Advertisement

ದೀದಿ ಏಟು ನನಗೆ ಆಶೀರ್ವಾದವಿದ್ದಂತೆ

12:54 AM May 10, 2019 | Team Udayavani |

ಹೊಸದಿಲ್ಲಿ: ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರಚಾರ ಕಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ಹಲವು ಬಾರಿ ವಾಕ್ಸಮರ ನಡೆದಿದೆ. ಇದಕ್ಕೀಗ ಹೊಸ ಸೇರ್ಪಡೆಯೆಂಬಂತೆ, “ಕಪಾಳಮೋಕ್ಷ’ ಎಂಬ ಹೇಳಿಕೆಗೆ ಸಂಬಂಧಿಸಿ ಮತ್ತೆ ಉಭಯ ನಾಯಕರು ಪರಸ್ಪರ ಮಾತಿನಲ್ಲೇ ಕಚ್ಚಾಡಿಕೊಂಡಿದ್ದಾರೆ.

Advertisement

ಪಶ್ಚಿಮ ಬಂಗಾಲದ ಎರಡು ಕಡೆ ಗುರುವಾರ ಪ್ರಚಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ಇತ್ತೀಚೆಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆಡಿರುವ ಮಾತುಗಳನ್ನು ಉಲ್ಲೇಖೀಸಿ ಅವರ ವಿರುದ್ಧ ಗುಡುಗಿದ್ದಾರೆ. “ಮೋದಿಯನ್ನು ಪ್ರಧಾನ ಮಂತ್ರಿ ಎಂದು ಒಪ್ಪಿಕೊಳ್ಳಲು ನಾನು ಸಿದ್ಧಳಿಲ್ಲ ಎನ್ನುವ ಮೂಲಕ ಮಮತಾ ಅವರು ಈ ದೇಶದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲುವ ಭಯದಿಂದ ಸಂವಿಧಾನವನ್ನೇ ಅವಮಾನಿಸುತ್ತಿದ್ದಾರೆ. ಅವರು ಪಾಕಿಸ್ಥಾನದ ಪ್ರಧಾನಿಯನ್ನಾದರೂ ಒಪ್ಪಿಕೊಳ್ಳಲು ರೆಡಿಯಿದ್ದಾರೆ’ ಎಂದು ಮೋದಿ ಆರೋಪಿಸಿದ್ದಾರೆ. ಜತೆಗೆ, “ಮಮತಾ ಅವರು ಬಳಸುತ್ತಿರುವ ಭಾಷೆಯೇ ಅವರ ಹತಾಶೆಯನ್ನು ತೋರಿಸುತ್ತಿದೆ. ಅವರು ಈಗ ಕಲ್ಲು ಬಿಸಾಕುವ ಬಗ್ಗೆ, ಕಪಾಳಮೋಕ್ಷ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ನನಗೆ ಕಪಾಳಮೋಕ್ಷ ಮಾಡುತ್ತಾರಂತೆ. ಆದರೆ, ನಾನು ಇಂಥ ಎಲ್ಲ ರೀತಿಯ ಅವಮಾನಗಳನ್ನೂ ಅರಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದೇನೆ. ಅವರ ಕಪಾಳಮೋಕ್ಷ ನನಗೆ ಆಶೀರ್ವಾದವಿದ್ದಂತೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.

ಭಾಷೆ ಅರ್ಥಮಾಡಿಕೊಳ್ಳಿ: ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಮಮತಾ, “ಮೊದಲು ಭಾಷೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ನಾನು ಮೋದಿಗೆ ಕಪಾಳಮೋಕ್ಷ ಮಾಡುತ್ತೇನೆ ಎಂದು ಯಾವತ್ತೂ ಹೇಳಿಲ್ಲ. ಹಾಗೆ ಹೇಳುವುದೂ ಇಲ್ಲ. ಪ್ರಧಾನಿ ಮೋದಿಯವರು ಪ್ರಜಾತಂತ್ರದ ಕಪಾಳಮೋಕ್ಷ ಎದುರಿಸಲಿದ್ದಾರೆ’ ಎಂದಷ್ಟೇ ಹೇಳಿದ್ದೆ ಎಂದಿದ್ದಾರೆ. ಇದೇ ವೇಳೆ, ಟಿಎಂಸಿ ಅಭ್ಯರ್ಥಿಗಳೆಲ್ಲ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಪ್ರಧಾನಿ ಆರೋಪಕ್ಕೂ ಪ್ರತಿಕ್ರಿಯಿಸಿದ ಮಮತಾ, “ಮೋದಿಯವರು ತಾಕತ್ತಿದ್ದರೆ ಮೊದಲು ಈ ಆರೋ ಪ ವನ್ನು ಸಾಬೀತುಪಡಿಸಲಿ. ಅದನ್ನು ಸಾಬೀತುಪಡಿಸು ವಲ್ಲಿ ವಿಫ‌ಲವಾದರೆ 100 ಬಾರಿ ಬಸ್ಕಿ ಹೊಡೆಯಲಿ’ ಎಂದಿದ್ದಾರೆ.

ಕಿಚಡಿಗೆ ಮತ ಹಾಕದಿರಿ: ಇದೇ ವೇಳೆ, ಉ.ಪ್ರದೇಶದ ಅಜಂಗಢ‌ದಲ್ಲೂ ಪ್ರಚಾರದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, “ಪ್ರತಿಪಕ್ಷಗಳ ಮಹಾಕಲಬೆರಕೆಯು ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತದೆ. ಅದು ದೇಶದಲ್ಲಿ ನಿರಂಕುಶ ಪ್ರಭುತ್ವ ಮತ್ತು ಅಸ್ಥಿರತೆಯನ್ನು ತರುತ್ತದೆ. ಹಾಗಾಗಿ ಯಾವ ಕಾರಣಕ್ಕೂ ಆ ಕಿಚಡಿ ಮೈತ್ರಿಕೆ ಮತ ಹಾಕದಿರಿ’ ಎಂದು ಕರೆ ನೀಡಿದ್ದಾರೆ.

ಸೋದರ ಸಾಲಮನ್ನಾ ಪಡೆದಿಲ್ಲ: ಚೌಹಾಣ್‌
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರಕಾರದ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಸೋದರನ ಸಾಲ ವನ್ನೂ ಮನ್ನಾ ಮಾಡಲಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಅರೋಪವನ್ನು ಚೌಹಾಣ್‌ ತಳ್ಳಿಹಾಕಿದ್ದಾರೆ. ನನ್ನ ಸೋದರ ರೋಹಿತ್‌ ಚೌಹಾಣ್‌ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ರಾಜ್ಯ ಸರಕಾರದ ಆದೇಶದ ಪ್ರಕಾರ ಸಾಲ ಮನ್ನಾ ಲಾಭ ಪಡೆ ಯಲು ರೈತ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಪರಿಶೀಲಿಸಿದ ಅನಂತರ ಅರ್ಹವಾದರೆ ಅವರಿಗೆ ಸಾಲ ನೀಡಲಾಗುತ್ತದೆ. ಆದರೆ ನನ್ನ ಸೋದರ ರೋಹಿತ್‌ ಅರ್ಜಿಯನ್ನೇ ಸಲ್ಲಿಸಿಲ್ಲ. ಅಷ್ಟೇ ಅಲ್ಲ, ಅವರು ಆದಾಯ ತೆರಿಗೆ ಪಾವತಿದಾರರಾಗಿ ದ್ದರಿಂದ, ಅರ್ಹರಲ್ಲ ಎಂದು ಗ್ರಾಮ ಪಂಚಾಯಿತಿ ದಾಖಲೆಗಳು ಹೇಳುತ್ತಿವೆ ಎಂದು ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

