ಹೊಸದಿಲ್ಲಿ: ಪೆಟ್ರೋಲಿಯಂ ಉತ್ಪನ್ನಗಳಿಗೆ ಹೊರತಾದ ಪರ್ಯಾಯ ಇಂಧನ ಬಳಕೆಗೆ ಹೆಚ್ಚಿನ ಉತ್ತೇಜನ ಹಿನ್ನೆಲೆಯಲ್ಲಿ ದೇಶದಲ್ಲಿ ಡೀಸೆಲ್ ಬಳಕೆ ಕಳೆದ 4 ತಿಂಗಳಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾದ್ದರಿಂದ ಇಲ್ಲಿ ಉತ್ಪಾದಕ ಕಂಪೆನಿಗಳು, ಸಾರಿಗೆ ಮತ್ತು ಕೃಷಿ ಕ್ಷೇತ್ರಗಳಿಗೆ ಬೇಡಿಕೆ ಅತಿ ಹೆಚ್ಚಿದೆ. ಕೃಷಿ-ಸಾರಿಗೆ ಕ್ಷೇತ್ರಗಳು ಅತಿ ಹೆಚ್ಚು ಡೀಸೆಲ್ ಅನ್ನು ಬಳಕೆ ಮಾಡುತ್ತವೆ. ಆದರೆ ಕಳೆದ ನಾಲ್ಕು ತಿಂಗಳಲ್ಲಿ ಬಳಕೆ ಪ್ರಮಾಣ 5.8 ಲಕ್ಷ ಟನ್ ಗಳಿಗೆ ಇಳಿದಿದೆ. ಮೇ ತಿಂಗಳಲ್ಲಿ ಈ ಪ್ರಮಾಣ 7.8 ಲಕ್ಷ ಟನ್‌ಗಳಾಗಿತ್ತು.
ಉತ್ಪಾದನೆ ರಂಗದ ಕುಸಿತ, ಅತಿಸಣ್ಣ ಉದ್ಯಮ ವಲಯದ ಕುಸಿತದಿಂದಾಗಿ ಡೀಸೆಲ್ ಬಳಕೆ ಕಡಿಮೆಯಾಗಿರಬಹುದು ಎಂದು ಹೇಳಲಾಗಿದೆ. ಅಲ್ಲದೇ, ಈ ಬಾರಿ ಉತ್ತಮ ಮಳೆಯಾದ್ದರಿಂದ ಕೃಷಿ ವಲಯ ಕಡಿಮೆ ಡೀಸೆಲ್ ಬಳಕೆ ಮಾಡಿರಬಹುದು ಎಂದು ಊಹಿಸಲಾಗಿದೆ.
ಇನ್ನು ಡೀಸೆಲ್ ರಫ್ತು ಉತ್ತಮ ಏರಿಕೆಯನ್ನು ದಾಖಲಿಸಿದೆ. ಅಕ್ಟೋಬರ್ ನವೆಂಬರ್ ವೇಳೆ 6.50 ಲಕ್ಷ ಟನ್ ಡೀಸೆಲ್ ಅನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿ. (ಎಮ್‌ಆರ್‌ಪಿಎಲ್)ದಾಖಲಿಸಿದೆ. ಅಕ್ಟೋಬರ್ ತಿಂಗಳಲ್ಲೇ ದೇಶದ ಅತಿ ದೊಡ್ಡ ಪೆಟ್ರೋಲಿಯಂ ಶುದ್ಧೀಕರಣ ಮಾಡುವ ಇಂಡಿಯನ್ ಆಯಿಲ್ ಕಾರ್ಪ್ 1.30 ಲಕ್ಷ ಟನ್ ಅನ್ನು ರಫ್ತು ಮಾಡಿದೆ. ಉತ್ತರ ಅಮೆರಿಕ, ಯುರೋಪ್ ದೇಶಗಳಿಗೆ ಡೀಸೆಲ್ ರಫ್ತು ಮಾಡಲಾಗಿದೆ.