ಬೆಂಗಳೂರು: ಬೆಂಗಳೂರು ಒಂದರಲ್ಲಿಯೇ ನಾಳೆಯಿಂದ ನಿತ್ಯ 24 ಸಾವಿರಕ್ಕೂ ಅಧಿಕ ಸೋಂಕು ಪರೀಕ್ಷೆ ನಡೆಸಲು ಸರ್ಕಾರ ಸಿದಟಛಿತೆ ಮಾಡಿಕೊಂಡಿದೆ. ಈ ಮೂಲಕ ರಾಜಧಾನಿಯ ಸೋಂಕು ಪ್ರಕರಣಗಳು ಸಂಖ್ಯೆ ಅಂಕೆ ಮೀರಲಿದೆ. ಯಾಕೆಂದರೆ ಬಿಬಿಎಂಪಿ ಬುಲೆಟಿನ್ ಪ್ರಕಾರ ಕಳೆದ 15 ದಿನಗಳಲ್ಲಿ ನಿತ್ಯ ನಾಲ್ಕೂವರೆ ಸಾವಿರ ಸೋಂಕು ಪರೀಕ್ಷೆಗಳು ನಡೆಯುತ್ತಿದ್ದು, 1,000- 1,200 ಪ್ರಕರಣ ಗಳು ವರದಿಯಾಗುತ್ತಿವೆ.
ಅಂದರೆ, ನಾಲ್ಕು ಮಂದಿಯ ನ್ನು ಸೋಂಕು ಪರೀಕ್ಷೆಗೆ ಒಳಪಡಿಸಿದರೆ ಕನಿಷ್ಠ ಒಬ್ಬರದ್ದು, ಪಾಸಿಟಿವ್ ವರದಿಯಾಗುತ್ತಿದೆ. ಇನ್ನು ನಾಳೆಯಿಂದ 24 ಸಾವಿರ ಪರೀಕ್ಷೆಗಳು ನಡೆದರೆ ಅದರಲ್ಲಿ ಲೆಕ್ಕಕ್ಕೆ ಸಿಗದಷ್ಟು ಮಂದಿಯಲ್ಲಿ ಸೋಂಕು ದೃಢಪಡುವ ಸಾಧ್ಯತೆಗಳಿವೆ. ಪ್ರಸ್ತುತ ರಾಜ್ಯದಲ್ಲಿ ನಿತ್ಯ 20 ಸಾವಿರ ಸೋಂಕು ಪರೀಕ್ಷೆಗಳು ನಡೆಯುತ್ತಿವೆ.
ಆದರೆ, ಬೆಂಗಳೂರಿನಲ್ಲಿ ಸೋಂಕಿನ ತೀವ್ರತೆ ಹೆಚ್ಚಿರುವ ಹಿನ್ನೆಲೆ ಸೋಂಕಿತರ ಶೀಘ್ರ ಪತ್ತೆಗೆಂದು ಸದ್ಯ ನಡೆಯುತ್ತಿರುವ ನಾಲ್ಕೂವರೆ ಸಾವಿರ ಆರ್‌ಟಿಪಿಸಿಆರ್ ಪರೀಕ್ಷೆ ಜತೆಗೆ ನಿತ್ಯ ರ್ಯಾಪಿಡ್ ಆ್ಯಂಟಿಜನ್ ಕಿಟ್ ಬಳಿಕ 20 ಸಾವಿರ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಒಟ್ಟಾರೆ ಸಂಖ್ಯೆ 24 ಸಾವಿರ ದಾಟಲಿದೆ. ಇನ್ನು ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯಲ್ಲಿ ಸೋಂಕು “ಪಾಸಿಟಿವ್’ ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರ ಅಭಿಪ್ರಾಯಪಡುತ್ತಾರೆ.
ನಿಮಿಷಗಳಲ್ಲಿಯೇ ವರದಿ!: ರಕ್ತ ಮಾದರಿ ಸಂಗ್ರಹಿಸುವ ಮೂಲಕ ಆ್ಯಂಟಿಜೆನ್ ಪರೀಕ್ಷೆ ಮಾಡಲಾಗುತ್ತದೆ. ಮಾದರಿ ಪಡೆದ 10ರಿಂದ 15 ನಿಮಿಷದಲ್ಲಿ ವರದಿ ಲಭ್ಯವಾಗಲಿದೆ. ಖರ್ಚು ಕೂಡಾ 450 ರೂ.ಆಗಲಿದ್ದು, ಸರ್ಕಾರ ಉಚಿತವಾಗಿ ಪರೀಕ್ಷೆ ಮಾಡಲಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವರದಿ ಪಾಸಿಟಿವ್ ಬಂದರೆ ಸೋಂಕಿತ ಎಂದು ಪರಿಗಣಿಸಬೇಕು. ಒಂದು ವೇಳೆ ಸೋಂಕು ಲಕ್ಷಣಗಳಿದ್ದೂ, ನೆಗೆಟಿವ್ ಬಂದರೆ ಆರ್ ಟಿ-ಪಿಸಿಆರ್ ಪರೀಕ್ಷೆ ಸೂಚಿಸಲಾಗುತ್ತದೆ. ಇನ್ನು ಸೋಂಕು ದೃಢಪಟ್ಟ ವ್ಯಕ್ತಿಯನ್ನು ಸಮೀಪದ ಕೋವಿಡ್ 19 ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿ ಸೋಂಕು ಲಕ್ಷಣ ಇದ್ದರೆ ಆಸ್ಪತ್ರೆಯಲ್ಲಿ ದಾಖಲಿಸಿ ಇಲ್ಲದಿದ್ದರೆ ಕೋವಿಡ್ 19 ಕೇರ್ ಸೆಂಟರ್‌ಗೆ ವರ್ಗಾಯಿಸಲಾಗುತ್ತದೆ.
