Advertisement

ಇಲ್ಲಿ ಬಂದ ಕೇಳ್ದವರಿಗೇ ಮತ ಹಾಕಿದ್ರ ಆತಲ್ಲ!

05:43 PM Apr 16, 2019 | Team Udayavani |
ಬೆಳಗಾವಿ: ಕಿತ್ತೂರು ಮತಕ್ಷೇತ್ರ ಗಡಿ ಜಿಲ್ಲೆ ಬೆಳಗಾವಿಯ ಭಾಗವಾಗಿದ್ದರೂ ದೂರದ ಕರಾವಳಿ ಲೋಕಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಚುನಾವಣೆ ಗರಿಗೆದರಿದ್ದರೂ ಬಿಸಿಲಿನ ಬೇಗೆ ಮುದುವರಿದಿದೆ. ಬಹುತೇಕ ಮತದಾರರಿಗೆ ಒಬ್ಬ ಅಭ್ಯರ್ಥಿ ಬಿಟ್ಟರೆ ಇನ್ನುಳಿದ ಪ್ರತಿಸ್ಪರ್ಧಿಗಳ ಹೆಸರೇ ಗೊತ್ತಿಲ್ಲ.
ಕರಾವಳಿ ಹಾಗೂ ಕಿತ್ತೂರಿಗೆ ಅಜಗಜಾಂತರ ವ್ಯತ್ಯಾಸವಿದ್ದರೂ ಚುನಾವಣೆ ವೇಳೆ ಇವೆರಡಕ್ಕೂ ಅವಿನಾಭಾವ ಸಂಬಂಧ. ಕಿತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿ ಮಾತ್ರ ಗೌಣ. ಆದರೆ ಇಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ವಿಷಯವೇ ಪ್ರಧಾನವಾಗಿದೆ. ಚುನಾವಣಾ ಪ್ರಚಾರದ ವೇಳೆಯೂ ಈ ಭಾಗಕ್ಕೆ ಅಭ್ಯರ್ಥಿಗಳು ಬರುವುದು ವಿರಳ. ಇನ್ನು ಗೆದ್ದ ಮೇಲಂತೂ ಸಂಸದರು ಸುಳಿಯುವುದೇ ಅಪರೂಪ. ಲೋಕಸಭೆ ಮಟ್ಟಿಗಂತೂ ಈ ಕ್ಷೇತ್ರ ಸಂಪೂರ್ಣ ಹಿಂದುಳಿದಿದ್ದು, ಆದರೆ ಸಂಸದನನ್ನು ಗೆಲ್ಲಿಸುವ ತವಕದಲ್ಲಿ ಇಲ್ಲಿನ ಮತದಾರರು ಇದ್ದಾರೆ.
ಅಭ್ಯರ್ಥಿಯೇ ಲೆಕ್ಕಕ್ಕೆ ಇಲ್ಲದಂಥ ಸ್ಥಿತಿಯಲ್ಲಿರುವ ಕಿತ್ತೂರು ಮತಕ್ಷೇತ್ರದಲ್ಲಿ ಸ್ಥಳೀಯ ಸಮಸ್ಯೆಗಳಿಗಿಂತ ಮತದಾರರು
ರಾಷ್ಟ್ರೀಯ ಮಟ್ಟದ ವಿಚಾರಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಪಾಕಿಸ್ತಾನದ ಮೇಲೆ ಭಾರತೀಯ ಸೈನ್ಯ ದಾಳಿ ಮಾಡಿರುವುದು ಪ್ರಮುಖ ವಿಷಯವಾಗಿದೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಪಾಕಿಸ್ತಾನದಿಂದ ಒಂದೇ ದಿನದಲ್ಲಿ ಕರೆದು ತಂದಿರುವ ಬಗ್ಗೆಯೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಜತೆಗೆ ಪುಲ್ವಾಮಾ ದಾಳಿಯಿಂದ ವೀರ ಮರಣವನ್ನಪ್ಪಿದ ಸೈನಿಕರ ಸೇವೆಯನ್ನೂ ಜನ ಕೊಂಡಾಡುತ್ತಿದ್ದಾರೆ.
