Advertisement
ಡೀಸೆಲ್ ಕಾರುಗಳತ್ತ ಆಸಕ್ತಿಪೆಟ್ರೋಲ್ ಇಂಧನದ ಮೂಲಕ ಓಡಾಡುವ ಕಾರುಗಳಿಗೇ ಜನ ಹೆಚ್ಚು ಆಸಕ್ತಿ ತೋರುತ್ತಾರಾದರೂ ಈಗೀಗ ಡೀಸೆಲ್ ಕಾರುಗಳತ್ತಲೂ ಜನ ತಿರುಗಿದ್ದಾರೆ. ಮಾರುಕಟ್ಟೆಯಲ್ಲಿ ಪೆಟ್ರೋಲ್ ಕಾರುಗಳಂತೆಯೇ ಡೀಸೆಲ್ ಕಾರುಗಳಿಗೂ ಬೇಡಿಕೆ ಇದ್ದು, ತಲಾ ಶೇ. 50ರ ಪ್ರಮಾಣದಲ್ಲಿ ಎರಡೂ ಕಾರುಗಳು ಮಾರಾಟವಾಗುತ್ತಿವೆ ಎಂಬುದು ಕೆಲ ಶೋರೂಂ ಪ್ರಮುಖರ ಅಭಿಪ್ರಾಯ. ಇನ್ನು ಕೆಲವು ಶೋರೂಂಗಳಲ್ಲಿ ಪೆಟ್ರೋಲ್ ಕಾರುಗಳಿಗೇ ಹೆಚ್ಚು ಬೇಡಿಕೆ.
ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಪೈಕಿ ಡೀಸೆಲ್ ಕಾರುಗಳಿಗೂ ಬೇಡಿಕೆ ಹೆಚ್ಚಲು ಮುಖ್ಯ ಕಾರಣ ಪೆಟ್ರೋಲ್‌ಗಿಂತ ಡೀಸೆಲ್ ಬೆಲೆ ಕಡಿಮೆ ಇರುವುದು. ಪ್ರಸ್ತುತ ಮಾರುಕಟ್ಟೆ ದರಗಳನ್ನು ಗಮನಿಸಿದರೆ ಸುಮಾರು 10 ರೂ.ಗಳಷ್ಟು ದರ ವ್ಯತ್ಯಾಸವಿದೆ. ಅದಕ್ಕಾಗಿ ಜನ ಡೀಸೆಲ್ ಕಾರುಗಳತ್ತ ಚಿತ್ತ ಹರಿಸುತ್ತಿದ್ದಾರೆ. ಆದರೆ ಇದೇ ವೇಳೆ ಕಾರಿನ ಒಟ್ಟು ವೆಚ್ಚ ನೋಡಿದರೆ ಡೀಸೆಲ್ ಇಂಧನ ಚಾಲಿತ ಕಾರಿಗೆ ಪೆಟ್ರೋಲ್ ಇಂಧನ ಚಾಲಿತ ಕಾರಿಗಿಂತ ಸುಮಾರು 1.5 ಲಕ್ಷ ರೂ.ಗಳಷ್ಟು ದರ ಹೆಚ್ಚಿದೆ. ಒಟ್ಟಾರೆ ದರದಲ್ಲಿ ಹೆಚ್ಚಳವಿದ್ದರೂ ಬಳಿಕದ ಖರ್ಚುಗಳು ಡೀಸೆಲ್ ಚಾಲಿತ ಕಾರುಗಳಿಗೆ ಕಡಿಮೆಯೇ ಎನ್ನಬಹುದು. ಅಧಿಕ ಮೈಲೇಜ್
