ಸಾಕಷ್ಟು ಆಹಾರ ಧಾನ್ಯ ಬೆಲೆ ಕನಿಷ್ಠ ಐದರಿಂದ ಗರಿಷ್ಠ 10 ರೂ. ಏರಿಕೆಯಾಗಿದೆ. 80 ರೂ. ಇದ್ದ ಸನ್‌ಫ್ಲವರ್‌ ರಿಫೈನ್‌ ಅಡುಗೆ ಎಣ್ಣೆ ಬೆಲೆ 95 ರೂ. ತಲುಪಿದೆ.

ದುಬಾರಿಯಾದ ಸಾಗಣೆ ವೆಚ್ಚ: ಡೀಸೆಲ್‌ ಏರಿಳಿಕೆಯಿಂದ ಸರಕು ಸಾಗಣೆ ವಾಹನಗಳ ಬಾಡಿಗೆ ದರ ಹೆಚ್ಚಾಗಿದೆ. ರೈತರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ವಾಹನದಲ್ಲಿ ಸಾಗಿಸಲು, ಕ್ರಮಿಸಬೇಕಿರುವ ದೂರದ ಆಧಾರದಲ್ಲಿ ಒಂದು ಕ್ವಿಂಟಾಲ್‌ಗೆ ಇಂತಿಷ್ಟು ಎಂದು ದರ ನಿಗದಿ ಮಾಡುತ್ತಿದ್ದರು. ಡೀಸೆಲ್‌ ಬೆಲೆ ಏರಿಕೆ ಪರಿಣಾಮ ಈ ದರ ಪ್ರತಿ ಕ್ವಿಂಟಾಲ್‌ಗೆ 40ರಿಂದ 50 ರೂ. ಹೆಚ್ಚಾಗಿದೆ.

Advertisement

ಜತೆಗೆ ಬೆಂಗಳೂರು ನಗರದ ಸಗಟು ಮಾರುಕಟ್ಟೆಯಿಂದ ಚಿಲ್ಲರೆ ವ್ಯಾಪಾರಿಗಳು ತಮ್ಮ ಅಂಗಡಿಗೆ ಹಾಕುವ ಸಾಮಗ್ರಿಗಳ ಒಂದು ಕ್ವಿಂಟಾಲ್‌ ತೂಕದ ಚೀಲಕ್ಕೆ 10 ರೂ. ಹೆಚ್ಚುವರಿಯಾಗಿ ನೀಡಬೇಕು. ಇದರಿಂದಾಗಿ ರೈತರು- ಸಗಟು ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳು ಹೆಚ್ಚುವರಿ ಹಣ ಭರಿಸಬೇಕಾಗಿದ್ದು, ಅದರ ಹೊರೆ ಗ್ರಾಹಕರಿಗೆ ವರ್ಗಾವಣೆಯಾಗುತ್ತಿದೆ.

ಡೀಸೆಲ್‌ ದರ ಹಾವು ಏಣಿ ಆಟ: ಆಗಸ್ಟ್‌ ಆರಂಭದಲ್ಲಿ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ 69.97 ರೂ. ಇದ್ದರೆ, ಸೆಪ್ಟೆಂಬರ್‌ ಅರಂಭದಲ್ಲಿ 72.71ರೂ. ಹಾಗೂ ಸೆಪ್ಟೆಂಬರ್‌ ಅಂತ್ಯಕ್ಕೆ 75.64 ರೂ. ತಲುಪಿತ್ತು. ಕಳೆದ ಎರಡು ತಿಂಗಳಲ್ಲಿ ಡೀಸೆಲ್‌ ಬೆಲೆ 5.50 ರೂ. ಹೆಚ್ಚಾಗಿದೆ. ಅ.4ರಂದು ಕೇಂದ್ರ ಸರ್ಕಾರ 2.50 ರೂ. ಇಳಿಕೆ ಮಾಡಿತ್ತು. ಮತ್ತೆ ಸೋಮವಾರ 31 ಪೈಸೆ ಏರಿಕೆಯಾಗಿ, ಸದ್ಯ 73.61 ರೂ. ತಲುಪಿದೆ. ಹೀಗೆ ಡೀಸೆಲ್‌ ದರದ ಹಾವು ಏಣಿ ಆಟದಿಂದ ಸಾಗಣೆ ವೆಚ್ಚ ಹೆಚ್ಚಾಗಿದೆ ಎನ್ನುತಾರೆ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು.

