“ಹಲೋ ಮಾಮ’ ಚಿತ್ರದ ಸಂದರ್ಭದಲ್ಲೇ, ಇನ್ನೊಂದು ಚಿತ್ರವನ್ನು ಮಾಡುವುದಕ್ಕೆ ತಯಾರಿ ನಡೆಸಿರುವುದಾಗಿ ನಟ-ನಿರ್ದೇಶಕ ಮೋಹನ್ ಹೇಳಿಕೊಂಡಿದ್ದರು. ಅದರಂತೆ ಅವರ ಹೊಸ ಚಿತ್ರದ ಪ್ರಾರಂಭಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದು, ಇಂದು ಬೆಳಗ್ಗೆ ಚಿತ್ರ ಪ್ರಾರಂಭವಾಗಲಿದೆ, ಗಿರಿನಗರದಲ್ಲಿರುವ ವಿವೇಕಾನಂದ ಪಾರ್ಕ್‌ನಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
ಹಿರಿಯ ನಿರ್ಮಾಪಕ ಬಿ.ಎನ್. ಗಂಗಾಧರ್ ಎಮ್ಮ ಎ.ಎನ್.ಎಸ್ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಿಸುತ್ತಿರುವ 26ನೇ ಚಿತ್ರವಿದು. ಇನ್ನು ಮೋಹನ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಹೆಸರು “ಪ್ರೊಡಕ್ಷನ್ ನಂ 26′. ಹಾಗಾದರೆ, ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾ ಎಂಬ ಪ್ರಶ್ನೆ ಬರಬಹುದು. ಹೆಸರೇನೋ ಇಡಲಾಗಿದೆ.
ಆದರೆ, ಆ ಹೆಸರು ಇನ್ನೂ ಸಿಕ್ಕಿಲ್ಲದ ಕಾರಣ “ಪ್ರೊಡಕ್ಷನ್ ನಂ 26′ ಹೆಸರಲ್ಲಿ ಅವರು ಚಿತ್ರವನ್ನು ಪ್ರಾರಂಭಿಸುತ್ತಿದ್ದಾರೆ. ಇದೊಂದು ಅಲೆಮಾರಿಗಳ ಕಥೆಯಂತೆ. ಇಂಗ್ಲೀಷ್‌ನಲ್ಲಿ ಅಲೆಮಾರಿಗಳಿಗೆ ವೆಗಾಬಾಂಡ್ಸ್ ಅಥವಾ ಲೋಫರ್ ಎಂದು ಕರೆಯುವುದು ಗೊತ್ತೇ ಇದೆ. ಮೋಹನ್ ಸಹ ತಮ್ಮ ಚಿತ್ರಕ್ಕೆ “ಲೋಫರ್’ ಎಂಬ ಹೆಸರಿಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.
ಆದರೆ, ಮಂಡಳಿಯಲ್ಲಿ, “ಲೋಫರ್ಸ್’ ಎಂದು ಕೊಡುವುದಕ್ಕೆ ಸಾಧ್ಯವಿಲ್ಲ, ಬೇಕಾದರೆ “ಲೋಫರ್’ ಎಂದು ಕೊಡಬಹುದು ಎಂದು ಹೇಳಿದ್ದಾರಂತೆ. “ನಮ್ಮ ಚಿತ್ರಕ್ಕೆ ಹೇಳಿ ಮಾಡಿಸಿದ ಟೈಟಲ್ ಎಂದರೆ “ಲೋಫರ್ಸ್’. ಅದೇ ಹೆಸರು ಕೊಡುವಂತೆ ಮನವಿ ಸಲ್ಲಿಸಿದ್ದೇವೆ. ಆದರೆ, ಆ ಹೆಸರು ಕೊಡೋದಕ್ಕೆ ಸಾಧ್ಯವಿಲ್ಲ, ಬೇಕಾದರೆ “ಲೋಫರ್’ ಅಂತ ಕೊಡಬಹುದು ಎಂದು ಹೇಳಿದ್ದಾರೆ.
ನನಗೆ “ಲೋಫರ್’ ಎನ್ನುವ ಶೀರ್ಷಿಕೆಯೇ ಬೇಕು. ಅದಕ್ಕೆ ಫೈಟ್ ಮಾಡುತ್ತೇನೆ. ಸಿಗದಿದ್ದರೆ “ಲೋಫರ್’ ಆದರೂ ಓಕೆ. ಸದ್ಯಕ್ಕಂತ “ಪ್ರೊಡಕ್ಷನ್ ನಂ.26′ ಹೆಸರಲ್ಲಿ ಚಿತ್ರ ಪ್ರಾರಂಭವಾಗುತ್ತದೆ. ಅಂದಹಾಗೆ, ಇದು ಏಳು ಅಲೆಮಾರಿಗಳ ಕಥೆಯಂತೆ. ನಾಲ್ವರು ಹೀರೋಗಳು ಮತ್ತು ಮೂರು ಹೀರೋಯಿನ್‌ಗಳ ನಡುವೆ ನಡೆಯುವ ಕಥೆಯಲ್ಲಿ ಚೇತನ್, ಅರ್ಜುನ್ ಆರ್ಯ (ಹೈಪರ್), ಮನು, ಕೆಂಪೇಗೌಡ, ಶ್ರಾವ್ಯ, ಸುಷ್ಮಾ ಮತ್ತು ಸಾಕ್ಷಿ ನಟಿಸುತ್ತಿದ್ದಾರೆ.
ಇದೊಂದು ಆ್ಯಕ್ಷನ್ ಥ್ರಿಲ್ಲರ್ ಎನ್ನುವ ಮೋಹನ್, “ಚಿತ್ರಕಥೆ ಚೆನ್ನಾಗಿ ಬಂದಿದೆ. ಚಿತ್ರ ನೋಡುತ್ತಿದ್ದಂತೆ ಇದೊಂದು ಹಾರರ್ ಅಥವಾ ಥ್ರಿಲ್ಲರ್ ಎಂದನಿಸಬಹುದು. ಕೊನೆಗೆ ಚಿತ್ರ ಇನ್ನೇನೋ ತಿರುವು ಪಡೆಯುತ್ತಿದೆ’ ಎಂದು ವಿವರ ಕೊಡುವ ಮೋಹನ್, 40 ದಿನಗಳಲ್ಲಿ ಬೆಂಗಳೂರು, ಸಾಗರ, ಕಳಸ ಮುಂತಾದ ಕಡೆ ಚಿತ್ರೀಕರಣ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಚಿತ್ರಕ್ಕೆ ಹಿರಿಯ ಛಾಯಾಗ್ರಾಹಕ ಪ್ರಸಾದ್ ಬಾಬು ಅವರ ಛಾಯಾಗ್ರಹಣ ಮತ್ತು ದಿನೇಶ್ ಕುಮಾರ್ ಅವರ ಸಂಗೀತವಿದೆ.