Advertisement

ನಾಮಪತ್ರ: ತೇಜ್‌ ಬಹಾದೂರ್‌ ಅರ್ಜಿ ವಜಾ
ಉತ್ತರಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯಲು ಬಿಎಸ್‌ಎಫ್ನಿಂದ ವಜಾಗೊಂಡ ಮಾಜಿ ಯೋಧ ತೇಜ್‌ ಬಹಾದೂರ್‌ ಯಾದವ್‌ ಮಾಡಿದ ಕೊನೆಯ ಪ್ರಯತ್ನವೂ ವಿಫ‌ಲವಾಗಿದೆ. ತಮ್ಮ ನಾಮಪತ್ರ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ತೇಜ್‌ ಬಹಾದೂರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾ ಮಾಡಿದೆ. ಮುಖ್ಯ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಈ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲ ಎಂದು ಹೇಳಿದೆ.

ಪ್ರಧಾನಿ ಮೋದಿ ಅವರು ಸುಲಭ ಜಯ ಸಾಧಿಸಲಿ ಎಂಬ ಉದ್ದೇಶ ದಿಂದ ವಾರಾಣಸಿಯ ಚುನಾವಣಾ ಅಧಿಕಾರಿಯು ನನ್ನ ನಾಮಪತ್ರ ತಿರಸ್ಕರಿಸಿ ದ್ದಾರೆ ಎಂದು ಆರೋಪಿಸಿ ತೇಜ್‌ ಯಾದವ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಬುಧವಾರವಷ್ಟೇ ಈ ಕುರಿತು ವಿವರ ನೀಡುವಂತೆ ಚುನಾವಣಾಧಿಕಾರಿಗೆ ನ್ಯಾಯಾಲಯ ಸೂಚಿಸಿತ್ತು.
ಪ್ರಜಾಪ್ರಾತಿನಿಧ್ಯ ಕಾಯ್ದೆಯ ಪ್ರಕಾರ, ತಮ್ಮನ್ನು ಸೇನೆಯು ಭ್ರಷ್ಟಾಚಾರ ಅಥವಾ ದೇಶಕ್ಕೆ ಅವಿಧೇಯನಾಗಿದ್ದಕ್ಕೆ ವಜಾ ಮಾಡಿಲ್ಲ ಎಂದು ಉಲ್ಲೇಖೀಸಿರುವ ನಿರಾಕ್ಷೇಪಣಾ ಪತ್ರವನ್ನು ತೇಜ್‌ ಬಹಾದೂರ್‌ ಯಾದವ್‌ ಅವರು ನಾಮಪತ್ರದ ಜತೆ ಸಲ್ಲಿಸಬೇಕಿತ್ತು. ಆದರೆ, ಅವರು ಅದನ್ನು ಸಲ್ಲಿಸದ ಕಾರಣ, ಅವರ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಹೇಳಿದ್ದರು.

