Advertisement

ದೀದಿಗೆ, ಬಾಬುಗೆ ಶ್ಯಾನೇ ಬೇಜಾರು!

09:12 PM May 24, 2019 | Lakshmi GovindaRaj |

ಈ ಇಬ್ಬರೂ ಪ್ರಧಾನಿ ನರೇಂದ್ರ ಮೋದಿಯವರ ಕಡುವೈರಿಗಳು. ಮೋದಿಯವರ ವಿರೋಧಿಗಳ ಸಾಲಿನಲ್ಲಿ ಮಂಚೂಣಿಯಲ್ಲಿದ್ದವರು. ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಗಾಗಿ ತೀವ್ರ ಪ್ರಯತ್ನ ನಡೆಸಿದ್ದವರು. ಅಟ್‌ ದ ಸೇಮ್‌ ಟೈಮ್‌… ಪ್ರಧಾನಿ ಎಂಬ ಮಹತ್ತರ ಹುದ್ದೆಯ ಮೇಲೆ ಕಣ್ಣಿಟ್ಟಿದ್ದವರು. ಆದರೆ, ಇವರ ಆಸೆ ಈಗ ಹುಸಿಯಾಗಿದೆ.

Advertisement

ಇವರ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕೆಂಬ ಆಸೆಯಿಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದ ನಿಕಟಪೂರ್ವ ಸಿಎಂ ಚಂದ್ರಬಾಬು ನಾಯ್ಡು, ಶತಾಯ ಗತಾಯ ಪ್ರಯತ್ನಶೀಲರಾಗಿದ್ದರು. ಹೋದ ಬಂದ ಕಡೆಯಲ್ಲೆಲ್ಲಾ ಬಿಜೆಪಿ, ಮೋದಿ ವಿರುದ್ಧ ಕಿಡಿಕಾರಿದರು. ದಿಲ್ಲಿ ಗದ್ದುಗೆಯ ದೂರ ಗಾಮಿ ಕನಸೊಂದರ ಕಡೆಗೆ ದೃಷ್ಟಿ ನೆಟ್ಟುಕೊಂಡೇ, ರಾಷ್ಟ್ರಮಟ್ಟದ ಎಲ್ಲಾ ನಾಯಕರನ್ನು ಒಗ್ಗೂಡಿಸಲು ಶ್ರಮಿಸಿದರು. ಆದರೆ, ಅವರಿಗೆ ಅರ್ಥವಾಗದ ಒಂದೇ ಒಂದು ಸತ್ಯವೆಂದರೆ, ತಮ್ಮ ಕಾಲಡಿಯ ನೆಲದಲ್ಲಿ ಏನಾಗುತ್ತಿದೆ ಎಂಬುದು.

ದೀದಿಗೆ ಅಚ್ಚರಿಯ ಶಾಕ್‌: ಅತ್ತ, ಪಶ್ಚಿಮ ಬಂಗಾಳದಲ್ಲಿ 2011ರಿಂದ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ತಮ್ಮ ರಾಜ್ಯವನ್ನು “ಬಿಜೆಪಿ ನಿರೋಧಕ’ ರಾಜ್ಯವನ್ನಾಗಿ ಪರಿವರ್ತಿಸಿರುವ ಭ್ರಮೆಯಲ್ಲಿದ್ದರು ಮಮತಾ ದೀದಿ. ಅದೇ ಧೈರ್ಯದಲ್ಲಿ ತಮ್ಮ ಆಪ್ತ ಅಧಿಕಾರಿಯೊಬ್ಬನ್ನು ವಶಕ್ಕೆ ಪಡೆಯಲು ಬಂದ ಸಿಬಿಐಗೇ ಬಿಸಿ ಮುಟ್ಟಿಸಿದರು. ತಾವೇನೇ ಮಾಡಿದರೂ, ಬಂಗಾಳದ ಜನತೆ ತಮ್ಮನ್ನು ಬೆಂಬಲಿಸುತ್ತಾರೆಂಬ ಹುಚ್ಚು ಧೈರ್ಯದೊಂದಿಗೆ, ಬಿಜೆಪಿಯ ರ್ಯಾಲಿಗಳಿಗೆ ಅನುಮತಿ ನಿರಾಕರಿಸಿದರು. ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ ಕುಳಿತರು.

