Advertisement

ದೇಶ ಮುನ್ನಡೆಸಲು “ದೀದಿ’ಸಮರ್ಥರು: ಸಿಎಂ

06:41 AM Jan 22, 2019 | |

ಬೆಂಗಳೂರು: ತೃಣಮೂಲ ಕಾಂಗ್ರೆಸ್‌ನ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಉತ್ತಮ ಆಡಳಿತಗಾರ್ತಿಯಾಗಿದ್ದು, ದೇಶವನ್ನು ಮುನ್ನಡೆಸಲು ಬೇಕಾದ ಎಲ್ಲಾ ಚಾತುರ್ಯವನ್ನು ಹೊಂದಿದ್ದಾರೆಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ತಿಳಿಸಿದ್ದಾರೆ. ಕೋಲ್ಕತಾದಲ್ಲಿ ಶನಿವಾರ ನಡೆದ ಮಹಾ ಘಟಬಂಧನ ರ್ಯಾಲಿಯ ನಂತರ ಪಿಟಿಐಗೆ ನೀಡಲಾದ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

Advertisement

“ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಸಮರ್ಥ ಆಡಳಿತ ನೀಡಿದ್ದಾರೆ. ಹಾಗಾಗಿ, ಅವರು ದೇಶವನ್ನೂ ಸಮರ್ಥವಾಗಿ ಮುನ್ನಡೆಸಬಲ್ಲರು ಎಂಬ ನಿಲುವು ನನ್ನದು” ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.  ಇನ್ನು, ಪ್ರಧಾನಿ ಅಭ್ಯರ್ಥಿಯ ಬಗ್ಗೆ ಮಹಾ ಘಟಬಂಧನದಲ್ಲಿ ಒಮ್ಮತವಿಲ್ಲ ಎಂಬ ಟೀಕೆಗಳಿಗೆ ಉತ್ತರಿಸಿದ ಅವರು, “ಮಹಾ ಘಟಬಂಧನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದರೆ ಈಗಲೇ ಒಗ್ಗಟ್ಟಿನಿಂದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ನಿರ್ಧರಿಸಬೇಕು ಎಂದೇನಿಲ್ಲ.

ದೇಶದ ಜನತೆ ಪ್ರಧಾನಿ ಮೋದಿಯವರ ಆಳ್ವಿಕೆಯಿಂದ ಬೇಸತ್ತಿದ್ದಾರೆ. ಅನೇಕ ರಾಜ್ಯಗಳು ತಮ್ಮದೇ ಆದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮೋದಿ ವಿರೋಧಿ ಅಲೆಯು ಮಹಾ ಘಟಬಂಧನಕ್ಕೆ ನೆರವಾಗಲಿದೆ. ಹಾಗಾಗಿ, ಈಗಲೇ ಪ್ರಧಾನಿ ಅಭ್ಯರ್ಥಿ ಘೋಷಣೆ ಅಗತ್ಯವಿಲ್ಲ” ಎಂದರಲ್ಲದೆ, “ಸದ್ಯದ ಮಟ್ಟಿಗೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಮಹಾ ಘಟಬಂಧನವೇ ಪರ್ಯಾಯ” ಎಂದು ಅಭಿಪ್ರಾಯಪಟ್ಟರು.  

ಕೋಲ್ಕತಾದಲ್ಲಿ ಶನಿವಾರ ನಡೆದ ಮಹಾ ಘಟಬಂಧನ ರ್ಯಾಲಿಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಗೈರಾಗಿದ್ದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಮೈತ್ರಿಕೂಟದಿಂದ ಯಾರ್ಯಾರು ದೂರವಾಗಿದ್ದಾರೋ ಅವರೆಲ್ಲರೂ ಲೋಕಸಭೆ ಚುನಾವಣೆ ಮುಗಿದ ನಂತರ ಒಂದಾಗುವ ಸಾಧ್ಯತೆಗಳಿವೆ” ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next