ಇಂಥ ಹೇಡಿ ಪ್ರಧಾನಿಯನ್ನು ನಾನು ಯಾವತ್ತೂ ನೋಡಿಲ್ಲ
ಪದೇ ಪದೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರನ್ನು ಟಾರ್ಗೆಟ್‌ ಮಾಡುತ್ತಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕೆಂಡಾಮಂಡಲರಾಗಿದ್ದಾರೆ. ಗುರುವಾರ ಉತ್ತರಪ್ರದೇಶದ ಪ್ರತಾಪ್‌ಗ್ಡದಲ್ಲಿ ತಮ್ಮ ಸಿಟ್ಟು ಹೊರಹಾಕಿದ ಪ್ರಿಯಾಂಕಾ, “ನನ್ನ ಜೀವನದಲ್ಲೇ ಇಷ್ಟೊಂದು ಹೇಡಿ ಮತ್ತು ದುರ್ಬಲ ಪ್ರಧಾನಮಂತ್ರಿ ಯನ್ನು ನೋಡಿಲ್ಲ’ ಎಂದಿದ್ದಾರೆ. ಮೋದಿಯವರು ನಿಜಕ್ಕೂ ಬಲಿ ಷ್ಠರೇ ಆಗಿದ್ದರೆ, ನಿಮ್ಮ ಸಮಸ್ಯೆ ಗಳನ್ನೆಲ್ಲ ಇನ್ನೂ ಏಕೆ ಈಡೇರಿಸಿಲ್ಲ ಎಂಬು ದನ್ನು ಹೇಳಲಿ. ಪ್ರತಿ ಭಾಷಣದಲ್ಲೂ ಅವರು ಪಾಕಿಸ್ಥಾನವನ್ನು ಪ್ರಸ್ತಾಪಿಸು ತ್ತಾರೆಯೇ ವಿನಾ, ಅವರ ಸರಕಾರ ಮಾಡಿದ ಸಾಧನೆಯನ್ನಾಗಲೀ, ಮುಂದೆ ಮಾಡಲಿ ರುವ ಕೆಲಸಗಳ ನ್ನಾಗಲೀ ಹೇಳುವುದಿಲ್ಲ ಎಂದಿದ್ದಾರೆ. ನಾವು ಇಲ್ಲಿರು ವುದು ನಿಮ್ಮಂದಾಗಿ. ನಮ್ಮನ್ನು ನಾಯಕರನ್ನಾಗಿಸಿದ್ದೂ ನೀವೇ(ಜನರು). ಯಾವತ್ತೂ ಜನರೇ ದೊಡ್ಡವರು, ನಾವಲ್ಲ ಎಂದೂ ಹೇಳಿದ್ದಾರೆ.