ಅವರ ಅಭಿಮಾನಿಗಳೆನಿಸಿಕೊಂಡವರು, ಬಿಜೆಪಿ ರೋಡ್‌ ಶೋಗಳಲ್ಲಿ, ಮತಗಟ್ಟೆಗಳಲ್ಲಿ ದೊಂಬಿ ಎಬ್ಬಿಸಿದರು. ಈ ಮೂಲಕ, ತಾವೆಷ್ಟು ಕಠಿಣ ಎಂಬುದನ್ನೂ ಸಾಬೀತುಪಡಿಸಿದರು ದೀದಿ. ಆದರೆ, ಅವರ ಈ ನಡೆ ಬಿಜೆಪಿಗೆ ಜನರಲ್ಲಿ ಸಿಂಪಥಿಯೊಂದನ್ನು ಹುಟ್ಟುಹಾಕುತ್ತಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲಿಲ್ಲ.

ಅದರ ಪರಿಣಾಮವೇ, ಅಲ್ಲಿ ಈ ಬಾರಿ ಎನ್‌ಡಿಎ 18 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಈಗ ದೀದಿಗೆ ವಾಸ್ತವ ಅರ್ಥವಾಗಿ ಕಾಣುತ್ತಿದೆ. ಹಾಗಾಗಿ, 2021ರ ವಿಧಾನಸಭೆ ಚುನಾವಣೆಗೆ ರಂಪಾಟಗಳನ್ನು ಬಿಟ್ಟು ದೀದಿ ಭಾರಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಿದೆ. ಆದರೆ, ಕಳೆದ ಬಾರಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಇದು ಆಶಾದಾಯಕ ಫ‌ಲಿತಾಂಶವಾಗಿದೆ.

Advertisement

ಅಧಿಕಾರ ಕಳೆದುಕೊಂಡ ಚಂದ್ರಬಾಬು ನಾಯ್ಡು: ಚುನಾವಣೆ ಮುಗಿದ ನಂತರವಂತೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೈತ್ರಿ ನಾಯಕರ ನಿವಾಸಗಳಿಗೆ ಬಿಡುವಿಲ್ಲದ ಭೇಟಿಯಲ್ಲಿ ನಿರತಾಗಿದ್ದ ಚಂದ್ರಬಾಬು ನಾಯ್ಡು, ತಮ್ಮ ರಾಜ್ಯದಲ್ಲಿ ತಮ್ಮ ಪಕ್ಷವಾದ ಟಿಡಿಪಿ, ಮೊನ್ನೆ ಫೋನಿ ಚಂಡಮಾರುತಕ್ಕೆ ಸಿಕ್ಕ ಪುರಿ ನಗರದಂತಾಗುತ್ತದೆ ಎಂಬುದನ್ನು ಒಮ್ಮೆಯಾದರೂ ನಿರೀಕ್ಷಿಸಿದ್ದರೋ ಇಲ್ಲವೋ ಗೊತ್ತಿಲ್ಲ.

ಅಂತೂ ಇಂತೂ ತಮ್ಮ ರಾಜ್ಯದಲ್ಲಿ ಬಾಬು ಅಧಿಕಾರ ಕಳೆದುಕೊಂಡಿದ್ದಾರೆ. ಅಲ್ಲಿ ಜಗನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟುಕೊಡುವಂತಾಗಿದೆ. ಇತ್ತ, ರಾಜ್ಯದಲ್ಲೂ ಇಲ್ಲ, ಅತ್ತ ಕೇಂದ್ರದಲ್ಲೂ ಇಲ್ಲ ಎಂಬಂತಾಗಿದೆ ನಾಯ್ಡು ಪರಿಸ್ಥಿತಿ. ಆದರೂ, ವಿಪಕ್ಷಗಳ ನಾಯಕನ ಸ್ಥಾನ ಸಿಗಬಹುದಾಗಿದ್ದು ಸದ್ಯದ ಮಟ್ಟಿಗೆ ಅದರ ಕಾಯಕದಲ್ಲೇ ತೊಡಗಬೇಕಿದೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next