ಕಾರವಾರ ಕಡೆ ಮಂದಿ ಕುಂತಾರ: ಕಿತ್ತೂರು ಕ್ಷೇತ್ರದ ಹಳ್ಳಿಗಳಲ್ಲಿ ಸುತ್ತು ಹಾಕಿದ ಮತದಾರ ಪ್ರಭು ತನ್ನ ಗುಟ್ಟು ಬಿಟ್ಟುಕೊಡುತ್ತಿಲ್ಲ. ಆದರೆ ಅವರ ಮಾತಿನ ಧಾಟಿಯಲ್ಲಿ ಸಂಸದರ ಹೆಸರು ಮಾತ್ರ ಸುಳಿದಾಡುತ್ತಿದೆ. ಇನ್ನೂ ಮಾತಿಗಿಳಿದಾಗ, ನಮ್ಮಂಗ ಮಾತಾಡವರೂ ಯಾರೂ ಕುಂತಿಲ್ಲ, ಆ ಕಡೆ ಕಾರವಾರದಾವರ ಕುಂತಾರ. ಇಲ್ಲಿ ಯಾರ ಬಂದ ಕೇಳ್ತಾರಲ್ಲ ಅವರಿಗೆ ಹಾಕಿದ್ರ ಆತಲ್ಲ ಅಂತಾರೆ ಹನುಮನಹಟ್ಟಿಯ ಬಸವರಾಜ.
ರಾಷ್ಟ್ರ ಮಟ್ಟದ ವಿಚಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವುದೇ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಬೈಲಹೊಂಗಲಕ್ಕೆ ಹೊಂದಿಕಂಡಂತೆ ಇರುವ ದೇಶನೂರ, ಮರೆ, ಹೊಗರ್ತಿ, ನೇಸರಗಿ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಸುತ್ತಾಡಿದಾಗ, ಪ್ರಧಾನಿ ನರೇಂದ್ರ ಮೋದಿ ಬಗೆಗಿನ ಅಭಿಮಾನ ಹೊರ ಹಾಕುತ್ತಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ನಮ್ಮ ಭಾಗಕ್ಕೆ ಸುಳಿದಿಲ್ಲ ಎಂಬ ತೀವ್ರ ಆಕ್ರೋಶ ಇಲ್ಲಿಯ ಜನರಿಗಿದೆ. ಮದನಬಾಂವಿ, ಮಹಾಂತೇಶ ದೊಡಗೌಡರ ಜನರ ಮನವೊಲಿಸುವಲ್ಲಿ ಯತ್ನಿಸುತ್ತಿದ್ದಾರೆ.
ಎಲೆಕ್ಷನ್‌ ಬಂದಾಗ ನೋಡೋಣು: ಈ ಭಾಗದಲ್ಲಿ ಕೃಷಿಕರು ಹಾಗೂ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಜನ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಯಾರ ಬಂದ್ರ ನಮಗೇನ ಆಗೋದೈತಿ, ಮತ್ತ ಹರೇ ಹೊತ್ತ ಎದ್ದ ಹೊಲಕ್ಕ ಹೋಗೋದೇನೂ ತಪ್ಪೋದಿಲ್ಲ. ಸಂಜಿಕ ಮತ್ತ ಎಮ್ಮಿ ಹಾಲ ಹಿಂಡಿ ಡೈರಿಗಿ ಕಳಸಬೇಕ. ಎಲೆಕ್ಷನ್‌ ಬಂದಾಗ ಯಾರಿಗಿ ವೋಟ್‌ ಹಾಕೋದಂತ ನೋಡೋಣ ಎಂದು ಹೇಳುತ್ತ ಬಿಸಿಲಿನ ಬೇಗೆಯಲ್ಲಿಯೇ ಹೊಲದತ್ತ ಹೆಜ್ಜೆ ಹಾಕುತ್ತಾರೆ ದೇಶನೂರಿನ ಗಂಗಪ್ಪ.
ಮೈತ್ರಿ ಅಭ್ಯರ್ಥಿ ಹೆಸರೇ ಗೊತ್ತಿಲ್ಲ: ಇನ್ನು ಬಹುತೇಕ ಕಡೆ ಸುತ್ತಾಡಿದಾಗ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಅವರ ಬಗ್ಗೆ ಕಿತ್ತೂರು ಕ್ಷೇತ್ರದ ಜನರಿಗೆ ಗೊತ್ತೇ ಇಲ್ಲ. ಬಹುತೇಕ ಜನರ ಬಾಯಲ್ಲಿ ಮೋದಿ ಹಾಗೂ ಹೆಗಡೆ ಬಿಟ್ಟರೆ ಬೇರೆ ವಿಷಯಗಳೇ ಚರ್ಚೆ ಆಗುತ್ತಿಲ್ಲ.
ಆನಂದ ಅಸ್ನೋಟಿಕರ ಜೆಡಿಎಸ್‌ ಅಭ್ಯರ್ಥಿ ಆಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಕಿತ್ತೂರು ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಕಾಂಗ್ರೆಸ್‌ನ ಮುಖಂಡರು ಯಾರೊಬ್ಬರೂ ಪ್ರಚಾರಕ್ಕೆ ಇಳಿದಿಲ್ಲ. ಲಕ್ಕುಂಡಿ, ವಣ್ಣೂರ, ಸಂಪಗಾಂವ, ಮೇಕಲಮರ್ಡಿ ಗ್ರಾಮಗಳಲ್ಲಿ ಹೋದಾಗ, ಜೆಡಿಎಸ್‌ ಅಂತೂ ಇಲ್ಲಿ ಅಷ್ಟಕ್ಕಷ್ಟೇ. ಕಾಂಗ್ರೆಸ್‌ ಪ್ರಬಲವಾಗಿದ್ದರೂ ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿಯದಿರುವುದೇ ದುರಂತ. ಅಭ್ಯರ್ಥಿ ಯಾರೆಂಬುದೇ ಜನರಿಗೆ ಗೊತ್ತಿಲ್ಲ.
ಚುನಾವಣೆ ಕಾವು ಜೋರಾಗಿದ್ದರೂ ಇನ್ನೂವರೆಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಯಾವೊಬ್ಬ ನಾಯಕರು ಈ ಕ್ಷೇತ್ರಕ್ಕೆ ಆಗಮಿಸಿಲ್ಲ. ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿಧಾನಸಭೆ ಚುನಾವಣೆ ವೇಳೆ ದೊಡಗೌಡ್ರ ಪರ ಪ್ರಚಾರ ನಡೆಸಿದ್ದರು. ಸದ್ಯ ಬಿಜೆಪಿ ಶಾಸಕ ದೊಡಗೌಡ್ರ ಪ್ರಚಾರ ಜೋರಾಗಿ ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಇತ್ತ ಇನ್ನೂ ಸುಳಿದಿಲ್ಲ. ಅವರ ಪರ ಪ್ರಚಾರವೂ ಇಲ್ಲಿ ಅಷ್ಟಕ್ಕಷ್ಟೇ ಎಂಬಂತಿದೆ.
ಈ ಹಳ್ಳಿಗಳಲ್ಲೇ ಅಡ್ಡಾಡ್ತಾರೆ ಬೆಳಗಾವಿ ಲೋಕಸಭೆ ಅಭ್ಯರ್ಥಿಗಳು ಕಾರವಾರ(ಕೆನರಾ) ಲೋಕಸಭೆ ಕ್ಷೇತ್ರಕ್ಕೆ
ಸೇರಿಕೊಂಡಿರುವ ಕಿತ್ತೂರು ವಿಧಾನಸಭಾ ಕ್ಷೇತ್ರದ ಹನುಮನಹಟ್ಟಿ, ನೇಸರಗಿ, ದೇಶನೂರ, ಹೊಗರ್ತಿ ಗ್ರಾಮಗಳು ಬೆಳಗಾವಿಗೆ ಅತೀ ಸಮೀಪ. ಈ ಹಳ್ಳಿಗಳ ಮೇಲಿಂದಲೇ ಬೆಳಗಾವಿ ಲೋಕಸಭೆ ಅಭ್ಯರ್ಥಿಗಳು ತಿರುಗಾಡಬೇಕು. ಆದರೆ ಇವು ಬೆಳಗಾವಿ ಕ್ಷೇತ್ರಕ್ಕೆ ಸಂಬಂಧಿಸಿದವು ಅಲ್ಲ. ಬೈಲಹೊಂಗಲ, ರಾಮದುರ್ಗ, ಸವದತ್ತಿ, ಯರಗಟ್ಟಿಗೆ ಹೋಗಬೇಕಾದರೆ ಈ ಹಳ್ಳಿಗಳ ಮಾರ್ಗವೇ ಇವರಿಗೆ ಆಸರೆ. ಇದಕ್ಕೆ ಸಂಬಂಧಿಸಿದ ಕೆನರಾ ಲೋಕಸಭೆ ಅಭ್ಯರ್ಥಿಗಳು ಬರುವುದಂತೂ ದೂರವೇ ಉಳಿದಂತೆ.
Advertisement

Udayavani is now on Telegram. Click here to join our channel and stay updated with the latest news.

Next