ಹಾಸಿಗೆ ಕೊರತೆ ಸಾಧ್ಯತೆ!: ಸೋಂಕು ತೀವ್ರಗೊಂಡು ಸದ್ಯ ನಗರದಲ್ಲಿ ಬಹುತೇಕ ಸರ್ಕಾರಿ ಮತ್ತು ಖಾಸಗಿ ಕೋವಿಡ್ 19 ಚಿಕಿತ್ಸಾ ಆಸ್ಪತ್ರೆಗಳಲ್ಲಿ ಹಾಸಿಗೆ ಭರ್ತಿಯಾಗಿವೆ. ಅಂತೆಯೇ ಕೋವಿಡ್ 19 ಕೇರ್ ಸೆಂಟರ್‌ಗಳಲ್ಲಿಯೂ ಕೂಡಾ ಸೀಮಿತ ಹಾಸಿಗೆ ಇವೆ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಸದ್ಯ ನಗರದಲ್ಲಿ ಆಸ್ಪತ್ರೆ ಮತ್ತು ಕೋವಿಡ್ 19 ಕೇರ್ ಸೆಂಟರ್ ಸೇರಿ ಅಂದಾಜು 2,000 ಹಾಸಿಗೆ ಲಭ್ಯವಿರಬಹುದು. ಒಂದು ವೇಳೆ ಸೋಂಕು ಪರೀಕ್ಷೆ ಪ್ರಮಾಣ ನಾಲ್ಕುಪಟ್ಟು ಹೆಚ್ಚಾದರೆ, ಅಂತೆಯೇ ಸೋಂಕಿತರ ಸಂಖ್ಯೆ ಕೂಡ ಸಾಕಷ್ಟು ಏರಿಕೆಯಾಗಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.
ರ್ಯಾಪಿಡ್ ಟೆಸ್ಟ್ ಎಲ್ಲಿ?: ನಗರದ ಎಲ್ಲಾ ಜ್ವರ ತಪಾಸಣಾ ಕೇಂದ್ರಗಳಲ್ಲಿಯೂ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಯಲಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ಮತ್ತು ಪಶ್ಚಿಮ ವಲಯಗಳಿಗೆ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ. ಜತೆಗೆ ಪ್ರಕರಣಗಳು ಏರಿಕೆಯಾಗುತ್ತಿರುವ ಕಂಟೈನ್ಮೆಂಟ್ ಝೋನ್‌ಗಳಲ್ಲಿಯೂ ಪರೀಕ್ಷೆ ನಡೆಯಲಿದೆ.
ಯಾರಿಗೆ ಆದ್ಯತೆ?: ಐಎಲ್‌ಐ, ಸಾರಿ, ಸೋಂಕಿತರ ಪ್ರಾಥಮಿಕ ಸಂಪರ್ಕಿತರು, ಅಂತಾರಾಷ್ಟ್ರೀಯ ಹಾಗೂ ಅಂತಾರಾಜ್ಯ ಪ್ರವಾಸ ಹಿನ್ನೆಲೆಯವರು, ವೈದ್ಯಕೀಯ ಸಿಬ್ಬಂದಿ, ಕೊರೋನಾ ವಾರಿಯ ರ್‌ಗಳು, ಹಿರಿಯ ನಾಗರೀಕರು, ಗರ್ಭಿಣಿ ಯರು ಹಾಗೂ ಮಕ್ಕಳಿಗೆ ಮೊದಲ ಆದ್ಯತೆಯಾಗಿ ನೀಡಲಾಗುತ್ತದೆ. ಸದ್ಯ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊಂದಿದವರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಅವರು ಸಮೀಪದ ಜ್ವರ ತಪಾಸಣಾ ಕೇಂದ್ರಕ್ಕೆ ಬಂದು ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
* ಜಯಪ್ರಕಾಶ್ ಬಿರಾದಾರ್