Advertisement
ವಸುಂಧರಾ ರಾಜೇ ನಿವೃತ್ತಿ!ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸುತ್ತಿರುವ ಘಟಾನುಘಟಿಗಳ ಪೈಕಿ ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೇ ಕೂಡ ಒಬ್ಬರು ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ. ಆದರೆ, ರಾಜೇ ಅವರು ಚುನಾವಣಾ ಪ್ರಚಾರದ ವೇಳೆ “ನಿವೃತ್ತಿ’ಯ ಸುಳಿವು ನೀಡಿದ್ದಾರೆ! ಹೌದು, ಜಲಾವರ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತಾಡುವ ವೇಳೆ ವಸುಂಧರಾ ಅವರು, “ನನಗೆ ಈಗ ನಾನು ನಿವೃತ್ತಿಯಾಗುವ ಸಮಯ ಬಂದಿದೆ ಎಂದನಿಸುತ್ತಿದೆ. ನನ್ನ ಮಗ ದುಶ್ಯಂತ್ ಸಿಂಗ್‌ನ ಮಾತುಗಳನ್ನು ಕೇಳಿದ ಬಳಿಕವಂತೂ ಈ ಭಾವನೆ ಹೆಚ್ಚಾಗಿದೆ. ನೀವೆಲ್ಲರೂ ಅವನನ್ನು ರಾಜಕೀಯವಾಗಿ ಎಷ್ಟು ಚೆನ್ನಾಗಿ ಬೆಳೆಸಿದ್ದೀರಿ ಎಂದರೆ, ನಾನಿನ್ನು ನಿವೃತ್ತಿಯಾಗಿ ನೆಮ್ಮದಿಯಿಂದ ವಿಶ್ರಾಂತಿ ಪಡೆಯಬಹುದು’ ಎಂದಿದ್ದಾರೆ. ರಾಜೇ ಅವರ ಈ ಮಾತುಗಳಿಂದ ರಾಜಕೀಯ ವಲಯದಲ್ಲಿ ಬೇರೆಯದೇ ಗುಸು ಗುಸು ಆರಂಭವಾಗಿದೆ.
ಪಂಚರಾಜ್ಯ ಚುನಾವಣೆಯ ಕಾವು ಹೆಚ್ಚಾದಾಗಿನಿಂದ ಇಲ್ಲಿಯವರೆಗೆ ಹಲವು ರಾಜಕೀಯ ನೇತಾರರು ಮಧ್ಯಪ್ರದೇಶದ ದಾಟಿಯಾದತ್ತ ಪ್ರಯಾಣ ಬೆಳೆಸಿದ್ದನ್ನು ನೋಡಬಹುದು. ಇವರೆಲ್ಲರೂ ಭೇಟಿ ನೀಡಿದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ- ಮಧ್ಯಪ್ರದೇಶದಲ್ಲಿ ಒಂದು ದೇವಸ್ಥಾನವಿದೆ. ಅದರ ಹೆಸರು ಬಾಗಲಮುಖಿ ದೇವಿ ದೇಗುಲ. ಬಾಗಲಮುಖಿ ದೇವಿಯನ್ನು “ಅಧಿಕಾರದ ದೇವಿ’ ಎಂದು ಕರೆಯುತ್ತಾರೆ. ಅಂದರೆ, ಇಲ್ಲಿಗೆ ಬಂದು ಪೂಜಿಸಿದರೆ ಅಂಥವರಿಗೆ ರಾಜಕೀಯ ಅಧಿಕಾರ ಒಲಿಯುತ್ತದೆ ಎಂಬ ನಂಬಿಕೆ ಹಲವರದ್ದು. ಹೀಗಾಗಿ, ಚುನಾವಣೆ ಬಂದರೆ ಸಾಕು, ರಾಜಕೀಯ ಪಕ್ಷಗಳ ಮುಖಂಡರೆಲ್ಲ ಇಲ್ಲಿಗೆ ದಾಂಗುಡಿಯಿಡುತ್ತಾರೆ. ಪಂಚರಾಜ್ಯ ಚುನಾವಣೆ ಘೋಷಣೆ ಆದಾಗಿನಿಂದಲೂ ಇಲ್ಲಿ ದಿನನಿತ್ಯ ವಿವಿಐಪಿಗಳ ಭೇಟಿ, ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತಲೇ ಇವೆಯಂತೆ. ಆದರೆ, ಯಾರ್ಯಾರಿಗೆ ದೇವಿ ಒಲಿಯುತ್ತಾಳೆ ಎಂಬುದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ!