Advertisement

ಸೂರ್ಯ ಸಿಡಿಯುತ್ತಿದ್ದಾನೆ …ಎಕ್ಸ್ ಮಾರುತಗಳು ಗಂಡಾಂತರಕಾರಿ!

10:15 AM Feb 14, 2023 | Team Udayavani |

ಉಡುಪಿ: ವಿಜ್ಞಾನಿಗಳ ಊಹೆಗೂ ಮೀರಿ ಈಗ ಕೆಲವು ದಿನಗಳಿಂದ ಸೂರ್ಯ ಸಿಡಿಯುತ್ತಿದ್ದಾನೆ. ಫೆ. 7ರಿಂದ ಇದೀಗ ಎರಡು ಗಜಗಾತ್ರದ ಸೂರ್ಯಕಲೆಗಳನ್ನು ಗಮನಿಸಿ ಬೃಹತ್‌ ಸಿಡಿತಗಳನ್ನು ಊಹಿಸಿ ಮುಂಬರಬಹುದಾದ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

Advertisement

ಮೊನ್ನೆ ಕಂಡ ಸೂರ್ಯನ ಕಲೆ ಎಆರ್‌3213 ಫೆ. 11ರಂದು ಪುನಃ ಸಿಡಿದು ಸೌರ ಜ್ವಾಲೆಯನ್ನು ಬಿತ್ತರಿಸಿದೆ. ಕೊತಕೊತ ಕುದಿವ ಪ್ಲಾಸ್ಮಾದ ಸೂರ್ಯ ಉತ್ತರ ಧ್ರುವದ ಸಮೀಪ ಸಿಡಿಯುತ್ತಲೇ ಇದ್ದಾನೆ.

ಫೆ. 9ರಂದು ಬೃಹತ್‌ ಸೂರ್ಯನ ಕಲೆ ಕಾಣಿಸಿಕೊಂಡ ಬೆನ್ನಲ್ಲೇ ಸೂರ್ಯ ಉತ್ತರ ಧ್ರುವ ಸಮೀಪ ಕಾಂತೀಯ ಸುಂಟರಗಾಳಿಯೊಂದಿಗೆ ಸಿಡಿಯುತ್ತಿರುವುದನ್ನು ನಾಸಾ ಗಮನಿಸಿದೆ. ಈ ರೀತಿಯ ಕಾಂತೀಯ ನರ್ತನ ಸೂರ್ಯನಿಂದ ಹೊರನಡೆದಾಗ ವಿದ್ಯುತ್‌ ಕಾಂತೀಯ ಕಿರಣಗಳು ಚಿಮ್ಮುತ್ತವೆ. ಇವನ್ನು ಸೌರಮಾರುತಗಳು ಎನ್ನುವರು.

ಕಾಂತೀಯ ಸುಳಿಯಲ್ಲಿ ವಿದ್ಯುತ್‌ ಕಾಂತೀಯ ಕಿರಣಗಳ ಪ್ರವಾಹದಲ್ಲಿ ರೇಡಿಯೋ ಅಲೆಗಳಿಂದ ಪ್ರಾರಂಭಿಸಿ ಶಕ್ತಿಯುತ ಗಾಮಾ ಅಲೆಗಳ ವರೆಗೆ ಎಲ್ಲವೂ ಇರಬಹುದು. ಇವಕ್ಕೆ ಸನ್‌ ಫ್ಲೇರ್‌ ಸೂರ್ಯ ಮಾರುತ ಎನ್ನುವರು. ಇವುಗಳಲ್ಲಿ ಶಕ್ತಿಯುತ ಅತಿನೇರಳೆ ಹಾಗೂ ಎಕ್ಸ್ ಕಿರಣಗಳನ್ನು ಎಂ ಹಾಗೂ ಎಕ್ಸ್ ಸನ್‌ ಫ್ಲೇರ್‌ ಎನ್ನುವರು. ಎಮ್‌ ಸೂರ್ಯ ಮಾರುತಗಳಿಂದ ಭೂಮಿಯಲ್ಲಿ ಕೆಲವು ಅವ್ಯವಸ್ಥೆಗಳು ನಡೆದರೆ ಎಕ್ಸ್ ಮಾರುತಗಳು ಗಂಡಾಂತರಕಾರಿ.

ಈ ಕೆಲವು ದಿನಗಳ ವಿದ್ಯಮಾನದಲ್ಲಿ ಎಂ ಕಿರಣಗಳು ಚೆಲ್ಲಿವೆ. ಹಾಗೆ ಎಕ್ಸ್ ಕಿರಣಗಳೂ ಬರಬಹುದೆಂದು ಅಂದಾಜಿಸಿದ್ದಾರೆ. ಇವುಗಳಿಂದ ಭೂಮಿಯ ಕೆಲವು ಭಾಗಗಳಲ್ಲಿ ವಿದ್ಯುತ್‌ನಲ್ಲಿ ವ್ಯತ್ಯಯ, ಗ್ಲೋಬಲ್‌ ಇಂಟರ್ನೆಟ್‌ಗಳ ಮೇಲೆ ರೇಡಿಯೊ ಅಲೆಗಳು ಸೆಲ್ಫೋನ್‌, ಮೊಬೈಲ್‌ ಸಿಗ್ನಲ್‌ಗ‌ಳ ಮೇಲೂ ಈ ಕೆಲ ದಿನ ಪರಿಣಾಮ ಬೀರಬಹುದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 11 ವರ್ಷಕ್ಕೊಮ್ಮೆ ಸೂರ್ಯ ಕಲೆಗಳ ಆವರ್ತನ ನಡೆಯುತ್ತಿದೆ. 25ನೇ ಆವರ್ತನ ಡಿಸೆಂಬರ್‌
2019ರಿಂದ ಪ್ರಾರಂಭ. ಈ ಆವರ್ತದಲ್ಲಿ 2023ರಿಂದ 2026ರ ವರೆಗೆ ಹೆಚ್ಚಿಗೆ ಸೌರಕಲೆಗಳನ್ನು ಕಾಣಬಹುದೆಂದು ಅಂದಾಜಿಸಿದ್ದರು. ಆದರೆ ತುಂಬಾ ವಿಚಿತ್ರವೆಂಬಂತೆ ಸೂರ್ಯ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸುತ್ತ ಸಿಡಿಯುತ್ತಿದ್ದಾನೆ.

Advertisement

 ಡಾ| ಎ.ಪಿ. ಭಟ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next