ಎರಡು ತಿಂಗಳಿಂದ ಲಾರಿ ಚಾಲಕರು ಸಾಗಣೆ ವೆಚ್ಚವನ್ನು ಪ್ರತಿ ಕ್ವಿಂಟಾಲ್‌ಗೆ 30ರಿಂದ 40 ರೂ.ನಷ್ಟು ಹೆಚ್ಚಿಸಿದ್ದಾರೆ. ಹೆಚ್ಚುವರಿ ಸಾಗಣೆ ವೆಚ್ಚವನ್ನು ಉತ್ಪನ್ನದ ಮೇಲೆ ವಿಧಿಸಿ ಮಾರುವುದು ಅನಿವಾರ್ಯವಾಗಿದೆ. ಡೀಸೆಲ್‌ ದರ ತಗ್ಗಿದರೂ ಸಾಗಣೆ ದರ ಇಳಿಸುತ್ತಿಲ್ಲ.
-ಶಿವಬಸಪ್ಪ, ಚಿಂತಾಮಣಿ ರೈತ

ಡೀಸೆಲ್‌ ದರ ಹೆಚ್ಚಾಗಿರುವ ಕಾರಣ ಬಾಡಿಗೆ ದರದಲ್ಲಿ ಶೇ.5ರಿಂದ ಶೇ.10ರಷ್ಟು ಏರಿಕೆಯಾಗಿದೆ. ಇಂಧನ ದರ ಏರಿಳಿತ ಮುಂದುವರಿದಿದ್ದು, ತಕ್ಷಣ ಬಾಡಿಗೆ ಇಳಿಸಲಾಗದು. ಗಣನೀಯ ಪ್ರಮಾಣದಲ್ಲಿ ದರ ಇಳಿಕೆಯಾಗಿ, ಸ್ಥಿರವಾಗಿದ್ದಾಗ ಸಾಗಣೆ ವೆಚ್ಚ ಇಳಿಸಬಹುದು.
-ಬಿ.ವಿ.ನಾರಾಯಣಪ್ಪ, ರಾಜ್ಯ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ

ಒಂದೂವರೆ ತಿಂಗಳಿನಿಂದೀಚೆಗೆ ದವಸ ಧಾನ್ಯ, ಇತರೆ ಪ್ಯಾಕೇಜ್‌ ಉತ್ಪನ್ನಗಳು ದುಬಾರಿಯಾಗಿವೆ. ಅಡುಗೆ ಅನಿಲ ಸಿಲಿಂಡರ್‌ ಬೆಲೆ ಕೂಡ ಏರುತ್ತಲೇ ಇದ್ದು, ಮನೆ ನಿರ್ವಹಣೆ ವೆಚ್ಚ ಹೆಚ್ಚಾಗಿ, ಮಧ್ಯಮ ವರ್ಗದವರು ಜೀವನ ಕಷ್ಟವಾಗಿದೆ.
-ಸುಮಾ, ಗೃಹಿಣಿ

ವಿವಿಧ ಸಾಮಗ್ರಿಗಳ ಬೆಲೆ ಏರಿಕೆ ಪಟ್ಟಿ
ಸಾಮಗ್ರಿ    ಆಗಸ್ಟ್‌    ಅಕ್ಟೋಬರ್‌(ಪ್ರತಿ.ಕೆ.ಜಿ)

-ರಿಪೈಂಡ್‌ ಆಯಿಲ್‌    80 ರೂ.    95 ರೂ.
-ಪಾಮ್‌ ಆಯಿಲ್‌    70 ರೂ.    75 ರೂ.
-ತೊಗರಿ ಬೇಳೆ    70  ರೂ.    75 ರೂ.
-ಕಡಲೆ ಬೀಜ    90 ರೂ.    100 ರೂ.
-ಕಡಲೇಬೇಳೆ    60 ರೂ.    65 ರೂ.
-ಉದ್ದಿನಬೇಳೆ    65 ರೂ.    75 ರೂ.
-ಸಕ್ಕರೆ    32 ರೂ.    36 ರೂ.
-ಗೋಧಿ ಹಿಟ್ಟು    28 ರೂ.    34 ರೂ.
-ಬೆಲ್ಲ    48 ರೂ.    54 ರೂ.
-ತೆಂಗಿನಕಾಯಿ (ಒಂದಕ್ಕೆ)    23 ರೂ.    30ರೂ.  

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next