ಗೋಲ್ಡ್‌ಕೋಸ್ಟ್: ತಂದೆಯನ್ನು ಗೋಲ್ಡ್‌ಕೋಸ್ಟ್ ಕ್ರೀಡಾಗ್ರಾಮಕ್ಕೆ ಪ್ರವೇಶಿಸಲು ಬಿಡದಿದ್ದರೆ ನಾನು ಕೂಟದಲ್ಲಿ ಆಡಲಾರೆ ಎನ್ನುವ ಸೈನಾ ನೆಹ್ವಾಲ್ ವಿವಾದಾತ್ಮಕ ಹೇಳಿಕೆ ಇನ್ನೂ ತಣ್ಣಗಾಗಿಲ್ಲ. ಸೈನಾರ ಈ ಹೇಳಿಕೆ ಕ್ರೀಡಾವಲಯದಲ್ಲಿ ಭಾರೀ ಚೆರ್ಚೆಗೀಡಾಗಿರುವುದರಿಂದ ಬೇಸತ್ತಿರುವ ಸೈನಾ ತಂದೆ ಹರ್ವೀರ್ ಸಿಂಗ್, ಮಗಳ ಸ್ಪರ್ಧೆಯನ್ನು ಬೆಂಬಲಿಸುವುದಕ್ಕಾಗಿ ಗೋಲ್ಡ್‌ಕೋಸ್ಟ್‌ಗೆ ಬಂದಿದ್ದೇನೆಯೇ ಹೊರತು ಬೀಚ್ ಸುತ್ತು¤ವುದಕ್ಕೋಸ್ಕರ ಅಲ್ಲ ಎಂದಿದ್ದಾರೆ.
ಇತ್ತೀಚೆಗೆ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್‌ಗೆ ಪತ್ರ ಬರೆದಿದ್ದ ಸ್ಟಾರ್ ಆಟಗಾರ್ತಿ ಸೈನಾ, ತನ್ನ ತಂದೆ ಹರ್ವೀರ್‌ಗೆ ಕ್ರೀಡಾಗ್ರಾಮದಲ್ಲಿ ತನ್ನೊಂದಿಗೆ ತಂಗಲು ಅವಕಾಶ ನೀಡದಿದ್ದರೆ ತಾನು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಆಡಲಾರೆ ಎಂದಿದ್ದರು. ಈ ಹೇಳಿಕೆ ಇತರ ದೇಶಿ ಕ್ರೀಡಾಪಟುಗಳ ಕೆಂಗಣ್ಣಿಗೆ ಗುರಿಯಾಗಿತ್ತಲ್ಲದೆ ಭಾರತೀಯ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೀಡಾಗಿತ್ತು. ಈ ವಿಚಾರವಾಗಿ ಬೇಸರಗೊಂಡು ಪ್ರತಿಕ್ರಿಯಿಸಿರುವ ಹರ್ವೀರ್, ಇಲ್ಲಿ ಬಂದು ಬೀಚ್ ಸುತ್ತುವುದು ನನ್ನ ಉದ್ದೇಶವಲ್ಲ ಎಂದಿದ್ದಾರೆ.
“ಕಳೆದ ಶುಕ್ರವಾರ ಸೈನಾ ಗೋಲ್ಡ್‌ಕೋಸ್ಟ್ ತಲುಪಿದ ಅನಂತರ ರಾತ್ರಿ ಸುಮಾರು 11ರ ಹೊತ್ತಿಗೆ ನಾನು ತತ್ತರಿಸಿಹೋದೆ. ಗೋಲ್ಡ್‌ಕೋಸ್ಟ್‌ಗೆ ತೆರಳಲಿದ್ದ ಅಧಿಕಾರಿಗಳ ಪಟ್ಟಿಯಿಂದ ನನ್ನ ಹೆಸರು ತಪ್ಪಿರುವ ಹಾಗೂ ನಾನೆಲ್ಲಿಗೆ ಹೋಗಬೇಕೆನ್ನುವುನ್ನು ತಿಳಿಸಲು ಯಾವ ಅಧಿಕಾರಿಯೂ ನೆರವಾಗಲಿಲ್ಲ. ಕೊನೆಗೆ ನನಗೆ ಭಾರತೀಯ ಮುಖ್ಯ ಆಯುಕ್ತರೊಬ್ಬರು ಗೋಲ್ಡ್‌ಕೋಸ್ಟ್‌ಗೆ ಆಗಮಿಸಲು ನೆರವಾದರು’ ಎಂದು ಹರ್ವೀರ್ ಹೇಳಿದರು.
ಗೋಲ್ಡ್‌ಕೋಸ್ಟ್‌ಗೆ ಬರುವ ಎಲ್ಲ ಖರ್ಚನ್ನು ಸೈನಾ ಅವರೇ ಭರಿಸಿರುವುದಾಗಿ ತಿಳಿಸಿರುವ ಹರ್ವೀರ್, “ಅವಳು ಕೆಲವು ಲಕ್ಷ ರೂ. ವ್ಯಯಿಸಿ ನನ್ನನು ಇಲ್ಲಿಗೆ ಕರೆಸಿಕೊಂಡರೂ ನನಗೆ ತಂಗಲು ವ್ಯವಸ್ಥೆಯಾಗಲಿಲ್ಲ. ನಾವವಳ ವೈಯಕ್ತಿಕ ಕೋಚ್ ಅಲ್ಲ. ಆದರೆ ಅವಳಿಗೆ ಕೌಶಲ ತಿಳಿಸುವ ಅಧಿಕಾರಿಯಂತೂ ಹೌದು. ನನ್ನ ಮಗಳು ಇಲ್ಲಿ ಆಡಲಿದ್ದಾಳೆ. ನಾನವಳನ್ನು ಹುರಿದುಂಬಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆಯೇ ಹೊರತು ಈ ಇಳಿವಯಸ್ಸಿನಲ್ಲಿ ಇಲ್ಲಿನ ಬೀಚ್ ಸುತ್ತುವ ಆಸೆಯಿಂದಂತೂ ಖಂಡಿತ ಅಲ್ಲ’ ಎಂದು ಹೇಳಿದ್ದಾರೆ.