Advertisement

ವಿಪತ್ತು ನಿರ್ವಹಣೆ ನಿಭಾವಣೆಗೆ ಡೀಸೆಲ್, ಸಿಬಂದಿ ಕೊರತೆ

11:19 PM Aug 07, 2019 | Team Udayavani |

ಸುಬ್ರಹ್ಮಣ್ಯ: ಮಳೆ ತೀವ್ರಗೊಂಡಂತೆ ಜಿಲ್ಲಾಡಳಿತ ರೆಡ್‌ ಅಲರ್ಟ್‌ ಘೋಷಿಸಿ ಸನ್ನದ್ಧ ಸ್ಥಿತಿಯಲ್ಲಿರಲು ಅಧಿಕಾರಿಗಳಿಗೆ, ನಾಗರಿಕರಿಗೆ ಸೂಚಿಸಿದೆ.

Advertisement

ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿಪತ್ತು ನಿರ್ವಹಣೆಯ ತುರ್ತು ಘಟಕ, ಸಹಾಯವಾಣಿ ತೆರೆದಿದೆ. ಆದರೆ ಗ್ರಾಮೀಣ ಭಾಗದ ಅನೇಕ ಕಡೆಗಳಲ್ಲಿ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ. ಹೀಗಾಗಿ ತುರ್ತು ಸಂದರ್ಭಕ್ಕೆ ನಾಗರಿಕರ ಸಹಿತ ನಿಯೋಜಿತ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ.

ಸಂಪರ್ಕ ಸಾಧ್ಯವಾಗುತ್ತಿಲ್ಲ
ಗ್ರಾಮೀಣ ಪ್ರದೇಶದಲ್ಲಿ ಮಳೆ ತೀವ್ರತೆಯಿಂದ ಪ್ರಾಕೃತಿಕ ವಿಕೋಪ ಸಂಭವಿಸಿ ವಿದ್ಯುತ್‌ ವ್ಯತ್ಯಯಗಳಿಂದ ಸಮಸ್ಯೆ ಒಂದೆಡೆಯಾದರೆ, ಮತ್ತೂಂದೆಡೆ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ತುರ್ತು ಸಂದರ್ಭಕ್ಕೆ ಯಾವುದೇ ಸಂಪರ್ಕ ಸಾಧ್ಯವಾಗುತ್ತಿಲ್ಲ. ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಅಧಿಕಾರಿಗಳು ಬಿಎಸ್ಸೆನ್ನೆಲ್ ಸೇವೆ ಮಾತ್ರ ಇರುವ ಕಡೆಗಳಲ್ಲೂ ಮಳೆಗಾಲದ ಬಗ್ಗೆ ಪೂರ್ವ ತಯಾರಿ ಮಾಡಿಲ್ಲ. ಹೀಗಾಗಿ ಬಿಎಸ್ಸೆನ್ನೆಲ್ ಅವಲಂಬಿತ ಗ್ರಾಮೀಣ ಜನತೆ ತುರ್ತು ಸಂದರ್ಭಗಳಲ್ಲಿ ಸಂಪರ್ಕ ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಜಿಲ್ಲಾಡಳಿತ ಗಮನಹರಿಸಲಿ
ಆಪತ್ತು ಎದುರಿಸಲು ನಿರ್ಜೀವ ಬಿಎಸ್ಸೆನ್ನೆಲ್ ಮೊಬೈಲ್ ಸ್ಥಾವರಗಳ ಕೇಂದ್ರಗಳಿಗೆ ಸಿಬಂದಿ ಮತ್ತು ಅಗತ್ಯ ಡೀಸೆಲ್ ಪೂರೈಕೆ ಮಾಡಿ ತುರ್ತು ಸಂದರ್ಭಕ್ಕೆ ಇದರ ಪ್ರಯೋಜನ ಪಡೆಯಬೇಕಿತ್ತು. ಆದರೆ ಈ ಬಗ್ಗೆ ಬಿಎಸ್ಸೆನ್ನೆಲ್ ಗಮನವನ್ನೇ ನೀಡಿಲ್ಲ. ಆರ್ಥಿಕ ನಷ್ಟ, ಡೀಸೆಲ್ ಪೂರೈಕೆ ಇಲ್ಲ ಎನ್ನುತ್ತಿದ್ದಾರೆ. ಕೆಲವು ದಿನಗಳ ಮಟ್ಟಿಗಾದರೂ ಈ ವ್ಯವಸೆಯನ್ನು ನಿಗಮದ ಅಧಿಕಾರಿಗಳು ಮಾಡಿಕೊಳ್ಳಬೇಕಿತ್ತು. ಜಿಲ್ಲಾಡಳಿತವಾದರೂ ಸಿಬಂದಿ, ಡೀಸೆಲ್ ಒದಗಿಸಿ ಮಳೆಗಾಲದ ನಿರ್ವಹಣೆ ನಡೆಸದೇ ಇದ್ದಲ್ಲಿ ಗ್ರಾಮೀಣ ಭಾಗದಲ್ಲಿ ಕಷ್ಟವಾಗಬಹುದು.

