ಗೋರಖ್‌ಪುರ: ಎರಡು ದಿನಗಳಲ್ಲಿ 30 ಮಕ್ಕಳ ಸಾವಿಗೆ ಕಾರಣವಾದ ಗೋರಖ್‌ಪುರದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಮತ್ತೂಂದು ಮಗು ಸಾವಿಗೀಡಾಗಿದೆ. ಈ ಮೂಲಕ ಕಳೆದ ಐದು ದಿನಗಳಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ 63ಕ್ಕೇರಿದೆ. ಆದರೆ ಮಕ್ಕಳ ಸಾವಿಗೆ ಕಾರಣವೇನು ಎಂಬ ಗೊಂದಲ ಮುಂದುವರಿದಿದೆ. ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ.
ಸೋಮವಾರ 9 ಮಕ್ಕಳು ಅಸುನೀಗುವುದ ರೊಂದಿಗೆ ಸಾವಿನ ಸರಣಿ ಆರಂಭವಾಗಿದ್ದು, ಮಂಗಳವಾರ 12, ಬುಧವಾರ 9 ಮಕ್ಕಳು, ಗುರುವಾರ 14 ನವಜಾತ ಶಿಶುಗಳ ಸಹಿತ 23 ಮಕ್ಕಳು, ಶುಕ್ರವಾರ 9 ಮಕ್ಕಳು ಹಾಗೂ ಶನಿವಾರ ಮತ್ತೂಂದು ಮಗು ಸಾವಿಗೀಡಾಗಿದ್ದು, ಮೃತ ಮಕ್ಕಳ ಸಂಖ್ಯೆ 63 ತಲುಪಿದೆ. ಘಟನೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ರಾಜ್ಯ ಸರಕಾರ ಆದೇಶಿಸಿದೆ.
ಕಾರಣ ಇನ್ನೂ ನಿಗೂಢ: ಈ ನಡುವೆ ಇಷ್ಟೊಂದು ಮಕ್ಕಳ ಸಾವಿಗೆ ಕಾರಣವೇನು ಎಂಬುದು ನಿಗೂಢವಾಗಿಯೇ ಉಳಿದಿದೆ. ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, “ವೈದ್ಯ ಕಾಲೇಜಿನಲ್ಲಿ ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಲ್ಲ. ನಿಖರ ಕಾರಣ ಏನೆಂಬುದು ತನಿಖೆ ಅನಂತರ ತಿಳಿಯಲಿದೆ’ ಎಂದಿದ್ದಾರೆ. ಇದೇ ವೇಳೆ ಮಾಧ್ಯಮಗಳೆದುರು ಮಾತನಾಡಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, “ಹಣ ಪೂರೈಸದ ಕಾರಣ ದ್ರವರೂಪದ ಆಮ್ಲಜನಕ ವಿತರಕರು ಪೂರೈಕೆ ಸ್ಥಗಿತಗೊಳಿಸಿದ್ದು, ಇದರಿಂದಾಗಿ ಮಕ್ಕಳು ಸಾವಿಗೀಡಾಗಿದ್ದಾರೆ’ ಎನ್ನುವ ಮೂಲಕ ಆರೋಗ್ಯ ಸಚಿವರ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
20.84 ಲ. ರೂ. ಪಾವತಿಸಿದ ಆಸ್ಪತ್ರೆ: ಇದೇ ವೇಳೆ “ಆಸ್ಪತ್ರೆ ಆಡಳಿತ ದೊಡ್ಡ ಮೊತ್ತವನ್ನು ಬಾಕಿ ಉಳಿಸಿಕೊಂಡಿತ್ತು. ಎಷ್ಟೇ ಮನವಿ ಮಾಡಿದರೂ ಹಣ ನೀಡದ ಕಾರಣ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಲಾಗಿತ್ತು’ ಎಂದು ಆಮ್ಲಜನಕ ಪೂರೈಕೆ ಸಂಸ್ಥೆ ಹೇಳಿದೆ. “30 ಮಕ್ಕಳು ಸಾವಿಗೀಡಾದ ಅನಂತರ ಎಚ್ಚೆತ್ತುಕೊಂಡ ಆಸ್ಪತ್ರೆ ಆಡಳಿತ ಈಗ 20.84 ಲಕ್ಷ ರೂ. ಪಾವತಿಸಿದೆ’ ಎಂದು ಪುಷ್ಪಾ ಸೇಲ್ಸ್ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಸವಾಲಾಗಿದೆ ಮೆದುಳಿನ ಉರಿಯೂತ: “ಜಪಾನ್ ಮೂಲದ ಕಾಯಿಲೆಯಾಗಿರುವ ಮೆದುಳಿನ ಉರಿಯೂತ ಸರಕಾರಕ್ಕೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. 1978ರಿಂದಲೂ ಕಾಣಿಸಿಕೊಳ್ಳುತ್ತಿರುವ ಮೆದುಳಿನ ಉರಿಯೂತ ಈವರೆಗೆ ನೂರಾರು ಮಕ್ಕಳನ್ನು ಬಲಿಪಡೆದಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸಿಎಂ ಯೋಗಿ ಪ್ರತಿನಿಧಿಸುವ ಗೋರಖ್‌ಪುರ ಕ್ಷೇತ್ರದ ಸರಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ 63 ಮಕ್ಕಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.
ಪ್ರಿನ್ಸಿಪಾಲ್ ಅಮಾನತು: ಘಟನೆ ಸಂಬಂಧ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ| ರಾಜೀವ್ ಮಿಶ್ರಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. “ಘಟನೆಗೆ ಸಂಬಂಧಿಸಿ ನಿರ್ಲಕ್ಷ್ಯ ತಳೆದ ಹಿನ್ನೆಲೆಯಲ್ಲಿ ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಕಾಲೇಜಿನ ಪ್ರಿನ್ಸಿಪಾಲರನ್ನು ಅಮಾನತು ಮಾಡಲಾಗಿದೆ’ ಎಂದು ಉತ್ತರ ಪ್ರದೇಶದ ಆರೋಗ್ಯ ಸಚಿವ ಸಿದ್ಧಾರ್ಥನಾಥ್ ಸಿಂಗ್ ಹೇಳಿದ್ದಾರೆ.