ನೀವು ಪ್ರಧಾನಿ ಮೋದಿಯನ್ನು ಟೀಕಿಸಿದಷ್ಟೂ ಕಮಲ ಅರಳುತ್ತೆ
ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮೋದಿ ವಿರುದ್ಧ ಹೆಚ್ಚು ಹೆಚ್ಚು ಟೀಕಿಸಿದಷ್ಟೂ ಕಮಲವು ಅರಳುತ್ತಾ ಸಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಉತ್ತರಪ್ರದೇಶದ ಮೂರು ಕಡೆ ಪ್ರಚಾರ ನಡೆಸಿದ ಶಾ, “ಕಾಂಗ್ರೆಸ್‌, ಮಾಯಾವತಿ, ಅಖೀಲೇಶ್‌ ಹೀಗೆ ಎಲ್ಲರೂ ಮೋದಿ ವಿರುದ್ಧ ಎಲ್ಲ ರೀತಿಯಲ್ಲೂ ಅವಹೇಳನ ಮಾಡುತ್ತಿದ್ದಾರೆ. ಹಿಟ್ಲರ್‌, ಮುಸೊಲೊನಿ, ಕೊಲೆಗಾರ ಎಂದೂ ಕರೆದಿದ್ದಾರೆ. ಒಬ್ಬ ಬಡ ವ್ಯಕ್ತಿಯ ಮಗ ಪ್ರಧಾನಿಯಾಗಿದ್ದನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗು ತ್ತಿಲ್ಲ’ ಎಂದೂ ಶಾ ಹೇಳಿದ್ದಾರೆ. ಜತೆಗೆ, ದೇಶವನ್ನು ಸುರಕ್ಷಿತವಾಗಿಡಲು ಮೋದಿ ಬಿಟ್ಟು ಬೇರಾರಿಗೂ ಸಾಧ್ಯವಿಲ್ಲ. ದೇಶದ ಭದ್ರತೆಯೇ ನಮ್ಮ ಆದ್ಯತೆ. ಪಾಕಿಸ್ಥಾನದಿಂದ ಒಂದು ಬುಲೆಟ್‌(ಗೋಲಿ) ನಮ್ಮ ಕಡೆ ಬಂದರೆ, ನಮ್ಮ ಜನರು ಶೆಲ್‌(ಗೋಲಾ) ಮೂಲಕ ಪ್ರತ್ಯುತ್ತರ ಕೊಡುತ್ತಾರೆ. ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ ನಮ್ಮತ್ತ ಯಾರೂ ಕೆಟ್ಟ ದೃಷ್ಟಿ ಬೀರಲು ಸಾಧ್ಯವಿಲ್ಲ. ನುಸುಳುಕೋರರನ್ನು ಅವರ ನೆಲದಲ್ಲೇ ಹೊಡೆದುರುಳಿಸಲಾಗುತ್ತದೆ ಎಂದೂ ಶಾ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಆತಿಷಿ
ಆಮ್‌ ಆದ್ಮಿ ಪಕ್ಷದ ಪೂರ್ವ ದಿಲ್ಲಿ ಅಭ್ಯರ್ಥಿ ಆತಿಷಿ ಅವರನ್ನು ಅವಹೇಳನ ಮಾಡಿ, ಅವರ ಕುರಿತು ಸುಳ್ಳು ಮಾಹಿತಿಗಳಿರುವ ಕರಪತ್ರ ಹಂಚಿರುವುದು ಈಗ ಆಪ್‌-ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಈ ಕುರಿತು ಗುರುವಾರ ಆತಿಷಿ ಮತ್ತು ದಿಲ್ಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕರಪತ್ರವನ್ನು ಓದುವ ವೇಳೆ ಆತಿಷಿ ಕಣ್ಣೀರಿಟ್ಟಿದ್ದಾರೆ. ಜತೆಗೆ, ಇದು ಬಿಜೆಪಿ ಅಭ್ಯರ್ಥಿ ಗೌತಮ್‌ ಗಂಭೀರ್‌ ಅವರದ್ದೇ ಕೃತ್ಯ ಎಂದು ಆರೋಪಿಸಿದ್ದಾರೆ. ಆದರೆ, ಆತಿಷಿ ಆರೋಪವನ್ನು ಬಿಜೆಪಿ ತಿರಸ್ಕರಿಸಿದೆ. ಗಂಭೀರ್‌ ಅವರೂ ಆತಿಷಿ ವಿರುದ್ಧ ಹರಿಹಾಯ್ದಿದ್ದು, ನನ್ನ ವಿರುದ್ಧದ ಆರೋಪ ಸಾಬೀತುಪಡಿಸಿದ್ದೇ ಆದಲ್ಲಿ ನಾನು ಈ ಕೂಡಲೇ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ. ಸಾಬೀತುಮಾಡದಿದ್ದರೆ ನೀವು ರಾಜಕೀಯ ತ್ಯಜಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಆಪ್‌ ನಾಯಕರ ವಿರುದ್ಧ ಮಾನಹಾನಿ ಕೇಸು ದಾಖಲಿಸುವುದಾಗಿಯೂ ಎಚ್ಚರಿಸಿದ್ದಾರೆ.

ಹೋಲಿಕೆಯಾಗದಿದ್ದರೆ ವಿವಿಪ್ಯಾಟ್‌ ಮತಗಳೇ ಸಿಂಧು
ಲೋಕಸಭೆ ಚುನಾವಣೆಯ ಮತ ಎಣಿಕೆ ದಿನ ಸಮೀಪಿಸುತ್ತಿದ್ದಂತೆ ಚುನಾವಣಾ ಆಯೋಗವೂ ಈ ಬೃಹತ್‌ ಕಾರ್ಯದ ಸಿದ್ಧತೆಯಲ್ಲಿ ತೊಡಗಿದೆ. ಒಂದು ವೇಳೆ ವಿದ್ಯುನ್ಮಾನ ಮತಯಂತ್ರ(ಇವಿಎಂ) ಹಾಗೂ ಮತ ದೃಢೀಕರಣ ಯಂತ್ರ(ವಿವಿಪ್ಯಾಟ್‌)ಗಳಲ್ಲಿನ ಮತಗಳ ಹೋಲಿಕೆ ವೇಳೆ ವ್ಯತ್ಯಾಸ ಕಂಡುಬಂದರೆ, ಆಗ ವಿವಿಪ್ಯಾಟ್‌ಗಳ ಮತಗಳಿಗೇ ಮಾನ್ಯತೆ ನೀಡಲಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಈವರೆಗೆ ಹಲವು ವಿಧಾನಸಭೆ ಚುನಾವಣೆಗಳಲ್ಲಿ ವಿವಿಪ್ಯಾಟ್‌ಗಳನ್ನು ಬಳಸಲಾಗಿದೆಯಾದರೂ, ಲೋಕಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಳಸಲಾಗುತ್ತಿದೆ. ಇಲ್ಲಿಯತನಕ ಮತಗಳಲ್ಲಿ ಅಂತರ ಕಂಡುಬಂದಿದ್ದು ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ, ಈ ಬಾರಿ ಮತಗಳ ಹೋಲಿಕೆ ನಡೆಯುವ ಕಾರಣ ಫ‌ಲಿತಾಂಶವು ಎಂದಿಗಿಂತ ಕನಿಷ್ಠ 4 ಗಂಟೆ ವಿಳಂಬವಾಗಬಹುದು ಎಂದೂ ಅವರು ಹೇಳಿದ್ದಾರೆ.

ಇವಿಎಂಗೆ ಇಲಿ ಕಾಟ!
ಸ್ಟ್ರಾಂಗ್‌ರೂಂನಲ್ಲಿಟ್ಟ ಇವಿಎಂಗಳು ಹ್ಯಾಕ್‌ ಆಗುವ ಸಾಧ್ಯತೆಯಿದ್ದು, ಇವಿಎಂಗಳಿಗೆ ಅಪಾಯವಿದೆ ಎಂದು ಕೆಲವು ಪಕ್ಷಗಳ ನಾಯಕರು ಆರೋಪಿಸುವುದನ್ನು ಕೇಳಿದ್ದೀರಿ. ಆದರೆ, ಇವಿಎಂಗಳಿಗೆ ಇಲಿಗಳಿಂದ ಅಪಾಯ ವಿದೆ ಎಂದು ಯಾರಾದರೂ ಹೇಳಿದ್ದಿದೆಯಾ? ಹೌದು, ಉತ್ತರಪ್ರದೇಶದ ಮಥುರಾದಲ್ಲಿ ರಾಷ್ಟ್ರೀಯ ಲೋಕ ದಳದ ಅಭ್ಯರ್ಥಿಯೊಬ್ಬರು ಇಲಿಗಳ ಮೇಲೆ ಗೂಬೆ ಕೂರಿಸಲು ಹೊರಟಿ ದ್ದಾರೆ. ಮಂಡಿ ಸಮಿತಿಯ ಸ್ಟ್ರಾಂಗ್‌ರೂಂಗಳಲ್ಲಿ ಇಟ್ಟಿರುವಂಥ ಇವಿಎಂಗಳು ಅಪಾಯದಲ್ಲಿವೆ. ಏಕೆಂದರೆ, ಈ ಪ್ರದೇಶದಲ್ಲಿ ಇಲಿಗಳ ಕಾಟ ಹೆಚ್ಚಿದೆ. ಅವುಗಳು ಸ್ಟ್ರಾಂಗ್‌ರೂಂನೊಳಗೆ ಅತಿಕ್ರಮ ಪ್ರವೇಶ ಮಾಡಿ, ವಿದ್ಯುನ್ಮಾನ ಮತಯಂತ್ರಗಳಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ. ಹೀಗಾಗಿ ಸ್ಟ್ರಾಂಗ್‌ರೂಂ ಹೊರಗೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು ಎಂದು ಅಭ್ಯರ್ಥಿ ನರೇಂದ್ರ ಸಿಂಗ್‌ ಕೋರಿಕೊಂಡಿದ್ದರು. ಬಳಿಕ ಸತತ 3 ದಿನ ಪರಿಶೀಲನೆ ನಡೆಸಿದ ಅಧಿಕಾರಿಗಳು, ಇಲಿಗಳ ಕಾಟವಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next