ಬೆಂಗಳೂರು: ಟಿಕೆಟ್ ಹಂಚಿಕೆ ವಿವಾದ ಇನ್ನೂ ಇತ್ಯರ್ಥವಾಗದ ಬೆನ್ನಲ್ಲೇ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ತುರ್ತು ಬುಲಾವ್ ನೀಡಿ ಹೈಕಮಾಂಡ್ ದಿಲ್ಲಿಗೆ ಕರೆಸಿಕೊಂಡಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಮಂಗಳವಾರ ಬೆಳಗ್ಗೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದು ಅವರು ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರವಿ ಚರ್ಚೆ ನಡೆಸುವ ಸಾಧ್ಯತೆ ಇದೆ.
ಬಿಜೆಪಿ ಮೂಲಗಳ ಪ್ರಕಾರ ಒಕ್ಕಲಿಗ ಪ್ರಾಬಲ್ಯ ಇರುವ ಚಿಕ್ಕಬಳ್ಳಾಪುರ ಅಥವಾ ಮೈಸೂರು ಕ್ಷೇತ್ರಗಳ ಪೈಕಿ ಒಂದುಕಡೆ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಸೂಚನೆ ನೀಡುವ ಸಾಧ್ಯತೆ ಇದೆ.
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ರವಿ ಆಸಕ್ತರಾಗಿದ್ದರು. ಈ ಮಾಹಿತಿಯನ್ನು ವರಿಷ್ಠರಿಗೂ ತಿಳಿಸಲಾಗಿತ್ತು. ಆದರೆ ಸಚಿವೆ ಶೋಭಾ ಕರಂದ್ಲಾಜೆ ಮಾತ್ರ ಕ್ಷೇತ್ರ ತ್ಯಾಗಕ್ಕೆ ಸಿದ್ಧರಿರಲಿಲ್ಲ. ಕೊನೇ ಕ್ಷಣದಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ “ಗೋ ಬ್ಯಾಕ್ ಶೋಭಾ’ ಅಭಿಯಾನ ನಡೆದ ಹಿನ್ನೆಲೆಯಲ್ಲಿ ಕಾರ್ಯತಂತ್ರ ಬದಲಿಸಿದ ಬಿಜೆಪಿ ಅವರನ್ನು ಬೆಂಗಳೂರು ಉತ್ತರಕ್ಕೆ ವರ್ಗಾಯಿಸುವ ನಿರ್ಧಾರ ತೆಗೆದುಕೊಂಡಿದೆ. ಆದರೆ ಚಿಕ್ಕಮಗಳೂರಿಗೆ ಬದಲಿ ಅಭ್ಯರ್ಥಿಯ ಶೋಧವಾಗಿರುವುದರಿಂದ ರವಿ ನಿರಾಶರಾಗಿದ್ದಾರೆ.
ಆದಾಗಿಯೂ ಸಿ.ಟಿ.ರವಿಯವರಿಗೆ ಚಿಕ್ಕಬಳ್ಳಾಪುರ ಅಥವಾ ಮೈಸೂರು ಆಫರ್ ನೀಡಬಹುದು ಎನ್ನಲಾಗುತ್ತಿದೆ. ಆದರೆ ಬಿಜೆಪಿ ಮೂಲಗಳ ಪ್ರಕಾರ ಸ್ವಕ್ಷೇತ್ರವನ್ನು ಬಿಡುವುದಕ್ಕೆ ರವಿ ಒಪ್ಪಿಲ್ಲ. ಒಬ್ಬರಿಗೆ ಟಿಕೆಟ್ ನಿರಾಕರಿಸಿ ವಿವಾದಗ್ರಸ್ತವಾದ ಕ್ಷೇತ್ರಕ್ಕೆ ಹೋಗಿ ಸ್ಪರ್ಧಿಸಿದರೆ ಬೇರೆ ಅರ್ಥ ಸೃಷ್ಟಿಯಾಗುತ್ತದೆ. ಅಷ್ಟಕ್ಕೂ ನಾನು ಚಿಕ್ಕಮಗಳೂರು ಕ್ಷೇತ್ರ ಬಿಟ್ಟು ಹೊರ ಹೋಗುವುದಕ್ಕೆ ಯಾವುದೇ ಕಾರಣಗಳಿಲ್ಲ. ವಿಶೇಷ ಸಂದರ್ಭದಲ್ಲಾದರೆ ಇಂಥ ಸವಾಲು ಸ್ವೀಕರಿಸಬಹುದು. ಈಗದರ ಅಗತ್ಯವಿಲ್ಲ ಎಂದು ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆಂದು ತಿಳಿದು ಬಂದಿದೆ.