Advertisement

ಒಮ್ಮೆಲೇ ಬಿಲ್‌ ಚುಕ್ತಾ ಮಾಡಲು ನೋಟ್‌ ಪ್ರಿಂಟ್‌ ಮಾಡ್ಲಾ?: ಸಿಎಂ

11:45 PM Mar 04, 2024 | Team Udayavani |

ಬೆಂಗಳೂರು: “ಬಿಜೆಪಿ ಸರಕಾರದ ಅವಧಿ ಯಲ್ಲಿ ಬಿಲ್‌ ಬಾಕಿ ಜಾಸ್ತಿಯಾಗಿದೆ. ಆ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಬಿಲ್‌ ಬಾಕಿಯಾಗಿದೆ. ಈಗ ನೀವು ಒಮ್ಮೆಲೇ ಎಲ್ಲ ಬಾಕಿ ಚುಕ್ತಾ ಮಾಡಿ ಅಂದ್ರೆ, ಏನ್‌ ನೋಟ್‌ ಪ್ರಿಂಟ್‌ ಮಾಡಲಾ?’ ಎಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.ಗುತ್ತಿಗೆದಾರರ ಸಂಘ ಅರಮನೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ರಾಜ್ಯಮಟ್ಟದ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬಿಜೆಪಿ ಸರಕಾರದಲ್ಲಿ ದುಡ್ಡು ಇಲ್ಲದೆ ಇದ್ದರೂ, ಬೋರ್ಡ್‌ ಮೀಟಿಂಗ್‌ಗಳಲ್ಲಿ ತೀರ್ಮಾನಿಸಿ 1 ಲಕ್ಷದ 20 ಸಾವಿರ ಕೋಟಿ ರೂ.ವರೆಗೆ ಟೆಂಡರ್‌ ಕರೆದರು. ನೀವು ಕೆಲಸ ಮಾಡಿದ್ದೀರಿ. ದುಡ್ಡು ಇಲ್ಲದಿದ್ದರೂ ಟೆಂಡರ್‌ ಯಾಕೆ ಕರೆದಿದ್ದೀರಿ ಎಂದು ಆಗ ನೀವು ಆ ಸರಕಾರವನ್ನು ಕೇಳಬೇಕಿತ್ತು ಎಂದರು. ನನ್ನ ಆಡಳಿತ ಅವಧಿಯಲ್ಲಿ ಹಣ ಮೀಸಲಿಡದೇ ಯಾವುದೇ ಟೆಂಡರ್‌ ಕರೆದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು.

“ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೂ ಬಜೆಟ್‌ನಲ್ಲೇ ಘೋಷಿಸಿದರು. ಆದರೆ ಇವತ್ತಿನವರೆಗೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರಕಾರ ಎಷ್ಟೇ ಅಸಹಕಾರ ಕೊಟ್ಟರೂ ಗುತ್ತಿಗೆದಾರರ ಅಷ್ಟೂ ಹಣವನ್ನು ನಾವೇ ಹಂತಹಂತವಾಗಿ ಪಾವತಿಸುತ್ತೇವೆ’ ಎಂದು ತಿಳಿಸಿದರು.

ನಾನು ಈವರೆಗೆ ಯಾರಿಂದಲೂ 5 ಪೈಸೆ ಲಂಚ ಪಡೆದಿಲ್ಲ. 2013-2018ರ ಅವಧಿಯಲ್ಲಾಗಲೀ, 2ನೇ ಬಾರಿ ಸಿಎಂ ಆಗಿರುವ ವೇಳೆ ಆಗಲಿ “ಎಲ್‌ಒಸಿ’ ನೀಡಲು ಗುತ್ತಿಗೆದಾರರಿಂದ ಲಂಚ ಪಡೆದಿದ್ದೇನೆ ಎಂದು ಹೇಳಿದರೆ, ಆ ಕ್ಷಣವೇ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next