ಕಳೆದ ಬಾರಿ ಭೂಕುಸಿತ ನಡೆದ ಕಲ್ಮಕಾರು ಮತ್ತು ಕೊಲ್ಲಮೊಗ್ರು, ಹರಿಹರದಲ್ಲಿ ಕಾರ್ಯಾಚರಿಸುತ್ತಿರುವ ದೂರವಾಣಿ ಕೇಂದ್ರಗಳ ಮೊಬೈಲ್ ಸಂಪರ್ಕ ಮೂರು ದಿನಗಳಿಂದ ಸ್ತಬ್ಧಗೊಂಡಿವೆ.

Advertisement

ಇನ್ನು ಸುಬ್ರಹ್ಮಣ್ಯ ಸಹಿತ ಪಂಜ, ನಾಲ್ಕೂರು, ಯೇನೆಕಲ್ಲು, ಮಡಪ್ಪಾಡಿ ಮೊದಲಾದ ಗ್ರಾಮಗಳಲ್ಲಿಯೂ ಸಿಗ್ನಲ್ ಸಮಸ್ಯೆಯಿದೆ.

ಅಧಿಕಾರಿಗಳ ಸಂಪರ್ಕವೂ ಸಾಧ್ಯವಿಲ್ಲ
ಕಾಡಿನೊಳ‌ಗೆ ಹಾದು ಹೋದ ವಿದ್ಯುತ್‌ ಮಾರ್ಗಗಳಲ್ಲಿ ಮರ, ಮರದ ಗೆಲ್ಲುಗಳು ಲೈನ್‌ ಮೇಲೆ ಬಿದ್ದು ತಂತಿಗಳು ತುಂಡಾಗಿ ವಿದ್ಯುತ್‌ ಸರಬರಾಜು ಸ್ಥಗಿತಗೊಳ್ಳುತ್ತಿದೆ. ವಿದ್ಯುತ್ತಿಲ್ಲದಿದ್ದರೆ ಮೊಬೈಲ್ ಟವರ್‌ಗಳೂ ಸ್ತಬ್ಧವಾಗುತ್ತಿವೆ. ದಿನಪೂರ್ತಿ ಸಿಗ್ನಲ್ ನಾಪತ್ತೆಯಾಗಿ, ಅವಘಡಗಳು ಸಂಭವಿಸಿ ದಾಗಲೂ ಸಂಪರ್ಕ ಸಾಧ್ಯವಾಗುತ್ತಿಲ್ಲ. ವಿಪತ್ತು ನಿರ್ವಹಣೆಗೆಂದು ನಿಯೋಜಿತ ಬಹುತೇಕ ಅಧಿಕಾರಿಗಳು ಬಿಎಸ್ಸೆನ್ನೆಲ್ ಸಿಮ್‌ ಹೊಂದಿದ್ದಾರೆ. ಅವರು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಬಿಎಸ್ಸೆನ್ನೆಲ್ ಸೇವೆ ಮಾತ್ರವಿದೆ. ಅವರಿಗೂ ಸಿಗ್ನಲ್ ಸಮಸ್ಯೆ ಕಾಡಬಹುದು.ಕೊಲ್ಲಮೊಗ್ರು, ಹರಿಹರ, ಕಲ್ಮಕಾರು, ಬಾಳುಗೋಡು, ಐನಕಿದು, ಮಡಪ್ಪಾಡಿ ಮೊದಲಾದ ಕಡೆಗಳಲ್ಲಿ ಬಿಎಸ್ಸೆನ್ನೆಲ್ ಟವರ್‌ ಮಾತ್ರವಿದೆ. ಇಂತಹ ಕಡೆಗಳಲ್ಲಿ ಕರ್ತವ್ಯ ನಿರತ ಅಧಿಕಾರಿ ಗಳು ಸಮಸ್ಯೆಗೆ ಒಳಗಾಗಲಿದ್ದಾರೆ. ಘಟನೆಗಳು ನಡೆದಾಗ ಮತ್ತು ಮಳೆ ತೀವ್ರತೆಯ ಮಾಹಿತಿಗಳನ್ನು ತತ್‌ಕ್ಷಣಕ್ಕೆ ಮೇಲಧಿಕಾರಿಗಳಿಗೆ ನೀಡಲು ಸಾಧ್ಯವಾಗುವುದಿಲ್ಲ.

ಜಿಲ್ಲಾಡಳಿತ ಡೀಸೆಲ್ ಪೂರೈಸಲಿ
ಮೊಬೈಲ್ ಸಿಗ್ನಲೇ ಇಲ್ಲದ ಮೇಲೆ ಬೇರೆ ವ್ಯವಸ್ಥೆ ಮಾಡಿಯೂ ಉಪಯೋಗವಿಲ್ಲ ಎನ್ನುವುದು ಕೊಲ್ಲಮೊಗ್ರು, ಹರಿಹರ ಭಾಗದ ನಾಗರಿಕರ ಅಳಲು. ಮಳೆ ತೀವ್ರವಾಗಿದ್ದು, ಕೆಲವು ದಿನಗಳ ಮಟ್ಟಿಗಾದರೂ ಗ್ರಾಮೀಣ ಭಾಗದ ಮೊಬೈಲ್ ಟವರ್‌ಗಳಿಗೆ ಸಿಬಂದಿ ನೇಮಿಸಿ ಅಂತಹ ಕೇಂದ್ರಗಳಿಗೆ ಡೀಸೆಲ್ ಅನ್ನು ಜಿಲ್ಲಾಡಳಿತದಿಂದ ಪೂರೈಸಿ ಘಟಕಗಳು ಕಾರ್ಯಾಚರಿಸುವಂತೆ ಮಾಡಬೇಕು ಎಂದು ಆ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತುರ್ತು ಸೇವೆಗಳಿಗೆ ಮೊಬೈಲ್ ಸಿಗ್ನಲ್ ದೊರಕದೆ ಭಾರೀ ಸಮಸ್ಯೆಯಾಗುತ್ತಿದೆ. ವಿದ್ಯುತ್‌, ಮೊಬೈಲ್ ಸೇವೆ ಎರಡೂ ಇಲ್ಲದೆ ಜನರನ್ನು ಕತ್ತಲಿನಲ್ಲಿ ಕೂಡಿಟ್ಟಂತಾಗಿದೆ. ಟವರ್‌ಗಳ ಕಾರ್ಯಾಚರಣೆಗೆ ಡೀಸೆಲ್ ಸರಬರಾಜು ಇಲ್ಲದೆ ಸ್ಥಗಿತಗೊಂಡಿರುವ ಕಾರಣ ಸೊತ್ತುಗಳು ಕೂಡ ತುಕ್ಕು ಹಿಡಿಯುತ್ತಿವೆ.

ಎ.ಸಿ. ಗಮನಕ್ಕೆ ತರುವೆ

ವಿಪತ್ತು ನಿರ್ವಹಣೆಗೆ ಸಂಪರ್ಕದ ಸಹಾಯ ಅತ್ಯವಶ್ಯ. ಬಿಎಸ್ಸೆನ್ನೆಲ್ ಮಾತ್ರವೇ ಇರುವ ಗ್ರಾಮಗಳ ಮೊಬೈಲ್ ಟವರ್‌ಗಳಿಗೆ ಡೀಸೆಲ್ ಒದಗಿಸಿ ಮಳೆ ಹತೋಟಿಗೆ ಬರುವ ತನಕ ಪರ್ಯಾಯ ವ್ಯವಸ್ಥೆ ಮಾಡಿ ಪರಿಸ್ಥಿತಿ ಕಾಯ್ದುಕೊಳ್ಳುವ ಸಂಬಂಧ ಎ.ಸಿ.ಯವರ ಗಮನಕ್ಕೆ ತರುತ್ತೇನೆ.
– ಭವಾನಿಶಂಕರ , ಇ.ಒ., ತಾ.ಪಂ. ಸುಳ್ಯ
Advertisement

Udayavani is now on Telegram. Click here to join our channel and stay updated with the latest news.

Next