ಪೆಟ್ರೋಲ್ ಇಂಧನ ಚಾಲಿತ ಕಾರುಗಳಿಗಿಂತ ಡೀಸೆಲ್ ಚಾಲಿತ ಕಾರುಗಳು ಅಧಿಕ ಮೈಲೇಜ್ ನೀಡುವುದರಿಂದ ಜನ ಇದರತ್ತ ಆಸಕ್ತಿ ತಾಳುತ್ತಿದ್ದಾರೆ. ಪೆಟ್ರೋಲ್ ಕಾರುಗಳಿಗಿಂತ ಐದಾರು ಕಿ.ಮೀ. ಹೆಚ್ಚು ಮೈಲೇಜ್ ಅನ್ನು ಡೀಸೆಲ್ ಕಾರುಗಳು ನೀಡುತ್ತವೆ. ದೊಡ್ಡ, ನಿತ್ಯ ಉಪಯೋಗಿಸುವ ಕಾರುಗಳಾದರೆ ಡೀಸೆಲ್ ಬೆಸ್ಟ್ ಎಂದೂ ಇದೆ. ಜತೆಗೆ ಸವಾರಿಯೂ ಆರಾಮದಾಯಕ ಎಂಬ ಅಭಿಪ್ರಾಯ ಕಾರು ಗ್ರಾಹಕ ವರ್ಗದ್ದು. ಅದಕ್ಕಾಗಿಯೇ ಈ ಕಾರಿನತ್ತ ಆಕರ್ಷಿತರಾಗುತ್ತಾರೆ ಎನ್ನುತ್ತಾರೆ ಕಾರು ಶೋರೂಂ ಪ್ರಮುಖರು.
Related Articles
ಸಾಮಾನ್ಯವಾಗಿ ಕಡಿಮೆ ಬೆಲೆಯ ಕಾರುಗಳನ್ನು ಖರೀದಿಸುವವರಾದರೆ ಪೆಟ್ರೋಲ್ ಇಂಧನ ಚಾಲಿತ ಕಾರುಗಳನ್ನೇ ಖರೀದಿ ಮಾಡುತ್ತಾರೆ. ಆದರೆ 8 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಕಾರು ಖರೀದಿಸುವುದಿದ್ದರೆ ಡೀಸೆಲ್ ಚಾಲಿತ ಕಾರುಗಳನ್ನು ಖರೀದಿ ಮಾಡುತ್ತಾರೆ. ಆದರೂ ಸುಮಾರು ಶೇ. 20ರಷ್ಟು ಮಂದಿ ಹೀಗೆ ಖರೀದಿ ಮಾಡುವವರಿದ್ದು, ಉಳಿದೆಲ್ಲರೂ ಪೆಟ್ರೋಲ್‌ಚಾಲಿತ ಕಾರುಗಳತ್ತ ಆಸಕ್ತಿ ತೋರಿಸುತ್ತಾರೆ ಎಂಬುದು ಶೋರೂಂಗಳ ಲೆಕ್ಕಾಚಾರ.
Advertisement
ಪರಿಸರ ಪ್ರಜ್ಞೆಡೀಸೆಲ್ ಕಾರುಗಳಲ್ಲಿ ಅಧಿಕ ಮೈಲೇಜ್, ಕಡಿಮೆ ದರದ ಇಂಧನ ಹೀಗೆ ಹತ್ತಾರು ಲಾಭಗಳಿವೆ. ಆದರೆ ಪರಿಸರದ ದೃಷ್ಟಿಯಿಂದ ನೋಡಿದರೆ ಡೀಸೆಲ್ ಕಾರುಗಳು ಅಷ್ಟು ಒಳ್ಳೆಯದಲ್ಲ. ಇವುಗಳ ಎಂಜಿನ್ ಉಗುಳುವ ಹಾನಿಕಾರಕ ಅಂಶಗಳು ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚು. ಗ್ರಾಹಕರಲ್ಲೂ ಈಗ ಪರಿಸರ ಪ್ರಜ್ಞೆಯೂ ಅಧಿಕವಿರುವುದರಿಂದ ಈ ಬಗ್ಗೆಯೂ ಯೋಚನೆ ಮಾಡುತ್ತಾರೆ. ಧನ್ಯಾ ಬಾಳೆಕಜೆ